ಮೈಸೂರು ಜಿಲ್ಲೆ, ಹುಣಸೂರು ಪಟ್ಟಣದ ಖಾಸಗಿ ಹೋಟೆಲ್ ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ 134 ಜಯಂತಿ ಅಂಗವಾಗಿ ನಡೆದ ಜನಜಾಗೃತಿ ಸಮಾವೇಶದಲ್ಲಿ ದಸಂಸ ರಾಜ್ಯ ಸಂಚಾಲಕರಾದ ಗುರುಪ್ರಸಾದ್ ಕೆರಗೋಡು ಮಾತನಾಡಿ ‘ ಅಂಬೇಡ್ಕರ್ ಅವರ ತತ್ವ, ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಬೇಕು ಹೊರತು ಆರಾಧನೆಯನ್ನಲ್ಲ ‘ ಎಂದರು.
” ನಾವೆಲ್ಲರೂ ಸಂಘಟಿತರಾಗಿ ಶೈಕ್ಷಣಿಕ ಹೋರಾಟದ ಮೂಲಕ ಸ್ಥಿತಿವಂತರಾಗಿ ಬಾಬಾ ಸಾಹೇಬರ ಆಶಯದಂತೆ ಮಕ್ಕಳ ಭವಿಷ್ಯ ರೂಪಿಸಬೇಕು. ಹೀಗೆ, ಅಂಬೇಡ್ಕರ್ ಅವರ ಆರಾಧನೆ ಮಾಡುವುದು ಸರಿಯಲ್ಲ. ವಿಚಾರಗಳನ್ನು ಅನುಸರಿಸಿ, ಬದುಕಿನಲ್ಲಿ ಅಳವಡಿಸಿಕೊಳ್ಳುವುದನ್ನು ಬಿಟ್ಟು ವಿನಾಕಾರಣ ಭಾವಚಿತ್ರಕ್ಕೆ ಪೂಜಾ ಕೈಂಕರ್ಯ ನೆರವೇರಿಸುವುದು ಸೂಕ್ತವಲ್ಲ. ಇದು ಬಾಬಾ ಸಾಹೇಬರ ನಿಲುವು ಅಲ್ಲ. ವ್ಯಕ್ತಿ ಪೂಜೆಯನ್ನು ನಿಲ್ಲಿಸಬೇಕು. ಬದುಕಿನಲ್ಲಿ ಬಾಬಾ ಸಾಹೇಬರ ವಿಚಾರಧಾರೆ ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ಸ್ಥಾನಕ್ಕೆ ಬರಬೇಕಿದೆ “.

“ಬಾಬಾ ಸಾಹೇಬರ ಆದರ್ಶಗಳು ಮಣ್ಣು ಪಾಲಾಗದಂತೆ ನಾವೆಲ್ಲರೂ ಎಚ್ಚತ್ತು ನಡೆಯಬೇಕು. ಮುಂದಿನ ಪೀಳಿಗೆಗೆ ಬಾಬಾ ಸಾಹೇಬರ ಮಾರ್ಗವನ್ನ ತಿಳಿಸುವಂತ ಕೆಲಸ ಮಾಡಬೇಕಿದೆ. ಬಾಬಾ ಸಾಹೇಬರ ಕನಸನ್ನ ನೆರವೇರಿಸುವ ನಿಟ್ಟಿನಲ್ಲಿ ಎಲ್ಲರೂ ಪ್ರವೃತ್ತರಾಗಬೇಕು. ಬಾಬಾ ಸಾಹೇಬರ ಬಗ್ಗೆ ಓದುವುದು, ಅರಿಯುವುದು ಮುಖ್ಯ. ಓದುವುದರಿಂದ ಬಾಬಾ ಸಾಹೇಬರು ಏನೆಲ್ಲ ಹೇಳಿದ್ದಾರೆ ಅನ್ನುವುದನ್ನು ಅರಿತು ನಮಗೆ ನಾವೇ ಅನುಸರಿಸಲು ಸಾಧ್ಯವಾಗುತ್ತದೆ. ಅದೇ ಪೂಜೆ ಮಾಡುವುದರಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ”.

” ಬಾಬಾ ಸಾಹೇಬರ ಬದುಕೇ ಹೋರಾಟ. ನಾವು, ನೀವೆಲ್ಲ ಅನುಸರಿಸುವಂತೆ ಆಗಬೇಕು ಮನೆ ಮನಗಳಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿನಿತ್ಯ ಅವರ ಆಶಯಗಳಂತೆ ಸಾಗಿದರೆ ನಾವು ನಿಜಕ್ಕೂ ಸಲ್ಲಿಸುವ ಗೌರವವಾಗಿರುತ್ತದೆ. ಸರ್ವ ಶ್ರೇಷ್ಠವಾದ ಸಂವಿಧಾನ ನೀಡಿದ ಬಾಬಾ ಸಾಹೇಬರು ಆಚರಣೆಯ, ಪೂಜೆಯ ಭಾಗವಾಗದೆ ಬದುಕಿನ ದಾರಿದೀಪವಾಗಬೇಕು. ಹೋರಾಟದ ಕಿಚ್ಚಾಗಿ, ಶೋಷಿತ ವರ್ಗಗಳಿಗೆ ನ್ಯಾಯ ಲಭಿಸುವಂತ ಕೆಲಸ ಮಾಡಬೇಕು. ಮುಂದಿನ ಮಕ್ಕಳು ನೆಮ್ಮದಿಯ ಬದುಕನ್ನು ಕಾಣಲು ಸಾಹೇಬರು ಸ್ಫೂರ್ತಿ ಯಾಗಬೇಕು ” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ದುಪ್ಪಟ್ಟು ಕಂದಾಯ ವಸೂಲಾತಿ ಇನ್ನೆರೆಡು ದಿನಗಳಲ್ಲಿ ರದ್ದುಗೊಳ್ಳಲಿದೆ : ಶಾಸಕ ಜಿ. ಡಿ. ಹರೀಶ್ ಗೌಡ

ಕಾರ್ಯಕ್ರಮದಲ್ಲಿ ದಸಂಸ ಜಿಲ್ಲಾ ಸಂಚಾಲಕರಾದ ಬೆಟ್ಟಯ್ಯಕೋಟೆ, ಶಂಭುಲಿಂಗ ಸ್ವಾಮಿ, ಅಲಗೂಡು ಶಿವಕುಮಾರ್, ಹೆಗ್ಗನೂರು ನಿಂಗರಾಜು, ಅತ್ತಿಕುಪ್ಪೆ ರಾಮಕೃಷ್ಣ, ರೈತ ಸಂಘದ ಹೊಸೂರು ಕುಮಾರ್, ವರದರಾಜು, ಮಹದೇವಮ್ಮ, ರಾಜು ಚಿಕ್ಕ ಹುಣಸೂರು, ಸಿದ್ದೇಶ್, ಪುಟ್ಟರಾಜು, ನಾರಾಯಣ, ವೆಂಕಟೇಶ್ ಗೌರಿಪುರ, ಹಳೇಪುರ ಕೃಷ್ಣ, ಕಾಯಕ ಸಮಾಜದ ಹೊನ್ನಪ್ಪ,ಚೆಲುವರಾಜು ಪ್ರಸನ್ನ, ಗಿರೀಶ್, ಸಾಲಿಡಾರಿಟಿ ಮೂವ್ಮೆಂಟ್ ನ ಮುದಾಸಿರ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.