“ಪ್ರತಿಯೊಬ್ಬ ಭಯೋತ್ಪಾದಕರನ್ನು ಗುರುತಿಸಿ, ಪತ್ತೆ ಹಚ್ಚಿ, ಅವರನ್ನು ಭಾರತ ಶಿಕ್ಷಿಸಲಿದೆ ಎಂದು ಇಂದು ಬಿಹಾರದ ನೆಲದಲ್ಲಿ ನಿಂತು ಇಡೀ ವಿಶ್ವಕ್ಕೆ ಹೇಳುತ್ತಿದ್ದೇನೆ. ಭಯೋತ್ಪಾದಕರನ್ನು ಈ ಭೂಮಿಯಿಂದಲೇ ನಿರ್ಮೂಲನೆ ಮಾಡಲಿದ್ದೇವೆ” ಎಂದು ಗುರುವಾರ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಿಹಾರದ ಮಧುಬನಿಯಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಭಾರತವನ್ನು ಧೃತಿಗೆಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಭಯೋತ್ಪಾದನೆಯಿಂದ ಭಾರತದ ಅಂತಃಶಕ್ತಿ ಎಂದೂ ಮುರಿದು ಬಿದ್ದಿಲ್ಲ. ಭಯೋತ್ಪಾದನೆಗೆ ಶಿಕ್ಷೆ ವಿಧಿಸದೆ ಬಿಡುವುದಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ನ್ಯಾಯ ಒದಗಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಲಾಗುವುದು” ಎಂದೂ ಭರವಸೆ ನೀಡಿದರು. ದೇಶದ ಒಗ್ಗಟ್ಟನ್ನು ಒತ್ತಿ ಹೇಳಿದ ಅವರು, “ಇಡೀ ದೇಶವು ಒಗ್ಗಟ್ಟಾಗಿದೆ. ಯಾರೆಲ್ಲ ಮಾನವೀಯತೆ ಬಗ್ಗೆ ನಂಬಿಕೆ ಹೊಂದಿದ್ದಾರೊ, ಅವರೆಲ್ಲ ನಮ್ಮೊಂದಿಗಿದ್ದಾರೆ” ಎಂದರು. “ಈ ಭಯೋತ್ಪಾದಕರೆಂದಿಗೂ ಊಹಿಸಿರದಷ್ಟರ ಮಟ್ಟಿಗೆ ಶಿಕ್ಷೆಯು ಕಠಿಣವಾಗಿರುತ್ತದೆ” ಎಂದೂ ಪ್ರಧಾನಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಮಲದ ಗುಂಡಿಗಳಲ್ಲಿ ಮುಳುಗಿದ ಮನಸುಗಳು; ಮಲ ಬಾಚಿ ಹೊರುವುದು ಏಕೆ ಇಂದಿಗೂ ಜೀವಂತ?
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಅಮಾಯಕ ನಾಗರಿಕರನ್ನು ಹತ್ಯೆ ಮಾಡಿದ್ದರಿಂದ ಇಡೀ ರಾಷ್ಟ್ರವು ದುಃಖಿತವಾಗಿದೆ. ಈ ಭಯೋತ್ಪಾದಕರು ಮತ್ತು ಈ ದಾಳಿಗೆ ಸಂಚು ರೂಪಿಸಿದವರಿಗೆ ಅವರು ಊಹಿಸಲು ಸಾಧ್ಯವಾಗದಷ್ಟು ದೊಡ್ಡ ಶಿಕ್ಷೆ ಸಿಗುತ್ತದೆ ಎಂದು ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. 140 ಕೋಟಿ ಭಾರತೀಯರ ಇಚ್ಛಾಶಕ್ತಿ ಈಗ ಭಯೋತ್ಪಾದನೆಯ ಮಾಸ್ಟರ್‌ಗಳ ಬೆನ್ನು ಮುರಿಯಲಿದೆ ಎಂದರು.
ಈ ಸಂಕಲ್ಪದಲ್ಲಿ ಇಡೀ ರಾಷ್ಟ್ರವು ಒಂದಾಗಿದೆ. ಮಾನವೀಯತೆಯನ್ನು ನಂಬುವ ಪ್ರತಿಯೊಬ್ಬರೂ ನಮ್ಮೊಂದಿಗಿದ್ದಾರೆ. ವಿವಿಧ ದೇಶಗಳ ಜನರಿಗೆ ಮತ್ತು ಅವರ ನಾಯಕರು ನಮ್ಮೊಂದಿಗೆ ನಿಂತಿದ್ದಕ್ಕಾಗಿ ನಾನು ಧನ್ಯವಾದ ಹೇಳುತ್ತೇನೆ ಎಂದರು.
ಇಂಗ್ಲಿಷ್‌ನಲ್ಲಿ ಭಾಷಣ
ಈ ಸಂದರ್ಭದಲ್ಲಿ ಹಿಂದಿಯಲ್ಲಿ ಭಾಷಣ ಮಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಇಂಗ್ಲಿಷ್ ಭಾಷಣ ಮಾಡಲು ಶುರು ಮಾಡಿದರು. “ಇಂದು ಬಿಹಾರದ ಮಣ್ಣಿನಿಂದ ಜಗತ್ತಿಗೆ ಹೇಳುತ್ತಿದ್ದೇನೆ, ಭಾರತವು ಪ್ರತಿಯೊಬ್ಬ ಭಯೋತ್ಪಾದಕ ಹಾಗೂ ಆತನ ಹಿಂದಿರುವವರನ್ನು ಪತ್ತೆಹಚ್ಚಿ ಶಿಕ್ಷಿಸುತ್ತದೆ. ಭೂಮಿಯ ಕೊನೆಯವರೆಗೂ ಎಲ್ಲೇ ಹೋದರೂ ಅವರನ್ನು ಬಿಡುವುದಿಲ್ಲ” ಎಂದರು.
ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನ ವಿರುದ್ಧ ಕಟ್ಟುನಿಟ್ಟಿನ ಶಿಕ್ಷಾ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ಸಿಂಧೂ ಜಲ ಒಪ್ಪಂದ ಅಮಾನತು, ಅಟಾರಿ ಗಡಿ ಬಂದ್ ಮಾಡಿರುವುದಾಗಿ ಘೋಷಿಸಿದೆ. ಹಾಗೆಯೇ ಭಾರತದಲ್ಲಿರುವ ಪಾಕಿಸ್ತಾನದ ಪ್ರಜೆಗಳು 48 ಗಂಟೆಯೊಳಗೆ ದೇಶ ಬಿಡಬೇಕೆಂದು ಸೂಚಿಸಲಾಗಿದೆ.