ಸಾಧನೆಗೆ ಯಾವುದೂ ಕೂಡ ಅಡ್ಡಿಯಾಗಬಾರದು. ಬದುಕಿನಲ್ಲಿ ಸಾಧಿಸುವ ಗುರಿಯೊಂದೇ ಮುಖ್ಯ. ಅನ್ಷಕರಸ್ಥ ಕೂಡ ತನ್ನದೇ ಆದ ಕ್ಷೇತ್ರದಲ್ಲಿ ಸಾಧಿಸಿ ತೋರಿಸಿದ ಉದಾಹರಣೆಗಳಿವೆ. ಸಾಧಿಸುವ ಮೊದಲು ತನ್ನಲ್ಲಿರುವ ಕೀಳರಿಮೆಯನ್ನು ದೂರ ಮಾಡಬೇಕು. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ಕೀಳರಿಮೆ ದೂರ ಮಾಡಿ, ಸ್ಪಷ್ಟ ಗುರಿಯನ್ನು ಹಾಕಿಕೊಂಡು ಸಾಧಿಸಿ ತೋರಿಸಬೇಕು ಎಂದು ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಯು.ಎಚ್ ಉಮರ್ ಹೇಳಿದರು.
ಮಂಗಳೂರಿನ ಕೂಳೂರಿನಲ್ಲಿರುವ ಯೆನೆಪೊಯ ಇನ್ಸಿಟ್ಯೂಟ್ ಆಫ್ ಆರ್ಟ್ಸ್ ಸೈನ್ಸ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನ ಸಹಾಯಕ ಪ್ರಾಧ್ಯಾಪಕ ನಿಯಾಝ್ ಪಡೀಲ್ ರಚಿಸಿದ ಕನ್ನಡ ಕಾದಂಬರಿಯ ಬ್ಯಾರಿ ಅನುವಾದಿತ ‘ಯತೀಮ್’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
“ಭಾಷೆಯು ಕೇವಲ ಸಂವಹನ ಕಲೆಯಲ್ಲ. ಅದರಲ್ಲಿ ಸಂಸ್ಕೃತಿ, ಸಂಸ್ಕಾರ, ಸಂವೇದನೆ ಇರುತ್ತದೆ. ಈ ನಿಟ್ಟಿನಲ್ಲೂ ಅಧ್ಯಯನ ಆಗಬೇಕಿದೆ. ಬ್ಯಾರಿ ಅಕಾಡಮಿಯು ಸಂಶೋಧನೆಗೆ ಹೆಚ್ಚು ಆದ್ಯತೆ ನೀಡಿ ಕೆಲಸ ಮಾಡಲಿದೆ” ಎಂದು ಅವರು ಹೇಳಿದರು.
‘ಮಾರ್ದನಿ’ ವೆಬ್‌ಸೈಟ್ ಲೋಕಾರ್ಪಣೆ;
ಇದೇ ಕಾರ್ಯಕ್ರಮದಲ್ಲಿ ಯೆನೆಪೊಯ ಇನ್ಸಿಟ್ಯೂಟ್ ಆಫ್ ಆರ್ಟ್ಸ್ ಸೈನ್ಸ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನ ‘ಮಾರ್ದನಿ’ ಕನ್ನಡ ಜರ್ನಲ್ ವೆಬ್‌ಸೈಟ್‌ಅನ್ನು ಉಜಿರೆ ಎಸ್‌ಡಿಎಂ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ರಾಜಶೇಖರ ಹಳೆಮನೆ ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ಅವರು, “ಜಾಲತಾಣಗಳು ಸಮಾಜಕ್ಕೆ ಸ್ಪಂದಿಸುವ ಅಗತ್ಯವಿದೆ. ಜಾಲತಾಣಗಳಲ್ಲಿ ಸಂಶೋಧನಾ ಪ್ರಬಂಧಗಳು ಪ್ರಕಟಗೊಳ್ಳಬೇಕು. ಸಾಮಾಜಿಕ ಸಮಸ್ಯೆಗಳ ಬಗ್ಗೆಯೂ ಅಧ್ಯಯನ ಲೇಖನಗಳಿಗೆ ಆದ್ಯತೆ ನೀಡಬೇಕು” ಎಂದರು.
ಈ ವರದಿ ಓದಿದ್ದೀರಾ?: ಜಾತಿ ಗಣತಿಯ ಬಗ್ಗೆ ಬಾಬಾಸಾಹೇಬರು ಹೇಳಿದ್ದೇನು?
ಯೆನೆಪೊಯ ಇನ್ಸಿಟ್ಯೂಟ್ ಆಫ್ ಆರ್ಟ್ಸ್ ಸೈನ್ಸ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನ ಪ್ರಾಂಶುಪಾಲ ಡಾ. ಅರುಣ್ ಎ. ಭಾಗವತ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿಗಳಾಗಿ ಕೃತಿಯ ಅನುವಾದಕ ಅಬ್ದುಲ್ ರಹಿಮಾನ್ ಕುತ್ತೆತ್ತೂರು, ಅಭಿಮತ ಟಿ.ವಿ. ಚಾನೆಲ್‌ನ ಮುಖ್ಯಸ್ಥೆ ಮಮತಾ ಪಿ. ಶೆಟ್ಟಿ, ಅಖಿಲ ಭಾರತ ಬ್ಯಾರಿ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಶಮೀಮಾ ಕುತ್ತಾರ್ ಭಾಗವಹಿಸಿ ಮಾತನಾಡಿದರು. ಉಪ ಪ್ರಾಂಶುಪಾಲೆ ಡಾ. ಶರೀನಾ ಪಿ., ಭಾಷಾ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಶಾಲಿನಿ ಸಿಕ್ವೇರಾ ಮಾತನಾಡಿದರು. ಬ್ಯಾರಿ ಅಧ್ಯಯನ ಪೀಠದ ಸದಸ್ಯ ಹಂಝ ಮಲಾರ್ ಕೃತಿ ಪರಿಚಯ ಮಾಡಿದರು. ಸಹಾಯಕ ಪ್ರಾಧ್ಯಾಪಕ ಡಾ. ದಿನಕರ ಪಚ್ಚನಾಡಿ ‘ಮಾರ್ದನಿ’ಯ ಬಗ್ಗೆ ಮಾಹಿತಿ ನೀಡಿದರು.
ಉಪ ಪ್ರಾಂಶುಪಾಲರಾದ ಡಾ. ಜೀವನ್‌ರಾಜ್, ನಾರಾಯಣ ಸುಕುಮಾರ ಎ. ಉಪಸ್ಥಿತರಿದ್ದರು. ವಿದ್ಯಾರ್ಥಿ ಸಲ್ವಿತ್ ಅಹ್ಮದ್ ಪ್ರಾರ್ಥಿಸಿದರು. ಕೃತಿಯ ಲೇಖಕ ನಿಯಾಝ್ ಪಡೀಲ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿಯರಾದ ರಝೀನಾ ವಂದಿಸಿದರು. ಶಹ್ಲಾ ಅಬ್ದುಲ್ ರಹ್ಮಾನ್ ಕಾರ್ಯಕ್ರಮ ನಿರೂಪಿಸಿದರು.