ಹಿಡನ್‌ ಅಜೆಂಡಾ | ಫಿಟ್‌ನೆಸ್‌, ಬದಲಾವಣೆ ಮತ್ತು ಚಿಂತನೆ

Date:

Advertisements

ಫಿಸಿಕಲ್‌ ಫಿಟ್‌ನೆಸ್‌ ಅನ್ನೇ ಜೀವನದ ಉದ್ದೇಶವಗಿಸಿಕೊಂಡವರು ತಮ್ಮ ಆಹಾರಕ್ರಮದಲ್ಲಿ, ತಾವು ಮಾಡುವ ಕಸರತ್ತುಗಳಲ್ಲಿ ಬದಲಾವಣೆ ತರುತ್ತಲೇ ಇರುತ್ತಾರೆ, ಪಿಲಾಟೆ, ಕ್ಯಾಲೆಸ್ಥೆನಿಕ್ಸ್‌, ವೇಟ್‌ ಟ್ರೇನಿಂಗ್‌, ಯೋಗಾ, ರನಿಂಗ್‌, ಕ್ರಾಸ್‌ ಟ್ರೇನಿಂಗ್‌ ಮುಂತಾದವುಗಳೊಂದಿಗೆ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಆಗ ಮಾತ್ರ ನಿಜವಾದ ದೈಹಿಕ ಫಿಟ್‌ನೆಸ್‌ ಸಾಧ್ಯ. ಹಾಗೆಯೇ ಮಾನಸಿಕ ಫಿಟ್‌ನೆಸ್‌ಗೂ ಕಸರತ್ತುಗಳನ್ನು ರೂಪಿಸಲಾಗುತ್ತದೆ…


ಹೀಗೊಂದು ಪರಿಚಯಸ್ಥ ಕುಟುಂಬ. ಎಲ್ಲ ಮನೆಗಳಂತೆ ಅವರ ಮನೆಯಲ್ಲೂ ಒಂದಿಷ್ಟು ಜನ ವಾಸಿಸುತ್ತಾರೆ, ಸ್ವಾಭಾವಿಕವಾಗಿಯೇ ಅಡುಗೆ ಮುಂತಾದ ಕೆಲಸಗಳು ಆಗುತ್ತವೆ. ಹಾಗಾದಾಗ ಕಸವೂ ಉತ್ಪತ್ತಿಯಾಗುತ್ತದೆ. ಎಲ್ಲ ಕಸವನ್ನು, ಅಡುಗೆ ಮನೆಯ ಕಸವನ್ನು, ಪ್ಲಾಸ್ಟಿಕ್‌, ಪೇಪರ್‌ ಮುಂತಾದ ಎಲ್ಲವನ್ನೂ ಒಂದು ಕಸದ ಬುಟ್ಟಿಗೆ ಸಹಜವಾಗಿಯೇ ಹಾಕುತ್ತಿದ್ದರು. ಅದನ್ನು ಪ್ರತಿದಿನ ಒಂದುಕಡೆ ಎಸೆದು ಬರುವುದು ಅವರ ರೂಢಿಯಾಗಿತ್ತು. ʼಇಲ್ಲ, ಹಸಿ ಕಸವನ್ನು ಬೇರೆ ಕಡೆ ಹಾಕಿ, ಒಣ ಕಸವನ್ನು ಬೇರೆ ಕಡೆ ಹಾಕಿ ಅದನ್ನು ಡಿಸ್ಪೋಸ್‌ ಮಾಡಿ, ಹಾಗೆ ಮಾಡಿದಾಗ ಹಸಿ ಕಸ ಗೊಬ್ಬರ ಆಗುತ್ತೆ, ಒಣಕಸದಲ್ಲಿ ಕೆಲವನ್ನು ಮರುಬಳಕೆ ಅಥವಾ ರೀಸೈಕಲ್‌ ಮಾಡಬಹುದು. ಹಾಗೆ ಮಾಡಿದಾಗ ನಗರಗಳ ಕಸದ ಸಮಸ್ಯೆ ಒಂದಷ್ಟು ಕಡಿಮೆ ಆಗುತ್ತೆ, ಅದು ನಮ್ಮ ಪರಿಸರಕ್ಕೂ ಒಳ್ಳೆಯದುʼ ಎಂದು ಒಬ್ಬರು ಹೇಳಿದರು. ಅವರು ಕೇಳಲಿಲ್ಲ. ದಶಕಗಳಿಂದ, ಜೀವನವಿಡೀ ಕಸ ಎಂದರೆ ಕಸ ಎಂದು ಬೀಸಾಕಿ ಬರುತ್ತಿದ್ದ ಅವರಿಗೆ ಆ ಮಾತುಗಳು ಕೇಳಿಸಲಿಲ್ಲ. ಬಹುಶಃ ಆ ಮಾತನ್ನು ಹೇಳಿದವರು ಅವರಿಗೆ ಅಷ್ಟು ಇಷ್ಟವಿರಲಿಲ್ಲವೇನೋ. ಎಲ್ಲ ಕಸವನ್ನು ಒಂದೇ ಬುಟ್ಟಿಗೆ ಹಾಕಿ ಬೀಸಾಕುವುದನ್ನು ಮುಂದುವರೆಸಿದರು.

ಇನ್ನೊಬ್ಬರು. ಅವರಿಗೆ ಡಯಾಬಿಟೀಸ್‌ ಇನ್ನೂ ಬಂದಿಲ್ಲ, ಡಾಕ್ಟರ್‌ ನೀವು ಪ್ರಿಡಯಾಬಿಟಿಕ್‌ ಸ್ಟೇಜ್‌ನಲ್ಲಿ ಇದೀರಿ, ಹೀಗೇ ಮುಂದುವರೆದರೆ ನಿಮಗೆ ಖಂಡಿತವಾಗಿಯೂ ಸಕ್ಕರೆ ಕಾಯಿಲೆ ಬರುತ್ತೆ ಎಂದು ಹೇಳಿದರು. ಅದನ್ನು ತಡೆಗಟ್ಟಲು ಕೆಲವೊಂದು ಕ್ರಮಗಳನ್ನು ಕೈಗೊಳ್ಳಬೇಕು, ನಿಮ್ಮ ಆಹಾರದಲ್ಲಿ, ಜೀವನಶೈಲಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕು, ವಾರದಲ್ಲಿ ಮೂರ್ನಾಲ್ಕು ಸಲ ನಿಮಗೆಷ್ಟು ಆಗುತ್ತೋ, ಅಷ್ಟು ವ್ಯಾಯಾಮ ಮಾಡಬೇಕು ಎಂದೂ ಹೇಳಲಾಯಿತು. ʼಹೌದಾ?ʼ ಎಂದ ಅವರು ಅವ್ಯಾವನ್ನೂ ಮಾಡಲಿಲ್ಲ. ಸಕ್ಕರೆ ಕಾಯಿಲೆ ಬಂದಿದೆ ಎಂದು ಗೊತ್ತಾದ ಮೇಲೆ, ಅದೇ ಡಾಕ್ಟರ್‌ ಬಳಿ ಹೋಗಿ ಮಾತ್ರೆ ಬರೆಸಿಕೊಂಡು, ಪ್ರತಿದಿನ ಆ ಮಾತ್ರೆಗಳನ್ನು ತೆಗೆದುಕೊಳ್ಳಲು ಶುರುಮಾಡಿದರು. ʼಈಗತಾನೇ ಕಾಯಿಲೆ ಶುರುವಾಗಿದೆ, ನಿಮ್ಮ ವಯಸ್ಸೂ ಬಹಳ ಏನಿಲ್ಲ, ಇದನ್ನು ಖಂಡಿತವಾಗಿ ಹಿಮ್ಮೆಟ್ಟಿಸಬಹುದು, ಆಹಾರದಲ್ಲಿ, ನಿಮ್ಮ ಜೀವನಶೈಲಿಯಲ್ಲಿ ಚೂರು ಬದಲಾವಣೆ ಮಾಡಿ, ಕಸರತ್ತು ಮಾಡಿ ಎಂದು ಮತ್ತೇ ಅವರಿಗೆ ಹೇಳಲಾಯಿತು. ಇದು ಹೀಗೆ ಮುಂದುವರೆದರೆ ಏನೆಲ್ಲ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂಬುದನ್ನು ತಿಳಿಸಿ ಹೇಳಿದರು. ಆದರೆ, ಅವರು ಅದನ್ನೇನೂ ಮಾಡಲಿಲ್ಲ. ಎಷ್ಟೊಂದು ಕೆಲಸಗಳು, ಎಷ್ಟೊಂದು ಒತ್ತಡಗಳು, ಉಳಿದುಕೊಂಡ ಎಷ್ಟೊಂದು ಕನಸುಗಳು; ಅಂಥ ಘಟ್ಟದಲ್ಲಿ ಈ ಬದಲಾವಣೆಗಳನ್ನು ತರುವುದನ್ನು ಊಹಿಸುವುದೇ ಕಷ್ಟವಾಗಿತ್ತು.
ಇನ್ನೊಬ್ಬ ಸ್ನೇಹಿತರು ತಮ್ಮ ಜೀವನದಲ್ಲಿ ಅತ್ಯಂತ ಕಷ್ಟಕರ ಗಳಿಗೆಗಳನ್ನು ಕಂಡು, ಅತ್ಯಂತ ಕಷ್ಟದ ಸಮಯದಿಂದ ಹಾದುಹೋಗಿ, ಮಾನಸಿಕ ಕ್ಷೋಬೆಯಿಂದ ಬಳಲುತ್ತಿದ್ದರು, ಅದರಿಂದ ಹೊರಬರಲು ತಮಗೆ ಏನೆಲ್ಲ ಸಾಧ್ಯವೋ ಅದನ್ನು ಮಾಡಲು ಪ್ರಯತ್ನಿಸುತ್ತಿದ್ದರು. ಮಾನಸಿಕ ಆರೋಗ್ಯ ತಜ್ಞರನ್ನೂ ಭೇಟಿಯಾದರು. ಅವರಿಗೆ ಅನಿಸಿದ್ದು, ಅವರಿಗೆ ಮಾಡಲು ಆಗಬಹುದಾಗಿದ್ದು; ಸರಿಯಾಗಿ ಕೆಲಸ ಮಾಡಬೇಕು, ಒಳ್ಳೆಯ ಕೆಲಸ ಹುಡುಕಬೇಕು, ಒಳ್ಳೆಯ ಲಗ್ಷುರಿಯಸ್‌ ಆದ ಮನೆ ಬೇಕು ಎಂದು ಅವರು, ಅದರ ಮೇಲೆ ಬಿದ್ದು ಅವೆಲ್ಲವನ್ನೂ ಮಾಡಿದರು. ಆದರೂ ಮಾನಸಿಕ ಕ್ಷೋಭೆ ಕಡಿಮೆ ಆಗಲಿಲ್ಲ, ಆ ಕಷ್ಟಕರ ಗಳಿಗೆಗಳು, ತಾವು ಅನುಭವಿಸಿದ ಟ್ರಾಮಾ ಅವರನ್ನು ಬಿಡಲಿಲ್ಲ. ತಾವು ಸಾಧಿಸಿದ್ದ ಯಾವುದೂ ಅವರಿಗೆ ಖುಷಿ ತಂದುಕೊಡಲಿಲ್ಲ. ಅವರು ಆ ಕೆಲವು ವರ್ಷಗಳನ್ನು ಸಾಧಿಸಿದ್ದನ್ನು ಅವರ ಮುಂದೆ ಎತ್ತಿಹಿಡಿದರೂ, ಇದನ್ನೇ ತಾನೇ ಬಯಸಿದ್ದು ಎಂದು ಸೂಚಿಸಿದರೂ, ಅವರು ಖುಷಿಪಡಲಿಲ್ಲ. ಎಲ್ಲವೂ ಅರ್ಥವಾದರೂ ಇನ್ನೂ ಕ್ಷೋಭೆಯಲ್ಲಿದ್ದಾರೆ.

gym events 3

ಮುಂಬಯಿಯ ಟ್ರಾಫಿಕ್‌ ಸಮಸ್ಯೆಯ ಬಗ್ಗೆ, ರಸ್ತೆಗಳ ಅವ್ಯವಸ್ಥೆಯ ಬಗ್ಗೆ ದೂರುತ್ತ ಕುಳಿತಿದ್ದಾಗ, ಹೇಗೋ ಅದರ ಪರಿಹಾರಗಳ ಬಗ್ಗೆ ಮಾತು ಹೊರಳಿತು. ಎಷ್ಟೇ ರಸ್ತೆಗಳನ್ನು ಮಾಡಿದರೂ, ಅಗಲ ಮಾಡಿದರೂ, ಮೇಲ್ಸೇತುವೆಗಳನ್ನು ಮಾಡಿದರೂ ಟ್ರಾಫಿಕ್‌ ಕಡಿಮೆ ಆಗುವುದಲ್ಲ, ಸಾರ್ವಜನಿಕ ಸಾರಿಗೆ ಅದರಲ್ಲೂ ಬಸ್‌ಗಳೇ ಅದಕ್ಕೆ ಪರಿಹಾರ ಎಂದಾಗ ಸ್ನೇಹಿತರು ಆಘಾತದಿಂದ ನೋಡಿದರು, ಇಂಥದ್ದನ್ನೊಂದು ನಾನು ಹೇಳಬಹುದಾ ಎಂದು ಅವರಿಗೆ ನಂಬಲಾಗಲಿಲ್ಲ. ಅದ್ಹೆಂಗೆ ಬಸ್‌ ಪರಿಹಾರವಾಗಬಲ್ಲದು, ಅಷ್ಟು ದಶಕಗಳಿಂದ ಕಾರಿನಲ್ಲೋ ಕೆಲವೊಮ್ಮೆ ಬೈಕಿನಲ್ಲೋ ಪ್ರಯಾಣಿಸಿದ ಸ್ನೇಹಿತರಿಗೆ ಅಂಥದ್ದೊಂದು ಪರಿಹಾರ ಇರಬಲ್ಲದು ಎಂಬುದನ್ನೇ ನಂಬಲು ಆಗಲಿಲ್ಲ. ತಮ್ಮ ಸ್ವಂತ ವಾಹನಗಳನ್ನು ಬಿಟ್ಟು ಸಾರ್ವಜನಿಕ ಸಾರಿಗೆಯಲ್ಲಿ ಯಾರಾದರೂ ಪ್ರಯಾಣಿಸಬಹುದು ಎಂಬುದೇ ನಂಬಲಸಾಧ್ಯವಾಗಿತ್ತು.

ಇಂತಹ ಅನೇಕ ಪ್ರಸಂಗಗಳನ್ನು, ಕಥೆಗಳನ್ನು ಹೇಳಬಹುದು. ಇಷ್ಟೇ ತಾನೇ, ಇಷ್ಟು ಪುಟ್ಟ ಬದಲಾವಣೆ ತರಲು ಏನು ಕಷ್ಟ, ಆ ಬದಲಾವಣೆಯಿಂದ ಜೀವನವೇ ಒಳ್ಳೆಯದಕ್ಕೆ ಬದಲಾಗುವ ಸಾಧ್ಯತೆ ಇದ್ದಾಗ ಯಾಕೆ ಮಾಡುತ್ತಿಲ್ಲ. ಅಷ್ಟೊಂದು ಪ್ರತಿರೋಧ ಯಾಕೆ ಎಂದು, ಬದಲಾವಣೆ ತರದೇ ಇರುವವರು ಮೂರ್ಖರೆಂದೂ ನಾವು ತೀರ್ಮಾನಕ್ಕೆ ಬರಬಹುದು.

ಇಲ್ಲಿ ನನಗೆ ಮೂರು ಪ್ರಶ್ನೆಗಳು ಕಾಡುತ್ತಿವೆ: ಮೊದಲನೆಯದ್ದು; ಬದಲಾವಣೆ ನಿಜಕ್ಕೂ ಅಷ್ಟು ಸುಲಭವಾ? ಸ್ವಾಭಾವಿಕವಾಗಿಯೇ ಅದಕ್ಕೆ ಉತ್ತರ: ಇಲ್ಲ, ಸುಲಭವಿಲ್ಲ. ಅಷ್ಟೊಂದು ದೀರ್ಘ ಕಾಲದಿಂದ ನಾವೇನೋ ನಂಬಿಕೊಂಡು ಬಂದಿರುತ್ತೇವೆ, ಆಯಾ ಚಿಂತನೆಯಲ್ಲಿ, ನಮ್ಮ ನಡೆಗಳಲ್ಲಿ ಆ ರೂಢಿಗಳನ್ನು ಅಳವಡಿಸಿಕೊಂಡಿರುತ್ತೇವೆ. ಅವೆಲ್ಲ ನಮ್ಮ ಮಿದುಳಿನಲ್ಲಿ ಅಚ್ಚಾಗಿರುತ್ತವೆ. ಆಗ ಅವನ್ನು ಬದಲಿಸುವುದು ಕೇವಲ ಬಾಹ್ಯ ವಿಷಯವಾಗಿರುವುದಿಲ್ಲ, ನಮ್ಮ ಮಿದುಳು ಕೆಲಸ ಮಾಡುವ ರೀತಿಯನ್ನೇ ಬದಲಿಸಬೇಕಾಗುತ್ತದೆ, ಅದು ಹರಸಾಹಸವೇ ಆಗಿರುತ್ತದೆ. ಇಂತಹ ಬದಲಾವಣೆಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು, ನಮ್ಮ ರೂಢಿಗಳನ್ನು ಒಳ್ಳೆಯದಕ್ಕಾಗಿ ಹೇಗೆ ಬದಲಾಯಿಸಿಕೊಳ್ಳಬೇಕು, ಹೊಸ ರೂಢಿಗಳನ್ನು ಹೇಗೆ ತರಬೇಕು ಎಂಬುದರ ಬಗ್ಗೆ ಇತ್ತೀಚಿಗೆ ಬಹಳಷ್ಟು ಅಧ್ಯಯನ ಆಗಿವೆ, ಅನೇಕ ಪುಸ್ತಕಗಳೂ ಬಂದಿವೆ.

ಎರಡನೆಯ ಪ್ರಶ್ನೆ: ಈ ಬರಹವನ್ನು ಓದುತ್ತಿರುವ ಎಲ್ಲರೂ ಸಾಮಾಜಿಕ, ರಾಜಕೀಯ ಚಿಂತಕರೇ, ಸಮಾಜಕ್ಕೆ ಒಳಿತನ್ನು ಮಾಡುವ ಪ್ರಯತ್ನದಲ್ಲಿಯೇ ಇರುವವರು. ನಾವೂ ಇಂತಹ ಯಾವುದಾದರೂ ಅಪ್ರಯೋಜಕವಾದ, ಸಮಾಜಕ್ಕೆ ಒಳಿತನ್ನು ಮಾಡುತ್ತಲೇ ಕೆಡಕು ಮಾಡುವ ರೂಢಿಯನ್ನು ಅಳವಡಿಸಿಕೊಂಡಿದ್ದೇವೆಯಾ? ನಮ್ಮ ಚಿಂತನೆಗಳಿಂದ, ನಾವು ಆಡುವ ಮಾತುಗಳಿಂದ ನಿಜಕ್ಕೂ ಬದಲಾವಣೆ ಆಗುತ್ತಿದೆಯಾ?

ಎರಡನೆಯ ಪ್ರಶ್ನೆಗೆ ಮೂರನೆಯ ಪ್ರಶ್ನೆಯಲ್ಲಿ ಉತ್ತರ ಸಿಗಬಹುದು. ಸಕ್ಕರೆ ಕಾಯಿಲೆ ಆದಾಗ, ಅದು ನಮ್ಮ ಗಮನಕ್ಕೆ ಬರುತ್ತದೆ. ರಕ್ತ ಪರೀಕ್ಷೆ ಮಾಡಿದಾಗ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿರುವುದು ಗೊತ್ತಾಗುತ್ತದೆ. ಡಾಕ್ಟರ್‌ ಭೇಟಿಯಾದಾಗ ಅದನ್ನು ಗುಣಪಡಿಸಲು ಏನು ಮಾಡಬೇಕು ಎಂದು ಹೇಳುತ್ತಾರೆ, ಮಾತ್ರೆ ಬರೆದುಕೊಡುತ್ತಾರೆ, ಕಸರತ್ತು ಮಾಡಲು ಹೇಳುತ್ತಾರೆ, ಆಹಾರದಲ್ಲಿ ಬದಲಾವಣೆ ತರಲು ಸೂಚಿಸುತ್ತಾರೆ. ಮಾನಸಿಕ ಆರೋಗ್ಯದ ಬಗ್ಗೆ ಅಷ್ಟೊಂದು ಜಾಗೃತಿ ಇಲ್ಲದಿದ್ದರೂ, ಅದಕ್ಕೆ ಆದ ವೃತ್ತಿಪರರು ಇದ್ದಾರೆ, ಕೌನ್ಸಲರ್‌, ಥೆರಪಿಸ್ಟ್‌ಗಳು ನಿಧಾನಕ್ಕೆ ಹೆಚ್ಚುತ್ತಿದ್ದಾರೆ. ಆಯಾ ತಜ್ಞರು ಸಮಸ್ಯೆ ಏನೆಂಬುದನ್ನು ಸೂಚಿಸಬಲ್ಲರು, ನಮಗೆ ಮಾಡಲು ಸಾಧ್ಯವಾಗುತ್ತೋ ಇಲ್ಲವೋ ಆದರೆ ಅವರು ಸೂಕ್ತ ಪರಿಹಾರಗಳನ್ನು ಸೂಚಿಸಬಲ್ಲರು. ಆದರೆ, ʻಚಿಂತಕʼರಾದ ನಮಗೆ ಯಾರು ಹೇಳುವರು? ನಮಗೆ ಯಾರು ಹೇಳುವರು ಎಂಬ ಪ್ರಶ್ನೆಗೂ ಮುನ್ನ ಬರುವ ಪ್ರಶ್ನೆ, ನಾವೂ ನಮ್ಮ ರೂಢಿಗಳಲ್ಲಿ ಕಳೆದು ಹೋಗಿದ್ದೇವೆಯಾ? ನಮ್ಮ ಚಿಂತನೆಯಲ್ಲಿ, ನಮ್ಮ ಕೆಲಸಗಳಲ್ಲಿ ಏನಾದರೂ ಸಮಸ್ಯೆ ಇದೆಯಾ ಎಂಬುದು.

Advertisements
20lfh67 diabetes 625x300 01 February 23

ಈ ಲೇಖನದ ಉದ್ದೇಶವೇ ಮೂರನೆಯ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು. (ಈ ಪ್ರಕ್ರಿಯೆಯನ್ನು ಸಾಮೂಹಿಕವಾಗಿ ಮಾಡಬೇಕಿದೆ ಹಾಗೂ ಅದು ಒಂದು ಮಟ್ಟಿಗೆ ನಡೆಯುತ್ತಲೂ ಇದೆ ಎಂಬುದು ನನ್ನ ನಂಬಿಕೆ. ಈಗ ನನಗೆ ಸಾಧ್ಯವಾದ ಉತ್ತರಗಳನ್ನು ನಾನು ದಾಖಲಿಸುತ್ತಿದ್ದೇನೆ, ಓದುತ್ತಿರುವ ನಿಮ್ಮ ಬಳಿಯೂ ಉತ್ತರಗಳಿರಬಹದು, ಅವುಗಳನ್ನು ಸ್ವಾಗತಿಸುತ್ತ ಮುಂದುವರೆಯುವೆ.) ನಾವೆಲ್ಲರೂ ಬೇರೆಬೇರೆ ವಿಷಯಗಳ ಬಗ್ಗೆ ಪ್ಯಾಷನೇಟ್‌ ಆಗಿರುತ್ತೇವೆ. ಆ ವಿಷಯಗದ ಬಗ್ಗೆ ಪುಂಖಾನುಪುಂಖವಾಗಿ ಬರೆಯುತ್ತ, ಮಾತನಾಡುತ್ತ, ಕೆಲವೊಮ್ಮೆ ರಿಸರ್ಚ್‌ ಮಾಡುತ್ತಿರುತ್ತೇವೆ. ನಮ್ಮ ಮಾತುಗಳಿಂದ, ಕೆಲಸಗಳಿಂದ ನಾವು ಪ್ಯಾಷನೇಟ್‌ ಆಗಿರುವ ವಿಷಯದಲ್ಲಿ ಏನಾದರೂ ಸಕಾರಾತ್ಮಕ ಬದಲಾವಣೆ ಆಗಿವೆಯಾ ಎಂಬ ಪ್ರಶ್ನೆಗೆ ಸಿಗುವ ಉತ್ತರಗಳು ಮೇಲಿನ ಪ್ರಶ್ನೆಗೂ ಉತ್ತರವಾಗಬಲ್ಲವು. ವರ್ಗ ತಾರತಮ್ಯದ ಬಗ್ಗೆ ನಾನು ದಶಕಗಳಿಂದ ಮಾತನಾಡುತ್ತಿದ್ದರೂ, ಬರೆಯುತ್ತಿದ್ದರೂ ತಾರತಮ್ಯ ಹೆಚ್ಚುತ್ತಿದೆಯೇ ಹೊರತು ಕಡಿಮೆ ಆಗುತ್ತಿಲ್ಲ ಎಂತಾದಲ್ಲಿ ನನ್ನ ಚಿಂತನೆಯಲ್ಲಿ ಏನೋ ಸಮಸ್ಯೆ ಇದೆ ಎಂದೇ ಅರ್ಥ. ʼಇಲ್ಲ, ನನ್ನ ಚಿಂತನೆಯಲ್ಲೇನೂ ಸಮಸ್ಯೆಯಿಲ್ಲ, ನನ್ನ ಚಿಂತನೆಯಲ್ಲಿರುವ ಒಳಹುಗಳನ್ನು ಅನುಷ್ಠಾನಕ್ಕೆ ಯಾರೂ ತರುತ್ತಿಲ್ಲ, ಅನುಷ್ಠಾನಕ್ಕೆ ತರುವುದು ಇತರರ ಕೆಲಸʼ ಎಂದಾಗ ಅದನ್ನು ನಾನು ಕಾಯಿಲೆಯೆಂದೇ ಪರಿಗಣಿಸುತ್ತೇನೆ. ಬದಲಾವಣೆಯ ಹೊಣೆಗಾರಿಕೆ ಹೊತ್ತವರು ಮಾತ್ರ ಚಿಂತಕರಾಗಬಲ್ಲರು ಎಂಬುದು ನನ್ನ ಬಲವಾದ ನಂಬಿಕೆ.

ಆದರೆ ಇದು ಇಷ್ಟೊಂದು ಸರಳವಲ್ಲ ಎಂಬುದು ನನಗೆ ತಿಳಿದಿದೆ. ಫಿಸಿಕಲ್‌ ಫಿಟ್‌ನೆಸ್‌ ಅನ್ನೇ ಜೀವನದ ಉದ್ದೇಶವಾಗಿಸಿಕೊಂಡವರು ತಮ್ಮ ಆಹಾರಕ್ರಮದಲ್ಲಿ, ತಾವು ಮಾಡುವ ಕಸರತ್ತುಗಳಲ್ಲಿ ಬದಲಾವಣೆ ತರುತ್ತಲೇ ಇರುತ್ತಾರೆ. ಪಿಲಾಟೆ, ಕ್ಯಾಲೆಸ್ಥೆನಿಕ್ಸ್‌, ವೇಟ್‌ ಟ್ರೇನಿಂಗ್‌, ಯೋಗಾ, ರನಿಂಗ್‌, ಕ್ರಾಸ್‌ ಟ್ರೇನಿಂಗ್‌ ಮುಂತಾದವುಗಳೊಂದಿಗೆ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಆಗ ಮಾತ್ರ ನಿಜವಾದ ದೈಹಿಕ ಫಿಟ್‌ನೆಸ್‌ ಸಾಧ್ಯ. ಹಾಗೆಯೇ ಮಾನಸಿಕ ಫಿಟ್‌ನೆಸ್‌ಗೂ ಕಸರತ್ತುಗಳನ್ನು ರೂಪಿಸಲಾಗುತ್ತದೆ. ಚಿಂತಕರಾದ ನಾವೂ ಹೊಸದರೊಂದಿಗೆ ಪ್ರಯೋಗ ಮಾಡುತ್ತ, ನನ್ನ ವಿಚಾರಗಳಿಂದ ನಿಜಕ್ಕೂ ಬದಲಾವಣೆ ಆಗುತ್ತಿದೆಯಾ ಎಂಬುದನ್ನು ಕೇಳಿಕೊಳ್ಳುತ್ತಲೇ ಇರಬೇಕಾಗುತ್ತದೆ. ಸಮಸ್ಯೆಗೆ ಪರಿಹಾರ ಹುಡುಕುವ ಮುನ್ನ, ಸಮಸ್ಯೆ ಇದೆ, ನಿಜವಾದ ಸಮಸ್ಯೆ ಏನು ಎಂಬ ಅರಿವು ಪಡೆದುಕೊಳ್ಳಲು ಯಾವ ಕಸರತ್ತುಗಳನ್ನು ಮಾಡಬೇಕು ಎಂಬುದು ನನಗೂ ಸ್ಪಷ್ಟವಾಗಿಲ್ಲ.

ಇಡೀ ವಿಶ್ವವೇ ಬಲಪಂಥೀಯ ರಾಜಕಾರಣದ ಕಡೆಗೆ ವಾಲುತ್ತಿರುವ ಸಮಯದಲ್ಲಿ, ಪ್ರಜಾಪ್ರಭುತ್ವದ ಬುಡವೇ ಅಲಗಾಡುತ್ತಿರುವ ಸಮಯದಲ್ಲಿ ನಾವು ಮಾಡಿದ್ದನ್ನೇ ಮಾಡುತ್ತ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಆತಂಕವು ಇದನ್ನು ಬರೆಯಲು ಪ್ರೇರೇಪಿಸಿತು. ಏನೇ ಆದರೂ ಹೊಣೆಗಾರಿಕೆ ನಮ್ಮದೇ.

WhatsApp Image 2023 05 02 at 1.02.32 PM
ರಾಜಶೇಖರ್‌ ಅಕ್ಕಿ
+ posts

ಸಾಮಾಜಿಕ ಕಾರ್ಯಕರ್ತ. ನಾಟಕ ಮತ್ತು ಸಿನೆಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ʼಜಾಗೃತ ಕರ್ನಾಟಕʼದ ಸಕ್ರಿಯ ಸದಸ್ಯ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ರಾಜಶೇಖರ್‌ ಅಕ್ಕಿ
ರಾಜಶೇಖರ್‌ ಅಕ್ಕಿ
ಸಾಮಾಜಿಕ ಕಾರ್ಯಕರ್ತ. ನಾಟಕ ಮತ್ತು ಸಿನೆಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ʼಜಾಗೃತ ಕರ್ನಾಟಕʼದ ಸಕ್ರಿಯ ಸದಸ್ಯ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X