ಈ ದಿನ ಸಂಪಾದಕೀಯ | ಭಾಷಾ ವೈಷಮ್ಯ ಬಿತ್ತಿದ ಭಂಡರು, ಬಿತ್ತರಿಸಿದ ಬುದ್ಧಿಗೇಡಿಗಳು

Date:

Advertisements
ಕ್ಷುಲ್ಲಕ ಕಾರಣಕ್ಕೆ ಭಾಷಾ ವೈಷಮ್ಯ ಬಿತ್ತಿದ ಭಂಡರಿಗೆ ಹಾಗೂ ಕರ್ನಾಟಕದ ಮಾನವನ್ನು ರಾಷ್ಟ್ರಮಟ್ಟದಲ್ಲಿ ಹರಾಜು ಹಾಕಿದ ಮಾಧ್ಯಮಗಳ ಬುದ್ಧಿಗೇಡಿಗಳಿಗೆ ತಕ್ಕ ಪಾಠ ಕಲಿಸಬೇಕಾಗಿದೆ. 

ಇತ್ತೀಚೆಗೆ ಬೆಂಗಳೂರಿನ ಸಿ.ವಿ. ರಾಮನ್ ನಗರದಲ್ಲಿ ವಿಂಗ್ ಕಮಾಂಡರ್ ಮತ್ತು ಡೆಲಿವರಿ ಬಾಯ್ ನಡುವೆ ವಾಹನ ತಗುಲಿದ ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ, ಪೊಲೀಸ್‌ ಠಾಣೆ ಮೆಟ್ಟಿಲು ಹತ್ತಿತು. ಭಾಷಾ ವೈಷಮ್ಯಕ್ಕೆ ಕಾರಣವಾಯಿತು. ಕರ್ನಾಟಕದ ಮಾನವನ್ನು ರಾಷ್ಟ್ರಮಟ್ಟದಲ್ಲಿ ಹರಾಜು ಹಾಕಿತು. ಉತ್ತರ-ದಕ್ಷಿಣವೆಂದು ವಿಭಾಗಿಸಿ, ಒಕ್ಕೂಟ ವ್ಯವಸ್ಥೆಯವರೆಗೂ ಚರ್ಚೆ ಚಾಚಿಕೊಂಡಿತು.

ಇಷ್ಟೆಲ್ಲ ಆಗಿದ್ದು ಕೇವಲ ಒಂದು ವಿಡಿಯೋದಿಂದ. ಹೌದು, ಇದು ಕ್ಷಣಮಾತ್ರದಲ್ಲಿ ಸುಳ್ಳು ಊರಾಡಿಬರುವ ಸೋಷಿಯಲ್‌ ಮೀಡಿಯಾ ಕಾಲ. ಈ ‘ಸತ್ಯ’ ಬಲ್ಲ ವಿಂಗ್‌ ಕಮಾಂಡರ್‌, ಡೆಲಿವರಿ ಬಾಯ್‌ ಜೊತೆಗಿನ ಜಗಳವನ್ನು, ಘಟನೆ ಜರುಗಿದ ಕೆಲವೇ ಕ್ಷಣಗಳಲ್ಲಿ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದರು. ಮಾಡುವಾಗ ಅನಗತ್ಯವಾಗಿ ಕನ್ನಡ ಭಾಷೆಯನ್ನು ಎಳೆದು ತಂದಿದ್ದರು. ಕನ್ನಡಿಗರ ವಿರುದ್ಧ ಸುಳ್ಳು ಆರೋಪ ಮಾಡಿದ್ದರು.

ವಿಂಗ್ ಕಮಾಂಡರ್ ಪಶ್ಚಿಮ ಬಂಗಾಲದವರು. ಬೆಂಗಾಲಿ, ಇಂಗ್ಲಿಷ್‌ ಮತ್ತು ಹಿಂದಿ ಭಾಷೆ ಬಲ್ಲವರು. ಭಾವನಾತ್ಮಕ ಮಿಲಿಟರಿಯನ್ನು ಬೆನ್ನಿಗಿಟ್ಟುಕೊಂಡವರು. ಅವುಗಳ ಬಲದಿಂದ ಸುಲಭವಾಗಿ ಸಿಗುವ ಸೋಷಿಯಲ್ ಮೀಡಿಯಾವನ್ನು ದುರ್ಬಳಕೆ ಮಾಡಿಕೊಂಡಿದ್ದರು. ಈ ಕ್ಷಣಕ್ಕೆ ಬದುಕುವ ಈ ಕಾಲದ ಬುದ್ಧಿಗೇಡಿಗಳು- ರಾಷ್ಟ್ರೀಯ ಮಾಧ್ಯಮಗಳು- ಅಂತಹ ಸುದ್ದಿಗಳನ್ನು ಹೆಕ್ಕಿ ತೆಗೆದು ವೈರಲ್‌ ಮಾಡಿದರು. ಕರ್ನಾಟಕದ ಕನ್ನಡಿಗರಿಂದ ಆಗಬಾರದ್ದು ಆಗಿಹೋಗಿದೆ ಎಂದು ಇಡೀ ದೇಶವೇ ಮಾತನಾಡಿತು. ಕೆಲ ಕ್ಷಣಗಳಲ್ಲಿಯೇ ಕನ್ನಡಿಗರು, ಕರ್ನಾಟಕ ಖಳನಾಯಕನ ಪಟ್ಟ ಹೊತ್ತು ನಿಲ್ಲುವಂತಾಯಿತು.

Advertisements

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮತ್ತೆ ಅಬ್ಬರಿಸಿದ ಭಯೋತ್ಪಾದನೆ- ಮೋಶಾರತ್ತ ದಿಟ್ಟಿ ನೆಟ್ಟ ದೇಶ

ಅಸಲಿಗೆ ಆಗಿದ್ದೇನೆಂದರೆ, ಬಡಪಾಯಿ ಡೆಲಿವರಿ ಬಾಯ್‌ ಮೇಲೆ ಮಾರಣಾಂತಿಕ ಹಲ್ಲೆಯಾಗಿತ್ತು. ಅವರ ವಿರುದ್ಧವೇ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಯಾರದೋ ಮನೆಗೆ ಕೊಡಬೇಕಾಗಿದ್ದ ಡೆಲಿವರಿ ತಪ್ಪಿಹೋಗಿತ್ತು. ತನ್ನ ಮಾಲೀಕನಿಂದ ದಿನಗೂಲಿ ಕೆಲಸ ಕಳೆದುಕೊಳ್ಳುವ ಸೂಚನೆ ಸಿಕ್ಕಿತ್ತು.

ಅದೃಷ್ಟಕ್ಕೆ ಘಟನೆ ನಡೆದ ಸ್ಥಳದಲ್ಲಿ ಸಿಸಿಟಿವಿ ಕ್ಯಾಮರಾಗಳಿದ್ದವು, ಎಲ್ಲವೂ ದಾಖಲಾಗಿತ್ತು. ಅದರಲ್ಲಿ ವಿಂಗ್‌ ಕಮಾಂಡರ್‌ ‘ಪ್ರತಾಪ’ ಕಣ್ಣಿಗೆ ರಾಚುತಿತ್ತು. ಅದರ ಬಲದಿಂದ ಪೊಲೀಸ್‌ ಠಾಣೆಗೆ ತೆರಳಿದ ಡೆಲಿವರಿ ಬಾಯ್‌, ‘ನಾನು ಏರ್‌ಫೋರ್ಸ್‌ನಲ್ಲಿದ್ದೇನೆ ಎಂದು ಬೆದರಿಕೆ ಹಾಕಿದ್ದೂ ಅಲ್ಲದೆ, ಏಕಾಏಕಿ ಹಲ್ಲೆ ನಡೆಸಿ, ಕೆಳಕ್ಕೆ ಬೀಳಿಸಿ ಕತ್ತು ಹಿಸುಕಿ ಕೊಲೆಗೆ ಯತ್ನಿಸಿದರು. ನನ್ನ ಬೈಕ್‌ ಕೆಳಕ್ಕೆ ಬೀಳಿಸಿ ಕೀ ಕಸಿದರು. ಕೈ ಕಚ್ಚಿ ಗಾಯಗೊಳಿಸಿದರು’ ಎಂದು ದೂರು ನೀಡಿದರು.

ಆದರೆ ನಮ್ಮ ಪೊಲೀಸರು, ಹಲ್ಲೆಸಂಬಂಧ ಸಿಸಿಟಿವಿಯ ದೃಶ್ಯಗಳ ಸಾಕ್ಷ್ಯಗಳಿದ್ದರೂ ಎಫ್‌ಐಆರ್‌ನಲ್ಲಿ ವಿಂಗ್‌ ಕಮಾಂಡರ್ ಹೆಸರು ಕೈ ಬಿಟ್ಟು ಕಾರು ನಂಬರ್‌ ಹಾಗೂ ಚಾಲಕ ಎಂದಷ್ಟೇ ನಮೂದಿಸಿ, ಮಿಲಿಟರಿಗೆ ‘ಸೆಲ್ಯೂಟ್’ ಹೊಡೆದಿದ್ದರು. ಅದೃಷ್ಟಕ್ಕೆ ಸ್ಥಳೀಯರು, ಕನ್ನಡ ಸಂಘಟನೆಗಳ ಕಾರ್ಯಕರ್ತರು ಬಡವನ ಪರ ನಿಂತರು. ಪೊಲೀಸ್ ಠಾಣೆಯ ಮುಂದೆ ಧರಣಿ ಕೂತರು. ಅದಕ್ಕೆ ತಕ್ಕಂತೆ ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳು ಕನ್ನಡಿಗ ಡೆಲಿವರಿ ಬಾಯ್‌ ಬೆಂಬಲಕ್ಕೆ ಬಂದರು. ಕಡೆಗೂ ವಾಯುಸೇನೆ ವಿಂಗ್‌ ಕಮಾಂಡರ್‌ ಶಿಲಾದಿತ್ಯ ಬೋಸ್‌ ವಿರುದ್ಧ ಬೈಯಪ್ಪನಹಳ್ಳಿ ಠಾಣೆಯ ಪೊಲೀಸರು ಕೊಲೆ ಯತ್ನ ಸೇರಿದಂತೆ ವಿವಿಧ ಆರೋಪಗಳನ್ವಯ ಎಫ್‌ಐಆರ್‌ ದಾಖಲು ಮಾಡಿದರು.

ಆಗಿದ್ದಿಷ್ಟೇ, ಈ ಕ್ಷುಲ್ಲಕ ಬೀದಿ ಬಡಿದಾಟವನ್ನು ಭಾಷಾ ವೈಷಮ್ಯದತ್ತ ತಿರುಗಿಸಿ, ಕನ್ನಡನಾಡಿಗೆ ಮಸಿ ಬಳಿಯುವ ಪ್ರಯತ್ನ ಮಾಡಿದ್ದು ಅಕ್ಷಮ್ಯ ಅಪರಾಧ. ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಸಲ್ಲದ ಆರೋಪ ಮಾಡಿ ಕನ್ನಡಿಗರ ಸ್ವಾಭಿಮಾನ ಕೆಣಕುವ ಪ್ರಯತ್ನ ಮಾಡಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಕನ್ನಡಿಗನ ಮೇಲೆ ಹಲ್ಲೆ ನಡೆಸಿದ್ದೂ ಅಲ್ಲದೆ ಭಾಷೆಯ ವಿಷಬೀಜ ಬಿತ್ತಲು ಮುಂದಾದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಅದಕ್ಕಿಂತ ಹೆಚ್ಚಾಗಿ ಪೂರ್ವಾಪರ ಯೋಚಿಸದೆ; ಕನ್ನಡ, ಕನ್ನಡಿಗ, ಕರ್ನಾಟಕದ ಬಗ್ಗೆ ಪೂರ್ವಗ್ರಹಪೀಡಿತರಾಗಿರುವ ರಾಷ್ಟ್ರೀಯ ಮಾಧ್ಯಮಗಳನ್ನು ಜನ ತಿರಸ್ಕರಿಸಬೇಕು.  

ಮಿಲಿಟರಿಗೆ ಸೇರುವ ಯೋಧರಿಗೆ ನಾಗರಿಕರ ಜೊತೆಗೆ ಹೇಗೆ ನಡೆದುಕೊಳ್ಳಬೇಕು ಎಂದು ತರಬೇತಿ ಕೊಟ್ಟಿರುತ್ತಾರೆ. ಮಿಲಿಟರಿ ಸೇವೆಯಲ್ಲಿರುವ ಯೋಧರಿಗೆ ದೇಶದ ಜನರ ರಕ್ಷಣೆ ಮುಖ್ಯವಾಗಿರುತ್ತದೆ. ಅಂತಹವರೇ ಅಮಾನವೀಯವಾಗಿ ವರ್ತಿಸಿದರೆ, ಆ ತಕ್ಷಣವೇ ಮಿಲಿಟರಿ ಸೇವೆಯಿಂದ ಆತನನ್ನು ವಜಾ ಮಾಡಬೇಕು. ನಾಗರಿಕರು ಸೈನಿಕರಿಗೆ ಎಷ್ಟು ಗೌರವ ಕೊಡುತ್ತಾರೋ, ಅದರ ನೂರರಷ್ಟು ಗೌರವವನ್ನು ಸೈನಿಕರು ನಾಗರಿಕರಿಗೂ ಕೊಡಬೇಕು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಜಾತಿ-ಜನಿವಾರಕ್ಕೆ ಜೋತುಬಿದ್ದ ‘ಜಾತ್ಯತೀತ’ ಸರ್ಕಾರ

ಇನ್ನು ಭಾಷೆಯ ವಿಚಾರಕ್ಕೆ ಬರುವುದಾದರೆ, ಇಲ್ಲಿಯವರೆಗೆ ಭಾಷಾ ವೈಷಮ್ಯವನ್ನು ಯಾವತ್ತೂ, ಯಾವ ಕನ್ನಡಿಗನೂ ಬೆಳೆಸಿಕೊಂಡ ಉದಾಹರಣೆಗಳಿಲ್ಲ. ಗಡಿ ವಿವಾದ, ಜಲವಿವಾದಗಳಾದಾಗ ಅಕ್ಕಪಕ್ಕದ ರಾಜ್ಯಗಳಿಂದ ಬಂದು ಕರ್ನಾಟಕದಲ್ಲಿ ನೆಲೆ ನಿಂತವರ ನೆಮ್ಮದಿಗೆ ಭಂಗ ತಂದಿದ್ದಿಲ್ಲ. ಕನ್ನಡ ಅಸ್ಮಿತೆಗಾಗಿ ಕನ್ನಡಿಗರು ನಡೆಸುವ ಹೋರಾಟಗಳು ಅನ್ಯಭಾಷಿಕರನ್ನು ಗುರಿಯಾಗಿಸಿಕೊಂಡಿದ್ದು ಇಲ್ಲವೇ ಇಲ್ಲ. ಕನ್ನಡಿಗರು ಮಾತೃಭಾಷೆಯ ಅಭಿಮಾನಿಗಳೇ ಹೊರತು, ದುರಭಿಮಾನಿಗಳಲ್ಲ.

ದೇಶದ ನಾನಾ ಭಾಗಗಳಿಂದ ಬಂದವರಿಗೂ ಕರ್ನಾಟಕ ನೆಲೆಯೊದಗಿಸಿದೆ. ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ನಮ್ಮವರೆಂದೇ ಪ್ರೀತಿ ತೋರಿದೆ. ಕನ್ನಡಿಗರ ಹೃದಯ ವೈಶಾಲ್ಯದ ಕಾರಣಕ್ಕೆ ಹೊರ ರಾಜ್ಯಗಳ ಲಕ್ಷಾಂತರ ಜನ ಕರ್ನಾಟಕದಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ನಿವೃತ್ತರಿಗೆ, ಉದ್ಯಮಿಗಳಿಗೆ, ವಲಸೆ ಕಾರ್ಮಿಕರಿಗೆ, ಐಟಿ ವೃತ್ತಿಪರರಿಗೆ ಕರ್ನಾಟಕ ಎಂದಿಗೂ ಕೆಡುಕುಂಟುಮಾಡಿಲ್ಲ. ಇಲ್ಲಿನ ಹವಾಮಾನ, ಭದ್ರತೆ, ಸುರಕ್ಷತೆ, ಕನ್ನಡಿಗರ ಪ್ರೀತಿ, ವಿಶ್ವಾಸಕ್ಕೆ ಮನಸೋತ ಹೊರಗಿನವರು ಕನ್ನಡ ಕಲಿಯದಿದ್ದರೂ, ಕರ್ನಾಟಕವನ್ನು ದ್ವೇಷಿಸಿದ್ದಿಲ್ಲ.

ವಸ್ತುಸ್ಥಿತಿ ಹೀಗಿರುವಾಗ, ಕ್ಷುಲ್ಲಕ ಕಾರಣಕ್ಕೆ ಭಾಷಾ ವೈಷಮ್ಯ ಬಿತ್ತಿದ ಬಾಹುಬಲಿಯಂತಹ ಭಂಡರಿಗೆ ಹಾಗೂ ಕರ್ನಾಟಕದ ಮಾನವನ್ನು ರಾಷ್ಟ್ರಮಟ್ಟದಲ್ಲಿ ಹರಾಜು ಹಾಕಿದ ಮಾಧ್ಯಮಗಳ ಬುದ್ಧಿಗೇಡಿಗಳಿಗೆ ತಕ್ಕ ಪಾಠ ಕಲಿಸಬೇಕಾಗಿದೆ. ಹಾಗೆಯೇ ಕನ್ನಡದ ಅಸ್ತಿತ್ವಕ್ಕೆ ದೇಶ ಬೇಕಾಗಿಲ್ಲ, ಒಕ್ಕೂಟ ವ್ಯವಸ್ಥೆಗೆ ಕರ್ನಾಟಕ ಬೇಕು ಎನ್ನುವುದನ್ನು ಅರ್ಥ ಮಾಡಿಸಬೇಕಾದ ಅನಿವಾರ್ಯತೆಯೂ ಇದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X