ಪುಸ್ತಕ ಓದುವ ಹವ್ಯಾಸದಿಂದ ಧನಾತ್ಮಕ ಚಿಂತನೆ ಬೆಳೆಯಲು ಸಾಧ್ಯ ಎಂದು ನಾಲಂದಾ ಪಿಯು ಕಾಲೇಜು ಪ್ರಾಚಾರ್ಯ ಡಾ.ಮನ್ಮತ ಡೋಳೆ ಹೇಳಿದರು.
ಔರಾದ್ ಪಟ್ಟಣದ ಪತ್ರಿಸ್ವಾಮಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿರುವ ವಿಶ್ವ ಪುಸ್ತಕ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಪುಸ್ತಕ ಓದು ಜ್ಞಾನ, ಕೌಶಲ್ಯ ಮತ್ತು ವಿಮರ್ಶಾತ್ಮಕ ಗುಣಗಳು ವೃದ್ಧಿಸಿ ವ್ಯಕ್ತಿತ್ವ ವಿಕಸನ ಸದೃಢಗೊಳ್ಳುತ್ತದೆ’ ಎಂದರು.
ನಿವೃತ್ತ ಉಪನ್ಯಾಸಕ ಕಲ್ಯಾಣರಾವ ಶೆಂಬೆಳ್ಳೆ ಮಾತನಾಡಿ, ‘ಪುಸ್ತಕ ಯಾವತ್ತಿಗೂ ವಾಸ್ತವ ಸತ್ಯವನ್ನು ತಿಳಿಸುತ್ತವೆ. ಯುವ ಸಮೂಹ ಮೊಬೈಲ್ ವ್ಯಾಮೋಹ ಬಿಟ್ಟು ಪುಸ್ತಕ ಓದುವ ಸಂಸ್ಕೃತಿ ರೂಢಿಸಿಕೊಳ್ಳಬೇಕಿದೆ’ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ಅಧ್ಯಕ್ಷ ಬಿ.ಎಂ.ಅಮರವಾಡಿ, ‘ವಿಶ್ವ ಪುಸ್ತಕ ದಿನಾಚರಣೆ ಹಿನ್ನೆಲೆ ಮತ್ತು ಮಹತ್ವ ಕುರಿತು ತಿಳಿಸಿದ ಅವರು ಪುಸ್ತಕಗಳ ಓದುವಿಕೆ ಸುಂದರ ಬದುಕು ರೂಪಿಸಬಲ್ಲವು ಎಂಬುದಕ್ಕೆ ಹಲವು ನಿದರ್ಶನಗಳಿವೆ’ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪುಸ್ತಕ ಓದುವ ಸಂಸ್ಕೃತಿ ಜೀವಂತವಾಗಿಟ್ಟ ಪುಸ್ತಕ ಪ್ರೇಮಿ ವಿಶ್ವನಾಥ ಕನಕೆ ಅವರಿಗೆ ತಾಲೂಕು ಕಸಾಪ ವತಿಯಿಂದ ವಿಶೇಷ ಸನ್ಮಾನ ಮಾಡಲಾಯಿತು. ಅಲ್ಲದೇ ಕಾಲೇಜಿನ ಕೆಲ ಮಕ್ಕಳಿಗೆ ಪುಸ್ತಕಗಳು ನೀಡಿ ಸಾಹಿತ್ಯದ ಕುರಿತು ಆಸಕ್ತಿ ಹೆಚ್ಚಿಸಿಕೊಳ್ಳಲು ವಿನಂತಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಬೀದರ್ | ಪಿಯುಸಿ ಪರೀಕ್ಷೆ ಫಲಿತಾಂಶ : ಜಿಲ್ಲೆಯ 13 ಪಿಯು ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ
ಪತ್ರಿಸ್ವಾಮಿ ಕಾಲೇಜು ಪ್ರಾಚಾರ್ಯ ಎಸ್.ಕೆ ಅಖೀಲ್, ಉಪನ್ಯಾಸಕ ಅನೀಲ್, ಧನರಾಜ ಮಾನೆ, ಅಮೃತರಾವ ಬಿರಾದಾರ್, ಮಲ್ಲಿಕಾರ್ಜುನ ಟಂಕಸಾಲೆ, ಸಂದೀಪ ಪಾಟೀಲ್, ಅಮರ ಸ್ವಾಮಿ, ಆನಂದ ದ್ಯಾಡೆ, ಶಾಂತಾ ಕನಕೆ, ಕುಮಾರಿ ಸುಷ್ಮಾ ವಿಜಯಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.