ಉಪಜಾತಿ ಐಡೆಂಟಿಟಿಯಿಂದ ದಲಿತ ಅಸ್ಮಿತೆ ಸಂಕುಚಿತ: ಕೆ.ರಾಮಯ್ಯ

Date:

Advertisements

‘ಜಾತಿಗಳ ಅಸ್ತಿತ್ವ ಜಾತಿಗಳಲ್ಲಿ ಇರುವುದಿಲ್ಲ, ಉಪಜಾತಿಗಳಲ್ಲಿ ಇರುತ್ತದೆ ಎಂದಿದ್ದರು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್. ದಲಿತರು ಉಪಜಾತಿಗಳಲ್ಲಿ ಅಸ್ತಿತ್ವವನ್ನು ಕಂಡುಕೊಳ್ಳಲು ಯತ್ನಿಸಿದ ಮೇಲೆ ಸಂಚುಚಿತಗೊಂಡೆವು’ ಎಂದು ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯಪಟ್ಟರು.

ದಲಿತ ಸಾಹಿತ್ಯ ಪರಿಷತ್ ವತಿಯಿಂದ ಬೆಂಗಳೂರು ನಗರದಲ್ಲಿ ಮಂಗಳವಾರ ನಡೆದ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದಲಿತ ತಾತ್ವಿಕತೆಯನ್ನು ಸರಿದಿಕ್ಕಿನಲ್ಲಿ ತೆಗೆದುಕೊಂಡು ಹೋಗದಿದ್ದರೆ ಚರಿತ್ರೆಗೆ ನಾವು ದ್ರೋಹ ಮಾಡಿಕೊಳ್ಳುತ್ತೇವೆ. ದಲಿತ ಚಳವಳಿ ಬಂಡೆಗಳ ಮೇಲೆ ಚಿಗುರೊಡೆಯಬೇಕಿದೆ ಎಂದಿದ್ದರು ದೇವನೂರ ಮಹಾದೇವ. ನಾವು ಚಿಗುರೊಡೆದೆವು. ಆದರೆ ಅಲ್ಲೇ ಹುಟ್ಟಿದ ಕಾಡ್ಗಿಚ್ಚಿನಲ್ಲಿ ಚಿಗುರು ಸುಟ್ಟು ಹೋಯಿತು. ಇಂದು ಎದುರಿಸುತ್ತಿರುವ ಬಿಕ್ಕಟ್ಟಿನ ವೇಳೆ ಹೊರಗೆ ಬೆರಳು ತೋರಿಸಿ ಹೇಳುವ ಸ್ಥಿತಿಯಲ್ಲಿ ಇಲ್ಲ. ದಲಿತ ಪ್ರಜ್ಞೆ ಅಧಃಪತನದ ಕಡೆಗೆ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

Advertisements

ಗುರುತು ರಾಜಕಾರಣ ಮತ್ತು ಜಾತಿ ಐಡೆಂಟಿಟಿಗಳ ಪ್ರಶ್ನೆಗಳನ್ನು ಮೂರು ದಶಕಗಳ ಕಾಲ ನಾವು ಸರಿಯಾದ ದಿಕ್ಕಿನಲ್ಲಿ ನಡೆಸಿಕೊಂಡು ಬಂದೆವು. 2000ನೇ ಇಸವಿಯ ಆಚೆಗೆ ಆ ನಡಿಗೆ ನಿಂತು ಹೋಗಿದೆ. ಯಾಕೆ ಎಂಬುದನ್ನು ನಾವು ಯೋಚಿಸಬೇಕಿದೆ ಎಂದು ಆಶಿಸಿದರು.

ಗುರುತು ರಾಜಕಾರಣವನ್ನು 2010ರವರೆಗೂ ಹೇಗೋ ನಾನು ಸಹಿಸಿಕೊಂಡೆ. ಜಾತಿ ಗುರುತಲ್ಲಿ, ಐಡೆಂಟಿಟಿ ಗುರುತಲ್ಲಿ ರಕ್ಷಿಸಿಕೊಳ್ಳಬಹುದು ಎಂದುಕೊಂಡೆ. ಆದರೆ ಈ ಗುರುತು ರಾಜಕಾರಣದ ಮೂಲಕ ನಾನು ನನಗೆಯೇ ಎಲ್ಲೋ ಮೋಸ ಮಾಡಿಕೊಳ್ಳುತ್ತಿದ್ದೇನೆ ಅನಿಸಿತು. ದಲಿತ ಐಡೆಂಟಿಟಿ ನಮಗೆ ಗೌರವಯುತವಾಗಿತ್ತು. ಅದನ್ನು ಉಳಿಸಿಕೊಳ್ಳಲಿಲ್ಲ. ನನ್ನ ಐಡೆಂಟಿಟಿಯನ್ನು ನಾನು ಸರಿ ಮಾಡಿಕೊಳ್ಳಬೇಕಿತ್ತು ಎಂದು ಮಾರ್ಮಿಕವಾಗಿ ನುಡಿದರು.

ಹದಿನೆಂದು ನಿಮಿಷಕ್ಕೊಂದು ಅತ್ಯಾಚಾರ ಆಗುತ್ತದೆ. ಅಂದು ಬೆಲ್ಚಿಯಲ್ಲಿ ಅತ್ಯಾಚಾರವಾದರೆ ಕೋಲಾರ ಬಂದ್ ಆಗುತ್ತಿತ್ತು. ಆದರೆ ಅಂತಹ ಪ್ಯಾನ್ ಇಂಡಿಯಾ ಚಳವಳಿಯನ್ನು ನಾವಿಂದು ಯಾಕೆ ಕಟ್ಟಲು ಆಗುತ್ತಿಲ್ಲ? ಯಾಕೆಂದರೆ ನಾವು ಬ್ರದರ್‌ವುಡ್‌ (ಸಹೋದರತೆ) ತೊರೆದು ಅನ್‌ಬ್ರದರ್‌ವುಡ್ ಕಟ್ಟುತ್ತಿದ್ದೇವೆ ಎಂದರು.

ಇದನ್ನೂ ಓದಿರಿ: ಏ.26ರಂದು ದಾವಣಗೆರೆಯಲ್ಲಿ ‘ಸಂವಿಧಾನ ಸಂರಕ್ಷಕರ ಸಮಾವೇಶ’

ಜಾಗತೀಕರಣವು ನಮ್ಮನ್ನು ಸ್ವಾರ್ಥಿಗಳನ್ನಾಗಿ, ಲೋಭಿಗಳನ್ನಾಗಿ ಮಾಡಿದೆ. ನಿಜಕ್ಕೂ ನಮ್ಮಲ್ಲಿ ಬ್ರದರ್‌ವುಡ್ (ಸದೋರತೆ) ಇಲ್ಲವಾಗಿದೆ. ಪಕ್ಕದವನು ಖಾಲಿ ತಟ್ಟೆಯಲ್ಲಿ ಕೂತಿರುವಾಗ, ಇನ್ನೊಬ್ಬ ಮೃಷ್ಟಾನ್ನವನ್ನು ಉಣ್ಣುತ್ತಿರುತ್ತಾನೆ. ಅನ್ನ ಹೆಚ್ಚಾದರೆ ಚೆಲ್ಲುತ್ತಾನೆಯೇ ಹೊರತು, ಪಕ್ಕದವನ ತಟ್ಟೆಗೆ ಹಾಕುವುದಿಲ್ಲ ಎಂದು ತಿಳಿಸಿದರು.

ನಾವು ಬಿಕ್ಕಟ್ಟನ್ನು ಅರ್ಥೈಸಿಕೊಳ್ಳಬೇಕಾಗಿದೆ. ದಲಿತ ಎಂಬ ಪದವನ್ನು ಮರುವ್ಯಾಖ್ಯಾನ ಮಾಡಬೇಕಾಗಿದೆ. ಚಳವಳಿಯ ಹಾದಿಯಲ್ಲಿ ನಡೆದವರ ಹೆಜ್ಜೆಗುರುತುಗಳನ್ನು ಗುರುತಿಸಬೇಕಿದೆ. ಇಂದು ಚಳವಳಿಗಳೂ ಒಡೆದು ಹೋಗುತ್ತಿವೆ. ಸರಿಯಾಗಿ ಅರ್ಥೈಸಿಕೊಂಡು ಪ್ರತಿರೋಧವನ್ನು ಕಟ್ಟಿಕೊಳ್ಳದೆ ಆ ಶೂನ್ಯತೆಯನ್ನು ಎದುರಿಸುತ್ತೇವೆ ಎಂದು ವಿಶ್ಲೇಷಿಸಿದರು.

ವೈಷ್ಣವ ರಾಷ್ಟ್ರೀಯತೆಯ ಹೇರಿಕೆ: ರಾಮಯ್ಯ

ಈ ಪ್ರಪಂಚದ ಶೇ.90ರಷ್ಟು ಕಡೆ ಪುರೋಹಿತಶಾಹಿ, ಬಂಡವಾಳಶಾಹಿಗಳು ಅಧಿಕಾರ ಹಿಡಿದಿದ್ದಾರೆ. ನಮ್ಮಲ್ಲೂ ಅಂಥವರ ಕೈಗೆ ಅಧಿಕಾರ ಸಿಕ್ಕಿದೆ. ಇವರು ರಾಷ್ಟ್ರೀಯತೆಯನ್ನು ತಪ್ಪಾಗಿ ಬಿಂಬಿಸಿದ್ದಾರೆ. ವೈಷ್ಣವ ರಾಷ್ಟ್ರೀಯತೆಯನ್ನು ನಮ್ಮ ಮೇಲೆ ಹೇರುತ್ತಿದ್ದಾರೆ ಎಂದು ಎಚ್ಚರಿಸಿದರು.

ಆರ್‌ಎಸ್‌ಎಸ್ ಹೇಳುತ್ತಿರುವುದು ವೈಷ್ಣವ ರಾಷ್ಟ್ರೀಯತೆ. ಅದು ದೊಡ್ಡ ವಿಚಾರವೇನಲ್ಲ. ಆದರೆ ಅದನ್ನು ಪ್ರಸ್ತುತಗೊಳಿಸಲು ಆಳವಾಗಿ ಕೆಲಸ ಮಾಡುತ್ತಿದ್ದಾರೆ. ಇದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಕಾರ್ಪೊರೇಟ್ ಎಕಾನಮಿ ಬಂದ ಮೇಲೆ ಎಲ್ಲ ಕ್ಷೇತ್ರಗಳಲ್ಲೂ ತಮ್ಮನ್ನು ನೆಲೆಗೊಳಿಸಿಕೊಂಡಿದ್ದಾರೆ ಎಂದು ವಿವರಿಸಿದರು.

ಇದನ್ನೂ ಓದಿರಿ: ದೇವರನ್ನು ಪೂಜಿಸುವವರಿಗೆ ಆಷಾಢಭೂತಿತನ ಇರಬಾರದು: ಸಿಎಂ ಸಿದ್ದರಾಮಯ್ಯ

ಅಯೋಧ್ಯೆಯ ತೀರ್ಪು ಬರೆದವರು ಏಕ ವ್ಯಕ್ತಿಯಲ್ಲ. ಆರ್‌ಎಸ್‌ಎಸ್‌ ಕಚೇರಿಯಲ್ಲೇ ಈ ಕುರಿತು ಮಾತನಾಡಿದ್ದಾರೆ. ಆರ್‌ಎಸ್ಎಸ್‌ನವರು ಬೌದ್ಧಿಕ್ ವಿಂಗ್ ಕಟ್ಟಿದರು. ಅದರ ಫಲವಾಗಿ ಇಂತಹ ತೀರ್ಪು ಬಂದಿದೆ. ಅದು ಹೊರಗಿನಿಂದ ಬರೆಯಲ್ಪಟ್ಟ ತೀರ್ಪು ಎಂಬುದು ಆರ್‌ಎಸ್‌ಎಸ್‌ನವರ ಪ್ರತಿಪಾದನೆ. ನ್ಯಾಯಾಂಗವು ತನ್ನದೇ ಅಂತಃಪ್ರಜ್ಞೆಯಿಂದ ಕೆಲಸ ಮಾಡುತ್ತಿಲ್ಲ. ತೀರ್ಪುಗಳು ಹೊರಗಿನವರ ಆಣತಿಯಿಂದ ಬರುತ್ತಿವೆ ಎಂದು ಟೀಕಿಸಿದರು.

ನ್ಯಾಯಾಂಗ, ಕಾರ್ಯಾಂಗ ಇಲ್ಲವಾಗುತ್ತಿವೆ. 2047ಕ್ಕೆ ಈ ದೇಶದ ಭಾವುಟವನ್ನು ಇಳಿಸಿ, ಭಗವಾಧ್ವಜವನ್ನು ಏರಿಸಲು ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಇದನ್ನು ಹೇಗೆ ಎದುರಿಸುತ್ತೇವೆ ಎಂಬುದು ನಮ್ಮ ಎದುರಿಗಿರುವ ಸವಾಲು ಎಂದು ಹೇಳಿದರು.

ಸಾಹಿತಿ ಬರಗೂರು ರಾಮಚಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ದಲಿತ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ ಅರ್ಜುನ ಗೊಳಸಂಗಿ, ದಸಂಸ ಮುಖಂಡರಾದ ಮಾವಳ್ಳಿ ಶಂಕರ್, ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರದ ಡಾ. ಹೊನ್ನು ಸಿದ್ಧಾರ್ಥ, ವಕೀಲೆ ಪಿ.ಮಂಜುಳಾ ಮೊದಲಾದವರು ಹಾಜರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X