- ಜೂನ್ 27ಕ್ಕೆ ಸಂಚಾರ ನಿಯಮ ಉಲ್ಲಂಘನೆಗೆ ಬಾಲಕನ ಹತ್ಯೆ ನಂತರ ಫ್ರಾನ್ಸ್ ದೇಶದಲ್ಲಿ ಹಿಂಸಾಚಾರ
- 2000ಕ್ಕೂ ಹೆಚ್ಚು ಕಾರುಗಳು ಬೆಂಕಿಗೆ ಆಹುತಿ ನಂತರ 800 ಉದ್ರಿಕ್ತರ ಬಂಧಿಸಿದ ಪೊಲೀಸ್
ಫ್ರಾನ್ಸ್ ದೇಶದ ಪಶ್ಚಿಮ ಪ್ಯಾರಿಸ್‌ನ ನಾಂಟೇರ್‌ನಲ್ಲಿ ಸಂಚಾರ ತಪಾಸಣೆ ವೇಳೆ 17 ವರ್ಷದ ಅರಬ್ ದೇಶದ ಬಾಲಕನನ್ನು ಪೊಲೀಸರು ಗುಂಡಿಟ್ಟು ಮಂಗಳವಾರ (ಜೂನ್ 27) ಹತ್ಯೆ ಮಾಡಿದ ನಂತರ ಭುಗಿಲೆದ್ದ ಜನರ ಆಕ್ರೋಶ ಹಿಂಸಾಚಾರ ರೂಪ ತಾಳಿದ್ದು ನಾಲ್ಕು ದಿನಗಳ ನಂತರವೂ ಮುಂದುವರಿದಿದೆ ಎಂದು ಅಧಿಕಾರಿಗಳು (ಶನಿವಾರ ಜುಲೈ 1) ಹೇಳಿದ್ದಾರೆ.
ಮುಸ್ಲಿಂ ಸಮುದಾಯದ ಉದ್ರಿಕ್ತರ ಗುಂಪು ಶುಕ್ರವಾರ ದೇಶದ ಬೀದಿ ಬೀದಿಗಳಲ್ಲಿ ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿದು ಹಾಕಿ, ವಾಹನಗಳಿಗೆ ಹಾಗೂ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.
ಶಾಂತಿ ಮರುಸ್ಥಾಪಿಸಲು ಅಧ್ಯಕ್ಷ ಎಮಾನ್ಯುಯಲ್ ಮ್ಯಾಕ್ರಾನ್ ಸರ್ಕಾರ ಹರಸಾಹಸ ಪಡುತ್ತಿದ್ದು ಫ್ರಾನ್ಸ್ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ಮುಂದಿನ ಕೆಲವು ಗಂಟೆಗಳು ನಿರ್ಣಾಯಕ ಎಂದು ಸರ್ಕಾರ ಹೇಳಿದ್ದು ಹಿಂಸಾಚಾರ ತಡೆಯಲು ಸುಮಾರು 45 ಸಾವಿರ ಪೊಲೀಸರನ್ನು ನಿಯೋಜಿಸಿದೆ.
ಫ್ರಾನ್ಸ್ ದೇಶದಲ್ಲಿ ಉದ್ರಿಕ್ತರು ಸಿಕ್ಕ ಸಿಕ್ಕ ವಾಹನಗಳು ಮತ್ತು ಸರ್ಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚಿ ಧ್ವಂಸಗೊಳಿಸಿದ್ದಾರೆ. ಪ್ಯಾರಿಸ್ ಸಹಿತ ಹಲವು ನಗರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇನ್ನೂ ಗಲಭೆಗಳು ನಿಯಂತ್ರಣಕ್ಕೆ ಬಂದಿಲ್ಲ ಎಂದು ವರದಿಯಾಗಿದೆ.
ಪ್ರತಿಭಟನಾಕಾರರ ಆಕ್ರೋಶಕ್ಕೆ 2000ಕ್ಕೂ ಹೆಚ್ಚು ಕಾರುಗಳು ಬೆಂಕಿಗೆ ಆಹುತಿಯಾಗಿವೆ. 500 ಕಟ್ಟಡಗಳು ಧ್ವಂಸಗೊಂಡಿವೆ. ಪೊಲೀಸರು 800ಕ್ಕೂ ಹೆಚ್ಚು ಗಲಭೆಕೋರರನ್ನು ಬಂಧಿಸಿದ್ದರೂ ಪರಿಸ್ಥಿತಿ ಹತೋಟಿಗೆ ಬಂದಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬಾಲಕನಿಗೆ ಗುಂಡು ಹಾರಿಸಿದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ತನಿಖೆಗೆ ಸರ್ಕಾರ ಆದೇಶಿಸಿದೆ.
“ಬಾಲಕನ ಸಾವಿಗೆ ಉದ್ರಿಕ್ತರ ಹಿಂಸಾಚಾರ ಸ್ವೀಕಾರಾರ್ಹವಲ್ಲದ ನಡವಳಿಕೆ” ಎಂದು ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುಯೆಲ್ ಮ್ಯಾಕ್ರನ್ ಹೇಳಿದ್ದಾರೆ ಎಂದು ವರದಿಯಾಗಿದೆ.
ಅಲ್ಜೇರಿಯನ್ ಮೂಲದ 17 ವರ್ಷದ ಬಾಲಕ ನಾಹೇಲ್ ಎಂ. ಎಂಬಾತ ಮಂಗಳವಾರ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಪೊಲೀಸರು ಆತನಿಗೆ ಗುಂಡು ಹಾರಿಸಿದ್ದರು. ಇದರಿಂದ ಆತ ಮೃತಪಟ್ಟಿದ್ದ. ಕಾರು ಚಲಾಯಿಸುವಾಗ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಬಾಲಕನನ್ನು ಕಾರಿನಿಂದ ಇಳಿಸಲು ಪೊಲೀಸರು ಪ್ರಯತ್ನಿಸಿದ್ದರು.
ಫ್ರಾನ್ಸ್ ದೇಶದಲ್ಲಿ ವಾಹನ ಚಲಾಯಿಸಲು ಪರವಾನಗಿ ಹೊಂದುವಷ್ಟು ಆತನಿಗೆ ವಯಸ್ಸಾಗಿರಲಿಲ್ಲ. ಸಂಚಾರ ದೀಪದ ಅಡಿ ಮರ್ಸಿಡಿಸ್ ಕಾರು ನಿಲ್ಲಿಸಬೇಕಿತ್ತು. ಕಾರು ನಿಲ್ಲಿಸುವಂತೆ ಪೊಲೀಸರು ಸೂಚಿಸಿದ್ದರು. ಆದರೆ ಬಂದೂಕು ತೋರಿಸಿದರೂ ಬಾಲಕ ಕಾರು ನಿಲ್ಲಿಸಿ ಇಳಿಯಲಿಲ್ಲ. ಇದರಿಂದ ಪೊಲೀಸರು ಗುಂಡು ಹಾರಿಸಿದರು.
ಗುಂಡು ಬಾಲಕನ ಕೈ ಹಾಗೂ ಎದೆಗೆ ಹೊಕ್ಕಿತು. ಆತನಿಗೆ ಸ್ಥಳದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಆದರೆ ಬಾಲಕ ಮೃತಪಟ್ಟ.
ಈ ಸುದ್ದಿ ಓದಿದ್ದೀರಾ? ಪ್ರಧಾನಿಯಾಗಿ ನರೇಂದ್ರ ಮೋದಿ ಒಂಬತ್ತು ವರ್ಷದಲ್ಲಿ ಸಾಧಿಸಿದ್ದೇನು? ಭಾಗ-2
ಸಂಚಾರ ಪೊಲೀಸರು ತಪಾಸಣೆ ವೇಳೆ ಬಾಲಕನ ಮೇಲೆ ಗುಂಡು ಹಾರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಮಂಗಳವಾರ ರಾತ್ರಿಯಿಂದ ಪ್ರತಿಭಟನೆ ಭುಗಿಲೆದ್ದಿದೆ.
ಫ್ರಾನ್ಸ್ ದೇಶದಲ್ಲಿ 2017ರಲ್ಲಿ ಪೊಲೀಸ್ ಕಾಯಿದೆಗೆ ತಿದ್ದುಪಡಿ ತಂದು ಐದು ಗಂಭೀರ ಬಗೆಯ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಪೊಲೀಸರು ವಾಹನ ಸವಾರರ ಮೇಲೆ ಗುಂಡು ಹಾರಿಸುವ ಅವಕಾಶ ನೀಡಲಾಗಿದೆ. ಈ ಕಾಯಿದೆಯನ್ನು ಜನರು ಮೊದಲಿನಿಂದಲೂ ವಿರೋಧಿಸುತ್ತಿದ್ದರು.