ತಾಪಮಾನ ಹೆಚ್ಚಾಗುತ್ತಿದ್ದಂತೆ ದೇಶದ ಹಲವು ಪ್ರದೇಶಗಳಲ್ಲಿ ನೀರಿನ ಕೊರತೆ ಕಾಣಿಸಿಕೊಳ್ಳುತ್ತದೆ. ನಗರದಲ್ಲಿರುವವರು ಹಣ ಕೊಟ್ಟು ಟ್ಯಾಂಕರ್‌ಗಳಲ್ಲಿ ನೀರು ತರಿಸಿಕೊಳ್ಳುತ್ತಾರೆ. ಆದರೆ ಗ್ರಾಮೀಣ ಭಾಗದ ಜನರ ಸ್ಥಿತಿ ಶೋಚನೀಯ. ಮಹಾರಾಷ್ಟ್ರದ ಗ್ರಾಮವೊಂದರ ಜನರಿಗೆ ಅಪರೂಪಕ್ಕೆ ನಲ್ಲಿಯಲ್ಲಿ ಸುರಿಯುವ ನೀರನ್ನು ಕಾಪಿಡುವುದೇ ಸವಾಲಾಗಿದೆ. ಕಳ್ಳತನದ ಆತಂಕದ ನಡುವೆ ನೀರಿನ ಡ್ರಮ್‌ಗಳಿಗೆ ಬೀಗ ಹಾಕಿ ಇಡುತ್ತಿದ್ದಾರೆ.
ತೀವ್ರ ನೀರಿನ ಬಿಕ್ಕಟ್ಟಿನ ನಡುವೆ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಗ್ರಾಮಗಳಲ್ಲಿ ಪರಿಸ್ಥಿತಿ ಶೋಚನೀಯವಾಗಿದೆ. ಇದು ಉಪ್ಪು ನೀರಿನ ಪ್ರದೇಶವಾಗಿದೆ. ತಾಪಮಾನ 44 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಬಿಸಿಲಿನ ಬೇಗೆ ನಡುವೆ ದಾಹವೂ ಅಧಿಕ. ಬಿಸಿಲು ಅಧಿಕವಾಗಿರುವ ಕಾರಣ ಅಧಿಕ ನೀರು ಕುಡಿಯುವಂತೆ ಸರ್ಕಾರವೂ ಸೂಚಿಸಿದೆ. ಆದರೆ ಈ ಗ್ರಾಮದ ಜನರಿಗೆ ಕುಡಿಯುವ ನೀರಿನ ಕೊರತೆ ಎದುರಾಗಿದೆ. ನಲ್ಲಿಗಳಿದ್ದರೂ ಅದರಲ್ಲಿ ನೀರು ಬರಲು ಕೆಲವೊಮ್ಮೆ ಬರೋಬ್ಬರಿ ಎರಡು ತಿಂಗಳವರೆಗೆ ಕಾಯಬೇಕಾಗುತ್ತದೆ.
ಇದನ್ನು ಓದಿದ್ದೀರಾ? ಬೀದರ್ | ಕುಡಿಯುವ ನೀರಿನ ಸಮಸ್ಯೆ : ಸಹಾಯವಾಣಿ ಆರಂಭ
ಅಷ್ಟೊಂದು ದಿನಗಳಿಗೆ ಸಾಕಾಗುವಷ್ಟು ನೀರನ್ನು ಸಂಗ್ರಹಿಸಿಡುವುದು ಗ್ರಾಮದ ಜನರಿಗೆ ಎದುರಾಗಿರುವ ಸಂಕಷ್ಟ. ಕೆಲವೊಮ್ಮೆ 15 ದಿನಗಳಿಗೊಮ್ಮೆ ನೀರು ಬಂದರೆ, ಇನ್ನೂ ಕೆಲವೊಮ್ಮೆ 45-60 ದಿನಕ್ಕೊಮ್ಮೆ ನೀರು ಬರುತ್ತದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಇಲ್ಲಿ ಎಷ್ಟೋ ಮನೆಗಳಿಗೆ ಬೀಗವಿಲ್ಲ, ಆದರೆ ನೀರಿನ ಟ್ಯಾಂಕ್‌ಗಳಿಗೆ ಮಾತ್ರ ಬೀಗ ಹಾಕಲಾಗಿದೆ ಎಂದು ಮಾಧ್ಯಮಕ್ಕೆ ಉಗ್ ಗ್ರಾಮದ ನಿವಾಸಿ ಚಂದಾ ವಾಕಟೆ ಎಂಬವರು ಹೇಳಿದ್ದಾರೆ.
ಇನ್ನು ಈ ಪ್ರದೇಶದ ನೀರಿನ ಸಮಸ್ಯೆಗಳನ್ನು ಪರಿಹರಿಸಲು, ಆಡಳಿತವು 84 ಖೇಡಿ ಯೋಜನೆಯನ್ನು ಪರಿಚಯಿಸಿದೆ. ಆದರೆ ನೀರಿನ ಪೂರೈಕೆಗೆ ಸರಿಯಾದ ಯೋಜನೆ ಇನ್ನೂ ರೂಪಿಸಿಲ್ಲ. ಅನೇಕರು ಟ್ಯಾಂಕರ್‌ಗೆ 600 ರೂಪಾಯಿಗಳಂತೆ ಪಾವತಿಸಿ ಟ್ಯಾಂಕರ್‌ಗಳಿಂದ ನೀರು ಖರೀದಿಸಬೇಕಾದ ಸ್ಥಿತಿಯಿದೆ.
‘We Have No Choice’: #Nashik Women Risk Lives Climbing Into Dry Wells for #Water, Officials Deny Viral Video #Maharashtra https://t.co/nxsSaeARiW pic.twitter.com/e7GaiAUleb
— Punekar News (@punekarnews) April 22, 2025
ಇನ್ನು ಮಹಾರಾಷ್ಟ್ರದ ಯವತ್‌ಮಲ್ ಜಿಲ್ಲೆಯಲ್ಲೂ ಇದೇ ಸ್ಥಿತಿ ಎದುರಾಗಿದೆ. ಇಲ್ಲಿ ಹಟ್ಟಿಗಳಲ್ಲಿ ವಾಸಿಸುವ ಪಾರ್ದಿ ಸಮುದಾಯದವರು ನೀರಿಗಾಗಿ ತಮ್ಮ ಜೀವವನ್ನೇ ಪಣಕಿಡಬೇಕಾಗಿದೆ. ಇತ್ತೀಚೆಗೆ ಪಾರ್ದಿ ಮಹಿಳೆಯೊಬ್ಬರು ಆಳವಾದ ಬಾವಿಗೆ ಇಳಿದು ಕೊಳಕು ನೀರನ್ನು ಸಂಗ್ರಹಿಸುತ್ತಿರುವ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಬಾವಿಯಲ್ಲಿ ಹಾವುಗಳು, ಚೇಳುಗಳೂ ಇರುತ್ತದೆ. ಅಷ್ಟು ಮಾತ್ರವಲ್ಲದೆ ಬಾವಿಗಿಳಿಯುವಾಗ ಬೀಳುವ ಅಪಾಯವೂ ಇದೆ. ಆದರೆ ನೀರಿನ ಅನಿವಾರ್ಯತೆ ಮಹಿಳೆಯರು ಈ ಆಪತ್ತಿಗೆ ತಮ್ಮನ್ನು ತಾವು ನೂಕುವಂತೆ ಮಾಡಿದೆ.
