ರಾಜ್ಯ ಸರ್ಕಾರ ಜಾತಿಗಣತಿಯಲ್ಲಿ ನೇಕಾರ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಬಾಗಲಕೋಟೆ ಜಿಲ್ಲೆಯ ಇಳಕಲ್ ನೇಕಾರ ಸಮುದಾಯಗಳ ಒಕ್ಕೂಟದ ಪದಾಧಿಕಾರಿಗಳು ಆರೋಪಿಸಿದ್ದಾರೆ.
ಇಳಕಲ್ ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ತಮ್ಮ ಸಮುದಾಯವನ್ನು ಸರಿಯಾಗಿ ಗುರುತಿಸದೆ ಹಾಗೂ ಗಣತಿಯಲ್ಲಿ ʼನೇಕಾರʼ ಎಂಬುದನ್ನು ಸ್ಪಷ್ಟವಾಗಿ ಪ್ರತ್ಯೇಕವಾಗಿ ಉಲ್ಲೇಖಿಸದೆ ನಿರ್ಲಕ್ಷ್ಯ ವಹಿಸಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೇಕಾರ ಮುಖಂಡ ಲಕ್ಷ್ಮಣ ಗುರಮ್ ಮಾತನಾಡಿ, “ರಾಜ್ಯದಲ್ಲಿ 29 ನೇಕಾರ ಸಮುದಾಯಗಳಿವೆ. ಇವೆಲ್ಲವನ್ನೂ ಸರಿಯಾಗಿ ಗುರುತಿಸಿ ಸಮರ್ಪಕವಾಗಿ ಸರ್ವೇ ಮಾಡಬೇಕಾಗಿತ್ತು. ಆದರೆ ಜಾತಿಗಣತಿಯ ಕಾಲಮ್‌ನಲ್ಲಿ ನೇಕಾರ ಎಂಬ ಗುರುತು ಕಾಣಿಸುತ್ತಿಲ್ಲ. ಇದು ನಮ್ಮ ಸಮುದಾಯದ ಮೇಲೆ ದೊಡ್ಡ ಅನ್ಯಾಯವಾಗಿದೆ. ಸರ್ಕಾರ ಈಗಲಾದರೂ ಸಮುದಾಯದ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಪಂಚಮಸಾಲಿ ಸಮಾಜದ ಹಿಡಿತಕ್ಕೆ ಎರಡು ಗುಂಪುಗಳ ನಡುವೆ ಸಂಘರ್ಷ
ಮತ್ತೊಬ್ಬ ಮುಖಂಡ ಸತೀಶ್ ಸಪ್ಪರದ ಮಾತನಾಡಿ, “ಸರ್ಕಾರ ರೈತ ಹಾಗೂ ನೇಕಾರರನ್ನು ಎರಡು ಕಣ್ಣುಗಳೆಂದು ವರ್ಣಿಸುತ್ತಿದೆ. ಆದರೆ ಜಾತಿಗಣತಿಯಲ್ಲಿ ನೇಕಾರ ಸಮುದಾಯವನ್ನು ಮರೆತಿರುವುದು ಶೋಕಾಜನಕ. ರಾಜ್ಯದಲ್ಲಿ 60 ರಿಂದ 70 ಲಕ್ಷ ನೇಕಾರ ಸಮುದಾಯದವರು ಇದ್ದರೂ ಅವರಿಗೆ ನ್ಯಾಯ ಸಿಗದಂತಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದರು.
ವಿವಿಧ ನೇಕಾರ ಸಮುದಾಯಗಳ ಮುಖಂಡರು, ಪದಾಧಿಕಾರಿಗಳು ಮತ್ತು ಸದಸ್ಯರು ಇದ್ದರು.