ಬಿಜೆಪಿಗೆ ವರ್ತಮಾನದ ಸಭ್ಯತೆಯೂ ಇಲ್ಲ, ಇತಿಹಾಸದ ಜ್ಞಾನವೂ ಇಲ್ಲ

Date:

Advertisements

ಬಾಬಾಸಾಹೇಬರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್ ಎನ್ನುವ ಹಳೆಯ ಸುಳ್ಳನ್ನು ಸದನದಲ್ಲಿ ಪ್ರಸ್ತಾಪಿಸಿದ ಬಿಜೆಪಿಯವರು ಅವರದೇ ನಾಯಕರ ಇತಿಹಾಸವನ್ನಾದರೂ ತಿಳಿದುಕೊಂಡಿದ್ದರೆ ಅಂಬೇಡ್ಕರ್ ಸೋಲಿಗೆ ಸಾವರ್ಕರ್ ತಂತ್ರ ರೂಪಿಸಿದ ಬಗೆಗಿನ ಸತ್ಯದ ಅರಿವಾಗುತ್ತಿತ್ತು. ಅಂಬೇಡ್ಕರ್ 1952ರಲ್ಲಿ ತಮ್ಮ ಆತ್ಮೀಯರಾದ ಕಮಲಕಾಂತ್ ಅವರಿಗೆ ಬರೆದಿರುವ ಕೈಬರಹದ ಪತ್ರದಲ್ಲಿ ಈ ಸತ್ಯವನ್ನು ಅನಾವರಣಗೊಳಿಸಿದ್ದಾರೆ.

ಪ್ರತಿ ಬಾರಿಯ ಅಧಿವೇಶನ ನಡೆಯುವಾಗ ನನ್ನಲ್ಲೊಬ್ಬ ವಿದ್ಯಾರ್ಥಿ ಜಾಗೃತನಾಗುತ್ತಾನೆ. ಈ ಬಾರಿಯ ಆಯವ್ಯಯ ಅಧಿವೇಶನದಲ್ಲಿ ನನ್ನ ಕಲಿಕೆಯು ವಿಶಿಷ್ಟವಾಗಿತ್ತು. ಒಂದು ರಾಜಕೀಯ ಪಕ್ಷಕ್ಕೆ ಹಾಗೂ ಒಬ್ಬ ರಾಜಕಾರಣಿಗೆ ಸೈದ್ಧಾಂತಿಕ ಸ್ಪಷ್ಟತೆ ಮತ್ತು ವೈಚಾರಿಕ ನಿಖರತೆ ಇಲ್ಲದೆ ಹೋದರೆ ಹೇಗೆ ಮುಜುಗರ ಎದುರಿಸಬೇಕಾಗುತ್ತದೆ ಎನ್ನುವುದು ಬಿಜೆಪಿ ನನಗೆ ಕಲಿಸಿದ ಪಾಠವಾಗಿತ್ತು. ಬಿಜೆಪಿ ನಾಯಕರಲ್ಲಿರುವ ಸೈದ್ಧಾಂತಿಕ ಹಾಗೂ ವೈಚಾರಿಕ ದ್ವಂದ್ವಗಳು ಅವರನ್ನು ಬೌದ್ಧಿಕ ದಿವಾಳಿತನಕ್ಕೆ ತಳ್ಳಿರುವುದು ಈ ಅಧಿವೇಶನದುದ್ದಕ್ಕೂ ನನಗೆ ಮಾತ್ರವಲ್ಲ ಇಡೀ ರಾಜ್ಯದ ಅರಿವಿಗೆ ಬಂದಿದೆ. ಬಿಜೆಪಿಯ ತಿಳವಳಿಕ ವಾಟ್ಸಾಪ್ ಯುನಿವರ್ಸಿಟಿಗೆ ಸೀಮಿತ ಎಂಬುದು ಸಾಬೀತಾಗಿದೆ.

ಬಾಬಾಸಾಹೇಬರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್ ಎನ್ನುವ ಹಳೆಯ ಸುಳ್ಳನ್ನು ಸದನದಲ್ಲಿ ಪ್ರಸ್ತಾಪಿಸಿದ ಬಿಜೆಪಿಯವರು ಅವರದೇ ನಾಯಕರ ಇತಿಹಾಸವನ್ನಾದರೂ ತಿಳಿದುಕೊಂಡಿದ್ದರೆ ಅಂಬೇಡ್ಕರ್ ಸೋಲಿಗೆ ಸಾವರ್ಕರ್ ತಂತ್ರ ರೂಪಿಸಿದ ಬಗೆಗಿನ ಸತ್ಯದ ಅರಿವಾಗುತ್ತಿತ್ತು. ಅಂಬೇಡ್ಕರ್ 1952ರಲ್ಲಿ ತಮ್ಮ ಆತ್ಮೀಯರಾದ ಕಮಲಕಾಂತ್ ಅವರಿಗೆ ಬರೆದಿರುವ ಕೈಬರಹದ ಪತ್ರದಲ್ಲಿ ಈ ಸತ್ಯವನ್ನು ಅನಾವರಣಗೊಳಿಸಿದ್ದಾರೆ. ನಾನು ಈ ವಿಷಯವನ್ನು ಸದನದಲ್ಲಿ ದಾಖಲೆ ಸಮೇತ ಪ್ರಸ್ತಾಪಿಸಿದಾಗ ಬಿಜೆಪಿಯವರಲ್ಲಿ ಕನಿಷ್ಠ ಮಟ್ಟದ ಚರ್ಚೆ ನಡೆಸಲು ಧೈರ್ಯವಿರಲಿಲ್ಲ, ಸದನದ ದಿಕ್ಕು ತಪ್ಪಿಸುವ ಗೆರಿಲ್ಲಾ ಮಾದರಿಯ ಅರಚಾಟ, ಕಿರುಚಾಟಗಳೇ ಅವರ ಹತಾಶೆಯ ಅಸ್ತ್ರಗಳಾದವು. ಪ್ರಜಾಪ್ರಭುತ್ವದ ಅತಿ ದೊಡ್ಡ ಪ್ರಯೋಗ ಎನಿಸಿಕೊಂಡ ಭಾರತದ ಮೊದಲ ಚುನಾವಣೆಯಲ್ಲಿ ಹಿಂದೂ ಮಹಾಸಭಾ ಹಾಗೂ ಆರ್‌ಎಎಸ್ ಬೆಂಬಲಿತ ಅಭ್ಯರ್ಥಿಯನ್ನು ಚುನಾವಣೆಗೆ ಇಳಿಸಿ ಬಾಬಾಸಾಹೇಬರ ವಿರುದ್ಧ ಪ್ರಚಾರ ನಡೆಸಿದ್ದರು ಎಂಬ ಸತ್ಯವು ಬಿಜೆಪಿಗರಲ್ಲಿ ಜಾಣ ಮರವನ್ನು ತರುತ್ತದೆ, ಅಂದಿನ ಕಾಂಗ್ರೆಸ್‌ ಸರ್ಕಾರ ಡಾ ಅಂಬೇಡ್ಕರ್ ಅವರ ವಿದ್ವತ್ತು ಮತ್ತು ಹೋರಾಟವನ್ನು ಗೌರವಿಸಿ ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದ್ದನ್ನು ಶ್ಲಾಘಿಸುತ್ತಾ ಕಾಂಗ್ರೆಸ್ ಪಕ್ಷ ಇಲ್ಲದಿದ್ದಲ್ಲಿ ಈ ಸಂವಿಧಾನದ ಅಸ್ಥಿತ್ವ ಹಾಗೂ ಅನುಷ್ಠಾನ ಅಸಂಭವವಾಗುತ್ತಿತ್ತು. ಸಂವಿಧಾನ ಜಾರಿಯ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದು ಕಾನ್‌ಸ್ಟಿಟ್ಯೂಟ್ ಅಸೆಂಬ್ಲಿಯ ಕೊನೆಯ ಭಾಷಣದಲ್ಲಿ ಧನ್ಯವಾದ ಹೇಳಿದ್ದರು.

Advertisements
ubd821

ಬಿಜೆಪಿಯವರ ವಿತಂಡವಾದದ ಸರಣಿಯು ಮುಂದುವರೆದು ದೇಶ ವಿಭಜನೆಗೆ ಕಾಂಗ್ರೆಸ್ ಕಾರಣ ಎನ್ನುವ ಸ್ಟಿರಿಯೋ ಟೈಪ್ ಸುಳ್ಳನ್ನು ಪ್ರಸ್ತಾಪಿಸಿದರು. ಆದರೆ ದ್ವಿರಾಷ್ಟ್ರ ಸಿದ್ಧಾಂತವನ್ನು ಮೊದಲು ಪ್ರಸ್ತಾಪಿಸಿದ್ದೆ ಹಿಂದುತ್ವದ ಪ್ರತಿಪಾದಕ ಸಾವರ್ಕರ್ ಎಂಬ ಸತ್ಯ ಇತಿಹಾಸದ ಪುಟಗಳಲ್ಲಿ ಕಣ್ಣಿಗೆ ರಾಚುವಂತಿದೆ. ಬಿಜೆಪಿಯವರು ತಮ್ಮದೇ ನಾಯಕರ ಬಗ್ಗೆ ಅರಿಯುವ ಪ್ರಯತ್ನ ಮಾಡಿದ್ದರೆ ನಗೆಪಾಟಲಿಗೆ ಒಳಗಾಗುವುದನ್ನು ತಪ್ಪಿಸಬಹುದಿತ್ತು. ಸಾವರ್ಕರ್ ಅವರು 1923ರಲ್ಲಿ ಪ್ರಕಟಿಸಿದ ‘ಎಸೆನ್ಸಿಯಲ್ಸ್ ಆಫ್ ಹಿಂದುಯಿಸಂ’ ಪುಸ್ತಕದಲ್ಲಿ ದ್ವಿರಾಷ್ಟ್ರ ಸಿದ್ಧಾಂತವನ್ನು ಸ್ಪಷ್ಟವಾಗಿ ಪ್ರತಿಪಾದಿಸಿದ್ದಾರೆ. 1937ರಲ್ಲಿ ಸಾವರ್ಕರ್: ಅಧ್ಯಕ್ಷತೆಯಲ್ಲಿ ನಡೆದ ಹಿಂದೂ ಮಹಾಸಭಾದ 19ನೇ ಅಧಿವೇಶನದಲ್ಲಿ ಈ ಬಗ್ಗೆ ನಿರ್ಣಯವನ್ನು ಕೈಗೊಳ್ಳಲಾಗಿತ್ತು, ಏಳು ವರ್ಷಗಳ ನಂತರ ಜಿನ್ನಾ ಅವರು ಸಾವರ್ಕ‌ರ್‌ರವರ ದ್ವಿರಾಷ್ಟ್ರ ಸಿದ್ಧಾಂತವನ್ನು ಪುಷ್ಟೀಕರಿಸಿದ್ದನ್ನು ಪ್ರಸ್ತಾಪಿಸಿದ ಅಂಬೇಡ್ಕ‌ರ್ ಅವರು ಇಬ್ಬರ ನಿಲುಮೆಗಳೂ ಒಂದೇ ಎಂದು ಟೀಕಿಸಿದ್ದು ಇತಿಹಾಸ. ಈ ಸತ್ಯ ಸಂಗತಿಗಳನ್ನು ಬಿಜೆಪಿಯವರು ತಿಳಿದುಕೊಂಡಿದ್ದರೆ ಸದನದಲ್ಲಿ ಅಭಾಸ ಉಂಟಾಗುತ್ತಿರಲಿಲ್ಲ.

ಗಾಂಧೀಜಿಯವರಿಗೆ ಮಹಾತ್ಮ, ಸುಭಾಷರಿಗೆ ನೇತಾಜಿ ಬಿರುದುಗಳನ್ನು ಕೊಟ್ಟವರ ಬಗ್ಗೆ ನಮಗೆ ತಿಳಿದಿದೆ. ಆದರೆ ಸಾವರ್ಕರ್‌ರಿಗೆ ವೀರ್ ಬಿರುದು ಕೊಟ್ಟವರು ಯಾರು, ಬಿಜೆಪಿಯವರು ಉತ್ತರಿಸುವರೇ? ಹಿಂದುತ್ವದ ಆದರ್ಶ ಪ್ರತೀಕ ಉಗ್ರನರಸಿಂಹ ಆಗಬೇಕೇ ಹೊರತು ಗೋವು ಅಲ್ಲ ಎಂದು ಸಾವರ್ಕ‌ರ್ ಹೇಳಿದ್ದರು. ಬಿಜೆಪಿಯವರು ಸಾವರ್ಕರ್ ಬಗ್ಗೆ ಸಂಪೂರ್ಣ ಅರಿತರೆ ಒಂದೋ ಸಾವರ್ಕರ್‌ರನ್ನು ಕೈಬಿಡಬೇಕಾಗುತ್ತದೆ ಇಲ್ಲವೇ ತಮ್ಮ ಎಡಬಿಡಂಗಿ ಸಿದ್ಧಾಂತವನ್ನು ತ್ಯಜಿಸಬೇಕಾಗುತ್ತದೆ. ಇತಿಹಾಸವೆಂದರೆ ಬಿಜೆಪಿಗೆ ಅಲರ್ಜಿ. ಬಹುಶಃ ಭಯದಿಂದಲೇ ಹಿಂದೆ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಪುಣ್ಯಕೋಟಿ ದತ್ತು ಯೋಜನೆಯಲ್ಲಿ ಯಾವ ಬಿಜೆಪಿ ನಾಯಕರೂ ಗೋವುಗಳನ್ನು ದತ್ತು ಪಡೆಯಲಿಲ್ಲ. ಬಹುಶಃ ಅವರು ಸಾವರ್ಕರ್‌ ಸಿದ್ಧಾಂತವನ್ನು ಪಾಲನೆ ಮಾಡಿದರೂ ಏನೋ!

ಇಂತಹ ಬಿಜೆಪಿಗೆ ಹೇಳಿಕೊಳ್ಳುವಂತಹ ವರ್ತಮಾನವೂ ಇಲ್ಲ, ಉತ್ತಮ ಇತಿಹಾಸವೂ ಇಲ್ಲ, ಹಾಗಾಗಿ ಅವರು ಚರಿತ್ರೆಯನ್ನು ತಿರುಚಲು ಮುಂದಾಗಿದ್ದಾರೆ. ಬಿಜೆಪಿ ನಂಬಿಕೊಂಡಿರುವ ಐತಿಹಾಸಿಕ ನಾಯಕರು ಸ್ವಯಂಘೋಷಿತ ವೀರರೇ ಹೊರತು ಅಸಲಿ ವೀರರಲ್ಲ, ಈ ಕೊರತೆಯನ್ನು ನೀಗಿಸಲು ಇತರ ನಾಯಕರನ್ನು ಎರವಲು ಪಡೆಯುವ ವಿಫಲ ಸಾಹಸ ಮಾಡಿದ್ದಾರೆ. ಭಗತ್‌ಸಿಂಗ್ ಕಮ್ಯುನಿಸ್ಟ್ ಸಿದ್ಧಾಂತದವರು, ವಲ್ಲಭಬಾಯ್ ಪಟೇಲರು ಆರೆಸ್ಸೆಸ್‌ ಅನ್ನು ಕಟು ಶಬ್ದಗಳಲ್ಲಿ ಟೀಕಿಸಿ ನಿಷೇಧಿಸಿದ್ದವರು. ವಿವೇಕಾನಂದರು ಹಿಂದೂ ಧರ್ಮದಲ್ಲಿನ ಸ್ಥಾಪಿತ ಮೌಢ್ಯಗಳನ್ನು ಧಿಕ್ಕರಿಸಿದ್ದರು. ನೇತಾಜಿಯವರು ಹಿಂದೂ ಮಹಾಸಭಾವನ್ನು ವಿರೋಧಿಸಿದ್ದರು ಹಾಗೂ ತಮ್ಮ ಐಎನ್‌ಎ ಬ್ರಿಗೇಡ್‌ಗಳಿಗೆ ಗಾಂಧಿ, ನೆಹರೂ ಹೆಸರಿಟ್ಟಿದ್ದರು. ನೇತಾಜಿ ತಮ್ಮ ಅಝದ್ ಹಿಂದ್ ಫೌಜ್‌ನ ಧ್ವಜದಲ್ಲಿ ಟಿಪ್ಪು ಸುಲ್ತಾನರ ಹುಲಿಯ ಲಾಂಛನ ಬಳಸಿದ್ದರು. ಆರ್‌ಎಸ್‌ಎಸ್ 52 ವರ್ಷಗಳು ಭಾರತದ ರಾಷ್ಟ್ರಧ್ವಜವನ್ನು ಹಾರಿಸಲೊಪ್ಪಲಿಲ್ಲ ಎಂಬಂತಹ ಚಾರಿತ್ರಿಕ ಸತ್ಯಗಳನ್ನು ಅರಿತರೆ ಬಿಜೆಪಿಯವರು ವಿಚಾರ ಸ್ಪಷ್ಟತೆಗೆ ಬರಲು ಅನುಕೂಲವಾಗುತ್ತದೆ.

ಸದನದಲ್ಲಿ ಬಿಜೆಪಿಯ ಧರ್ಮ ರಾಜಕಾರಣವೂ ಅನಾವರಣವಾಯಿತು. ಗುತ್ತಿಗೆಯಲ್ಲಿ ಮುಸ್ಲಿಮರ ಮೀಸಲಾತಿಯನ್ನು ವಿರೋಧಿಸಿ ಧಾರ್ಮಿಕ ದ್ವೇಷದ ತಳಹದಿಯಲ್ಲಿ ರಾಜಕಾರಣ ಮಾಡಲು ಪ್ರಯತ್ನಿಸಿದ ಬಿಜೆಪಿಯವರಿಗೆ ‘ಸೌಗತ್ ಎ ಮೋದಿ’ ಕಾರ್ಯಕ್ರಮ ನಾಲಿಗೆಯ ಮೇಲಿನ ಬಿಸಿ ತುಪ್ಪದಂತಾಗಿದೆ. ಧರ್ಮಾಧಾರಿತ ಮೀಸಲಾತಿ ಎನ್ನುವ ಬಿಜೆಪಿಗೆ ಹಾವನೂರು ಇನ್ನಿತರ ಮೂರು ಆಯೋಗಗಳು ಮುಸ್ಲಿಮರನ್ನು ಹಿಂದುಳಿದ ವರ್ಗವೆಂದು ವರ್ಗಿಕರಿಸಿದ ಸಂಗತಿ ತಿಳಿದಿಲ್ಲ ಎಂಬ ಅರಿವಿನ ಕೊರತೆಯನ್ನು ಸದನದಲ್ಲಿ ಅನಾವರಣಗೊಳಿಸಿದರು.

ಇದನ್ನೂ ಓದಿ ಇದು ರಾಜಕೀಯದ ಸಮಯವಲ್ಲ, ದುಃಖಿತರಿಗೆ ನ್ಯಾಯ ಕೊಡಿಸುವ ಸಮಯ: ಮಲ್ಲಿಕಾರ್ಜುನ ಖರ್ಗೆ

ಬಿಜೆಪಿ ಪಕ್ಷವು ಇನ್ನು ಮುಂದಾದರೂ ಸೈದ್ದಂತಿಕ ನಿಲುವಿನಲ್ಲಿ ಸ್ಪಷ್ಟತೆ ಹೊಂದಿದರೆ ಹಾಗೂ ಇತಿಹಾಸದ ಅಧ್ಯಯನ ಮೋರ್ಚಾ ತೆರೆದು ನಿಜ ಚರಿತ್ರೆಯನ್ನು ಅರಿತರೆ ಗಂಭೀರ ಹಾಗೂ ಮೌಲ್ಯಯುತ ರಾಜಕಾರಣಕ್ಕೆ ಅವಕಾಶವಾಗಬಹುದು. ಜಗತ್ತು ಆರ್ಥಿಕ ಸುಧಾರಣೆ, ಎಐ ಅನ್ವೇಷಣೆಗಳಂತಹ ಪ್ರಗತಿಪರ ಚಿಂತನೆಗಳ ಹಿಂದೆ ಬಿದ್ದಿದ್ದರೆ, ಬಿಜೆಪಿಗರು ಎಂದೋ ಕಾಲವಶವಾದ ಔರಂಗಜೇಬ್ ಸಮಾಧಿ ಕೆದಕುತ್ತಾ ಕುಳಿತಿದ್ದಾರೆ, “ಇತಿಹಾಸ ಅರಿಯದವರು ಇತಿಹಾಸವನ್ನು ಸೃಷ್ಟಿಸಲೂ ಸಾಧ್ಯವಿಲ್ಲ” ಎಂಬ ಡಾ ಅಂಬೇಡ್ಕರ್ ಅವರ ಮಾತಿನಂತೆ ಬಿಜೆಪಿಯವರ ಸ್ಥಿತಿಯೂ ಆಗಿದೆ.

priyanka kharge main 1517551797
ಪ್ರಿಯಾಂಕ್ ಖರ್ಗೆ
+ posts

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವರು, ಕರ್ನಾಟಕ ಸರ್ಕಾರ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವರು, ಕರ್ನಾಟಕ ಸರ್ಕಾರ

1 COMMENT

  1. ಭಾ ಜಿ ಪಂ ದಲಿ ಬರೀ ಸುಳ್ಳು ಮಾತು ಕೇಳಿ ಸಾಮಾನ್ಯ ಜನರ‌ ಹುಚ್ಚು ಎಂದು ಕೇಳುತ್ತಾರೆ ನಾವು ಮೊಗೆದು. ಅವರು ಹೇಳಿದ ಮಾತು ಕೇಳಿ. ಖುಷಿ ಪಡುತ್ತಾರೆ ಬರೀ ಸುಳ್ಳು ದೊಡ್ಡಸ್ತಿಕೆ. ಇರಬಾರದು. ಕೆಲಸ ಆಗಬೇಕು ಆವಿವೆಚನೆ ಇರಬೇಕು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X