ಬಂಡವಾಳಶಾಹಿ ಪ್ರಪಂಚದ ಬೆಂಬಲದೊಂದಿಗೆ ಪ್ಯಾಲೆಸ್ತೀನ್ ಗಾಝಾದಲ್ಲಿ ಇಂದು ನಿರಂತರವಾಗಿ ನರಮೇಧ ಹಾಗೂ ಸಾಮೂಹಿಕ ಕಗ್ಗೊಲೆ ನಡೆಯುತ್ತಿದೆ. ಭಾರತ ಸ್ವಾತಂತ್ರ್ಯ ಪೂರ್ವದಿಂದಲೂ ಪ್ಯಾಲೆಸ್ತೀನ್‌ಗೆ ಬೆಂಬಲವಾಗಿ ನಿಂತು, ಅದಕ್ಕೆ ನ್ಯಾಯ ಸಿಗಬೇಕೆಂಬ ನಿಲುವನ್ನು ಹೊಂದಿದೆ. ಇಂದಿಗೂ ನಮ್ಮ ದೇಶದ ಅಧಿಕೃತ ನೀತಿ ಅದೇ ಆಗಿದೆ. ಆದರೆ ಅದನ್ನು ಈಗಿನ ಸರಕಾರ ಪಾಲಿಸುತ್ತಿಲ್ಲ. ಇಸ್ರೇಲ್‌ಗೆ ಸಶಸ್ತ್ರವನ್ನು ಕೂಡ ನಮ್ಮ ದೇಶ ನೀಡುತ್ತಿದೆ. ಉನ್ನತ ಮೌಲ್ಯವನ್ನು ಎತ್ತಿ ಹಿಡಿದಿದ್ದ ಭಾರತ ಇಂದು ಯಾವ ಸ್ಥಿತಿಗೆ ಬಂದಿದೆ ಎಂಬುದನ್ನು ಯೋಚಿಸಬೇಕಾಗಿದೆ ಎಂದು ಕವಿ, ಸಾಹಿತಿ ರಘುನಂದನ ಹೇಳಿದ್ದಾರೆ.
ಉಡುಪಿ ಎಂಜಿಎಂ ಕಾಲೇಜಿನ ವತಿಯಿಂದ ಬುಧವಾರ ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿಸಲಾದ ಮುದ್ದಣ ಸಾಹಿತ್ಯೋತ್ಸವದಲ್ಲಿ ಅವರು ‘ತುಯ್ತವೆಲ್ಲ ನವ್ಯದತ್ತ: ಅಂದತ್ತರ ಉಯ್ಯಾಲೆ ಮತ್ತು ಅದರ ಸುತ್ತ’ ಎಂಬ ಕೃತಿಗೆ ವಿ.ಎಂ.ಇನಾಂದರ್ ವಿಮರ್ಶಾ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.

ನಮ್ಮ ದೇಶದಲ್ಲಿ ಸಂವಿಧಾನಬದ್ಧವಾಗಿ ಹಾಗೂ ಶಾಂತಿಯುತವಾಗಿ ಪ್ರತಿಭಟಿಸಿದ ಅನೇಕ ಧೀಮಂತರನ್ನು ಜೈಲಿಗೆ ದೂಡಲಾಗಿದೆ. ಇವರೇ ಈ ದೇಶದ ನಿಜವಾದ ದೇಶಪ್ರೇಮಿಗಳು. 2020ರಲ್ಲಿ ದೆಹಲಿ ಗಲಭೆಯನ್ನು ಹುಟ್ಟುಹಾಕಿದ ಕೆಲವರನ್ನು ಜೈಲಿಗೆ ಹಾಕಲಾಗಿದೆ. ಅವರ ಮೇಲೂ ದೇಶದ್ರೋಹದ ಕೇಸುಗಳನ್ನು ದಾಖಲಿಸಲಾಗಿದೆ. ಅದೇ ರೀತಿ ಅನೇಕ ಆದಿವಾಸಿಗಳು ಬಡವರು ಇಂದು ಜೈಲಿನಲ್ಲಿದ್ದಾರೆ ಎಂದು ಅವರು ಖೇಧ ವ್ಯಕ್ತಪಡಿಸಿದರು.
ಇನ್ನೋರ್ವ ಮುಖ ಅತಿಥಿಯಾಗಿ ಆಗಮಿಸಿದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಹಾಗೂ ಸಾಹಿತಿ ನರೇಂದ್ರ ರೈ ದೇರ್ಲ ‘ಯುವಜನತೆ ಮತ್ತು ಪರಿಸರ ಕಾಳಜಿ’ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ ವಹಿಸಿದ್ದರು. ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ ನಾಯಕ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿದೇವಿ, ಕಾಲೇಜಿನ ಉಪ ಪ್ರಾಂಶುಪಾಲ ಡಾ.ವಿಶ್ವನಾಥ ಪೈ ಎಂ. ಉಪಸ್ಥಿತರಿದ್ದರು. ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ ಶೆಟ್ಟಿ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪುತ್ತಿ ವಸಂತ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಅದಿತಿ ಪ್ರಶಸ್ತಿ ಪತ್ರ ವಾಚಿಸಿದರು. ಕನ್ನಡ ಉಪನ್ಯಾಸಕಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ವಂದಿಸಿದರು. ಕನ್ನಡ ಉಪನ್ಯಾಸಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿದರು.