ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಂವಿಧಾನವನ್ನು ಮರೆತರೆ ಭಾರತ ದೇಶಕ್ಕೆ ಭವಿಷ್ಯವಿಲ್ಲ ಎಂದು ಕಲಬುರಗಿ ಕೇಂದ್ರಿಯ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ್ ಹೇಳಿದರು.
ಔರಾದ್ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಡೆದ ಡಾ.ಬಿ.ಆರ್ ಅಂಬೇಡ್ಕರ್ ಅವರ 134ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ʼ75 ವರ್ಷಗಳು ಕಳೆದರೂ ಸಂವಿಧಾನ ಮತ್ತು ಅಂಬೇಡ್ಕರ್ ಬಗ್ಗೆ ಅನುಮಾನಗಳಿರುವುದು ವಿಪರ್ಯಾಸʼ ಎಂದು ಬೇಸರ ವ್ಯಕ್ತಪಡಿಸಿದರು.
ʼಎಲ್ಲ ಜಾತಿ, ವರ್ಗ ಮತ್ತು ಧರ್ಮದ ಜನ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನದ ಋಣದ ಮಕ್ಕಳು ಎಂಬುದನ್ನು ಮರೆಯಕೂಡದು. ಡಾ.ಅಂಬೇಡ್ಕರ್ ಅವರು ಕೇವಲ ದಲಿತರ ನಾಯಕ, ದಮನಿತರ ನಾಯಕ, ಅಸ್ಪ್ರಶ್ಯರ ನಾಯಕ ಎಂದು ನೋಡುತ್ತಿರುವುದು ದುರಂತವಾಗಿದೆʼ ಎಂದರು.
ʼಆತ್ಮವಂಚನೆಯಿಂದ ಬದುಕುತ್ತಿರುವ ನಾವುಗಳು, ಅಂಬೇಡ್ಕರ್ ಅವರನ್ನು ಏಪ್ರಿಲ್ 14, ಡಿಸೆಂಬರ್ 6ಕ್ಕೆ ಸೀಮಿತಗೊಳಿಸುತ್ತಿದ್ದು, ನಿರ್ದಿಷ್ಟ ವ್ಯಾಪ್ತಿಯನ್ನು ಮೀರಿ ಅಂಬೇಡ್ಕರ್ ಅವರನ್ನು ನೋಡಬೇಕಿದೆ. ಸಾಮಾಜಿಕ ನ್ಯಾಯದಡಿ ಪ್ರತಿಯೊಬ್ಬರಿಗೂ ಅವಕಾಶ ಕಲ್ಪಿಸಿದ ಬಾಬಾ ಸಾಹೇಬರು ಎಲ್ಲ ಸಮುದಾಯದ ನಾಯಕ ಎಂಬುದು ಮೊದಲು ಮನಗಾಣಬೇಕಿದೆ. ಮಹಿಳಾ, ರೈತವಾದಿ, ಅರ್ಥಶಾಸ್ತ್ರಜ್ಞ ಅಂಬೇಡ್ಕರ್ ಅವರು ಈ ಜಗತ್ತು ಕಂಡ ಶ್ರೇಷ್ಠ ನಾಯಕʼ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಸಂಸದ ಸಾಗರ ಖಂಡ್ರೆ ಮಾತನಾಡಿ, ʼಡಾ. ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದ ನಮ್ಮೆಲ್ಲರಿಗೂ ಮೂಲಭೂತ ಹಕ್ಕು ದೊರೆತಿವೆ. ಅನೇಕರಿಗೆ ನಮ್ಮ ಮೂಲಭೂತ ಹಕ್ಕುಗಳ ಬಗ್ಗೆ ಅರಿವು ಇಲ್ಲ. ನಾವು ಸಂವಿಧಾನ ಓದಿದಾಗ ಮಾತ್ರವೇ ನಮಗೆ ಕಾನೂನು ಮತ್ತು ನಮ್ಮ ಹಕ್ಕುಗಳ ಬಗ್ಗೆ ಹೆಚ್ಚಿನ ಜ್ಞಾನ ತಿಳಿದುಕೊಳ್ಳಲು ಸಾಧ್ಯ. ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದಲೇ ಅತ್ಯಂತ ಕಿರಿಯ ವಯಸ್ಸಿನವನಾದ ನಾನು ಸಂಸದನಾಗಲು ಸಾಧ್ಯವಾಗಿದೆʼ ಎಂದರು.
ಇದೇ ವೇಳೆ ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ಮಾಜಿ ಎಂಎಲ್ಸಿ ಕೆ. ಪುಂಡಲೀಕರಾವ್, ನೌಕರ ಸಂಘದ ಅಧ್ಯಕ್ಷ ಪಂಡರಿ ಆಡೆ, ಕಸಾಪ ಅಧ್ಯಕ್ಷ ಬಾಲಾಜಿ ಅಮರವಾಡಿ, ಸುನೀಲ ಕಸ್ತೂರೆ ಅವರಿಗೆ ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರತಿಭಾವಂತ ಮಕ್ಕಳಿಗೆ ಹಾಗೂ ವೈದ್ಯಕೀಯ, ಐಐಟಿ, ಜೆಇಇ ಶಿಕ್ಷಣ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಈ ಸುದ್ದಿ ಓದಿದ್ದೀರಾ? 2014ರಿಂದ ಈವರೆಗೆ ಬಿಜೆಪಿ ಆಡಳಿತಾವಧಿಯಲ್ಲಿ ನಡೆದ ಭಯೋತ್ಪಾದಕರ ದಾಳಿಗಳು!
ಭಂತೆ ಧಮ್ಮಾನಂದ, ತಹಸೀಲ್ದಾರ ಮಹೇಶ ಪಾಟೀಲ, ಉತ್ಸವ ಸಮಿತಿ ಅಧ್ಯಕ್ಷ ಸುನೀಲಕುಮಾರ ದೇಶಮುಖ, ಮುಖಂಡರಾದ ಡಾ. ಭೀಮಸೇನ ಶಿಂಧೆ ಮಾರುತಿ ಬೌದ್ಧೆ, ರಾಮಣ್ಣ ವಡೆಯರ, ಅಮರ ಜಾಧವ, ಖ್ಯಾತ ಗಾಯಕ ಅಜೇಯ ದೇಹಾಡೆ, ಝರೇಪ್ಪಾ ವರ್ಮಾ, ಸೂರ್ಯಕಾಂತ ಸಿಂಗೆ, ಚೇತನ ಕಪ್ಪೆಕೇರಿ, ಧನರಾಜ ಮುಸ್ತಾಪೂರೆ, ಶರಣಪ್ಪ ಪಾಟೀಲ, ಸೋಪಾನರಾವ ಡೋಂಗರೆ, ರಾಜಕುಮಾರ ಡೊಂಗರೆ, ಶಿವಕುಮಾರ ಕಾಂಬಳೆ, ಪ್ರಕಾಶ ಭಂಗಾರೆ, ರತ್ನದೀಪ ಕಸ್ತೂರೆ, ಸುನೀಲ ಮಿತ್ರಾ, ಲಕ್ಷಣ ತುರೆ, ತುಳಸಿರಾಮ ಬೇಂದ್ರೆ, ಚಂದ್ರಕಾಂತ ನಿರ್ಮಳೆ, ಆನಂದ ಕಾಂಬಳೆ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.