- ಸಾರ್ವಜನಿಕರ ಅಭಿಪ್ರಾಯ ಪಡೆಯುವ ಉದ್ದೇಶದಿಂದ ‘ಬ್ರ್ಯಾಂಡ್ ಬೆಂಗಳೂರು’ ಪೋರ್ಟಲ್ ಆರಂಭ
- ನಾಗರಿಕರಿಂದ ನಿರೀಕ್ಷೆಗೂ ಮೀರಿ ಸಲಹೆಗಳು ಬರುತ್ತಿರುವ ಹಿನ್ನೆಲೆ, ಅವಧಿ ವಿಸ್ತರಣೆ ಮಾಡಿದ ಸರ್ಕಾರ
ರಾಜಧಾನಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆರಂಭ ಮಾಡಿರುವ ‘ಬ್ರ್ಯಾಂಡ್ ಬೆಂಗಳೂರು’ ಅಭಿಯಾನಕ್ಕೆ ಕಳೆದ ಹತ್ತು ದಿನಗಳಲ್ಲಿ ಸಾರ್ವಜನಿಕರಿಂದ ಬರೋಬ್ಬರಿ 20 ಸಾವಿರಕ್ಕೂ ಅಧಿಕ ಸಲಹೆಗಳು ಬಂದಿವೆ. ನಾಗರಿಕರಿಂದ ಸಲಹೆಗಳನ್ನು ಪಡೆಯುವ ಅವಧಿಯನ್ನು ಜೂನ್ 30 ರಿಂದ ಜುಲೈ 15 ರವರೆಗೆ ವಿಸ್ತರಿಸಲಾಗಿದೆ.
ಬೆಂಗಳೂರು ನಗರ ಸಮಗ್ರ ಅಭಿವೃದ್ಧಿ ಹಾಗೂ ಬ್ರ್ಯಾಂಡ್ ಬೆಂಗಳೂರು ಮಾಡುವ ಉದ್ದೇಶದಿಂದ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರು ಬ್ರ್ಯಾಂಡ್ ಬೆಂಗಳೂರು ಅಭಿಯಾನ ಪ್ರಾರಂಭಿಸಿ, ಇದರ ನೇತೃತ್ವ ವಹಿಸಿದ್ದರು.
ಡಿ ಕೆ ಶಿವಕುಮಾರ್ ಅವರು ಸರ್ವಪಕ್ಷ ಶಾಸಕರ ಜೊತೆ ಹಾಗೂ ನಾನಾ ಕ್ಷೇತ್ರಗಳ ಗಣ್ಯರ ಜೊತೆ ಸಭೆ ನಡೆಸಿ ಸಲಹೆಗಳನ್ನು ಪಡೆದಿದ್ದಾರೆ. ಇದರ ಜತೆಗೆ ಸಾರ್ವಜನಿಕರ ಅಭಿಪ್ರಾಯ ಪಡೆಯುವ ಉದ್ದೇಶದಿಂದ ‘ಬ್ರ್ಯಾಂಡ್ ಬೆಂಗಳೂರು’ ಪೋರ್ಟಲ್ ಆರಂಭಿಸಿದ್ದರು. ನಾಗರಿಕರಿಗೆ ಜೂ.30ರವರೆಗೆ ಸಲಹೆ ಸಲ್ಲಿಸುವುದಕ್ಕೆ ಅವಕಾಶ ನೀಡಿದ್ದರು. ಇದೀಗ ಈ ಅವಧಿಯನ್ನು ಜುಲೈ 15ರವರೆಗೆ ವಿಸ್ತರಿಸಲಾಗಿದೆ.
ಸಂಚಾರಯುಕ್ತ ಬೆಂಗಳೂರು, ಹಸಿರು ಬೆಂಗಳೂರು, ಸ್ವಚ್ಛ ಬೆಂಗಳೂರು, ಜನಹಿತ ಬೆಂಗಳೂರು, ಆರೋಗ್ಯಕರ ಬೆಂಗಳೂರು, ಟೆಕ್ ಬೆಂಗಳೂರು ಹಾಗೂ ಜಲಸುರಕ್ಷಾ ಬೆಂಗಳೂರು ಕುರಿತು ನಾಗರಿಕರಿಂದ ಬೆಂಗಳೂರಿನ ಅಭಿವೃದ್ಧಿಗಾಗಿ ಏಳು ವಿಚಾರಗಳ ಬಗ್ಗೆ ಅಭಿಪ್ರಾಯ ಮತ್ತು ಸಲಹೆ ಪಡೆಯುವ ಸಲುವಾಗಿ ಜೂನ್ 21ರಂದು ಪ್ರತ್ಯೇಕ ವೆಬ್ ಫೋರ್ಟಲ್ www.brandbengaluru.karnataka.gov.in ಬಿಡುಗಡೆಗೊಳಿಸಿದ್ದರು.
ಜೂನ್ 30ರವರೆಗೆ ನಾಗರಿಕರು ಸಲಹೆಗಳನ್ನು ನೀಡುವಂತೆ ನಾಗರಿಕರಲ್ಲಿ ಮನವಿ ಮಾಡಲಾಗಿತ್ತು. ನಾಗರಿಕರಿಂದ ನಿರೀಕ್ಷೆಗೂ ಮೀರಿ ಸಲಹೆಗಳು ಬರುತ್ತಿರುವ ಹಿನ್ನೆಲೆಯಲ್ಲಿ, ಬೆಂಗಳೂರು ಸಮಗ್ರ ಅಭಿವೃದ್ಧಿಗೆ ನಾಗರಿಕರು ನೀಡುವ ಸಲಹೆಗಳ ಸಮೀಕ್ಷೆಯ ಅವಧಿಯನ್ನು ವಿಸ್ತರಿಸಲಾಗಿದೆ.
ಎಲ್ಲ ನಾಗರಿಕರು ಈ ಸದವಕಾಶವನ್ನು ಉಪಯೋಗಿಸಿಕೊಂಡು #BrandBengaluru, #BetterBengaluru ಸಮೀಕ್ಷೆಯಲ್ಲಿ ಪಾಲ್ಗೊಂಡು ಇನ್ನೂ ಹೆಚ್ಚು-ಹೆಚ್ಚು ಸಲಹೆಗಳನ್ನು ನೀಡುವ ಮೂಲಕ ಬೆಂಗಳೂರು ನಗರ ಸಮಗ್ರ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ವಿನಂತಿಸಿದೆ.
ಈ ಸುದ್ದಿ ಓದಿದ್ದೀರಾ? ಬಿಎಂಟಿಸಿ | ವಿದ್ಯಾರ್ಥಿಗಳಿಗೆ ಜುಲೈ 15ರವರೆಗೆ ಬಸ್‌ನಲ್ಲಿ ಪ್ರಯಾಣಿಸಲು ಅವಕಾಶ
ನಾಗರಿಕರು ವೆಬ್ ಪೋರ್ಟಲ್ www.brandbengaluru.karnataka.gov.in ಮೂಲಕ ಮಾತ್ರವಲ್ಲದೆ ವ್ಯಾಟ್ಸ್ಆಪ್ ಸಂಖ್ಯೆ: 9480685700 ಮೂಲಕವೂ ಸಲಹೆಗಳನ್ನು ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಟೋಲ್ ಫ್ರೀ ಸಂಖ್ಯೆ 1533ಗೆ ಕರೆಮಾಡಬಹುದಾಗಿದೆ.