ವಿಶ್ವ ಪುಸ್ತಕ ದಿನದಂದು (ಏಪ್ರಿಲ್ 23) ಕರ್ನಾಟಕ ಪುಸ್ತಕ ಮಾರಾಟಗಾರರು, ಪ್ರಕಾಶಕರು ಹಾಗೂ ಲೇಖಕರ ಸಂಘಕ್ಕೆ ಚಾಲನೆ ನೀಡಲಾಗಿದೆ. ಜೊತೆಗೆ ವಿಶೇಷ ಉಪನ್ಯಾಸವೂ ನಡೆದಿದೆ.
ಬುಧವಾರ ಸಂಜೆ 5 ಗಂಟೆಗೆ ಬೆಂಗಳೂರು ನಗರದ ಶೇಷಾದ್ರಿಪುರದಲ್ಲಿರುವ ಚಿತ್ರಕಲಾ ಪರಿಷತ್‌ನ ದೇವರಾಜ ಅರಸು ಗ್ಯಾಲರಿಯಲ್ಲಿ ನೂತನ ಸಂಘಕ್ಕೆ ಚಾಲನೆ ನೀಡಲಾಗಿದೆ. ಜೊತೆಗೆ ಅಂಬೇಡ್ಕರ್ ಜಯಂತಿ, ವಿಶ್ವ ಪುಸ್ತಕ ದಿನಾಚರಣೆ, ವಿಶೇಷ ಉಪನ್ಯಾಸ ನಡೆಸಲಾಗಿದೆ. ‘ಸಮಕಾಲೀನ ಸಂದರ್ಭದಲ್ಲಿ ಪುಸ್ತಕಗಳು’ ವಿಷಯದಲ್ಲಿ ಸಾಹಿತಿ, ಚಿಂತಕ ರಹಮತ್ ತರೀಕೆರೆ ಅವರು ಉಪನ್ಯಾಸ ನೀಡಿದರು.
ಇದನ್ನು ಓದಿದ್ದೀರಾ? ವಿಶ್ವ ಪುಸ್ತಕ ದಿನದಂದು ಕರ್ನಾಟಕ ಪುಸ್ತಕ ಮಾರಾಟಗಾರರು, ಪ್ರಕಾಶಕರು ಹಾಗೂ ಲೇಖಕರ ಸಂಘಕ್ಕೆ ಚಾಲನೆ
“ಪ್ರಸ್ತುತ ತಾಳ್ಮೆಯೇ ಇಲ್ಲದ ಯುವ ಸಮುದಾಯವಿದೆ. ಅವರು ದೊಡ್ಡ ಕೃತಿಗಳನ್ನು ಓದುತ್ತಾರಾ ಎಂಬುದು ಸಂಶಯ. ಡಿಜಿಟಲ್‌ನಲ್ಲಾದರೂ ಓದುವಂತಾಗಬೇಕು. ಪುಸ್ತಕ ಸಂಸ್ಕೃತಿ ನಶಿಸಿ ಹೋದರೂ ಓದುವ ಸಂಸ್ಕೃತಿ ಕೊನೆಯಾಗಬಾರದು ಎಂದು ರಹಮತ್ ತರೀಕೆರೆ ಹೇಳಿದರು.

“ವ್ಯಾಪಾರದ ಉದ್ದೇಶದಿಂದಲೇ ಪುಸ್ತಕ ಉತ್ಪಾದಿಸುವ ವರ್ಗವೊಂದಿದೆ. ರಾಜಕೀಯಕ್ಕಾಗಿ ಇತಿಹಾಸವನ್ನೇ ತಿರುಚಿ ಬರೆಯುವ ವರ್ಗವೂ ದೊಡ್ಡದಿದೆ. ಆದರೆ ಜನರ ಒಳಿತಿಗಾಗಿ ಕೃತಿ ಪ್ರಕಟಿಸಿ ಸಂವೇದನಾಶೀಲ ನಾಗರಿಕರನ್ನು ಸೃಷ್ಟಿಸುವ, ರಾಜಕೀಯ ಪ್ರಜ್ಞೆಯನ್ನು ಮೂಡಿಸುವ ಮೂರನೇ ವರ್ಗ ಬೇಕಾಗಿದೆ” ಎಂದು ಅಭಿಪ್ರಾಯಿಸಿದರು.

ಸಂಘದ ಲಾಂಛನ ಬಿಡುಗಡೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತೆ, ಪ್ರಕಾಶಕರು ಆರ್ ಪೂರ್ಣಿಮಾ ಆಗಮಿಸಿದ್ದರು. ಹೋರಾಟಗಾರ ಮಾವಳ್ಳಿ ಶಂಕರ್ ಅವರು ಅಧ್ಯಕ್ಷತೆ ವಹಿಸಿದ್ದರು.
