ಬೈಲಾ ತಿದ್ದುಪಡಿ ಮೂಲಕ ಸಾರ್ವಭೌಮತ್ವಕ್ಕೆ ಕೈ ಹಾಕಿದ ಜೋಶಿ; ಕಸಾಪ ಉಳಿಸಿ ಹೋರಾಟಕ್ಕೆ ಸಿದ್ಧತೆ

Date:

Advertisements

ಡಾ ಮಹೇಶ್‌ ಜೋಶಿ ಕಸಾಪದ ಅಧ್ಯಕ್ಷರಾದ ನಂತರ 2022ರಲ್ಲಿ ಪರಿಷತ್ತಿನ ಬೈಲಾದಲ್ಲಿ ಆಮೂಲಾಗ್ರ ಬದಲಾವಣೆ ತರಲಾಗಿತ್ತು. 2023ರಲ್ಲಿ ಎರಡನೇ ಬಾರಿ ತಿದ್ದುಪಡಿ ಮಾಡಲಾಗಿತ್ತು. ಈಗ ಮತ್ತೆ ಬೈಲಾಗೆ ತಿದ್ದುಪಡಿ ತಂದು ಕಸಾಪದ ಎಲ್ಲ ಅಧಿಕಾರವನ್ನೂ ತಮ್ಮ ಕೈಯೊಳಗೆ ಇಟ್ಟುಕೊಳ್ಳುವ ಹುನ್ನಾರಕ್ಕೆ ಕೈ ಹಾಕಿ ವಿವಾದ ಸೃಷ್ಟಿಸಿಕೊಂಡಿದ್ದಾರೆ.

ಡಾ ಮಹೇಶ್‌ ಜೋಶಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಾದಿಯಿಂದ ಕೆಳಗಿಳಿಯುವವರೆಗೆ ವಿವಾದಗಳು ಮುಗಿಯುವುದಿಲ್ಲ ಎನಿಸುತ್ತಿದೆ. ಸದಾ ವಿವಾದವನ್ನು ಮೈಮೇಲೆ ಎಳೆದುಕೊಳ್ಳುವುದು ಜೋಶಿ ಅವರ ಹುಟ್ಟುಗುಣ ಅನ್ಸುತ್ತೆ. ಅವರು ದೂರದರ್ಶನದ ಅಧಿಕಾರಿಯಾಗಿದ್ದಾಗಲೂ ವಿವಾದಗಳ ಜೊತೆಗೇ ಇದ್ದವರು. ಕಿರಿಯ ಸಹೋದ್ಯೋಗಿಗಳ ಜೊತೆ ಕಿರಿಕ್‌ ಮಾಡಿಕೊಂಡು ಅವರಿಗೆ ಲಾಯರ್‌ ನೋಟಿಸ್‌ ಕಳುಹಿಸುವುದು ಸೇರಿದಂತೆ ಹಲವು ಆರೋಪಗಳು ಇವರ ಮೇಲೆ ಬಂದಿದ್ದವು.

ದೂರದರ್ಶನ ಚಂದನ ವಾಹಿನಿಯ ನಿರ್ದೇಶಕರಾಗಿ ನಿವೃತ್ತರಾದ ನಂತರ ಕಸಾಪದ ಅಧ್ಯಕ್ಷರಾಗಿ ನಾಲ್ಕು ವರ್ಷವಾಗುತ್ತಿದೆ. ಅವರಿಗೂ ಹಿಂದೆ ಅಧ್ಯಕ್ಷರಾಗಿದ್ದ ನಿವೃತ್ತ ಕೆಎಎಸ್‌ ಅಧಿಕಾರಿ ಮನು ಬಳಿಗಾರ್‌ ಕಸಾಪದ ಬೈಲಾಗೆ ತಿದ್ದುಪಡಿ ತಂದು ಮೂರು ವರ್ಷ ಇದ್ದ ಅಧ್ಯಕ್ಷರ ಅಧಿಕಾರಾವಧಿಯನ್ನು ಐದು ವರ್ಷಕ್ಕೆ ಏರಿಸಿಕೊಂಡಿದ್ದರು. ಮಹೇಶ್‌ ಜೋಶಿ ಕೋಮುವಾದಿ ಪಕ್ಷ ಬಿಜೆಪಿ ಜೊತೆ ನೇರಾನೇರ ಗುರುತಿಸಿಕೊಂಡವರು. ತಮ್ಮ ಪರವಾಗಿ ಪ್ರಚಾರ ನಡೆಸಲು ಅವರು ಆರೆಸ್ಸೆಸ್‌ ಕಚೇರಿ, ಬಿಜೆಪಿ ಕಚೇರಿಗೆ ಎಡತಾಕಿದ್ದು ಗೊತ್ತೇ ಇದೆ. ಚುನಾವಣೆಗೆ ಎರಡು ವರ್ಷವಿದ್ದಾಗಲೇ ಬಿಜೆಪಿ ಕಾರ್ಯಕರ್ತರನ್ನು, ಸಂಘಪರಿವಾರದ ಬೆಂಬಲಿಗರನ್ನು ಕಸಾಪಕ್ಕೆ ಸದಸ್ಯರನ್ನಾಗಿ ಮಾಡಿಕೊಂಡು ತಮ್ಮ ಗೆಲುವನ್ನು ನಿಶ್ಚಯ ಮಾಡಿಕೊಂಡಿದ್ದರು. ಹೀಗೆ ಹಣ ಮತ್ತು ರಾಜಕೀಯ ಬಲದಿಂದ ಗಾದಿಗೆ ಏರಿದ ಮಹೇಶ್‌ ಜೋಶಿ ಅವರಿಗೆ ಬೊಮ್ಮಾಯಿ ಸರ್ಕಾರ ಸಂಪುಟ ದರ್ಜೆಯ ಸ್ಥಾನಮಾನ ನೀಡಿತ್ತು.

Advertisements

ಮಹೇಶ್‌ ಜೋಶಿ ಅವರು ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ತಯಾರಿ ಶುರುವಾಗುವಾಗಲೇ ತಮ್ಮ ಹೇಳಿಕೆ, ನಡವಳಿಕೆಗಳ ಮೂಲಕ ವಿವಾದ ಸೃಷ್ಟಿಸಿಕೊಳ್ಳುವುದು ಮಾಮೂಲಿಯಾಗಿದೆ. ಕಳೆದ ಡಿಸೆಂಬರ್‌ ನಲ್ಲಿ ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಸಾಹಿತ್ಯೇತರರನ್ನು ಅಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಹೇಳಿಕೆ ನೀಡಿ ವಿವಾದ ಎಬ್ಬಿಸಿದ್ದರು. ಅಧ್ಯಕ್ಷರಾದ ನಂತರ 2022ರಲ್ಲಿ ಪರಿಷತ್ತಿನ ಬೈಲಾದಲ್ಲಿ ಆಮೂಲಾಗ್ರ ಬದಲಾವಣೆ ತರಲಾಗಿತ್ತು. 2023ರಲ್ಲಿ ಎರಡನೇ ಬಾರಿ ತಿದ್ದುಪಡಿ ಮಾಡಲಾಗಿತ್ತು. ಈಗ ಮತ್ತೆ ಬೈಲಾಗೆ ತಿದ್ದುಪಡಿ ತಂದು ಕಸಾಪದ ಎಲ್ಲ ಅಧಿಕಾರವನ್ನೂ ತಮ್ಮ ಕೈಯೊಳಗೆ ಇಟ್ಟುಕೊಳ್ಳುವ ಹುನ್ನಾರಕ್ಕೆ ಕೈ ಹಾಕಿ ವಿವಾದ ಸೃಷ್ಟಿಸಿಕೊಂಡಿದ್ದಾರೆ.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎಸ್. ಪಾಚ್ಚಾಪುರೆ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯ ಶಿಫಾರಸ್ಸಿನ ಅನುಸಾರ ಬೈಲಾ ತಿದ್ದುಪಡಿ ಮಾಡಲು ಸರ್ವ ಸದಸ್ಯರ ವಿಶೇಷ ಸಭೆಯಲ್ಲಿ ಏ. 27ರಂದು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ನಂದಿಹಳ್ಳಿಯಲ್ಲಿರುವ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಉದ್ದೇಶಿತ ತಿದ್ದುಪಡಿಯನ್ನು ಮಂಡಿಸಲಾಗುತ್ತದೆ ಎಂದು ಪ್ರಕಟಿಸಿದ್ದರು.

ಮಂಡ್ಯ 34

ಆದರೆ, ಇದಕ್ಕೆ ಹಲವು ಹಿರಿಯ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ ಮುಗಿದ ಮರುದಿನವೇ ಪರಿಷತ್‌ ಬೈಲಾ ನಿಯಮ ಉಲ್ಲಂಘಿಸಿ ಕಾರ್ಯಕಾರಿ ಮಂಡಳಿ ರದ್ದುಪಡಿಸಿ, ಹೊಸ ಕಾರ್ಯಕಾರಿ ಮಂಡಳಿ ರಚನೆ ಮಾಡಲಾಗಿತ್ತು. ಇದರ ವಿರುದ್ಧ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದವರಿಗೆ ಸದಸ್ಯತ್ವ ರದ್ದುಪಡಿಸುವ ನೋಟಿಸ್‌ ನೀಡಲಾಗಿತ್ತು. ಇದೀಗ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕಾರಿ ಮಂಡಳಿ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದೆ.

ಇಂತಹ ಮುಖ್ಯವಾದ ಸಭೆಯನ್ನು ದೂರದ ಸಂಡೂರಿನಲ್ಲಿ ನಡೆಸಿರುವುದು ಹೆಚ್ಚು ಸದಸ್ಯರು ಭಾಗಿಯಾಗುವುದನ್ನು ತಡೆಯುವ ಉದ್ದೇಶ ಎಂಬ ದೂರುಗಳು ಕೇಳಿ ಬಂದಿದ್ದವು. ಸೋಮವಾರ ಬೆಂಗಳೂರಿನಲ್ಲಿ ಕೆಲವು ಅಜೀವ ಸದಸ್ಯರು ಸಭೆ ನಡೆಸಿದ್ದರು. ಮುಂದಿನ ಹೋರಾಟದ ಬಗ್ಗೆ ಚರ್ಚಿಸಿದ್ದರು ಎಂದು ಸಭೆಯ್ಲಲಿದ್ದ ಹಿರಿಯರೊಬ್ಬರು ಈ ದಿನಕ್ಕೆ ಮಾಹಿತಿ ನೀಡಿದ್ದರು. ಅದಾಗಿ ಕೆಲವೇ ಗಂಟೆಗಳಲ್ಲಿ ಸಭೆ ಮುಂದೂಡಿದ ನಿರ್ಣಯವನ್ನು ಕಸಾಪ ಬಿಡುಗಡೆ ಮಾಡಿತ್ತು.

ಕಸಾಪದ ವಿಶೇಷ ಸಾಮಾನ್ಯ ಸಭೆ, ವಾರ್ಷಿಕ ಸಾಮಾನ್ಯ ಸಭೆ, ಕಾರ್ಯಕಾರಿ ಸಮಿತಿ ಸಭೆಯನ್ನು ಹವಾಮಾನ ವೈಪರೀತ್ಯ ಮತ್ತು ಬಿಸಿಲಿನ ತಾಪಮಾನ ಏರಿಕೆಯಾದ ಕಾರಣ ಸಭೆ ಮುಂದೂಡುವಂತೆ ಬಳ್ಳಾರಿ ಕಸಾಪ ಜಿಲ್ಲಾ ಘಟಕ ಕೋರಿದ್ದು, ಬಳ್ಳಾರಿ ಜಿಲ್ಲಾ ಆರೋಗ್ಯಾಧಿಕಾರಿಗಳೂ ಅದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೂನ್‌ ೨೨ಕ್ಕೆ ಮುಂದೂಡಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಬೈಲಾ ತಿದ್ದುಪಡಿಗಿಂತ ಕಸಾಪ ಮುಚ್ಚುವುದೇ ಲೇಸು

ಮಂಡ್ಯದ ಹಿರಿಯ ಸಾಹಿತಿ, ಜಿಲ್ಲಾ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರೊ ಜಯಪ್ರಕಾಶ್‌ ಗೌಡ ಅವರು
ಈ ದಿನಕ್ಕೆ ಪ್ರತಿಕ್ರಿಯೆ ನೀಡಿ, “ಕಸಾಪದ ಬೈಲಾ ತಿದ್ದುಪಡಿ ಮಾಡುವುದಕ್ಕಿಂತ ಕಸಾಪವನ್ನು ಮುಚ್ಚುವುದೇ ಲೇಸು. ಜೋಶಿ ಅವರು ಕಸಾಪವನ್ನು ತಮಗೆ ಬೇಕಾದಂತೆ ನಡೆಸಲು ಬಿಡುವುದಿಲ್ಲ. ಯಾವುದೇ ಕಾರಣಕ್ಕೂ ಬೈಲಾ ತಿದ್ದುಪಡಿಗೆ ಅವಕಾಶ ನೀಡುವುದಿಲ್ಲ. ರಾಜ್ಯಾದ್ಯಂತ ಕಸಾಪ ಉಳಿಸಿ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾಹಿತಿ ನೀಡಲಾಗಿದೆ. ಜೊತೆಗೆ ಜೋಶಿ ಅವರಿಗೆ ನೀಡಿದ್ದ ಸಂಪುಟ ದರ್ಜೆ ಸ್ಥಾನಮಾನ ವಾಪಸ್‌ ಪಡೆಯುವಂತೆ ಮನವಿ ಮಾಡಲಾಯಿತು. ಬೊಮ್ಮಾಯಿ ಅವಧಿಯ ಜೊತೆ ಸಂಪುಟ ದರ್ಜೆ ಸ್ಥಾನವೂ ಮುಗಿದಿದೆ ಎಂದು ಸಿಎಂ ತಿಳಿಸಿದರು ಎಂದರು.

ಬೈಲಾ

ಏನೇನು ತಿದ್ದುಪಡಿಗೆ ಸಿದ್ಧತೆ?

1.ಸಾಹಿತ್ಯ ಸಮ್ಮೇಳನ ನಡೆಸುವಾಗ ಕಸಾಪ ಅಧ್ಯಕ್ಷರು ನೇರವಾಗಿ ಅಥವಾ ಮಾರ್ಗಸೂಚಿ ಉಪಸಮಿತಿಯನ್ನು ರಚಿಸಿ, ಮಾರ್ಗಸೂಚಿಗಳನ್ನು ಹೊರಡಿಸಬಹುದಾಗಿದೆ.
2. ಜಿಲ್ಲಾ ಘಟಕವೂ ಸೇರಿದಂತೆ ತೆರವಾದ ವಿವಿಧ ಘಟಕಗಳ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ, ನಾಮನಿರ್ದೇಶನಗೊಂಡ ಸದಸ್ಯರನ್ನು ಕಾರಣ ನೀಡದೇ ಬದಲಾಯಿಸುವಂತಹ ಅಧಿಕಾರ ರಾಜ್ಯ ಘಟಕದ ಅಧ್ಯಕ್ಷರಿಗೆ ಇರಲಿದೆ.
3. ಜಿಲ್ಲೆ, ಗಡಿನಾಡು, ಗಡಿರಾಜ್ಯ ಘಟಕದ ಅಧ್ಯಕ್ಷರು, ನಾಮನಿರ್ದೇಶನಗೊಂಡ ಸದಸ್ಯರು ಕೇಂದ್ರ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಗಳಿಗೆ ರಾಜ್ಯ ಘಟಕದ ಅಧ್ಯಕ್ಷರ ಅನುಮತಿ ಪಡೆಯದೆ ಸತತ ಮೂರು ಬಾರಿ ಗೈರಾಗುವಂತಿಲ್ಲ. ಒಂದು ವೇಳೆ ಗೈರಾದಲ್ಲಿ ಅವರ ಸದಸ್ಯತ್ವವು ಸ್ವಯಂಚಾಲಿತವಾಗಿ ರದ್ದಾಗಲಿದೆ.
4. ನಿಧನ, ರಾಜೀನಾಮೆ ಹಾಗೂ ಅನರ್ಹತೆ ಸೇರಿ ವಿವಿಧ ಕಾರಣದಿಂದ ಜಿಲ್ಲಾ ಘಟಕದ ಚುನಾಯಿತ ಅಧ್ಯಕ್ಷರ ಸ್ಥಾನ ತೆರವಾದರೆ, ಆ ಸ್ಥಾನಕ್ಕೆ ಮುಂದಿನ ಆದೇಶ ಅಥವಾ ಚುನಾವಣೆವರೆಗೆ ನಾಮನಿರ್ದೇಶನ ಮಾಡುವ ಅಧಿಕಾರವೂ ಅಧ್ಯಕ್ಷರಿಗೆ ಇರಲಿದೆ.
5. ನಾಮನಿರ್ದೇಶಿತ ಸದಸ್ಯರನ್ನು ಯಾವುದೇ ಕಾರಣ ನೀಡದೆ ಬದಲಾವಣೆ ಮಾಡುವ ಅಧಿಕಾರ, ನಾಮನಿರ್ದೇಶಿತ ಸದಸ್ಯರು ಗುರುತರ ಆರೋಪದಡಿ ರಾಜೀನಾಮೆ ನೀಡಿದಲ್ಲಿ, ಅವರ ರಾಜೀನಾಮೆಯನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ಕಸಾಪ ರಾಜ್ಯ ಘಟಕದ ಅಧ್ಯಕ್ಷರು ಹೊಂದಿರುತ್ತಾರೆಂದು ತಿದ್ದುಪಡಿಯ ಬೈಲಾದಲ್ಲಿ ಉಲ್ಲೇಖಿಸಲಾಗಿದೆ.
6. ಸಾಹಿತ್ಯ ಸಮ್ಮೇಳನದ ಬಳಿಕ ಬಾಕಿ ಉಳಿದ ಹಣವನ್ನು ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕಕ್ಕೆ ಜಮಾ ಮಾಡಲು 10 ತಿಂಗಳ ಗಡುವು ನೀಡಲಾಗಿದೆ. ಜಮಾ ಆಗದಿದ್ದರೆ ಸಮ್ಮೇಳನದ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ ಹಾಗೂ ಸಮ್ಮೇಳನದ ಬಳಿಕ ಹೊಸದಾಗಿ ವರ್ಗಾವಣೆಯಾಗಿ ಬಂದ ಜಿಲ್ಲಾಧಿಕಾರಿ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡುವ ಬಗ್ಗೆಯೂ ತಿದ್ದುಪಡಿಯಲ್ಲಿ ಸೇರ್ಪಡೆ ಮಾಡಲಾಗಿದೆ.

ಇದನ್ನೂ ಓದಿ ಒಳದನಿ | ವಿದ್ಯಾವಂತ ವೇಶ್ಯೆಯೊಬ್ಬಳ ಆತ್ಮಕಥೆ

    07e0d3e8 3f8a 4b81 8fd5 641335b91d85
    ಹೇಮಾ ವೆಂಕಟ್‌
    + posts

    ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
    ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
    ಮೂರು ಪುಸ್ತಕಗಳು ಪ್ರಕಟಗೊಂಡಿವೆ.

    ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

    ಪೋಸ್ಟ್ ಹಂಚಿಕೊಳ್ಳಿ:

    ಹೇಮಾ ವೆಂಕಟ್‌
    ಹೇಮಾ ವೆಂಕಟ್‌
    ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

    LEAVE A REPLY

    Please enter your comment!
    Please enter your name here

    ಪೋಸ್ಟ್ ಹಂಚಿಕೊಳ್ಳಿ:

    ಈ ಹೊತ್ತಿನ ಪ್ರಮುಖ ಸುದ್ದಿ

    ವಿಡಿಯೋ

    ಇದೇ ರೀತಿಯ ಇನ್ನಷ್ಟು ಲೇಖನಗಳು
    Related

    ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

    ""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

    ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

    ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

    ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

    ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

    ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

    ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

    Download Eedina App Android / iOS

    X