ಸರ್ಕಾರಿ ಆಸ್ಪತ್ರೆಯ ಅಧೀನದಲ್ಲಿ ಓದುತ್ತಿರುವ ಸರ್ಕಾರಿ ಜಿಎನ್ಎಮ್, ಪ್ಯಾರಾ ಮೆಡಿಕಲ್, ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಿಂದ ಅನಗತ್ಯವಾಗಿ ಹಣ ವಸೂಲಿ ಮಾಡಲಾಗುತ್ತಿದ್ದು, ಅಂತಹವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ವಿಜಯಪುರ ಕರ್ನಾಟಕ ಸ್ಟೇಟ್ ನರ್ಸಿಂಗ್ ವೆಲ್ಫೇರ್ ಅಸೋಸಿಯೇಷನ್ ಒತ್ತಾಯಿಸಿತು.
ಮನವಿ ಸಲ್ಲಿಸಿ ಮಾತನಾಡಿದ ದಾವೂದ್ ನಾಯ್ಕೋಡಿ, “ಸರ್ಕಾರಿ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳೆಲ್ಲ ಬಡ ಕುಟುಂಬದಿಂದ ಬಂದವರು. ಅವರಿಂದ ಕಾಲೇಜಿಗೆ ಸಂಬಂಧಿಸಿದ ಅಧಿಕಾರಿ ವರ್ಗ ಮತ್ತು ಕಾಲೇಜಿನ ಮುಖ್ಯಸ್ಥರೇ ಹಣ ಪೀಕುತ್ತಿರುವುದು ಖಂಡನೀಯ. ಎಕ್ಸಾಮ್, ಸ್ಪೋರ್ಡ್ಸ್, ಕೋರ್ಸ್ ಮುಗುಸಿ ಇಂಟರ್ನ್ಶಿಪ್ ನಲ್ಲಿರುವ ವಿದ್ಯಾರ್ಥಿಗಳಿಗೆ ಗಿಫ್ಟ್ ನೀಡಲು 700 ರೂಪಾಯಿ ಕೊಡಬೇಕು ಇಲ್ಲವಾದರೆ ನಿಮ್ಮ ಡಾಕ್ಯುಮೆಂಟ್ಸ್ ಮತ್ತು ಇಂಟರ್ನ್ಶಿಪ್ ಪ್ರಮಾಣ ಪತ್ರ ನೀಡುವುದಿಲ್ಲವೆಂದು ವಿದ್ಯಾರ್ಥಿಗಳಿಗೆ ಅನಗತ್ಯ ಬೆದರಿಕೆ ಹಾಕಲಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಷ್ಟೋ ವಿದ್ಯಾರ್ಥಿಗಳು ಕೋರ್ಸ್ ಮುಗಿದ ಬಳಿಕ ಹಣ ಕೊಡಲು ಸಾಧ್ಯವಾಗದೇ ಸಂಬಂಧಪಟ್ಟ ದಾಖಲೆಗಲನ್ನು ತಮ್ಮ ಅಲ್ಲೇ ಬಿಟ್ಟಿದ್ದಾರೆ. ಇದರಿಂದ ಎಷ್ಟೋ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ತಪ್ಪಿತಸ್ಥ ಅಧಿಕಾರಿಗಳನ್ನು ಕಾನೂನಾತ್ಮಕ ಶಿಕ್ಷೆಗೆ ಒಳಪಡಿಸಿ ವಿದ್ಯಾರ್ಥಿಗಳಿಗೆ ನ್ಯಾಯ ನೀಡಬೇಕು ಎಂದು ಮನವಿ ಮಾಡಿರುವ ಅವರು, ಕ್ರಮಕ್ಕೆ ಮುಂದಾಗದಿದ್ದರೆ, ಮುಂದಿನ ದಿನಗಳಲ್ಲಿ ಸಂಸ್ಥೆಯು ಹೋರಾಟ ಮಾಡಲು ಮುಂದಾಗುತ್ತದೆ” ಎಂದು ತಿಳಿಸಿದರು.
ಇದನ್ನೂ ಓದಿ: ವಿಜಯಪುರ | ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ: ವಿಜಯ್ ಕುಮಾರ್
ಈ ವೇಳೆ ಕರ್ನಾಟಕ ಸ್ಟೇಟ್ ನರ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ ಮಹಾಂತೇಶ್ ಎಚ್, ಮಾದೇಶ್ ಚಲವಾದಿ, ಶಂಕರ್ ಬಸರಗಿ, ಅಕ್ಷಯ್ ಹಾದಿಮನಿ, ಯಮನೂರಿ ಮಾದರ ಮುಂತಾದವರು ಇದ್ದರು.