ನುಡಿಯಂಗಳ | ಸಮರ್ಥ ಬರಹದ ಸಾಧನ : ಲೇಖನ ಚಿಹ್ನೆಗಳು

Date:

Advertisements

ನಮಗೆ ಗೊತ್ತಿರುವ ಭಾಷೆಯನ್ನು ಬಳಸುವಷ್ಟೇ ಅನಾಯಾಸವಾಗಿ ನಾವು ಅಂಗಿಕ ಭಾಷೆಯನ್ನೂ ಬಳಸುತ್ತೇವೆ. ಇದು ಸಂವಹನ ಪರಿಪೂರ್ಣವಾಗುವುದರಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸುತ್ತದೆ. ಮಾತಿನ ಭಾಷೆ ಮತ್ತು ಆಂಗಿಕ ಭಾಷೆ ಇವೆರಡರ ಸಮರ್ಪಕ ಸಂಯೋಜನೆಯಿಂದ ಸಂವಹನವು ಸತ್ವಯುತವಾಗುತ್ತದೆ.

ನುಡಿಯಂಗಳದ ಮಾರ್ಚ್ 16 2024ರ ಸಂಚಿಕೆಯಲ್ಲಿ ನಾವು ಸಂವಹನದ ಸೂತ್ರಗಳ ಕುರಿತು ಮಾತಾಡಿದ್ದೆವು. ಅಲ್ಲಿ, ಸಂವಹನ ಒಂದು ಪ್ರಕ್ರಿಯೆ ಎನ್ನುವುದನ್ನು ತೋರಿಸುವ ಚಿತ್ರದಲ್ಲಿ ಒಂದು ಕಡೆ ಒಬ್ಬರು ‘ಹೇಳುಗರಿದ್ದರು’ ಮತ್ತು ಇನ್ನೊಂದು ಕಡೆ ಒಬ್ಬ ‘ಕೇಳುಗರಿದ್ದರು’. ಇದು ಮುಖಾಮುಖಿ ಸಂವಹನದ ಒಂದು ಸನ್ನಿವೇಶವಾಗಿತ್ತು. ಕೇಳಿಸಿಕೊಳ್ಳುವವರು ಎದುರಿಗೇ ಇರುವಾಗಲೇ ನಮ್ಮ ಮನಸ್ಸಿನಲ್ಲಿರುವುದನ್ನು ಅವರಿಗೆ ಮನನ ಮಾಡಿಸುವುದರಲ್ಲಿ ಇರುವ ತೊಂದರೆಗಳ ಬಗ್ಗೆಯೂ ನಾವು ಅಲ್ಲಿ ಮಾತಾಡಿದ್ದೆವು.

ಮುಖಾಮುಖಿ ಸಂವಹನದಲ್ಲಿ ಹೇಳುಗರು ಮತ್ತು ಕೇಳುಗರಿಗೆ ಇಬ್ಬರಿಗೂ ಬರುವ ಒಂದು ಉಭಯ ಸಾಮಾನ್ಯ ಭಾಷೆಯನ್ನು ಬಳಸಿ ಮಾತಾಡುತ್ತೇವೆ. ಮಾತಾಡುತ್ತಿರುವ ವಿಷಯ ಭಾವಕ್ಕೆ ತಕ್ಕಹಾಗೆ ಧ್ವನಿಯಲ್ಲಿ ಏರಿಳಿತಗಳು ಇರುತ್ತವೆ. ಪ್ರಶ್ನೆ, ಅಚ್ಚರಿ, ಖೇದ, ಸಂತೋಷ, ಅನುಮಾನ ಇತ್ಯಾದಿ ಭಾವನೆಗಳು ವಿಭಿನ್ನ ಧ್ವನಿಯಲ್ಲಿ ವ್ಯಕ್ತವಾಗುತ್ತವೆ. ಕೆಲವು ಪದಗಳನ್ನು ಒತ್ತಿ ಹೇಳುತ್ತೇವೆ. ಕೆಲವು ಕಡೆ ವಿವಿಧ ಉದ್ದದ ಪಾeóïಗಳನ್ನು ಕೊಡುತ್ತೇವೆ.

01Grand ma

ಅದರ ಜೊತೆಯಲ್ಲಿ ನಾವು ಆಂಗಿಕ ಭಾಷೆಯನ್ನೂ ಬಳಸುತ್ತಿರುತ್ತೇವೆ. ಅಂಗಿಕ ಭಾಷೆ ಎಂದರೆ, ಮುಖ, ಕೈಗಳು, ಕುಳಿತಿರುವ/ನಿಂತಿರುವ ಭಂಗಿ ಇತ್ಯಾದಿಗಳ ಮೂಲಕವೂ ನಾವು ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿರುತ್ತೇವೆ. ಎದುರಿಗೆ ಇರುವ ಕೇಳುಗರು ನಾವು ಆಡುವ ಭಾಷೆಯನ್ನಷ್ಟೇ ಅಲ್ಲ, ಅದರ ಜೊತೆಜೊತೆಯಲ್ಲಿ ಸಂಯೋಜಿತವಾಗಿ ಬಳಕೆಯಾಗುತ್ತಿರುವ ಆಂಗಿಕ ಭಾಷೆಯನ್ನೂ ಗ್ರಹಿಸುತ್ತಿರುತ್ತಾರೆ. ನಮಗೆ ಗೊತ್ತಿರುವ ಭಾಷೆಯನ್ನು ಬಳಸುವಷ್ಟೇ ಅನಾಯಾಸವಾಗಿ ನಾವು ಅಂಗಿಕ ಭಾಷೆಯನ್ನೂ ಬಳಸುತ್ತೇವೆ. ಇದು ಸಂವಹನ ಪರಿಪೂರ್ಣವಾಗುವುದರಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸುತ್ತದೆ. ಮಾತಿನ ಭಾಷೆ ಮತ್ತು ಆಂಗಿಕ ಭಾಷೆ ಇವೆರಡರ ಸಮರ್ಪಕ ಸಂಯೋಜನೆಯಿಂದ ಸಂವಹನವು ಸತ್ವಯುತವಾಗುತ್ತದೆ.

ಬರಹದ ಮೂಲಕ ಸಂವಹನ

ಬರಹದ ಮೂಲಕ ಮಾಡುವ ಸಂವಹನದಲ್ಲಿ ಸಹಜವಾಗಿಯೇ ಗ್ರಾಹಕರು ಎದುರಿಗೆ ಇರುವುದಿಲ್ಲ. ಈಗ ನೋಡಿ ನಾನು ಈ ಲೇಖನವನ್ನು ಬರೆಯುತ್ತಿದ್ದೇನೆ, ನೀವು ನನ್ನ ಓದುಗರು, ಆದರೆ, ಸ್ವಾರಸ್ಯಕರ ಅಂಶವೆಂದರೆ ನೀವು ಯಾರು ಎಂಬುದು ನನಗೆ ಗೊತ್ತಿಲ್ಲ. ನೀವು ಪುರುಷರೋ, ಮಹಿಳೆಯರೋ, ಮಕ್ಕಳೋ, ಯುವಕರೋ, ವಯಸ್ಸಾದ ವೃದ್ಧರೋ, ಗೊತ್ತಿಲ್ಲ. ಎಷ್ಟು ದೂರದ ಯಾವ ಊರಿನಲ್ಲಿ ಎಲ್ಲಿ ಕುಳಿತು ಓದುತ್ತಿದ್ದೀರೋ ನನಗೆ ಗೊತ್ತಿಲ್ಲ. ಆದರೂ ಒಬ್ಬ ಹೊಣೆಯರಿತ ಬರಹಗಾರನಾಗಿ ನಾನು ಬರೆದಿರುವುದೆಲ್ಲವೂ ನಿಮಗೆ ಅರ್ಥವಾಗಬೇಕು ಎಂಬ ಒತ್ತಾಸೆಯಂತೂ ನನಗೆ ಇರುತ್ತದೆ.

ಇದು ಬಿಡಿ, ಒಂದು ತಾಂತ್ರಿಕ ವಿಷಯದ ಕುರಿತಾದ ಲೇಖನ. ಅಕಸ್ಮಾತ್ ನಾನೊಂದು ಕಥೆಯನ್ನು ಬರೆದಿದ್ದರೆ. ಒಂದು ನಾಟಕ ಬರೆದಿದ್ದರೆ. ಮುಖ್ಯವಾಗಿ ಅದರಲ್ಲಿನ ಸಂಭಾಷಣೆ, ಜೀವಂತ ಪಾತ್ರಗಳು, ಜೀವಂತ ಸನ್ನಿವೇಶಗಳಲ್ಲಿ ಏನೆಲ್ಲಾ ಭಾವೋದ್ವೇಗಳನ್ನು ಬಳಸಿ ಮಾಡುವ ಮಾತುಗಳನ್ನು ನಾನು ಬರಹದಲ್ಲಿಡಬೇಕು. ಎಂದರೆ ಆಡುಮಾತಿನ ಶ್ರೀಮಂತವಾದ ಧ್ವನಿಯಾಟವನ್ನು ಬರಹದಲ್ಲಿ ಕಟ್ಟಿಡಬೇಕು. ವಿಚಾರ, ಮಾಹಿತಿ, ವಸ್ತು ಇವುಗಳನ್ನು ಅಕ್ಷರಗಳನ್ನು ಬಳಸಿ ಅಭಿವ್ಯಕ್ತಿಸುತ್ತೇನೆ. ಆದರೆ, ಭಾವನಾತ್ಮಕ ಸಂಭಾಷೆಯಲ್ಲಿರುವ ಧ್ವನಿಯನ್ನು ಪುಟದ ಮೇಲೆ ಕಟ್ಟಿಡುವುದು ಹೇಗೆ? ಇಲ್ಲಿಯೇ ನಮಗೆ ಪ್ರಯೋಜನಕ್ಕೆ ಬರುತ್ತವೆ: ಲೇಖನ ಚಿಹ್ನೆಗಳು.

Advertisements
02 PMarks 1

ಈ ಚಿತ್ರವನ್ನು ನೋಡಿ. ಅಡುಮಾತಿನಲ್ಲಿರುವ ಉಚ್ಚಾರಣೆಯನ್ನು ನಾವು ಬರಹದಲ್ಲಿ ತಪ್ಪಿಲ್ಲದ ವರ್ಣ, ಗುಣಿತಾಕ್ಷರ, ಒತ್ತಕ್ಷರ ಇತ್ಯಾದಿಗಳನ್ನು ಸರಿಯಾಗಿ ಬರೆಯುವ ಮೂಲಕ ಅಭಿವ್ಯಕ್ತಿಸುತ್ತೇವೆ. ಇಲ್ಲಿ ಅಲ್ಪಪ್ರಾಣ/ಮಹಾಪ್ರಾಣ, ಹ್ರಸ್ವ/ದೀರ್ಘ ಇತ್ಯಾದಿಗಳನ್ನು ಖಚಿತವಾಗಿ ಬರಹದಲ್ಲಿ ಇಳಿಸುತ್ತೇವೆ.

ಆದರೆ, ಮಾತಾಡುವಾಗ ಎದುರಿಗೇ ಇದ್ದು ಕೇಳಿ, ನೋಡಿ ಗ್ರಹಿಸಲಾಗುತ್ತಿದ್ದ, ಧ್ವನಿಯ ಮೂಲಕ ಅಭಿವ್ಯಕ್ತವಾಗುವ ಅರ್ಥ, ಭಾವ, ಧ್ವನಿಯ ಏರಿಳಿತ ಮತ್ತು ಆಂಗಿಕ ಭಾಷೆ- ಇವುಗಳು ದೂರದ ಓದುಗರಿಗೆ ತಲುಪಿಸುವುದು ಹೇಗೆ? ಇಲ್ಲಿಯೇ ವಿವಿಧ ಲೇಖನ ಚಿಹ್ನೆಗಳು ನಮಗೆ ನೆರವಿಗೆ ಬರುತ್ತವೆ. ಮೂವತ್ತಕ್ಕೂ ಹೆಚ್ಚು ಪ್ರಕಾರದ ಚಿಹ್ನೆಗಳಿಗೆ ಇದೇ ಮೌಲ್ಯ ಎಂದು ನಾವು ಒಪ್ಪಿಕೊಂಡಿರುವುದರಿಂದ, ಮತ್ತು ಅವುಗಳನ್ನು ಜಾಗರೂಕತೆಯಿಂದ, ಉದ್ದೇಶಪೂರ್ವಕವಾಗಿ ಬಳಸಿದಾಗ ನಮ್ಮ ಬರಹದ ಅರ್ಥವಷ್ಟೇ ಅಲ್ಲ, ಭಾವವೂ ಓದುಗರನ್ನು ತಲುಪುತ್ತದೆ.

ಬಹುದೊಡ್ಡ ಸಮಸ್ಯೆಯೆಂದರೆ, ವಿವಿಧ ಉದ್ದೇಶದ ಬರಹದಲ್ಲಿ ತಪ್ಪಿಲ್ಲದ ಭಾಷೆಯ ಪರಿಣಾಮಕಾರಿಯದ ಬಳಕೆಯೊಂದಿಗೆ ಲೇಖನ ಚಿಹ್ನೆಗಳ ಪರಿಚಯವನ್ನು ಮಾಡಿಸಿ ಅಭ್ಯಾಸ ಮಾಡಿಸಬೇಕಾಗಿದ್ದು ಶಾಲಾ ಶಿಕ್ಷಣದ ಅವಧಿಯಲ್ಲಿ. ಆದರೆ ಇಡೀ ಹತ್ತು ವರ್ಷದ ಕನ್ನಡ ಭಾಷಾ ವಿಷಯದ ಪಠ್ಯಪುಸ್ತಕದಲ್ಲಿ ಪ್ರಯೋಜನಕಾರಿಯಾಗಿ ಭಾಷಾ ಕೌಶಲಗಳನ್ನೇ ಕಲಿಸುವುದಿಲ್ಲ, ಇಂಥ ಪರಿಸ್ಥಿತಿಯಲ್ಲಿ, ಲೇಖನ ಚಿಹ್ನೆಗಳ ಪರಿಚಯ ಒಂದೆರಡು ಪಾಠಗಳಲ್ಲಿ ಒಂದೆರಡು ಅಭ್ಯಾಸಗಳಿಗೆ ಸೀಮಿತವಾಗಿಬಿಡುತ್ತದೆ. ಮುಂದೆ ಭಾಷೆಯನ್ನು ವೃತ್ತಿಪರವಾಗಿ ಬಳಸಬೇಕಾಗಿರುವ ನಾವು, ನೀವು ಹೊರಗಡೆಯೇ ಸ್ವಂತ ಆಸಕ್ತಿಯಿಂದ ಕಲಿಯಬೇಕಾಗುತ್ತದೆ. ಕಲಿಯೋಣ.

ಪತ್ರಿಕಾ ಲೇಖನ ಬರಹ, ಅನುವಾದ, ಕನ್ನಡ ಭಾಷಾ ಕೌಶಲ ಬೋಧನೆ, ಕನ್ನಡೇತರಿಗೆ ಕನ್ನಡ – ಇತ್ಯಾದಿ ಕಾರ್ಯಶಿಬಿರಗಳನ್ನು ನಡೆಸುತ್ತೇನೆ. ಅವುಗಳಲ್ಲಿ ನಾನು ಲೇಖನ ಚಿಹ್ನೆಗಳ ಕುರಿತೂ ಒಂದು ಗೋಷ್ಠಿಯನ್ನು ನಡೆಸಿ, ಲೇಖನ ಚಿಹ್ನೆಗಳ ಪರಿಚಯ ನೀಡುವುದಷ್ಟೇ ಅಲ್ಲ, ಅಭ್ಯಾಸಗಳನ್ನೂ ಮಾಡಿಸುತ್ತೇನೆ.

03 PMarks


ಅಂಥ ಶಿಬಿರಗಳಲ್ಲಿ ಹೀಗೊಂದು ರಸೋಕ್ತಿಯನ್ನು ಹೇಳುತ್ತಿರುತ್ತೇವೆ. ನಮಗೆ ಯಾವ ಲೇಖನ ಚಿಹ್ನೆಯನ್ನು ಎಲ್ಲಿ ಬಳಸಬೇಕು ಎಂದು ಗೊತ್ತಾಗುವುದಿಲ್ಲ, ಆದರೂ ಒಂದಷ್ಟು ಲೇಖನ ಚಿಹ್ನೆಗಳನ್ನು ಬಳಸಬೇಕು. ಅದಕ್ಕೆ ನಾವು ಏನು ಮಾಡುತೇವೆ ಎಂದರೆ, ಮೊದಲು ಒಂದು ಖಾಲಿಪುಟದ ಮೇಲೆ ಬರಹವನ್ನು ಬರೆದುಬಿಡುತ್ತೇನೆ. ಬರೆಯುವಾಗ ಪಕ್ಕದಲ್ಲಿ ಒಂದು ಬಟ್ಟಲಲ್ಲಿ ಒಂದಷ್ಟು ಲೇಖನ ಚಿಹ್ನೆಗಳನ್ನು ಇಟ್ಟುಕೊಂಡಿರುತ್ತೇವೆ. ಬರೆಯುವುದು ಮುಗಿದ ನಂತರ, ಒಂದಷ್ಟು ಲೇಖನ ಚಿಹ್ನೆಗಳನ್ನು ಎತ್ತಿಕೊಂಡು ಪುಟದ ಮೇಲೆ ಚೆಲ್ಲಿ ಬಿಡುತ್ತೇವೆ. ಅವು ಎಲ್ಲಿಗೆ ಹೋಗಿ ಕುಳಿತುಕೊಳ್ಳುತ್ತವೆಯೇ ಅದೇ ಸರಿ.

ನಾಲ್ಕು ವರ್ಗಗಳು : ಲೇಖನ ಚಿಹ್ನೆಗಳನ್ನು ಕಲಿಯುವುದಕ್ಕೆ ಸುಗಮವಾಗುವ ಕಾರಣಕ್ಕೆ ನಾನು ಅವುಗಳನ್ನು ನಾಲ್ಕು ವರ್ಗಗಳನ್ನಾಗಿ ವಿಂಗಡಿಸಿಕೊಳ್ಳುತ್ತೇವೆ. 1. ವಿರಾಮ ಚಿಹ್ನೆಗಳು ಮತ್ತು 2. ಭಾವ ಸೂಚಕ ಚಿಹ್ನೆಗಳು 3. ಉದ್ಧರಣ ಚಿಹ್ನೆಗಳು ಮತ್ತು ಆವರಣ ಚಿಹ್ನೆಗಳು.

4 ಮರ್ಕ್ಸ್

ವಿರಾಮ ಚಿಹ್ನೆ: ವಿವಿಧ ವಾಕ್ಯಗಳನ್ನು ಓದುವಾಗ ಸುಮಾರು ಎಷ್ಟು ಪಾeóï ಅಥವಾ ನಿಲುಗಡೆ ಕೊಡಬೇಕು ಎನ್ನುವುದನ್ನು ಆಧರಿಸಿ ನಾವು ಐದು ವಿರಾಮ ಚಿಹ್ನೆಗಳನ್ನು ನೋಡಬಹುದು: ಪೂರ್ಣ ವಿರಾಮ, ಅಲ್ಪ ವಿರಾಮ, ಅರ್ಧ ವಿರಾಮ, ಅಪೂರ್ಣ ವಿರಾಮ ಮತ್ತು ವಿವರಣ ವಿರಾಮ.

ಕೆಳಗಿನ ವಾಕ್ಯಗಳನ್ನು ಗಟ್ಟಿಯಾಗಿ ಓದಿ:

  1. ಟೀಚರ್ ಪತ್ರಿಕೆ ತಿಂಗಳಿಗೊಮ್ಮೆ ಪ್ರಕಟವಾಗುತ್ತದೆ.
  2. ಇದರಲ್ಲಿ ಲೇಖನಗಳು, ಸಂದರ್ಶನಗಳು, ಕವನಗಳು, ವರದಿಗಳು ಇರುತ್ತವೆ.
  3. ಇದರಲ್ಲಿ ನೀವೂ ಲೇಖನಗಳನ್ನು ಬರೆಯಬಹುದು; ಇತರರಿಗೂ ಬರೆಯಲು ಉತ್ತೇಜಿಸಬಹುದು.
    ಮೂರೂ ವಾಕ್ಯಗಳ ಕೊನೆಯಲ್ಲಿ, ಅಲ್ಲಿಗೆ ವಾಕ್ಯಗಳು ಮುಕ್ತಾಯವಾದವು ಎಂಬುದನ್ನು ಸೂಚಿಸಲು ಪೂರ್ಣ ವಿರಾಮ ಚಿಹ್ನೆ (.) ಇದೆ. ಎರಡನೆಯ ವಾಕ್ಯದಲ್ಲಿ ಮೂರು ವಿವಿಧ ಘಟಕಗಳ ಉಲ್ಲೇಖವಿದೆ. ಅವು ಬೇರೆ ಬೇರೆ ಎಂದು ಸೂಚಿಸಲು ಅಲ್ಪ ವಿರಾಮ (,) ಚಿಹ್ನೆಯನ್ನು ಬಳಸಲಾಗಿದೆ. ಕೊನೆಯ ಘಟಕದ (ವರದಿಗಳು) ನಂತರ ಅಲ್ಪವಿರಾಮ ಇಲ್ಲ ಎನ್ನುವುದನ್ನು ಗಮನಿಸಿ.

    ಮೂರನೇ ವಾಕ್ಯದಲ್ಲಿ ನಿಜವೆಂದರೆ ಎರಡು ಪೂರ್ಣವಾಕ್ಯಗಳು ಇವೆ; ಆದರೆ ಈ ಸಂದರ್ಭದಲ್ಲಿ ಅವೆರಡೂ ಒಂದು ವಿಚಾರಕ್ಕೆ ನಿಕಟವಾಗಿ, ಒಂದೇ ವಾಕ್ಯವೇನೊ ಎನ್ನುವ ಹಾಗೆ ಹೇಳಲಾಗಿದೆ. ಆದ್ದರಿಂದ, ಅದರೊಳಗಿರುವ ಮೊದಲ ವಾಕ್ಯದ ಕೊನೆಯಲ್ಲಿ ಅರ್ಧ ವಿರಾಮ (;) ಚಿಹ್ನೆಯನ್ನು ಬಳಸಲಾಗಿದೆ.

    ಪೂರ್ಣ ವಿರಾಮವನ್ನು ಸೂಚಿಸುವ (.) ಚುಕ್ಕೆಯನ್ನು ಇನ್ನು ಕೆಲವು ಕಡೆ ಬಳಸುತ್ತೇವೆ. ಉದಾಹರಣೆಗೆ ವಿವಿಧ ಅಂಶಗಳ ಪಟ್ಟಿ ಮಾಡುವಾಗ, ಹೆಸರಿನ ಇನಿಶಿಯಲ್‍ಗಳನ್ನು ಸೂಚಿಸುವಾಗ, ಸಂಕ್ಷಿಪ್ತ ನಾಮವನ್ನು ಬರೆಯುವಾಗ, ಪದವಿಯನ್ನು ಸೂಚಿಸುವಾಗ ಇತ್ಯಾದಿ ಸಂದರ್ಭಗಳಲ್ಲಿಯೂ ಘಟಕಗಳನ್ನು ಪ್ರತ್ಯೇಕಿಸಿ ಬರೆಯಲು ಈ ಚುಕ್ಕೆ ಸಹಕಾರಿಯಾಗಿದೆ.
  4. ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೆ.ವಿ.ಸುಬ್ಬಣ್ಣ, ಎಚ್.ಎಸ್.ಪಾರ್ವತಿ
  5. ಕು.ವೆಂ.ಪು., ಪು.ತಿ.ನ., ತೀ.ನಂ.ಶ್ರೀ. ಕ.ಸಾ.ಪ., ಕ.ಅ.ಪ್ರಾ.
  6. ಬಿ.ಎ., ಎಂ.ಎ., ಸಿ.ಎ., ಎಲ್.ಎಲ್.ಬಿ., ಐ.ಎ.ಎಸ್.

    ಮೇಲಿನ 2 ಮತ್ತು 3ನೇ ಉದಾಹರಣೆಗಳಲ್ಲಿ ಇತ್ತೀಚೆಗೆ ಚುಕ್ಕೆ ಇಲ್ಲದೆಯೂ ಬರೆಯುವ ವಾಡಿಕೆ ಇದೆ. ಪೂರ್ಣವಿರಾಮದ ಚಿಹ್ನೆಯಾದ ಚುಕ್ಕೆಯನ್ನು ಹಲವು ಬೇರೆ ಕಡೆಗಳಲ್ಲಿಯೂ ಬಳಸಲಾಗುತ್ತದೆ.

    ಅಪೂರ್ಣ ವಿರಾಮ: ಮಾತಿನ ಅಪೂರ್ಣತೆಯನ್ನು ಸೂಚಿಸಲು, ತಡವರಿಸುತ್ತಾ ಮಾತಾಡುವುದನ್ನು ಸೂಚಿಸಲು ಅಪೂರ್ಣ ವಿರಾಮವನ್ನು (…) ಬಳಸುತ್ತೇವೆ. ಸಾಮಾನ್ಯವಾಗಿ ಮೂರು ಅಥವಾ ನಾಲ್ಕು ಚುಕ್ಕೆಗಳು ಅಪೂರ್ಣ ವಿರಾಮವನ್ನು ಸೂಚಿಸುತ್ತವೆ. ದೀರ್ಘವಾಗಿರುವ ಉದ್ದರಣೆಯಲ್ಲಿ ಕೆಲವು ಭಾಗಗಳನ್ನು ಬಿಟ್ಟಿದೆ ಎಂದು ಸೂಚಿಸಲೂ ಈ ಚಿಹ್ನೆಯನ್ನು ಬಳಸುತ್ತಾರೆ.

    “ನೀನೇನಾದರೂ ಹೇಳು… ಇಲ್ಲಿ ನೋಡು….ನಾನು… ಹೇಳುವುದನ್ನು ಕೇಳು.”
    “…. ಆತ್ಮಸಾಕ್ಷಿಗೆ ಅನುಗುಣವಾಗಿ ಅನಿರ್ಬಂಧಿತವಾಗಿ ಚರ್ಚಿಸುವ ಸ್ವಾತಂತ್ರ್ಯವನ್ನು ನನಗೆ ಕೊಡಿ…..”

    ವಿವರಣ ವಿರಾಮ: (:) ಹೇಳಿದ ವಿಷಯಕ್ಕೆ ವಿವರಣೆಯನ್ನು ನೀಡಲು, ಅಥವಾ ಉಲ್ಲೇಖಿಸಿದ ಅಂಶಗಳನ್ನು ಪಟ್ಟಿ ಮಾಡಲು ವಿವರಣ ವಿರಾಮ(:)ವನ್ನು ಬಳಸಲಾಗುತ್ತದೆ. ಇದೇ ಲೇಖನದಲ್ಲಿ ಪ್ರತಿಯೊಂದು ವಿರಾಮಗಳನ್ನು ವಿವರಿಸಿರುವ ಮುಂಚೆ ಅವುಗಳ ಹೆಸರಿನ ನಂತರ ಈ ಚಿಹ್ನೆಯನ್ನು ಬಳಸಿರುವುದನ್ನು ಕಾಣಬಹುದು. ನಾಟಕಗಳಲ್ಲಿ ಸಂಭಾಷಣೆ ಬರೆಯುವಾಗಲೂ ಪಾತ್ರಗಳ ಹೆಸರಿನ ನಂತರ ಈ ಚಿಹ್ನೆಯನ್ನು ಬಳಸಲಾಗುತ್ತದೆ.
    ಉದಾ; ವಾರದಲ್ಲಿ ಏಳು ದಿನ: ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ ಗುರುವಾರ, ಶುಕ್ರವಾರ ಮತ್ತು ಶನಿವಾರ.
    ಭಾರತಿ: ನನ್ನ ವಿದ್ಯಾರ್ಥಿಗಳ ಭವಿಷ್ಯದ ಹೊಣೆ ನನ್ನ ಹೆಗಲ ಮೇಲಿದೆ, ಅದಕ್ಕೇ ನನಗೆ ಈ ಕಾಳಜಿ.

    ಸೂಚಕಗಳು: ಸೂಚಕಗಳಲ್ಲಿ ಎರಡು: ಪ್ರಶ್ನಸೂಚಕ ಮತ್ತು ಭಾವಸೂಚಕ
    ಪ್ರಶ್ನಸೂಚಕ: ಯಾವುದೇ ಉತ್ತರವನ್ನು ಬಯಸುವ ವಾಕ್ಯವು ಪ್ರಶ್ನೆಯನ್ನು ಕೇಳುತ್ತದೆ. ಮಾತಾಡುವಾಗ ಇದು ಪ್ರಶ್ನೆ ಎಂದು ಧ್ವನಿಯಿಂದ ಗೊತ್ತಾಗುತ್ತದೆ. ಏನು, ಯಾರು, ಯಾವುದು, ಎಲ್ಲಿ, ಯಾವಾಗ ಇತ್ಯಾದಿ ಪ್ರಶ್ನೆ ಪದಗಳಿಂದಲೂ ಅದು ತಿಳಿಯುತ್ತದೆ. ಬರಹದಲ್ಲಿ ಅದನ್ನು ಸೂಚಿಸುವ ಚಿಹ್ನೆಯನ್ನು ಪ್ರಶ್ನಸೂಚಕ (?) ಎನ್ನುತ್ತೇವೆ.
    ಉದಾ: ನಿನ್ನ ಹೆಸರೇನು? ತಾಜ್ ಮಹಲನ್ನು ಕಟ್ಟಿಸಿದವರು ಯಾರು? ಭೂಗ್ರಹದಲ್ಲಿ ಹಗಲು ರಾತ್ರಿ ಹೇಗೆ ಆಗುತ್ತವೆ? ಕೆಲವೊಮ್ಮೆ ಹೇಳಿಕೆಯ ಕೊನೆಯಲ್ಲಿ ಆ, ಏ, ಓ ಇತ್ಯಾದಿ ಹಚ್ಚಿದಾಗಲೂ ಅದು ಪ್ರಶ್ನೆಯಾಗುತ್ತದೆ.
    ಉದಾ: ಇವಳು ನಿಮ್ಮ ಮಗಳಾ? ನಿಮ್ಮ ತಂದೆ ಇವತ್ತು ಬರುತ್ತಾರೆಯೇ? ನೀವೂ ದೇಣಿಗೆಯನ್ನು ಕೊಡುತ್ತೀರೋ?
    ಹೇಳಿಕೆಯ ನಡುವೆ ಅದರ ವಸ್ತುವಾಗಿ ಪ್ರಶ್ನೆ ಬಂದರೆ ಅದಕ್ಕೆ ಪ್ರಶ್ನಸೂಚಕ ಚಿಹ್ನೆ ಹಾಕಬೇಕಾಗಿಲ್ಲ. ಉದಾ: ಈ ದೇಶದಲ್ಲಿ ಎಷ್ಟು ಬಡತನವಿದೆ ಎಂದು ಕಂಡುಕೊಳ್ಳುವುದು ಈ ಅಧ್ಯಯನದ ಉದ್ದೇಶ.

    ಭಾವಸೂಚಕ: ನಮ್ಮ ಮಾತಿನಲ್ಲಿ ಅಚ್ಚರಿ, ಸಂತೋಶ, ಕಾತರ, ಬೇಸರ, ದುಃಖ ಇತ್ಯಾದಿ ಭಾವನೆಗಳನ್ನು ವ್ಯಕ್ತಪಡಿಸುತ್ತೇವೆ. ಇದನ್ನು ಸೂಚಿಸಲು ಬಳಸುವ (!) ಚಿಹ್ನೆಯನ್ನು ಭಾವಸೂಚಕ ಚಿಹ್ನೆ ಎನ್ನುತ್ತೇವೆ.
    ಉದಾ: ಅಯೋ! ಎಲ್ಲಾ ಹಾಳಾಗಿ ಹೋಯಿತು. ಆಹಾ! ಎಷ್ಟೊಂದು ರಮಣೀಯ್ವಾದ ದೃಶ್ಯ! ಅಬ್ಭಾ! ಈ ಭಯಾನಕ ಸದ್ದು ಇಡೀ ಊರನ್ನೇ ನಡುಗಿಸಿತು.

    ಉದ್ಧರಣ ಚಿಹ್ನೆಗಳು: (“….”), (‘….’)
    ಉದ್ಧರಣೆಯೆಂದರೆ ಒಬ್ಬರು ಹೇಳಿದ ಮಾತನ್ನು ಉದಹರಿಸಿ ಯಥಾವತ್ ಹೇಳುವುದು. ನಮ್ಮ ಬರಹಕ್ಕೆ ಪ್ರಸ್ತುತತೆ ಬರಲಿ ಎಂದು ನಾವು ಮಹಾಪುರುಷರು, ವಿಜ್ಞಾನಿಗಳು, ಕವಿಗಳು ಮುಂತಾದವರು ಹೇಳಿದ್ದರು ಎನ್ನುವ ಮಾತನ್ನು ಉದ್ದರಿಸುತ್ತೇವೆ. ಅದನ್ನು ಸೂಚಿಸಲು ನಾವು ಉದ್ದರಣ ಚಿಹ್ನೆಯನ್ನು (“….”) ಬಳಸುತ್ತೇವೆ. ನಾಟಕ ಅಥವಾ ಕಥೆ/ಕಾದಂಬರಿಯಲ್ಲಿ ಬರುವ ಸಂಭಾಷಣೆಯನ್ನು ಬರೆಯುವಾಗಲೂ ಈ ಚಿಹ್ನೆ ಬಳಕೆಯಾಗುತ್ತದೆ. ಹೀಗೆ ಮಾಡುವಾಗ ಆರಂಭದಲ್ಲಿ (“…) ಮತ್ತು ಕೊನೆಯಲ್ಲಿ (…”) ಚಿಹ್ನೆಯನ್ನು ಹಾಕುತ್ತೇವೆ.

    ಒಬ್ಬರ ಮಾತಿನ ನಡುವೆಯೇ ಇನ್ನೊಬ್ಬರ ಮಾತನ್ನು ಉದ್ಧರಿಸುವ ಸಂದರ್ಭದಲ್ಲಿ ಮುಖ್ಯ ಹೇಳಿಕೆಯನ್ನು ಜೋಡಿ ಉದ್ಧರಣ ಚಿಹ್ನೆಗಳ ನಡುವೆ, ಆ ಇನ್ನೊಬ್ಬರ ಮಾತನ್ನು ಏಕೆ ಉದ್ಧರಣ ಚಿಹ್ನೆಗಳ ನಡುವೆ ಸೂಚಿಸಲಾಗುತ್ತದೆ. ಕೆಲವೊಮ್ಮೆ ಒಂದು ಪದಕ್ಕೆ ಇರುವುದಕ್ಕಿಂತ ವಿರುದ್ಧವಾದ, ಭಿನ್ನವಾದ ಅಥವಾ ‘ವಿಶೇಷ’ವಾದ ಅರ್ಥವನ್ನು ಸೂಚಿಸಲು ಏಕ ಉದ್ಧರಣ ಚಿಹ್ನೆಯನ್ನು ಬಳಸಲಾಗುತ್ತದೆ. ಬರಹದಲ್ಲಿ ಪತ್ರಿಕೆ, ಗ್ರಂಥ ಅಥವಾ ಸಂಸ್ಥೆ ಇತ್ಯಾದಿಗಳ ಹೆಸರನ್ನು ಸೂಚಿಸಲೂ ಏಕ ಉದ್ಧರಣ ಚಿಹ್ನೆಯನ್ನು ಬಳಸಲಾಗುತ್ತದೆ. ಕೆಲವು ಉದಾಹರಣೆಗಳು:
    “ಸಂವಿಧಾನ ನಮ್ಮ ಬದುಕಿನ ಬಂಡಿ.” – ಡಾ.ಬಿ.ಆರ್. ಅಂಬೇಡ್ಕರ್.
    “ನಾನು ಎಷ್ಟು ಸಲ ಹೇಳಿದ್ದೇನೆ, ಇಷ್ಟು ತಡವಾಗಿ ಬರಬೇಡ ಎಂದು.” ಅಮ್ಮ ಕೋಪಿಸಿಕೊಂಡು ಹೇಳಿದರು.
    “ಅಪ್ಪಾ! ಬಾಲು ನನಗೆ ‘ಗೂಬೆ’ ಅಂತ ಬಯ್ತಾನೆ.”
    ನಮ್ಮ ಸರಕಾರಗಳು ಮಾಡುತ್ತಿರುವ ‘ಅಭಿವೃದ್ಧಿ’ ಅವರಿಗೇ ಪ್ರೀತಿ.
    ಸಕ್ಕರೆ ನಾಡಿನಲ್ಲಿ ‘ಕಹಿ’ಯ ಪಾರುಪತ್ಯ.
    ನನ್ನ ‘ಸಂವಿಧಾನ ಸಾಕ್ಷರತೆ, ‘ಶಾಲೆಯಲ್ಲಿ ಸಂವಿಧಾನ’, ‘ಪ್ರಸ್ತಾವನೆ: ಸಂವಿಧಾನ ಓದಿಗೊಂದು ಕೈದೀವಿಗೆ’ ಮುಂತಾದ ಕೃತಿಗಳು ಬಹಳ ಜನಪ್ರಿಯವಾಗಿವೆ.
    ಆವರಣ ಚಿಹ್ನೆಗಳು: ( )
    ಇದರಲ್ಲಿಯೂ, ಅನುಕ್ರಮವಾಗಿ ಸಂಖ್ಯೆಯನ್ನು ಅಥವಾ ಅಕ್ಷರವನ್ನು ಹಾಕಿ ಅಂಶಗಳನ್ನು ಸೂಚಿಸುವಾಗ ಒಂದು ಅಥವಾ ಎರಡು ಆವರಣಗಳನ್ನು ಬಳಸಲಾಗುತ್ತದೆ. ಅದೇ ರೀತಿ ಬರೆಯುತ್ತಿರುವ ಅಂಶಕ್ಕೆ ಸಂಬಂಧಿಸಿದ, ಅಥವಾ ಅದನ್ನು ಸ್ಪಷ್ಟಪಡಿಸಲು ಸಹಾಯಕವಾಗುವ ಅಂಶವನ್ನು ಎರಡು ಆವರಣಗಳ ನಡುವೆ ಇರಿಸಬಹುದು.
    ಒಂದು ಹೇಳಿಕೆಯಲ್ಲಿ ಎರಡು ಆವರಣಗಳನ್ನು ಬಳಸಬೇಕಾಗಿ ಬಂದಾಗ, ಒಳಗಿನ ಆವರಣಕ್ಕಾಗಿ ದುಂಡಾವರಣ ( ), ಮತ್ತು ಹೊರಗಿನ ಆವರಣಕ್ಕಾಗಿ ಚೌಕಾವರಣ [ ] ಬಳಸಲಾಗುತ್ತದೆ. ಅಲಂಕಾರಕ್ಕಾಗಿ ಪುಷ್ಪಾವರಣ { } ಬಳಸಲಾಗುತ್ತದೆ. ಕೆಲವು ಉದಾಹರಣೆಗಳನ್ನು ನೋಡೋಣ.
    ನಾಟಕದಲ್ಲಿ ಸಂಭಾಷಣೆ ಬರೆಯುವಾಗ ಪಾತ್ರಗಳ ಮನಸ್ಥಿತಿ, ವರ್ತನೆ ಇತ್ಯಾದಿ ನಿರ್ದೇಶನಗಳನ್ನು ಸೂಚಿಸಲೂ ಆವರಣವನ್ನು ಬಳಸಲಾಗುತ್ತದೆ. ಕೆಲವು ಉದಾಹರಣೆಗಳನ್ನು ನೋಡೋಣ:
    ವಾಕ್ಯಗಳಲ್ಲಿ ಮೂರು ಬಗೆ: (1) ಸರಳವಾಕ್ಯ, (2) ಸಂಯುಕ್ತವಾಕ್ಯ ಮತ್ತು (3) ಮಿಶ್ರವಾಕ್ಯ.
    ಅರ್ಜಿಯೊಂದಿಗೆ ಕೆಳಗಿನ ದಾಖಲೆಗಳನ್ನು ಲಗತ್ತಿಸಿ:
    ಎ) ಹತ್ತನೇ ತರಗತಿ ಪ್ರಮಾಣ ಪತ್ರ
    ಬಿ) ಆಧಾರ್ ಕಾರ್ಡು
    ಸಿ) ಪಾನ್ ಕಾರ್ಡು
    ಡಿ) ಇತ್ತೀಚಿನ ಪಾಸ್‍ಪೋಸ್ಟ್ ಮಾದರಿಯ ಫೋಟೋ
    ಪೂರ್ವಪಾಕಿಸ್ತಾನದಲ್ಲಿ (ಈಗಿನ ಬಾಂಗ್ಲಾದೇಶ) ಪ್ರಧಾನವಾಗಿ ಆಡುವ ಭಾಷೆ ಬಂಗಾಲಿಯಾಗಿತ್ತು.
    ಯುಎನ್ (ಯುನೈಟೆಡ್ ನೇಷನ್ಸ್) ಇದನ್ನು 1948ರಲ್ಲಿ ಘೋಷಿಸಿದೆ.
    ಹರಿಲಾಲರು (ಗಾಂಧೀಜಿಯವರಾ ಹಿರಿಯ ಪುತ್ರ) ಹುಟ್ಟಿದ್ದು 1888ರಲ್ಲಿ.
    ಇವತ್ತು ನಮ್ಮ ಗುರಿ ಸಸ್ಟೇನಬಲ್ ಡೆವೆಲಪ್‍ಮೆಂಟ್ (ಎಂದರೆ, ಸುಸ್ಥಿರ ಅಭಿವೃದ್ಧಿ) ಆಗಿರಬೇಕು.
    ನಾನು ಈ ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ(ಕ.ಅ.ಪ್ರಾ)ದ ಸದಸ್ಯನಾಗಿದ್ದೆ.
    ರವಿರಾಜ: (ಪುಸ್ತಕವನ್ನು ತೋರಿಸುತ್ತಾ) ನೀವು ಓದುವುದು ಇಂಥ ಪುಸ್ತಕಗಳನ್ನೇ?
    ಉಮಾ: (ಸಂಕೋಚದಿಂದ) ಅದು ನನ್ನದಲ್ಲ, ಅಪ್ಪಾ, ಅಣ್ಣನದು.
    ರವಿರಾಜ: (ಸ್ವಗತ) ಎಂಥ ಕಾಲ ಬಂತು!
    [ಅಲ್ಲಾಹ್‍ನಿಂದ ನಿರಾಕೃತರು, (ಶ್ರೇಷ್ಠ ಅನುವಾದಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದ ಕೃತಿ) (2016) ಲೇ: ನೂರ್ ಜಹೀರ್, ಅನು: ಎಂ.ಅಬ್ದುಲ್ ರೆಹಮಾನ್ ಪಾಷ, ಪ್ರ: ನವಕರ್ನಾಟಕ ಪ್ರಕಾಶನ]
    ಎಷ್ಟು ಕಲಿತರೂ ಸಾಲದು
    ಸ್ನೇಹಿತರೇ, ಈ ಲೇಖನದ ಮಿತಿಯಲ್ಲಿ ನಾವು ಇಲ್ಲಿ ಚರ್ಚಿಸಿರುವುದು ತುಂಬಾ ಕಡಿಮೆ. ಶ್ರೇಷ್ಠ ಲೇಖಕರ, ಒಳ್ಳೆಯ ಕರಡುತಿದ್ದುವವರನ್ನು ಇಟ್ಟುಕೊಂಡಿರುವ, ಉತ್ತಮ ಸಂಪಾದಕರು ಸಂಪಾದಿಸಿ, ಶ್ರೇಷ್ಠ ಪ್ರಕಾಶಕರು ಪ್ರಕಟಿಸಿರುವ ಪುಸ್ತಕಗಳನ್ನು ಓದುವಾಗ ವಿಷಯ ಗ್ರಹಣದ ಜೊತೆಯಲ್ಲಿ ಅಲ್ಲಿ ಬಳಕೆಯಾಗಿರುವ ಲೇಖನ ಚಿಹ್ನೆಗಳ ಕುರಿತೂ ಗಮನ ಹರಿಸಿ. ನೀವು ಸ್ವತಃ ಬರೆಯುವಾಗಲೂ ಲೇಖನ ಚಿಹ್ನೆಗಳನ್ನು ಗಂಭೀರವಾಗಿ ಪರಿಗಣಿಸಿ. ನಿಖರವಾದ ಸಂವಹನಕ್ಕೆ ಇದು ಬಹಳ ಅನಿವಾರ್ಯ. ಔಪಚಾರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಭಾಷಾ ಕೌಶಲಗಳನ್ನೇ ಉಪಯುಕ್ತವಾಗಿ ಕಲಿಸುವುದಿಲ್ಲ. ಇನ್ನು ಬಹಳ ಮುಖ್ಯವಾದ ಲೇಖನ ಚಿಹ್ನೆಗಳ ಕಲಿಕೆಗೆ ಮಹತ್ವವೇ ಸಿಗುವುದಿಲ್ಲ. ನಾವು ಏನೇ ಬರೆಯಲ್ಲಿ ಅದರ ಒಂದು ಅನಿವಾರ್ಯ ಭಾಗವಾದ ಲೇಖನ ಚಿಹ್ನೆಗಳ ಸಮರ್ಥ ಬಳಕೆಯನ್ನು ನಾವೇ ಕಲಿಯಬೇಕಾಗುತ್ತದೆ.
    ಭಾಷಾ ಕೌಶಲಗಳು, ಲೇಖನ ಬರಹ, ಅನುವಾದ ಇತ್ಯಾದಿಗಳ ಕುರಿತು ನಾನು ನಡೆಸುವ ಕಾರ್ಯಶಿಬಿರಗಳಲ್ಲಿ ನಾನು ಮಾತ್ರ ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇನೆ. ನಾನು ಬರೆದಿರುವ ‘ಆಡಳಿತ ಭಾಷಾ ಕೌಶಲ ಅಭಿವೃದ್ಧಿ’, ‘ಕನ್ನಡ ಭಾಷಾ ಕೌಶಲ : ಕಲಿಕೆ – ಬೋಧನೆ’ ಕೃತಿಗಳಲ್ಲಿ ಈ ಕುರಿತು ಒಂದು ಸಂಕ್ಷಿಪ್ತ ಅಧ್ಯಾಯವನ್ನು ಸೇರಿಸಿದ್ದೇನೆ.
    ಈ ಕುರಿತು ನನಗೆ ಬಹಳ ಉಪಯುಕ್ತವಾಗಿ ಕಂಡ ಕೃತಿ ಎಂದರೆ, ‘ಕನ್ನಡಶೈಲಿ ಕೈಪಿಡಿ’. ಇದು ಕನ್ನಡ ವಿಶ್ವವಿದ್ಯಾಲಯ ಮತ್ತು ಮೈಸೂರಿನ ಭಾರತೀಯ ಭಾಷಾ ಸಂಸ್ಥೆಯ ಭಾಷಾ ವಿದ್ವಾಂಸರ ಸಮಿತಿ ರಚನೆ ಮಾಡಿ, ಕ.ವಿ.ವಿ. ಪ್ರಸಾರಾಂಗವು ಪ್ರಟಿಸಿದ ಒಂದು ಉತ್ಕೃಷ್ಟ ಕೃತಿ. ಇದರಲ್ಲಿ ಲೇಖನ ಚಿಹ್ನೆಗಳ ಬಗ್ಗೆ ಒಂದು ಬಹಳ ವಿಸ್ತೃತವಾದ ಅಧ್ಯಾಯವಿದೆ. ‘ಲಿಪ್ಯಂತರ,’ ‘ಕರಡು ತಿದ್ದುವುದು,’ ‘ಪದಗಳ ನಡುವೆ ತೆರಪು,’ ‘ಪದವಿಭಜನೆ,’ ‘ಉತ್ತಮ ಬರಹ,’ ಇತ್ಯದಿ ವಿಭಾಗಗಳು ಲೇಖಕರನ್ನು ಉತ್ತಮ ಲೇಖಕರನ್ನಾಗಿ ಸಜ್ಜುಗೊಳಿಸುವಲ್ಲಿ ಸಹಾಯಕವಾಗುವಂತಿವೆ. ನಾನು ಈ ಕೈಪಿಡಿಯನ್ನು ಮತ್ತೆ, ಮತ್ತೆ ಓದುತ್ತಿರುತ್ತೇನೆ. ನೀವೂ ಕೊಂಡು ಓದಿ.
06 Kriya
ಪ್ರೊ ಅಬ್ದುಲ್ ರೆಹಮಾನ್ ಪಾಷಾ
ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
+ posts

ಹಿರಿಯ ಭಾಷಾ ವಿಜ್ಞಾನಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
ಹಿರಿಯ ಭಾಷಾ ವಿಜ್ಞಾನಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು...

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

Download Eedina App Android / iOS

X