ಅಕಾಲಿಕ ಮಳೆ, ಗಾಳಿ ಹಾಗೂ ಹವಾಮಾನ ವೈಪರೀತ್ಯದಿಂದ ಈ ವರ್ಷವೂ ಮಾವು ಬೆಳೆ ಭಾರೀ ಕುಸಿತ ಕಂಡಿದ್ದು, ರಾಜ್ಯದ ಅನೇಕ ಭಾಗಗಳಲ್ಲಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಕೆಲವೆಡೆ ಬೆಳೆದ ಹಣ್ಣು ಮಾರುಕಟ್ಟೆಗೆ ತಲುಪುವಷ್ಟರಲ್ಲಿ ನೆಲಕ್ಕೆ ಬಿದ್ದ ಪರಿಣಾಮ, ಇಳುವರಿ ಮಾತ್ರವಲ್ಲ, ಭರವಸೆಯೂ ಕುಸಿಯುತ್ತಿದೆ. ಇನ್ನೂ ಹಲವೆಡೆ ಮರಗಳು ಹೂ ಬಿಟ್ಟು, ಚಿಗುರೊಡೆಯಲಷ್ಟೇ ಸಮರ್ಥವಾಗಿವೆ.
ಕಳೆದ ವರ್ಷ ಮಳೆ ಕೊರತೆ ಮತ್ತು ತಾಪಮಾನ ಹೆಚ್ಚಳದಿಂದ ಮಾವು ಸೇರಿದಂತೆ ಬಹುತೇಕ ಬೆಳೆಗಳಿಗೆ ಹಾನಿಯಾಗಿತ್ತು. ಈ ವರ್ಷವೂ ಮಾವು ಇಳುವರಿ ಗಣನೀಯವಾಗಿ ಕುಸಿತ ಕಂಡಿದ್ದು, ಮಾವಿನ ಮಾರುಕಟ್ಟೆಗೆ ದೊಡ್ಡ ಹೊಡೆತ ಬಿದ್ದಿದೆ. ಲಕ್ಷಾಂತರ ರೂ ಆದಾಯದ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರು ಇಳುವರಿ ಕುಸಿತದಿಂದಾಗಿ ಕಂಗಾಲಾಗಿದ್ದಾರೆ.
ರಾಜ್ಯದಲ್ಲಿ ಮುಖ್ಯವಾಗಿ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಕಲಬುರಗಿ, ಬಳ್ಳಾರಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಸುಮಾರು 1.6 ಲಕ್ಷ ಹೆಕ್ಟೇರ್‌ನಲ್ಲಿ ಮಾವು ಬೆಳೆಯಲಾಗಿದೆ. ರಾಜ್ಯದ ಸರಾಸರಿ ಇಳುವರಿ ಈವರೆಗಿನ ವರದಿ ಪ್ರಕಾರ, ಶೇ.35–50 ರವರೆಗೆ ಕುಸಿತ ಕಂಡಿದೆ. ಕೆಲವು ಭಾಗಗಳಲ್ಲಿ ಶೇ.60ರಷ್ಟು ನಷ್ಟ ಉಂಟಾಗಿದೆ. ಒಂದು ಎಕರೆಗೆ ಸರಾಸರಿ ₹1.5–2 ಲಕ್ಷದವರೆಗೆ ಹೂಡಿಕೆ ಇರುವ ಮಾವು ಬೆಳೆಗಾರರಿಗೆ, ಈ ವರ್ಷ ಪ್ರತಿ ಎಕರೆಗೆ ₹60,000–₹1,00,000ವರೆಗೆ ನಷ್ಟ ಉಂಟಾಗಿದೆ ಎಂದು ಕೃಷಿ ತಜ್ಞರು ಅಂದಾಜಿಸಿದ್ದಾರೆ.

ಈ ವರ್ಷ ರಾಜ್ಯಾದ್ಯಂತ ಸುಮಾರು 12 ರಿಂದ 14 ಲಕ್ಷ ಮೆಟ್ರಿಕ್ ಟನ್ ಇಳುವರಿ ಸಿಗಲಿದೆ ಎಂದು ತಾಂತ್ರಿಕ ತಜ್ಞರ ಸಮಿತಿ ನಿರೀಕ್ಷಿಸಿತ್ತು. ಆದರೆ, 8 ರಿಂದ 10 ಲಕ್ಷ ಮೆಟ್ರಿಕ್ ಟನ್ನಷ್ಟು ಇಳುವರಿ ಕುಸಿತ ಕಂಡಿದೆ ಎಂದು ಇತ್ತೀಚಿನ ವರದಿಯೊಂದು ತಿಳಿಸಿದೆ. ಇದು ಮಾವು ಬೆಳೆಗಾರರ ಆರ್ಥಿಕ ಬದುಕಿನ ಮೇಲೆ ತೀವ್ರ ಪರಿಣಾಮ ಬೀರುವಂತಿದೆ. ರಾಜ್ಯದಲ್ಲಿ ಹವಾಮಾನದ ಕಣ್ಣಾಮುಚ್ಚಾಲೆ ಆಟ ಒಂದೆಡೆಯಾದರೆ, ಮತ್ತೊಂದೆಡೆ ಕೀಟ ಬಾಧೆಯು ಗಂಭೀರ ಸಮಸ್ಯೆಯಾಗಿ ಹೊರ ಹೊಮ್ಮಿದೆ. ಜತೆಗೆ ತೀವ್ರ ಉಷ್ಣತೆಯಿಂದಾಗಿ, ಸತತವಾಗಿ ಇಳುವರಿ ನೆಲ ಕಚ್ಚಿದೆ ಎಂಬುದು ವರದಿಯಿಂದ ಸ್ಪಷ್ಟವಾಗಿದೆ.
ವರ್ಷ ಆರಂಭದಲ್ಲಿಯೇ ರಾಜ್ಯದ ಹಲವು ಭಾಗಗಳಲ್ಲಿ 33 ರಿಂದ 34 ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ಏರಿತ್ತು. ಪರಿಣಾಮ, ಮರಗಳು ಚೆನ್ನಾಗಿ ಹೂಬಿಡಲಿಲ್ಲ. ಹೂವಿನ ಕೊರತೆಯಿಂದಾಗಿ ಸಾಮಾನ್ಯವಾಗಿ ಕಾಯಿ ಕಟ್ಟಲಿಲ್ಲ. ಇದರಿಂದಾಗಿ ಇಳುವರಿ ಮೇಲೆ ತೀವ್ರ ಪರಿಣಾಮ ಬಿದ್ದಿದೆ ಎಂದು ಕೆಎಸ್‌ಎಂಡಿಎಂಸಿ ವ್ಯವಸ್ಥಾಪಕ ನಿರ್ದೇಶಕ ಸಿಜಿ ನಾಗರಾಜು ಹೇಳುತ್ತಾರೆ.
ತುಮಕೂರು ಜಿಲ್ಲಾ ಭಾಗದಲ್ಲಿ ಮಾವು ಬೆಳೆ ಕೂಡ ಪ್ರಮುಖ ಕೃಷಿ ಚಟುವಟಿಕೆ. ಆದರೆ ಕಳೆದ ವರ್ಷದಂತೆ ಈ ವರ್ಷವೂ ಕೂಡ ಇಳುವರಿ ಮತ್ತೂ ಕಡಿಮೆಯಾಗುವ ಮುನ್ಸೂಚನೆ ಇದ್ದು, ಬೆಳೆಗಾರರು ಮಾವಿಗೆ ಪರ್ಯಾಯ ಮಾರ್ಗ ಕಂಡುಕೊಳ್ಳಲು ಮುಂದಾಗುತ್ತಿದ್ದಾರೆ ಎನ್ನಲಾಗಿದೆ.
ಈದಿನ ಡಾಟ್ ಕಾಮ್‌ನೊಂದಿಗೆ ಮಾತನಾಡಿದ ಗುಬ್ಬಿ ತಾಲೂಕು ಇಡಕನಹಳ್ಳಿ ಗ್ರಾಮದ ಮಾವು ಬೆಳೆಗಾರ ದೇವರಾಜು, “ಮುಂಗಾರು ಮಳೆ ಆರಂಭವಾದಾಗಿನಿಂದಲೂ ಮಾವು ಸೇರಿದಂತೆ ಎಲ್ಲಾ ರೀತಿಯ ಬೆಳೆಗಳು ಭಾರಿ ಗಾಳಿ, ಆಲಿಕಲ್ಲಿಗೆ ತುತ್ತಾಗುತ್ತಿವೆ. ಈ ವರ್ಷ ಮರಗಳು ಕಾಯಿ ಕಟ್ಟಿದ್ದೂ ಕಡಿಮೆ. ʼಚಿಗುರುʼ ಆರಂಭವಾದ ವೇಗದಲ್ಲೇ ಉದುರಿ ಬೀಳುತ್ತಿದೆ. 40-50 ಮರಗಳಿಂದ ವರ್ಷಕ್ಕೆ ಅಂದಾಜು 1 ಲಕ್ಷ ಆದಾಯ ನಿರೀಕ್ಷಿಸಲಾಗುತ್ತಿತ್ತು. ಆದರೆ, ಹವಾಮಾನ ವೈಪರೀತ್ಯ, ಆಹಾರ ಅರಸಿ ಬರುವ ಪಕ್ಷಿಗಳು ಹಾಗೂ ಕೀಟ ಬಾಧೆ ಸೇರಿದಂತೆ ಇತರೆ ಸಮಸ್ಯೆಗಳು ಹೆಚ್ಚಾಗಿವೆ. ಈ ಎಲ್ಲಾ ಸವಾಲುಗಳನ್ನು ದಾಟಿ ಇಳುವರಿ ಏನಾದರೂ ಅಳಿದುಳಿದರೆ 30 ರಿಂದ 40 ಸಾವಿರ ಸಂಪಾದನೆಯಾಗಬಹುದು. ಶೇ.70 ರಷ್ಟು ಆದಾಯ ಕುಸಿತ ಕಾಣುವ ಆತಂಕವಿದೆ. ಮಾವು ಕಟಾವು ಮಾಡಿ ಒಂದೆರಡು ದಿನಗಳಲ್ಲಿ ಮಾರಾಟ ಮಾಡಲೇಬೇಕು ಎನ್ನುವುದು ಇನ್ನೊಂದು ಸವಾಲು. ಈ ಸಮಸ್ಯೆಗಳನ್ನು ಎದುರಿಸಲಾಗದೆ ದಕ್ಷಿಣ ಒಳನಾಡು ಭಾಗದ ರೈತರು ಹೆಚ್ಚಾಗಿ ತೆಂಗು, ಅಡಿಕೆಗಳಂತಹ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದ್ದಾರೆ” ಎಂದರು.

“ಮಾವು ಬೆಳೆಯುವ ಸಣ್ಣ ರೈತರು ಸಾಲದ ಮೇಲೆ ಅವಲಂಬಿತರಾಗಿದ್ದಾರೆ. ಬೆಳೆ ಹಾಳಾಗುತ್ತಿರುವ ಹಿನ್ನೆಲೆ ಬಂಡವಾಳ ಹೂಡಿಕೆಯೂ ನಿರರ್ಥಕವಾಗಿದೆ. ಈ ವರ್ಷ 2 ಲಕ್ಷ ರೂಪಾಯಿ ಖರ್ಚು ಮಾಡಿದ್ದೆ. ಆದರೆ ಈಗ ಶೇ.50 ರಷ್ಟು ಕಾಯಿ ನೆಲಕ್ಕೆ ಬಿದ್ದಿದೆ. ಸಣ್ಣ ರೈತರನ್ನು ಗುರುತಿಸಿ ಸರ್ಕಾರ ಸೂಕ್ತ ಪರಿಹಾರಕ್ಕೆ ಮುಂದಾಗಬೇಕು” ಎಂಬುದು ಕುಣಿಗಲ್ ತಾಲೂಕಿನ ಯುವ ರೈತ ರಾಕೇಶ್ ಅವರ ಮಾತು.
ಮಾವು ಹಣ್ಣುಗಳು ಮಾರುಕಟ್ಟೆಗೆ ಮೂರು ಹಂತಗಳಲ್ಲಿ ಬರುವುದು ಸಹಜ. ಆದರೆ ಈ ಬಾರಿ ಋತು ಮೊದಲೇ ಆರಂಭವಾದ ಕಾರಣದಿಂದಾಗಿ, ಆಗಮನ ಸ್ಥಿರವಾಗಿರಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಮಾವಿನ ಋತುವು ಜುಲೈ ಅಂತ್ಯ ಅಥವಾ ಆಗಸ್ಟ್ ವರೆಗೆ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ರೈತರು ಮಾವು ಬೆಳೆಗಳಿಗೆ ಸೂಕ್ತ ನಿರ್ವಹಣೆ ನೀಡಲು ಅಗತ್ಯವಿರುವಷ್ಟು ಜ್ಞಾನ ಮತ್ತು ಸಂಪನ್ಮೂಲಗಳಿಂದ ವಂಚಿತರಾಗಿದ್ದಾರೆ. ಇದರಿಂದ ಹಣ್ಣುಗಳ ಗುಣಮಟ್ಟ ಮತ್ತು ಪ್ರಮಾಣದಲ್ಲಿ ಕುಸಿತವಾಗಿದೆ. ಇಳುವರಿಯ ಕುಸಿತದಿಂದಾಗಿ ರೈತರು ಆರ್ಥಿಕವಾಗಿ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಮಾರಾಟದ ಬೆಲೆ ಕಡಿಮೆಯಾಗಿದ್ದು, ಸಾಲದ ಒತ್ತಡ ಹೆಚ್ಚಾಗಿದೆ ಎನ್ನುವುದು ತಜ್ಞರ ಅಭಿಪ್ರಾಯ.

ಬೇರೆ ರಾಜ್ಯಗಳಿಂದ ಮಾವು ಸರಬರಾಜು ಹೆಚ್ಚಾಗಿರುವುದರಿಂದ, ಕರ್ನಾಟಕದ ಸ್ಥಳೀಯ ಮಾವಿಗೆ ಬೇಡಿಕೆ ಕಡಿಮೆಯಾಗಿದೆ. ರೈತರಿಗೆ ತಾವು ತೆಗೆದುಕೊಂಡ ಬೆಲೆಯಷ್ಟು ದೊರೆಯದೇ, ತೊಂದರೆಯೊಂದಿಗೆ ಹಣ್ಣು ತೂರಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಇಳುವರಿಯೂ ಇಲ್ಲ, ಇತ್ತ ಬೆಳೆದ ಹಣ್ಣಿಗೆ ಉತ್ತಮ ಬೆಲೆಯೂ ಇಲ್ಲ ಎನ್ನುವಂತಾಗಿದೆ. ಮದ್ದೂರು, ತುಮಕೂರು ಮತ್ತು ರಾಮನಗರದ ಮಾರುಕಟ್ಟೆಗಳಲ್ಲಿ, ಕ್ವಿಂಟಲ್‌ಗೆ ಶೇ.50 ರಿಂದ 60 ರಷ್ಟು ಬೆಲೆ ಕಡಿಮೆಯಾಗಿದೆ.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿಯಷ್ಟೇ ಮಾವು ಬೆಳೆ ವಿಮೆ ಲಭ್ಯವಿದ್ದು, ಬಹುಪಾಲು ರೈತರು ವಿಮಾ ಮುಕ್ತವಾಗಿ ಉಳಿದಿದ್ದಾರೆ. ಮಾವು ಬೆಳೆ ಕುಸಿತವು ರೈತರನ್ನು ಮತ್ತೆ ಸಂಕಟದ ಸುಳಿಗೆ ಸಿಲುಕಿಸಿದೆ. ಇದೊಂದು ನೈಸರ್ಗಿಕ ಸಮಸ್ಯೆಯಷ್ಟೆ ಅಲ್ಲ. ಯೋಜಿತ ಬೆಳೆ ನಿರ್ವಹಣೆ, ಕಾಲಿಕ ಎಚ್ಚರಿಕೆ, ಮತ್ತು ಸಮರ್ಥ ಮಾರುಕಟ್ಟೆ ವ್ಯವಸ್ಥೆಗಳ ಕೊರತೆಯ ಪರಿಣಾಮವಾಗಿದೆ. ರೈತರ ಕಂಗಾಲಾದ ಸ್ಥಿತಿಗೆ ಶಾಶ್ವತ ಪರಿಹಾರ ಬೇಕಿದೆ. ತಾತ್ಕಾಲಿಕ ನೆರವಿಗಿಂತಲೂ, ನಾಳೆಯ ಭದ್ರತೆಗೆ ಸರ್ಕಾರ ಮತ್ತು ಸಮಾಜ ಕೈ ಜೋಡಿಸಬೇಕಾಗಿದೆ.