ಜಿಲ್ಲೆಯಲ್ಲಿ ಇತ್ತೀಚೆಗೆ ನಕಲಿ ವೈದ್ಯರು, ಕ್ಲಿನಿಕ್‌ಗಳ ಹಾವಳಿ ಹೆಚ್ಚಾಗಿದ್ದು, ಇಂತಹ ನಕಲಿ ವೈದ್ಯರು ಸಾರ್ವಜನಿಕರ ಆರೋಗ್ಯಕ್ಕೆ ಆತಂಕಕಾರಿಯಾಗಿದ್ದಾರೆ. ನಕಲಿ ವೈದ್ಯರ ಹಾವಳಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವಲ್ಲಿ ಇಲಾಖೆ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಹೇಳಿದರು.
ಚಿಕ್ಕಬಳ್ಳಾಪುರ ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕೆ.ಪಿ.ಎಂ.ಇ ಹಾಗೂ ಪಿ.ಸಿ ಮತ್ತು ಪಿ.ಎನ್.ಡಿ.ಟಿ ನೋಂದಣಿ ಹಾಗೂ ಕುಂದುಕೊರತೆ ನಿವಾರಣಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿನ ಎಲ್ಲಾ ಖಾಸಗಿ ಆರೋಗ್ಯ ಸಂಸ್ಥೆಗಳು Karnataka Private Medical Establishment (KPME) ಅಧಿನಿಯಮದಡಿ ನೋಂದಣಿಯಾಗಿ ಕಾರ್ಯನಿರ್ವಹಿಸಬೇಕಾಗಿದೆ. ಆದರೆ ಜಿಲ್ಲೆಯಲ್ಲಿ ಇತ್ತೀಚೆಗೆ ನಕಲಿ ವೈದ್ಯರು ಹಾಗೂ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿರುವುದು ತಿಳಿದುಬಂದಿದ್ದು, ಖಚಿತ ಮಾಹಿತಿಯ ಮೇರೆಗೆ ಅನಿರೀಕ್ಷಿತ ದಾಳಿ ನಡೆಸಲಾಗಿದೆ. ಗೌರಿಬಿದನೂರು ಮತ್ತು ಚಿಂತಾಮಣಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿನ 7 ನಕಲಿ ಕ್ಲಿನಿಕ್‌ಗಳನ್ನು ಸೀಜ್ ಮಾಡಿ ಬಂದ್ ಮಾಡಲಾಗಿದೆ ಎಂದು ತಿಳಿಸಿದರು.
ಸೂಕ್ತ ವೈದ್ಯಕೀಯ ವಿದ್ಯಾರ್ಹತೆ ಹೊಂದಿಲ್ಲದಿದ್ದರೂ ಕ್ಲಿನಿಕ್‌ಗಳನ್ನು ತೆರೆದು ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ಚಿಕಿತ್ಸೆ ನೀಡುತ್ತಿದ್ದ ಗೌರಿಬಿದನೂರು ತಾಲ್ಲೂಕಿನ ನಾಗಭೂಷಣ್.ಎ, ಶ್ರೀನಿವಾಸಚಾರಿ, ಸೈಫುಲ್ಲಾ, ರಾಮಕೃಷ್ಣರೆಡ್ಡಿ, ಮತ್ತು ಫಕೃದ್ಧಿನ್ ಹಾಗೂ ಚಿಂತಾಮಣಿ ತಾಲ್ಲೂಕಿನ ಮುನೀರ್ ಮತ್ತು ನಾರಾಯಣರೆಡ್ಡಿ.ಬಿ ಎಂಬುವವರಿಗೆ KPME ಅಧಿನಿಯಮದಡಿ ರೂ. 50,000/-ಗಳವರೆಗೆ ದಂಡವನ್ನು ವಿಧಿಸಲಾಗಿರುತ್ತದೆ ಎಂದು ಮಾಹಿತಿ ನೀಡದರು.
ಈ ರೀತಿಯ ದಾಳಿ ಕಾರ್ಯವನ್ನು ಮುಂದಿನ ದಿಗಳಲ್ಲೂ ಮುಂದುವರಿಸಬೇಕು. ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮವನ್ನು ಜರುಗಿಸಿ. ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವಲ್ಲಿ ಇಲಾಖೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.
ಈ ಸಂರ್ದಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್ ಮಹೇಶ್ ಕುಮಾರ್, ಜಿಲ್ಲಾ ಅಯುಷ್ ಅಧಿಕಾರಿ ತಬೀಬಾ ಬಾನು ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.