ಕಾಶ್ಮೀರದ ಪಹಲ್ಗಾಮ್‍ನಲ್ಲಿ ನಡೆದ ಉಗ್ರರ ದಾಳಿಗೆ ಬಲಿಯಾದ ಸಂತ್ರಸ್ತರ ರಕ್ಷಣೆಗೆ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೋಗಿದ್ದು, ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ಶಾ ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಜೊತೆಗೆ ಮಾತನಾಡಿ, ರಕ್ಷಣಾ ಕಾರ್ಯದ ಬಗ್ಗೆ ವಿವರಣೆ ನೀಡಿದ್ದಾರೆ.
ಉಗ್ರರ ದಾಳಿಯಲ್ಲಿ ಮೃತರಾದವರ ಪಾರ್ಥಿವ ಶರೀರವನ್ನು ಶ್ರೀನಗರದಲ್ಲಿ ಇರಿಸಲಾಗಿದ್ದು, ಮೃತದೇಹ ಗುರುತಿಸಲು ಸಂಬಂಧಿಕರಿಗೆ ಸಹಾಯ ಮಾಡಿದ್ದಾರೆ. ಕರ್ನಾಟಕದ ಪ್ರವಾಸಿಗರ ಪಾರ್ಥಿವ ಶರೀರಗಳನ್ನು ರಾಜ್ಯಕ್ಕೆ ತರಲು ಹಾಗೂ ಅವರ ಕುಟುಂಬಗಳನ್ನು ಸಹ ನಾಡಿಗೆ ಕರೆತರುವ ಮತ್ತು ಕಾಶ್ಮೀರದ ವಿವಿಧೆಡೆ ಸಿಲುಕಿರುವ ರಾಜ್ಯದ ಪ್ರವಾಸಿಗರನ್ನು ಸಹ ಮರಳಿ ನಾಡಿಗೆ ಕರೆತರುವ ವ್ಯವಸ್ಥೆಗಳನ್ನು ರಾಜ್ಯ ಸರ್ಕಾರದ ವತಿಯಿಂದ ವ್ಯವಸ್ಥೆ ನಡೆಯುತ್ತಿದೆ.
ದಾಳಿಯಲ್ಲಿ ಬಲಿಯಾದ ಶಿವಮೊಗ್ಗದ ಮಂಜುನಾಥ್ ಪತ್ನಿ ಪಲ್ಲವಿ ಹಾಗೂ ಪುತ್ರನನ್ನು ಮತ್ತು ಬೆಂಗಳೂರಿನ ಭರತ್ ಭೂಷಣ್ ಪತ್ನಿ ಸುಜಾತ ಅವರನ್ನು ಭೇಟಿ ಮಾಡಿ ಸಂತೋಷ್ ಲಾಡ್ ಸಂತೈಸಿದ್ದಾರೆ. ಮೃತ ಮಂಜುನಾಥ್ ಪಾರ್ಥಿವ ಶರೀರವನ್ನು ನೇರವಾಗಿ ಶಿವಮೊಗ್ಗಕ್ಕೆ ಹಾಗೂ ಭರತ್ ಭೂಷಣ್ ಪಾರ್ಥಿವ ಶರೀರವನ್ನು, ಮಧುಸೂದನ್ ರಾವ್ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ರವಾನಿಸುವ ವ್ಯವಸ್ಥೆ ಮಾಡಿದ್ದಾರೆ. ದಾಳಿಯಲ್ಲಿ ಇಬ್ಬರು ವಿದೇಶಿಗರು ಸೇರಿದಂತೆ ಸುಮಾರು 26 ಪ್ರವಾಸಿಗರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ದಾಳಿಯಲ್ಲಿ ಹಲವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದು, ಅವರನ್ನು ಸಹ ರಾಜ್ಯಕ್ಕೆ ಕರೆತರುವ ವ್ಯವಸ್ಥೆ ನಡೆಯುತ್ತಿದೆ. ಕನ್ನಡಿಗರನ್ನು ಸುರಕ್ಷಿತವಾಗಿ ನಾಡಿಗೆ ಕರೆತರಲು ವ್ಯವಸ್ಥೆಯಾಗಿದೆ ಎಂದು ಸಚಿವ ಸಂತೋಷ್ ಲಾಡ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.