ಹೊಯ್ಸಳರ ಕಾಲದಲ್ಲಿ ಅಗ್ರಹಾರವಾಗಿದ್ದ ಈ ಬೆಣಚಿಗೆರೆ ಗ್ರಾಮ ಬ್ರಹ್ಮಪುರ ಎಂಬ ಹೆಸರಿನ ಗ್ರಾಮವಾಗಿತ್ತು. ಬ್ರಹ್ಮೇಶ್ವರ ದೇವಾಲಯ ಇಲ್ಲಿ ಇತ್ತು ಎಂಬ ಉಲ್ಲೇಖದ ಈ ಶಿಲಾ ಶಾಸನ 12 ಶತಮಾನದ ಇತಿಹಾಸ ಬಿಂಬಿಸಿದೆ. ಮಣ್ಣಿನಲ್ಲಿ ಹುದುಗಿದ್ದ ಶಾಸನ ಮೇಲೆತ್ತಲು ಇತಿಹಾಸ ಸಂಶೋಧಕ ಅಮ್ಮನಘಟ್ಟ ಶ್ರೀನಿವಾಸ್ ತಂಡ ಸತತ ಐದು ಗಂಟೆಯ ಕಸರತ್ತು ಮಾಡಿ ಶಾಸನವನ್ನು ಹೊರತೆಗೆದು ಸಂರಕ್ಷಿದ್ದಾರೆ.

ನಿಟ್ಟೂರು ಹೋಬಳಿ ಬೆಣಚಿಗೆರೆ ಗ್ರಾಮದ ಕಾಂತರಾಜ್ ಎಂಬುವವರ ತೋಟದ ಒಂದು ಬದಿಯಲ್ಲಿ ಕಾಣಿಸಿಕೊಂಡ ಶಾಸನ ಮಣ್ಣಿನಿಂದ ಮೇಲೆತ್ತಲು ಸ್ಥಳೀಯರ ಸಹಕಾರದಲ್ಲಿ ಉಪನ್ಯಾಸಕ ಶ್ರೀನಿವಾಸ್ ಸೂಕ್ಷ್ಮ ಕಾರ್ಯಾಚರಣೆ ನಡೆಸಿದ್ದಾರೆ. ಮೆದು ಕಲ್ಲು (ಬಳಪದ ಕಲ್ಲು) ಶಿಲೆ ಒಡೆದು ಹೋಗುವ ಆತಂಕದಲ್ಲಿ ಯಾವುದೇ ಯಂತ್ರ ಬಳಸದೆ ಗ್ರಾಮಸ್ಥರೇ ಕೈಗಳನ್ನು ಬಳಸಿ ಮೇಲೆತ್ತಿ ಸ್ವಚ್ಛಗೊಳಿಸಿದರು. ಹಳೆಗನ್ನಡವಾದರೂ ಅಕ್ಷರ ಓದುವ ಮಟ್ಟದಲ್ಲಿತ್ತು.

ಬ್ರಾಹ್ಮಣರ ಅಗ್ರಹಾರವಾಗಿತ್ತು ಈ ಬೆಣಚಿಗೆರೆ..!!
ಬಹುತೇಕ ವೀರಶೈವ ಲಿಂಗಾಯಿತ ಸಮುದಾಯ ಕಾಣಸಿಗುವ ಬೆಣಚಿಗೆರೆ ಗ್ರಾಮ 12 ನೇ ಶತಮಾನದಲ್ಲಿ ಬ್ರಾಹ್ಮಣರ ಅಗ್ರಹಾರವಾಗಿತ್ತು ಎಂಬ ಅಂಶ ಶಾಸನದಲ್ಲಿ ಉಲ್ಲೇಖಿತವಾಗಿದೆ. ಹೊಯ್ಸಳರ ಕಾಲದ ಈ ಶಾಸನ ಪ್ರತಿಷ್ಠಿತ ಅರಸ ವಿಷ್ಣುವರ್ಧನ ಪತ್ನಿ ಬಮ್ಮಲಾದೇವಿ ಮೂಲಕ ದಾನವಾಗಿ ನೀಡಿದ ಗ್ರಾಮ ಮತ್ತು ಬ್ರಹ್ಮೇಶ್ವರ ದೇವಾಲಯ ಬಗ್ಗೆ ಬರವಣಿಗೆ ಇದೆ. ಆದರೆ ದೇವಾಲಯದ ಯಾವುದೇ ಕುರುಹು ಇಲ್ಲಿ ಸಿಕ್ಕಿಲ್ಲ. ಬ್ರಾಹ್ಮಣರಿಗೆ, ಪೂಜಾರಿಗಳಿಗೆ, ಸೇನೆ ಭೂಮಿಕೆ ಮಾಡುವವರಿಗೆ, ಬಾಣಸಗಿತ್ತಿಗೆ, ದವಸಗಿತ್ತಿಗೆ, ತೋಟಿಗೆ, ಶಾಸನ ಬರೆದವರಿಗೆ ಹಾಗೂ ದೇವಾಲಯ ಜೀರ್ಣೋದ್ಧಾರಕ್ಕೆ ದಾನ ನೀಡಿದ ಉಲ್ಲೇಖವಿದೆ. ದಾನ ಪಾಲಿಸದವರಿಗೆ ಶಾಪಾಶಯ ಸಾಲುಗಳು ಸಹ ಇದರಲ್ಲಿದೆ.

ಶಾಸನದಲ್ಲಿ ಏನೇನಿದೆ..
ಸುಮಾರು ಆರು ಅಡಿ ಎತ್ತರ, ಮೂರು ಅಡಿಗಳಿಗಿಂತ ಹೆಚ್ಚಿನ ಅಗಲದ ಶಿಲಾ ಶಾಸನ ಮೆದು ಕಲ್ಲಿನಿಂದ ಕೂಡಿದೆ. ಮುಂಭಾಗದಲ್ಲಿ 48 ಸಾಲು, ಪಾರ್ಶ್ವ ಭಾಗದಲ್ಲಿ 27 ಸಾಲುಗಳಿಂದ ಕೂಡಿದೆ. ಶಾಸನದ ಮೇಲ್ಬಾಗದ ತುದಿಯಲ್ಲಿ ಸೂರ್ಯ ಚಂದ್ರರ ಕೆತ್ತನೆ ಇದೆ. ಶಿವಲಿಂಗ ಅಭಿಮುಖವಾಗಿ ನಂದಿ ಕೆತ್ತನೆ ಕೂಡಾ ಇದೆ. ನಂದಿಯ ಮೇಲ್ಬಾಗದಲ್ಲಿ ಚಾಕು ಆಕಾರದ ಆಯುಧ ಕೆತ್ತನೆ ಶಾಸನ ರಕ್ಷಣೆಯ ಸಂಕೇತವಾಗಿದೆ. ಹೊಯ್ಸಳರ ಕಾಲದ ಹಲವು ವಿಚಾರ ಪ್ರಸ್ತಾಪವಾಗಿ ವಿಷ್ಣುವರ್ಧನ ರಾಜ ತಲಕಾಡು ಗಂಗರ ರಾಜ್ಯ, ಚೋಳರ ರಾಜ್ಯ, ನೊಳಂಬವಾಡಿ, ಕೊಯಮತ್ತೂರು, ತೇರಿಯತ್ತೂರು, ಕಪಾಠಾಪುರಂ, ಕಾಂಚೀಪುರಂಗಳನ್ನು ವಶಕ್ಕೆ ಪಡೆದ ವಿವರಣೆ ಇದ್ದು ಪಲ್ಲವರ ಬಮ್ಮಲಾದೇವಿ ವಿವಾಹವಾಗಿ ಬ್ರಹ್ಮಪುರ ಗ್ರಾಮ ದಾನ ನೀಡಿದ್ದು ಹೀಗೆ ಹಲವು ವಿಚಾರ ಕೆತ್ತನೆಯಾಗಿದೆ.

ಕಳೆದ 14 ವರ್ಷದಿಂದ ಶಾಸನ ಕುರಿತು ಈ ಗ್ರಾಮಸ್ಥರೊಂದಿಗೆ ಚರ್ಚಿಸಿದ್ದ ಬಗ್ಗೆ ಪ್ರಸ್ತಾಪ ಮಾಡಿದ ಉಪನ್ಯಾಸಕ ಹಾಗೂ ಇತಿಹಾಸ ಸಂಶೋಧಕ ಅಮ್ಮನಘಟ್ಟ ಶ್ರೀನಿವಾಸ್ ಒಂದು ಗ್ರಾಮದ ಸಾಂಸ್ಕೃತಿಕ ಇತಿಹಾಸ ಬಿಂಬಿಸುವ ಶಿಲಾ ಶಾಸನ ಮಣ್ಣಿನಿಂದ ಮೇಲೆತ್ತಲಾಗಿ ಈ ಗ್ರಾಮದ ವೈಭವ ಇತಿಹಾಸ ಹೊರ ಬಂದಿದೆ. ದಾನ ಶಾಸನಗಳೇ ಹೆಚ್ಚಾಗಿ ಕಂಡು ಬಂದಿರುವ ನಮ್ಮ ರಾಜ್ಯದಲ್ಲಿ ಈ ಶಾಸನ ವಿಶೇಷ ಎನಿಸಿದೆ. ದಾನ ಜೊತೆಯಲ್ಲಿ ಹೊಯ್ಸಳ ಕಾಲದ ಇತಿಹಾಸ ಕೂಡಾ ಉಲ್ಲೇಖವಾಗಿದೆ. ತಾಲ್ಲೂಕಿನಲ್ಲಿ ಇನ್ನೂ ಅನೇಕ ಶಾಸನಗಳು ದೊರೆಯಲಿವೆ. ಬೆಣಚಿಗೆರೆ ಶಾಸನ ಪತ್ತೆ ಕಾರ್ಯದಲ್ಲಿ ಸ್ಥಳೀಯರಾದ ಸಂಗಪ್ಪ, ರಾಜಶೇಖರ್, ರಘು, ಸಂಗಮೇಶ್ವರ ಸ್ವಾಮಿ, ಶಶಿಭೂಷಣ್, ಕಾಂತರಾಜ್ ಇತರರನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಪುರಾತತ್ವ ಇಲಾಖೆ ಮೂಲಕ ಶಾಸನ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಮ್ಮ ಶ್ರಮದ ಫಲವನ್ನು ಹೆಮ್ಮೆಯಿಂದ ಹೇಳಿಕೊಂಡರು.
ವರದಿ – ಎಸ್. ಕೆ. ರಾಘವೇಂದ್ರ