ದೇಶ ಈಗ ಜನಿವಾರದ ಕಪಿಮುಷ್ಟಿಯಲ್ಲಿದೆ: ಮಾವಳ್ಳಿ ಶಂಕರ್

Date:

Advertisements
ಬಸವಣ್ಣನವರು ಜನಿವಾರವನ್ನು ಕಿತ್ತು ಬಿಸಾಕಿ, ಜಾತಿ ರಹಿತ ಸಮಾಜವನ್ನು ನಿರ್ಮಾಣ ಮಾಡಲು ಹೋದರು. ಆದರೆ ಇಂದು ಆ ಜನಿವಾರವೇ ಸರ್ವಶ್ರೇಷ್ಠ ಎನ್ನುತ್ತಿದ್ದಾರೆ ಎಂದು ಮಾವಳ್ಳಿ ಶಂಕರ್ ಕುಟುಕಿದ್ದಾರೆ

“ಜನಿವಾರದ ಶ್ರೇಷ್ಠತೆ ಈ ದೇಶವನ್ನು ಹೇಗೆ ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದೆ ಎಂಬುದನ್ನು ನೋಡುತ್ತಿದ್ದೇವೆ. ನಮಗೆ ಜನಿವಾರ ಬೇಕೋ ಬೇಡವೋ ಗೊತ್ತಿಲ್ಲ. ಆದರೆ ಉಡುದಾರವಂತೂ ಬೇಕೇ ಬೇಕು. ಉಡುದಾರ ಸಾರ್ಥಕವಾದ ಕೆಲಸಕ್ಕಾದರೂ ಬರುತ್ತದೆ. ಆದರೆ ಈ ಜನಿವಾರ ಯಾವುದನ್ನು ಪ್ರತಿನಿಧಿಸುತ್ತಿದೆ ಎಂಬುದನ್ನು ಗಮನಿಸಬೇಕು” ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌) ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ಹೇಳಿದರು.

ದಲಿತ ಸಾಹಿತ್ಯ ಪರಿಷತ್ ವತಿಯಿಂದ ಬೆಂಗಳೂರು ನಗರದಲ್ಲಿ ಮಂಗಳವಾರ ನಡೆದ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಜನಿವಾರ ಗಲಾಟೆ ಇಂದು ಜೋರಾಗಿ ನಡೆಯುತ್ತಿದೆ. ದಲಿತರ ಹತ್ಯಾಕಾಂಡಗಳಿಗೆ ಸಿಗದಷ್ಟು ವ್ಯಾಪಕವಾದ ಪ್ರಚಾರ ಜನಿವಾರಕ್ಕೆ ಸಿಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಬಸವಣ್ಣನವರು ಜನಿವಾರವನ್ನು ಕಿತ್ತು ಬಿಸಾಕಿ, ಜಾತಿ ರಹಿತ ಸಮಾಜವನ್ನು ನಿರ್ಮಾಣ ಮಾಡಲು ಹೋದರು. ಆದರೆ ಇಂದು ಆ ಜನಿವಾರವೇ ಸರ್ವಶ್ರೇಷ್ಠ ಎನ್ನುತ್ತಿದ್ದಾರೆ ಎಂದು ಕುಟುಕಿದರು.

Advertisements

ವಡ್ಡರ್ಸೆ ರಘುರಾಮ್ ಶೆಟ್ಟರು ‘ಮುಂಗಾರು’ ಪತ್ರಿಕೆಯನ್ನು ನಡೆಸುತ್ತಿದ್ದಾಗ ಓದುಗರು ಪ್ರಶ್ನೆಗಳನ್ನು ಕಳುಹಿಸುತ್ತಿದ್ದರು. ‘ಭಾರತದಲ್ಲಿ ಕಾರ್ಲ್‌ ಮಾರ್ಕ್ಸ್‌ ಹುಟ್ಟಿದ್ದರೆ ಏನಾಗುತ್ತಿತ್ತು?’ ಎಂಬ ಪ್ರಶ್ನೆಯೊಂದು ಬಂದಿತ್ತು. ಮುಂಗಾರಿನಲ್ಲಿದ್ದ ಕೋಟಿಗಾನಹಳ್ಳಿ ರಾಮಯ್ಯನವರು ಅದಕ್ಕೆ ಉತ್ತರಿಸುತ್ತಾ, “ಮಾರ್ಕ್ಸ್‌ಗೆ ಜನಿವಾರ ತೊಡಿಸುತ್ತಿದ್ದರು” ಎಂದು ಬರೆದಿದ್ದರು. ಬಂಡವಾಳಶಾಹಿ ಮತ್ತು ಬ್ರಾಹ್ಮಣಶಾಹಿಗಳು ಈ ದೇಶವನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿವೆ ಎಂದು ಎಚ್ಚರಿಸಿದರು.

ಇದನ್ನೂ ಓದಿರಿ: ಉಪಜಾತಿ ಐಡೆಂಟಿಟಿಯಿಂದ ದಲಿತ ಅಸ್ಮಿತೆ ಸಂಕುಚಿತ: ಕೆ.ರಾಮಯ್ಯ

ಬಹುತ್ವ ಭಾರತವನ್ನು ಏಕಭಾರತ ಕೊಲ್ಲುತ್ತದೆ. ರೈತರು, ದಲಿತರು, ಕಾರ್ಮಿಕರು ಒಂದಾಗಿ ಈ ದೇಶವನ್ನು ಉಳಿಸಬೇಕಾಗಿದೆ. ತಾತ್ವಿಕ ಭಿನ್ನತೆಗಳನ್ನು ನೋಡುವ ಕಾಲ ಇದಲ್ಲ. ನಾವೆಲ್ಲ ಕೂತು ಯೋಚಿಸಬೇಕಾಗಿದೆ.  ಸಂವಿಧಾನಾತ್ಮಕವಾಗಿ ಅಸ್ಪೃಶ್ಯತೆಯನ್ನು ತೊಡೆದು ಹಾಕಿದ್ದೇವೆ. ಆದರೆ ವಾಸ್ತವದಲ್ಲಿ ಅಸ್ಪೃಶ್ಯತೆ ನಿರ್ಮೂಲನೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, “ಸಿದ್ಧಾಂತಗಳ ನಡುವೆ ಭಿನ್ನತೆಗಳಿವೆ ನಿಜ. ಆದರೆ ತಿದ್ದಿ ಮುನ್ನಡೆಯುವುದು ಇಂದಿನ ತುರ್ತು. ಅಂಬೇಡ್ಕರ್ ಅವರು ಕಮ್ಯುನಿಸ್ಟರನ್ನು ಸಾಕಷ್ಟು ಕಟುವಾಗಿ ಟೀಕಿಸಿದ್ದಾರೆ. ಆದರೆ ಬಹಳಷ್ಟು ಕಮ್ಯುನಿಸ್ಟರಿಗಿಂತ ಹೆಚ್ಚಿನದಾಗಿ ಮಾರ್ಕ್‌ವಾದವನ್ನು ಅಂಬೇಡ್ಕರ್ ಓದಿದ್ದರು. ಸಂವಿಧಾನ ಸಭೆಯಲ್ಲಿ ಮಾರ್ಕ್ಸ್‌ವಾದ ಕುರಿತು ಅದ್ಭುತವಾಗಿ ಮಾತನಾಡಿದ್ದರು. ಮಾರ್ಕ್ಸ್‌ವಾದದಲ್ಲಿ ಆಧ್ಯಾತ್ಮಿಕವಾದ ಸತ್ವವೊಂದು ಇದ್ದಿದ್ದರೆ ಇನ್ನೂ ಚೆನ್ನಾಗಿ ಇರುತ್ತಿತ್ತು ಎಂದಿದ್ದರು. ಕಮ್ಯುನಿಸ್ಟರು ಭಾರತದಲ್ಲಿ ಸರಿಯಾಗಿ ನಡೆದುಕೊಂಡಿದ್ದರೆ ಬೇರೆ ದೇಶಗಳಿಗಿಂತ ಮುಂಚೆಯೇ ನಮ್ಮಲ್ಲಿ ಕ್ರಾಂತಿ ಉಂಟಾಗುತ್ತಿತ್ತು ಎಂಬುದು ಅವರ ಅಭಿಪ್ರಾಯವಾಗಿತ್ತು. ಈ ರೀತಿಯಲ್ಲಿ ಬೇರೆ ಸಿದ್ಧಾಂತಗಳ ಬಗ್ಗೆ ಗೌರವ ಇಟ್ಟುಕೊಂಡು ತಪ್ಪಿದ್ದರೆ ತಿದ್ದಿ ಮುಂದುವರಿಯುವುದು ಬಹಳ ಮುಖ್ಯ” ಎಂದು ಆಶಿಸಿದರು.

ಕೆಲವು ವಿಚಾರಗಳ ಕುರಿತು ನಾವು ಬಹಳ ಸಂಕುಚಿತವಾಗಿ ಯೋಚಿಸುತ್ತೇವೆ. ಸೈದ್ಧಾಂತಿಕ ಸಂಕುಚಿತತೆ ಬದಲು ಸೈದ್ಧಾಂತಿಕ ವಿಶಾಲತೆ ಬೇಕಾಗಿದೆ. ಅಂದರೆ ತಮ್ಮ ಸಿದ್ಧಾಂತವನ್ನು ಬಿಟ್ಟುಕೊಡಬೇಕೆಂದು ಅರ್ಥವಲ್ಲ. ಆದರೆ ಸಮಕಾಲೀನ ಬಿಕ್ಕಟ್ಟನ್ನು ಎದುರಿಸಲು ಒಂದು ವೇದಿಕೆಯಲ್ಲಿ ನಾವು ಇರಬೇಕಾಗುತ್ತದೆ ಎಂದರು.

ಅರಿವಿನಿಂದ ಅಸ್ಪೃಶ್ಯತೆಯನ್ನು ಅರ್ಥಮಾಡಿಕೊಳ್ಳುವುದಕ್ಕೂ ಅನುಭವದಿಂದ ಅಸ್ಪೃತ್ಯತೆಯನ್ನು ಅರ್ಥಮಾಡಿಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಆದರೆ ಅರಿವು ಮತ್ತು ಅನುಭವವನ್ನು ಒಟ್ಟಿಗೆ ತಂದು ಹೋರಾಟವನ್ನು ಕಟ್ಟಬೇಕಾಗಿದೆ. ದಲಿತ ಪರವಾಗಿರುವ ಸಾಹಿತ್ಯ ಮತ್ತು ದಲಿತರೇ ಬರೆದ ಸಾಹಿತ್ಯವೂ ನಮ್ಮಲ್ಲಿ ಬಂದಿವೆ ಎಂದು ಸ್ಮರಿಸಿದರು.

ಅಂಬೇಡ್ಕರ್ ಅವರಿಗೆ ಕಡಿಮೆ ಶಿಕ್ಷಣವೇನೂ ಇರಲಿಲ್ಲ. ಬಾಬೂ ಜಗಜೀವನ್ ರಾಮ್ ಅವರಿಗೆ ಕಡಿಮೆ ಸ್ಥಾನಮಾನಗಳೇನೂ ಇರಲಿಲ್ಲ. ಆದರೆ ಇವರನ್ನೂ ಅವಮಾನಿಸಲಾಯಿತು. ಈ ಸಾಮಾಜಿಕ ಅವಮಾನವು ಎಲ್ಲ ಅವಮಾನಗಳಿಂದ ದೊಡ್ಡದು. ಈ ಅವಮಾನಗಳನ್ನು ತಪ್ಪಿಸಬೇಕಾದರೆ ಅವಮಾನ ಅನುಭವಿಸಿದವರ ಅಭಿವ್ಯಕ್ತಿ ಬಹಳ ಮುಖ್ಯ. ಆಗ ಜಗತ್ತಿಗೆ ಬೇರೊಂದು ಲೋಕ ತಿಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿರಿ: ಬಿಜೆಪಿ ಮುಖಂಡನಿಂದ ಸಿಯುಕೆ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ; ದೂರು ನೀಡಿದರೂ ಕ್ರಮ ವಹಿಸದ ಆಡಳಿತ ವರ್ಗ

ಭಾರತದಲ್ಲಿ ಇನ್ನೊಂದು ಲೋಕವಿದೆ ಎಂಬುದನ್ನು ತೋರಿಸಿಕೊಟ್ಟಿದ್ದೇ ದಲಿತ ಸಾಹಿತ್ಯ. ದಲಿತ ಸಾಹಿತ್ಯದ ಜೊತೆಜೊತೆಗೆ ಹಲವು ಸಾಹಿತ್ಯ ಚಳವಳಿಗಳು ಬಂದಿವೆ. ಆದರೆ ಇಂದಿಗೂ ದಲಿತರ ಮೇಲಿನ ದೌರ್ಜನ್ಯಗಳು ನಿಂತಿಲ್ಲ. ಹೀಗಾಗಿ ದಲಿತ ಪರವಾದ ಅಭಿವ್ಯಕ್ತಿಯ ಪ್ರಸ್ತುತತೆ ಇದೆ. ರಾಷ್ಟ್ರೀಯ ದಲಿತ ಹಕ್ಕು ಅಭಿಯಾನ ಸಂಸ್ಥೆಯು ಕೊಟ್ಟಿರುವ ಮಾಹಿತಿ ಪ್ರಕಾರ, 18 ನಿಮಿಷಕ್ಕೊಮ್ಮೆ ಒಬ್ಬ ದಲಿತನ ಮೇಲೆ ದೌರ್ಜನ್ಯ ನಡೆಯುತ್ತದೆ. ದಿನಕ್ಕೆ ಮೂರು ಜನ ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತದೆ. ಪ್ರತಿ ವಾರ 13 ಜನ ದಲಿತರ ಹತ್ಯೆಯಾಗುತ್ತದೆ. ಪ್ರತಿವಾರ ಆರು ಜನ ದಲಿತರ ಅಪಹರಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ವಹಿಸಿದ್ದರು. ದಲಿತ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ ಅರ್ಜುನ ಗೊಳಸಂಗಿ, ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರದ ಡಾ. ಹೊನ್ನು ಸಿದ್ಧಾರ್ಥ, ಹೈಕೋರ್ಟ್ ಅಡ್ವೊಕೇಟ್ ಪಿ.ಮಂಜುಳಾ, ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾದ ಗೌಡಗೆರೆ ಮಾಯುಶ್ರೀ, ಜಂಟಿ ಕಾರ್ಯದರ್ಶಿ ಎಂ.ಎಸ್.ಕೃಷ್ಣಮೂರ್ತಿ, ಉಪಾಧ್ಯಕ್ಷರಾದ ಎಚ್.ಸಿ.ಅಶೋಕ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X