12ನೆಯ ಶತಮಾನದಲ್ಲಿ ಬಸವಾದಿ ಶರಣರು ನಡೆದಾಡಿದ ಕಲ್ಯಾಣದ ನೆಲದಲ್ಲಿ ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರು ಮನುಕುಲದ ಕಲ್ಯಾಣಕ್ಕೆ ಶ್ರಮಿಸಿರುವುದು ಶ್ಲಾಘನೀಯ ಕಾರ್ಯ ಎಂದು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ಮಂಗಳವಾರ ಆಯೋಜಿಸಿದ್ದ ವಚನ ಜಾತ್ರೆ-2025 ಮತ್ತು ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರ 26ನೆಯ ಸ್ಮರಣೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಧಾರ್ಮಿಕ, ಅಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವೆ ಮೂಲಕ ಪೂಜ್ಯರು ಸಶಕ್ತ ಆತ್ಮನಿರ್ಭರ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರ ಬಗ್ಗೆ ತಿಳಿದುಕೊಂಡಿದ್ದೇನೆ. ಜತೆಗೆ ಗಡಿಭಾಗವನ್ನು ಕನ್ನಡ ನೆಲದಲ್ಲಿ ಉಳಿಸಲು ದಿಟ್ಟತನ ಪ್ರದರ್ಶಿಸಿರುವುದು ಮಾದರಿ ಎನಸಿದೆ. ಶರಣರು ವಚನ ಸಾಹಿತ್ಯದ ಮೂಲಕ ಸಮಾಜಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ’ ಎಂದರು.
‘ಬಸವಣ್ಣನವರು ಜಾತಿಭೇದ ಎನ್ನದೇ ಎಲ್ಲ ವರ್ಗಕ್ಕೆ ನ್ಯಾಯ ಕಲ್ಪಿಸಿದರು. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದ್ದರು. ಕಂದಾಚಾರ, ಮೌಢ್ಯದ ವಿರುದ್ಧ ಸಮರ ಸಾರಿದ್ದರು. ಬಸವಾದಿ ಶರಣರ ವಿಚಾರಧಾರೆಗಳನ್ನು ಚನ್ನಬಸವ ಪಟ್ಟದ್ದೇವರು ಮುಂದುವರೆಸಿ ಸುಂದರ ಸಮಾಜಕ್ಕೆ ನಿರ್ಮಾಣಕ್ಕೆ ತಮ್ಮ ಬದುಕು ಮುಡಿಪಾಗಿಟ್ಟಿರುವುದು ಹೆಮ್ಮೆಯ ಸಂಗತಿ. ಅಂತಹ ಸಂತರ ಆದರ್ಶಗಳು ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕು. ಮಕ್ಕಳಿಗೆ ಚಿಕ್ಕವಯಸ್ಸಿನಿಂದಲೇ ಧರ್ಮದ ಮಹತ್ವ ಮತ್ತು ಮಹಾತ್ಮರ ಬದುಕಿನ ತತ್ವದ ಬಗ್ಗೆ ತಿಳಿ ಹೇಳುವ ಕೆಲಸ ಆಗಬೇಕು’ ಎಂದು ತಿಳಿಸಿದರು.
ವರ್ಷದಲ್ಲಿ ಅನುಭವ ಮಂಟಪ ಕಾಮಗಾರಿ ಪೂರ್ಣ :
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ‘ಗಡಿಭಾಗದಲ್ಲಿ ಡಾ.ಚನ್ನಬಸವ ಪಟ್ಟದ್ದೇವರು ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ಬೇರೂರಿದ್ದ ಅಂಧಕಾರ, ಅಂಧಶೃದ್ಧೆ, ಮೌಢ್ಯತೆ ಹೋಗಲಾಡಿಸಲು ಶ್ರಮಿಸಿದ್ದರು. ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಸೇವೆ ಮೂಲಕ ಈ ಭಾಗದ ಬೆಳವಣಿಗೆಗೆ ನಾಂದಿ ಹಾಡಿದ್ದಾರೆ. ಅವರ ವಿಚಾರಧಾರೆಗಳನ್ನು ಎಲ್ಲರೂ ಅನುಸರಿಸಬೇಕು’ ಎಂದು ತಿಳಿಸಿದರು.
‘ಬಸವಣ್ಣನವರ ಕರ್ಮಭೂಮಿ ಕಲ್ಯಾಣದ ನೆಲದಲ್ಲಿ ನಿರ್ಮಾಣ ಹಂತದಲ್ಲಿರುವ ಅನುಭವ ಮಂಟಪ ಕಟ್ಟಡದ ಕಾಮಗಾರಿ ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

’12ನೆಯ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪದ ಎಲ್ಲ ವರ್ಗದ ಶರಣ ಶರಣೆಯರಿಗೆ ಆಶ್ರಯ ಕಲ್ಪಿಸಿ ವಿಶ್ವಕ್ಕೆ ಪ್ರಜಾಪ್ರಭುತ್ವ ಮತ್ತು ಸಮ ಸಮಾಜದ ಪರಿಕಲ್ಪನೆ ಸಾರಿದ್ದರು. ಬಸವಾದಿ ಶರಣರ ವಿಚಾರಧಾರೆಗಳನ್ನು ಮತ್ತೆ ಗತವೈಭವಿಸಬೇಕು ಎನ್ನುವ ಸದಾಶಯದೊಂದಿಗೆ ಆಧುನಿಕ ಅನುಭವ ಮಂಟಪ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ’ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ’12ನೆಯ ಶತಮಾನದಲ್ಲಿ ಬಸವಾದಿ ಶರಣರು ಸಮಾನತೆ ಸಾರಿದರು ಅದೇ ಪರಂಪರೆಯನ್ನು ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರು ತಮ್ಮ ಬದುಕಿನುದ್ದಕ್ಕೂ ಅನುಸರಿಸಿ ನಮ್ಮೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ’ ಎಂದು ತಿಳಿಸಿದರು.
ವಿವಿಧ ಗ್ರಂಥ ಲೋಕಾರ್ಪಣೆ : ವಚನ ಜಾತ್ರೆ ಸಮಾರಂಭದಲ್ಲಿ ಕನ್ನಡ ಮತ್ತು ಮರಾಠಿ ಭಾಷೆಯಲ್ಲಿ ಮುದ್ರಣಗೊಂಡ ವಿವಿಧ ಗ್ರಂಥಗಳನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಲೋಕಾರ್ಪಣೆಗೊಳಿಸಿದರು.
ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಸಂಪಾದಕತ್ವದ ಮಾತೆಂಬುದು ಜ್ಯೋತಿರ್ಲಿಂಗ, ಶರಣರ ವಚನ ಬೇವ ಸವಿದಂತೆ, ವಚನಾಭಿಷೇಕ, ವಚನ ಪ್ರಸಾದ (4ನೇ ಮುದ್ರಣ), ಚೇತನಾ ಸಂತೋಷಕುಮಾರ ಚನ್ನಶೆಟ್ಟಿ ರಚಿಸಿದ ನವಚೇತನ, ಶಿವಸ್ವಾಮಿ ಚೀನಕೇರಾ ರಚಿಸಿದ ಸಮತಾವಾದ ಒಂದು ವಿವೇಚನೆ ಮತ್ತು ಮರಾಠಿ ಭಾಷೆಯಯಲ್ಲಿ ಡಾ.ಅಶೋಕ ಮೇನಕುದಳೆ ರಚಿಸಿರುವ ಸಮತಾಸೂರ್ಯ ಮಹಾತ್ಮ ಬಸವೇಶ್ವರ (9ನೇ ಆವೃತ್ತಿ) ಮತ್ತು ಕ್ರಾಂತಿಕಾರಿ ಮಹಾತ್ಮ ಬಸವೇಶ್ವರ (5ನೇ ಆವೃತ್ತಿ) ಗ್ರಂಥಗಳು ಬಿಡುಗಡೆ ಕಂಡವು.
ಸಾಧಕರಿಗೆ ಪ್ರಶಸ್ತಿ ಪ್ರದಾನ : ಇದೇ ವೇಳೇ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು ಪ್ರಭುಚನ್ನಬಸವ ಸ್ವಾಮಿಗಳು, ಮೋಟಗಿ ಮಠ ಅಥಣಿ (ಡಾ.ಚನ್ನಬಸವ ಪಟ್ಟದ್ದೇವರ ಸಾಹಿತ್ಯ ಪ್ರಶಸ್ತಿ), ಸೋಮನಾಥ ಪಟ್ನೆ, ಆಂತರಿಕ ಆರ್ಥಿಕ ಸಲಹೆಗಾರರು, ಲೋಕೋಪಯೋಗಿ ಇಲಾಖೆ ಬೆಂಗಳೂರು (ಡಾ.ಚನ್ನಬಸವ ಪಟ್ಟದ್ದೇವರ ಸಮಾಜ ಸೇವಾ ಪ್ರಶಸ್ತಿ), ಡಾ.ಶರಣಪ್ಪ ಹಲಸೆ, ಕುಲಪತಿಗಳು, ಮೈಸೂರು ವಿಶ್ವವಿದ್ಯಾಲಯ ಮೈಸೂರು (ಡಾ.ಚನ್ನಬಸವ ಪಟ್ಟದ್ದೇವರ ಶೈಕ್ಷಣಿಕ ಸೇವಾ ಪ್ರಶಸ್ತಿ) ನೀಡಲಾಯಿತು.

ಡಾ.ಮೃತ್ಯುಂಜಯ ಶೆಟ್ಟರ್, ಖ್ಯಾತ ಹಿಂದೂಸ್ಥಾನಿ ಗಾಯಕರು, ಧಾರವಾಡ (ಸಿದ್ಧರಾಮ ಜಂಬಲದಿನ್ನಿ ವಚನ ಸಂಗೀತ ಪ್ರಶಸ್ತಿ), ಶರಣಪ್ರಕಾಶ ಬಸವರಾಜ ಮುಗಳಿ, ಹುಡುಗಿ (ನಾಡೋಜ ಡಾ.ಜೆ.ಎಸ್.ಖಂಡೇರಾವ ಚಿತ್ರಕಲಾ ಪ್ರಶಸ್ತಿ), ಧ್ರುವ ಜತ್ತಿ, ಸಂಸ್ಥಾಪಕರು, ಜತ್ತಿ ಫೌಂಡೇಷನ್ ಬೆಂಗಳೂರು (ಡಾ.ಚನ್ನಬಸವ ಪಟ್ಟದ್ದೇವರ ಯುವ ಪ್ರಶಸ್ತಿ), ಮಲ್ಲಿಕಾರ್ಜುನ ಮೂಲಗೆ, ಸೋಲಾಪುರ (ಬಸವತತ್ವ ಪ್ರಸಾರ ಸೇವಾ ಪ್ರಶಸ್ತಿ), ಚಂದ್ರಗೌಡ ಕುಲಕರ್ಣಿ, ತಾಳಿಕೋಟೆ (ಡಾ.ಚನ್ನಬಸವ ಪಟ್ಟದ್ದೇವರ ಮಕ್ಕಳ ಸಾಹಿತ್ಯ ಪಶಸ್ತಿ) ನೀಡಿ ಗೌರವಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಕಲಬುರಗಿ, ಬೀದರ್‌ನಲ್ಲಿ 44 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲು
ಭಾಲ್ಕಿ ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ರಾಜಶೇಖರ ಪಾಟೀಲ್ ಹುಮನಾಬಾದ್, ಸಂಸದ ಸಾಗರ ಖಂಡ್ರೆ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ನಾರಂಜಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಡಿ.ಕೆ.ಸಿದ್ರಾಮ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಎಸ್ಪಿ ಪ್ರದೀಪ ಗುಂಟಿ ಇದ್ದರು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಸ್ವಾಗತಿಸಿದರು. ಹಾಸ್ಯಕಲಾವಿದ ನವಲಿಂಗ ಪಾಟೀಲ್ ನಿರೂಪಿಸಿದರು. ಡಾ.ಅಮಿತ ಅಷ್ಟೂರೆ ವಂದಿಸಿದರು.