ಧನಕರ್ ಅವರು ಪ್ರಜಾಪ್ರಭುತ್ವದ ಒಂದು ಅಂಗವನ್ನು ಇನ್ನೊಂದರ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸಿದ್ದಾರೆ ಎಂದು ಸಾಂವಿಧಾನಿಕ ತಜ್ಞರು ಹೇಳುತ್ತಿದ್ದಾರೆ. ಅಲ್ಲದೆ, ಸಂವಿಧಾನವೇ ಸರ್ವೋಚ್ಚ ಎಂದಿದ್ದಾರೆ.
ಸುಪ್ರೀಂ ಕೋರ್ಟ್ ಸಂವಿಧಾನದ 142ನೇ ವಿಧಿಯನ್ನು ಬಳಸಿದ್ದಕ್ಕೆ ʼ142ನೇ ವಿಧಿಯ ಬಳಕೆಯು ಪ್ರಜಾಪ್ರಭುತ್ವ ಶಕ್ತಿಗಳ ವಿರುದ್ಧ ಪರಮಾಣು ಕ್ಷಿಪಣಿ’ ಎಂದು ಹೇಳುವ ಮೂಲಕ ಉಪರಾಷ್ಟ್ರಪತಿ ಜಗದೀಪ್ ಧನಕರ್ ಕಳೆದವಾರ ವ್ಯಾಪಕ ಟೀಕೆ, ಆಕ್ರೋಶಕ್ಕೆ ಗುರಿಯಾಗಿದ್ದರು. ಆದಾಗ್ಯೂ, ತಮ್ಮ ವಾದ-ವಿತಂಡವಾದವನ್ನು ಮುಂದುವರೆಸಿರುವ ಧನಕರ್, ನ್ಯಾಯಾಂಗದ ಮೇಲಿನ ತಮ್ಮ ವಾಗ್ದಾಳಿ ಹೆಚ್ಚಿಸಿದ್ದಾರೆ. ಸಂಸತ್ತು ಸರ್ವೋಚ್ಚ ಎಂದು ಪ್ರತಿಪಾದಿಸಿದ್ದಾರೆ. ಆ ಮೂಲಕ, ಸುಪ್ರೀಂ ಕೋರ್ಟ್‌ನ ಅಧಿಕಾರ ವ್ಯಾಪ್ತಿಯನ್ನು ಗೌಣಗೊಳಿಸುವ ಯತ್ನ ಮಾಡಿದ್ದಾರೆ.
ಒಂದು ವಾರದಿಂದ ತಾವು ಎದುರಿಸುತ್ತಿರುವ ಟೀಕೆಗಳನ್ನು ಶಮನ ಮಾಡಲು ಪ್ರಯತ್ನಿಸಿರುವ ಧನಕರ್, “ಜನರಿಗಾಗಿ ಸಂವಿಧಾನವಿದೆ ಮತ್ತು ಅವರ ರಕ್ಷಣೆಯ ಹೊಣೆಯನ್ನು ಚುನಾಯಿತ ಪ್ರತಿನಿಧಿಗಳಿಗೆ ಕೊಟ್ಟಿದೆ. ಇಂದಿರಾ ಗಾಂಧಿಯವರು 1975ರಲ್ಲಿ ತುರ್ತುಪರಿಸ್ಥಿತಿಯನ್ನು ವಿಧಿಸಿದ್ದಾಗ, ಕಾರ್ಯಾಂಗವು ಮೂಲಭೂತ ಹಕ್ಕುಗಳ ಏಕೈಕ ಮಧ್ಯಸ್ಥಗಾರನಾಗಿದ್ದು, ಅದನ್ನು ಅಮಾನತುಗೊಳಿಸಬಾರದು. ಕಾರ್ಯಾಂಗವನ್ನು ಅಮಾನತುಗೊಳಿಸುವುದು ಪ್ರಜಾಪ್ರಭುತ್ವ ಜಗತ್ತಿನ ಮಾನವ ಇತಿಹಾಸದಲ್ಲಿ ಅತ್ಯಂತ ಕರಾಳ ಅವಧಿ” ಎಂದು ಸುಪ್ರೀಂ ಕೋರ್ಟ್ ಹೇಳಿತ್ತು ಎಂಬುದನ್ನು ಉಲ್ಲೇಖಿಸಿದರು.
ಆದಾಗ್ಯೂ, ಅವರು “ಸಂಸತ್ತಿಗಿಂತ ಪರಮೋಚ್ಚವಾಗಿರುವ ಮತ್ತು ಹೆಚ್ಚು ಅಧಿಕಾರಹೊಂದಿರುವ ಮತ್ತೊಂದು ಸಂಸ್ಥೆಯ ಬಗ್ಗೆ ಸಂವಿಧಾನದಲ್ಲಿ ಯಾವುದೇ ಉಲ್ಲೇಖಗಳಿಲ್ಲ. ಆ ಬಗ್ಗೆ ಬೆಳಕು ಚೆಲ್ಲಲಾಗಿಲ್ಲ” ಎಂದು ವಾದಿಸಿದರು.
ಕಳೆದ ವಾರ, ತಮಿಳುನಾಡು ಸರ್ಕಾರದ ಅರ್ಜಿಯನ್ನು ಆಲಿಸಿದ್ದ ಸುಪ್ರೀಂ ಕೋರ್ಟ್, “ರಾಜ್ಯಪಾಲರು ಯಾವುದೇ ಮಸೂದೆಗಳನ್ನು ಒಂದು ತಿಂಗಳ ಒಳಗಾಗಿ ವಿಲೇವಾರಿ ಮಾಡಬೇಕು (ಸಹಿ, ಸಲಹೆಯೊಂದಿಗೆ ವಾಪಸ್ ಕಳಿಸುವುದು ಇತ್ಯಾದಿ). ರಾಜ್ಯಪಾಲರು ಉಲ್ಲೇಖಿಸುವ ರಾಜ್ಯ ಸರ್ಕಾರಗಳ ಮಸೂದೆಗಳ ಬಗ್ಗೆ ನಿರ್ಧರಿಸಲು ರಾಷ್ಟ್ರಪತಿಗಳು 3 ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಾರದು” ಎಂದು ಗಡುವು ನಿಗದಿ ಮಾಡಿದೆ. ಅಲ್ಲದೆ, “ತಮಿಳುನಾಡು ಸರ್ಕಾರದ 10 ಮಸೂದೆಗಳನ್ನು ರಾಜ್ಯಪಾಲ ಆರ್.ಎನ್ ರವಿ ಅವರು ವರ್ಷಗಳ ತಮ್ಮ ಕಚೇರಿಯಲ್ಲಿಯೇ ಇಟ್ಟುಕೊಂಡಿರುವುದು ಮತ್ತು ದೀರ್ಘಾವಧಿಯ ನಂತರ ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಾಯ್ದಿರಿಸುವುದು ಕಾನೂನುಬಾಹಿರ” ಎಂದೂ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತು.
ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಉಪರಾಷ್ಟ್ರಪತಿ ಧನಕರ್ ನಿರಂತರವಾಗಿ ವಿರೋಧದ ಮಾತನಾಡುತ್ತಿದ್ದಾರೆ. ‘ರಾಷ್ಟ್ರಪತಿಗಳಿಗೆ ಗಡುವು ನೀಡುವ ಅಧಿಕಾರ ಸುಪ್ರೀಂ ಕೋರ್ಟ್‌ಗೆ ಇಲ್ಲ. ಸಂವಿಧಾನದ 142ನೇ ವಿಧಿಯನ್ನು ಪ್ರಜಾಪ್ರಭುತ್ವ ಶಕ್ತಿಗಳ ವಿರುದ್ಧ ಪರಮಾಣು ಕ್ಷಿಪಣಿಯಂತೆ ಬಳಸಲಾಗುತ್ತಿದೆ’ ಎಂದು ಹೇಳಿದ್ದಾರೆ.
ಈಗ ಮಂಗಳವಾರ, ಮತ್ತೊಮ್ಮೆ ತಮ್ಮ ಹೇಳಿಕೆಯ ಮುಂದುವರಿಕೆಯಾಗಿ ಮಾತನಾಡಿರುವ ಧನಕರ್, “ಸಂವಿಧಾನವು ಸರ್ವೋಚ್ಚವಾಗಿದ್ದು, ಸಂಸತ್ತು ಅದರ ಸೃಷ್ಟಿಯಾಗಿದೆ. ಬೇರೆಯಾವುದೂ ಪರಮೋಚ್ಛವಲ್ಲ” ಎಂದು ಹೇಳಿದ್ದಾರೆ.
“1975ರ ತುರ್ತು ಪರಿಸ್ಥಿತಿಯ ಸಮಯದಲ್ಲಿ ‘ಮೂಲಭೂತ ಹಕ್ಕುಗಳನ್ನು ತಡೆಹಿಡಿಯಲಾಗುವುದಿಲ್ಲ’ ಎಂದು ಒಂಬತ್ತು ಹೈಕೋರ್ಟ್‌ಗಳು ತೀರ್ಪು ನೀಡಿದ್ದವು. ಮಾತ್ರವಲ್ಲದೆ, ಅಂದಿನ ಕಾರ್ಯಾಂಗವು ಮೂಲಭೂತ ಹಕ್ಕುಗಳ ಏಕೈಕ ಮಧ್ಯಸ್ಥಗಾರ ಎಂದಿದ್ದವು. ಆದರೆ, ಆ ತೀರ್ಪುಗಳನ್ನು ಈಗ ಸುಪ್ರೀಂ ಕೋರ್ಟ್ ನಿರ್ಲಕ್ಷಿಸಿದೆ” ಎಂದು ಅವರು ಆರೋಪಿಸಿದ್ದಾರೆ.
“ಸಂವಿಧಾನ ಹೇಳುವಂತೆ ಸಂಸತ್ತು ಸರ್ವೋಚ್ಚ. ಪರಿಸ್ಥಿತಿ ಹೀಗಿರುವಾಗ, ದೇಶದ ಪ್ರತಿಯೊಬ್ಬ ವ್ಯಕ್ತಿಯಂತೆಯೇ ಸಂಸತ್ತು ಸರ್ವೋಚ್ಚವಾಗಿದೆ” ಎಂದಿದ್ದಾರೆ.
ಧನಕರ್ ಮರೆಮಾಚಿದ ಸತ್ಯಗಳು
ತುರ್ತು ಪರಿಸ್ಥಿತಿಯನ್ನು ಟೀಕಿಸುತ್ತಾ, ಸಂಸತ್ತನ್ನು ಸರ್ವೋಚ್ಚವೆಂದು ಹೇಳುತ್ತಾ, ತುರ್ತು ಪರಿಸ್ಥಿತಿಯ ಸಂದರ್ಭವನ್ನು ಇನ್ನಷ್ಟು ಆಳವಾಗಿ ನೋಡಲು ಯತ್ನಿಸಿದ ಧನಕರ್, ಆ ಅವಧಿಯಲ್ಲಿ ಸಂಸತ್ತಿನ ಮಿತಿಮೀರಿದ ಕ್ರಮಗಳ ಬಗ್ಗೆ ಮಾತನಾಡಲಿಲ್ಲ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ, ಸಂಸತ್ತು ನ್ಯಾಯಾಂಗ ಅಧಿಕಾರಗಳನ್ನು ಕಸಿದುಕೊಂಡು, ಆ ಎಲ್ಲ ಅಧಿಕಾರವನ್ನು ಸಂಸತ್ತಿನ ಅಧೀನದಲ್ಲಿಡಲು ಸಂವಿಧಾನಕ್ಕೆ ಹಲವಾರು ತಿದ್ದುಪಡಿಗಳನ್ನು ತಂದಿತ್ತು ಮತ್ತು ಅಂಗೀಕರಿಸಿತ್ತು. ಆ ಬಗ್ಗೆ ಧನಕರ್ ಯಾವುದೇ ಉಲ್ಲೇಖಿಸಲಿಲ್ಲ.
1975ರಲ್ಲಿ ಸಂವಿಧಾನಕ್ಕೆ ತಂದ ಪ್ರಮುಖ ತಿದ್ದುಪಡಿಗಳಲ್ಲಿ ತುರ್ತು ಪರಿಸ್ಥಿತಿ ಕುರಿತು ನ್ಯಾಯಾಂಗವು ಪರಿಶೀಲಿಸುವ ಅಧಿಕಾರವನ್ನು ನಿಷೇಧಿಸಿದ 38ನೇ ತಿದ್ದುಪಡಿ ಹಾಗೂ ರಾಷ್ಟ್ರಪತಿ-ಉಪರಾಷ್ಟ್ರಪತಿಗೆ ಸಂಬಂಧಿಸಿದ ಚುನಾವಣಾ ವಿವಾದಗಳನ್ನು ವಿಚಾರಣೆ ನಡೆಸುವ ಸುಪ್ರೀಂ ಕೋರ್ಟ್‌ನ ಅಧಿಕಾರವನ್ನು ಕಸಿದುಕೊಂಡ 39ನೇ ತಿದ್ದುಪಡಿಗಳು ಸೇರಿವೆ.
ಆ ಅವಧಿಯಲ್ಲಿ ಜಾರಿಗೆ ಬಂದ ಮತ್ತೊಂದು ಕಾಯ್ದೆ, ಸಂವಿಧಾನಕ್ಕೆ 40ನೇ ತಿದ್ದುಪಡಿ ಕಾಯ್ದೆ. ಈ ತಿದ್ದುಪಡಿ ಕಾಯ್ದೆಯು ಸಂವಿಧಾನದ ಪೀಠಿಕೆಯಲ್ಲಿ “ಸಾರ್ವಭೌಮ, ಜಾತ್ಯತೀತ, ಸಮಾಜವಾದಿ, ಪ್ರಜಾಸತ್ತಾತ್ಮಕ ಗಣರಾಜ್ಯ” ಎಂಬ ಪದಗಳನ್ನು ಸೇರಿಸಿತು. ಆದರೆ, ಅದೇ ತಿದ್ದುಪಡಿಯಲ್ಲಿ ಚುನಾವಣಾ ಅರ್ಜಿಗಳನ್ನು ಆಲಿಸುವ ನ್ಯಾಯಾಂಗದ ಹಕ್ಕನ್ನು ಕಸಿದುಕೊಂಡಿತು. ಸಂವಿಧಾನವನ್ನು ತಿದ್ದುಪಡಿ ಮಾಡಲು ಸಂಸತ್ತಿಗೆ ಅಪ್ರತಿಮ ಅಧಿಕಾರವನ್ನು ನೀಡಿತು. ಸಂವಿಧಾನ ತಿದ್ದುಪಡಿಗಳನ್ನು ನ್ಯಾಯಾಂಗ ಪರಿಶೀಲನೆಯ ವ್ಯಾಪ್ತಿಯಿಂದ ಹೊರಗಿಟ್ಟಿತು. ಅಲ್ಲದೆ, ರಾಜ್ಯ ನಿರ್ದೇಶನ ತತ್ವಗಳನ್ನು ಜಾರಿಗೆ ತರಲು ಸಂಸತ್ತು ಅಂಗೀಕರಿಸಿದ ಯಾವುದೇ ಕಾನೂನನ್ನು ನ್ಯಾಯಾಂಗ ಪರಿಶೀಲನೆ ನಡೆಸಲು ಬರುವುದಿಲ್ಲ ಎಂದೂ ತಿದ್ದುಪಡಿಯಲ್ಲಿ ಹೇಳಲಾಯಿತು.
ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸಂಸತ್ತು ನಡೆದುಕೊಂಡು ಅಧಿಕ ಪ್ರಸಂಗಿ ಧೋರಣೆಯ ಬಗ್ಗೆ ಮಾತನಾಡದ ಧನಕರ್ ಸಂಸತ್ತು ಸರ್ವೋಚ್ಚ ಎಂದು ಹೇಳುತ್ತಿದ್ದಾರೆ.
‘ಸಂವಿಧಾನ ಮಾತ್ರವೇ ಸರ್ವೋಚ್ಚ’
ಧನಕರ್ ಅವರು ಪ್ರಜಾಪ್ರಭುತ್ವದ ಒಂದು ಅಂಗವನ್ನು ಇನ್ನೊಂದರ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸಿದ್ದಾರೆ ಎಂದು ಸಾಂವಿಧಾನಿಕ ತಜ್ಞರು ಹೇಳುತ್ತಿದ್ದಾರೆ. ಅಲ್ಲದೆ, ಸಂವಿಧಾನವೇ ಸರ್ವೋಚ್ಚ ಎಂದಿದ್ದಾರೆ.
“ಸಂಸತ್ತು (ಶಾಸಕಾಂಗ), ಕಾರ್ಯಾಂಗ ಮತ್ತು ನ್ಯಾಯಾಂಗ ಎಲ್ಲವೂ ಸಂವಿಧಾನದ ಸೃಷ್ಟಿಗಳು. ಆದ್ದರಿಂದ, ಈ ಸಂಸ್ಥೆಗಳಲ್ಲಿ ಯಾವುದೂ ಸರ್ವೋಚ್ಚವಲ್ಲ; ಸಂವಿಧಾನ ಮಾತ್ರ ಸರ್ವೋಚ್ಚ. ಮತ್ತು ಇದನ್ನು ವಿವಿಧ ಸುಪ್ರೀಂ ಕೋರ್ಟ್ ತೀರ್ಪುಗಳು ಸ್ಪಷ್ಟಪಡಿಸಿವೆ. ಸಂವಿಧಾನವೇ ಸರ್ವೋಚ್ಚ ಎಂಬುದು ಸ್ಥಿರವಾಗಿದೆ. ಉದಾಹರಣೆಗೆ, ಸಂಸತ್ತು ಅನೇಕ ವಿಷಯಗಳನ್ನು ತಿದ್ದುಪಡಿ ಮಾಡಬಹುದು. ಆದರೆ, ಸಂವಿಧಾನದ ಮೂಲ ರಚನೆಯನ್ನು ಬದಲಿಸಲು ಸಾಧ್ಯವಿಲ್ಲ. ನ್ಯಾಯಾಂಗದ ಕೆಲಸ ಸಂವಿಧಾನವನ್ನು ವ್ಯಾಖ್ಯಾನಿಸುವುದು. ಆದ್ದರಿಂದ, ನ್ಯಾಯಾಂಗದ ಮೇಲೆ ಸಂಸತ್ತಿನ ಅಧಿಕಾರ/ನಿಯಂತ್ರಣವನ್ನು ಮಿತಿಗೊಳಿಸಲಾಗಿದೆ” ಎಂದು ಮಾಜಿ ಲೋಕಸಭಾ ಕಾರ್ಯದರ್ಶಿ ಪಿ.ಡಿ.ಟಿ ಆಚಾರ್ಯ ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಮಂಗಳೂರು ಗ್ಯಾಂಗ್‌ರೇಪ್ | ಮೌನಕ್ಕೆ ಜಾರಿದ ಬಿಜೆಪಿ, ಸಂಘಪರಿವಾರ; ಕಾರಣ ಏನು ಗೊತ್ತೇ?
1973ರ ಕೇಶವಾನಂದ ಭಾರತಿ ತೀರ್ಪು, ಸಂವಿಧಾನದ ಮೂಲ ರಚನೆಯ ಸಿದ್ಧಾಂತವನ್ನು ಎತ್ತಿಹಿಡಿದಿದೆ. ಸಂವಿಧಾನವನ್ನು ತಿದ್ದುಪಡಿ ಮಾಡಲು ಸಂಸತ್ತಿನ ಅಧಿಕಾರದ ಮೇಲೆ ಮಿತಿಗಳನ್ನು ವಿಧಿಸಿದೆ. 13 ನ್ಯಾಯಾಧೀಶರ ಸಂವಿಧಾನ ಪೀಠವು, “ಭಾರತದ ಸಂವಿಧಾನವು ಸಾಂವಿಧಾನಿಕ ತಿದ್ದುಪಡಿಯ ಮೂಲಕವೂ ಬದಲಾಯಿಸಲಾಗದ ಮೂಲಭೂತ ರಚನೆಯನ್ನು ಹೊಂದಿದೆ. 368ನೇ ವಿಧಿಯ ಅಡಿಯಲ್ಲಿ ಸಂಸತ್ತಿನ ತಿದ್ದುಪಡಿ ಅಧಿಕಾರವು ಅಪರಿಮಿತವಲ್ಲ. ಸಂಸತ್ತು ಕಾನೂನಿನ ನಿಯಮದ ತತ್ವಗಳು, ಅಧಿಕಾರಗಳ ಪ್ರತ್ಯೇಕತೆ ಮತ್ತು ನ್ಯಾಯಾಂಗದ ಸ್ವಾತಂತ್ರ್ಯ ಸೇರಿದಂತೆ ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸಲು ಸಾಧ್ಯವಿಲ್ಲ” ಎಂದು 6:7 ಕೋರಂನಲ್ಲಿ ತೀರ್ಪು ನೀಡಿತು.
ಅಧಿಕಾರಗಳ ಕಟ್ಟುನಿಟ್ಟಿನ ಪ್ರತ್ಯೇಕತೆಯಿಲ್ಲದಿದ್ದರೂ, ಸಂವಿಧಾನವು ಪ್ರಜಾಪ್ರಭುತ್ವದ ಮೂರು ಅಂಗಗಳ ನಡುವೆ ಅಧಿಕಾರಗಳನ್ನು ಹಂಚಿಕೆ ಮಾಡುವ ಮೂಲಕ ‘ಪರಿಶೀಲನೆ ಮತ್ತು ಸಮತೋಲನಗಳ ವ್ಯವಸ್ಥೆ’ಯನ್ನು ನಿರ್ಮಿಸಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹೀಗಾಗಿ, ಒಂದು ಅಂಗವು ಮತ್ತೊಂದಕ್ಕಿಂತ ಪ್ರಾಬಲ್ಯ ಹೊಂದಲು ಸಾಧ್ಯವಿಲ್ಲ.
‘ಸಂಸತ್ತು ಸಂವಿಧಾನದ ಅಡಿಯಲ್ಲಿದೆ – ಮೇಲಲ್ಲ’
ಸಾಂವಿಧಾನಿಕ ಕಾನೂನು ತಜ್ಞ ಮತ್ತು ಚಾಣಕ್ಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಉಪಕುಲಪತಿ ಫೈಜಾನ್ ಮುಸ್ತಫಾ ಅವರ ಪ್ರಕಾರ, “ಭಾರತದಲ್ಲಿ ಸಂಸತ್ತಿನ ಪ್ರಾಮುಖ್ಯತೆಯೇ ಅತ್ಯುನ್ನತವೆಂದು ಹೇಳಲಾಗಿಲ್ಲ. ಭಾರತೀಯ ಸಂವಿಧಾನದ ನಿರ್ಮಾತೃಗಳು ಬ್ರಿಟನ್‌ನಂತೆ ಸಂಸತ್ತಿನ ಪ್ರಾಬಲ್ಯವನ್ನು ಅಳವಡಿಸಿಕೊಂಡಿಲ್ಲ. ಭಾರತೀಯ ಸಂಸತ್ತು ಸಂವಿಧಾನದ ಅಡಿಯಲ್ಲಿದೆ. ಅದು ಸಂವಿಧಾನಕ್ಕಿಂತ ಮೇಲಲ್ಲ/ಮೇಲೆ ಇಲ್ಲ. ಸಂಸತ್ತು ಸಂವಿಧಾನದಿಂದ ಸೃಷ್ಟಿಯಾಗಿದ್ದು, ಸಂವಿಧಾನಕ್ಕೆ ಅಧೀನವಾಗಿದೆ. ಭಾರತದಲ್ಲಿ ಸಂವಿಧಾನದ ಪ್ರಾಬಲ್ಯವಿದೆ, ಸಂಸತ್ತಿನ ಪ್ರಾಬಲ್ಯವಲ್ಲ” ಎಂದು ಹೇಳಿದ್ದಾರೆ.
“ಸಂವಿಧಾನದ ಪ್ರಾಬಲ್ಯವನ್ನು ಕಾಪಾಡಿಕೊಳ್ಳಲು, ನಾವು ಅಳವಡಿಸಿಕೊಂಡ ಸಾಂವಿಧಾನಿಕ ವಿನ್ಯಾಸ– ‘ಸಂಸತ್ತು ಕಾನೂನನ್ನು ಅಂಗೀಕರಿಸಬಹುದು’ ಎಂಬುದು. ಆದರೆ, ಆ ಕಾನೂನಿನ ಸಾಂವಿಧಾನಿಕವಾಗಿದೆಯೇ ಅಥವಾ ಸಂವಿಧಾನದ ಆಶಕ್ಕೆ ವಿರುದ್ಧವಾಗಿದೆಯೇ ಎಂಬುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಯಾವುದೇ ಕಾನೂನು ಅಥವಾ ಕಾನೂನಿನ ಯಾವುದೇ ನಿಬಂಧನೆಗಳು ಸಂವಿಧಾನದ ಆಶಯ ಮತ್ತು ನಾಗರಿಕರ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದ್ದರೆ, ಅಂತಹ ಕಾನೂನುಗಳನ್ನು ನ್ಯಾಯಾಲಯಗಳು ಪರಿಶೀಲಿಸಿ, ಅಸಂವಿಧಾನಿಕವೆಂದು ಘೋಷಿಸಿ, ರದ್ದುಗೊಳಿಸುವ ಅಧಿಕಾರವಿದೆ” ಎಂದು ಅವರು ವಿವರಿಸಿದ್ದಾರೆ.
“ಯಾವುದೇ ಕಾನೂನು ಅಥವಾ ಇತರ ವ್ಯವಹಾರಗಳನ್ನು ನ್ಯಾಯಾಂಗವು ಪರಿಶೀಲನೆ ಮಾಡುವ ಅಧಿಕಾರವು ಸಂವಿಧಾನದ ಪ್ರಾಬಲ್ಯವನ್ನು ಬಿಂಬಿಸುವ ಅವಿಭಾಗ್ಯ ಅಂಗವಾಗಿದೆ. ಯಾಕೆಂದರೆ, ಭಾರತೀಯ ಜನರ ಇಚ್ಛೆಯನ್ನು ಪ್ರತಿನಿಧಿಸುವ ಸಂವಿಧಾನ ರಚನಾ ಸಭೆಯು ನ್ಯಾಯಾಲಯಗಳಿಗೆ ಈ ಅಧಿಕಾರವನ್ನು ನೀಡಿದೆ” ಎಂದು ಮುಸ್ತಫಾ ಹೇಳಿದ್ದಾರೆ.
“ಸಂಸತ್ತಿನ ನಿರ್ಧಾರಗಳನ್ನು ದೇಶದ ಪ್ರಜೆಗಳು ಸಂಸತ್ತಿನಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ. ಅಂತೆಯೇ, ಕಾರ್ಯಾಂಗದಲ್ಲಿಯೂ ಪ್ರಶ್ನಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ, ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ಎಲ್ಲ ಮಸೂದೆಗಳನ್ನು ಸರ್ಕಾರವೇ ಮುನ್ನಡೆಸುತ್ತದೆ. ಹೀಗಾಗಿ, ಆ ಮಸೂದೆ/ಕಾಯ್ದೆಗಳು ಸಂವಿಧಾನದ ಶ್ರೇಷ್ಠತೆ ಮತ್ತು ಆಶಯಕ್ಕೆ ಬದ್ಧವಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಸ್ವತಂತ್ರ ನ್ಯಾಯಾಂಗಕ್ಕೆ ಈ ಜವಾಬ್ದಾರಿ ನೀಡುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ. ಆದ್ದರಿಂದ, ಸಂಸತ್ತು ಅಂಗೀಕರಿಸಿದ ಕಾನೂನನ್ನು ನ್ಯಾಯಾಲಯಗಳು ರದ್ದುಗೊಳಿಸಬಹುದು. ಆದಾಗ್ಯೂ, ಸಂಸತ್ತು ಆಗಲೀ ಅಥವಾ ಸುಪ್ರೀಂ ಕೋರ್ಟ್ ಆಗಲೀ ಸರ್ವೋಚ್ಚವಲ್ಲ. ಯಾರೂ ಸಂವಿಧಾನ ನೀಡಿರುವ ಅಧಿಕಾರ ವ್ಯಾಪ್ತಿಯನ್ನು ಮೀರಿ ಹೋಗಲು ಸಾಧ್ಯವಿಲ್ಲ. ಸಂವಿಧಾನವೇ ಸರ್ವೋಚ್ಚ” ಎಂದು ಮುಸ್ತಫಾ ತಿಳಿಸಿದ್ದಾರೆ.