ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯನ್ನು ವಿಶ್ವದ ಹಲವು ದೇಶಗಳು ಖಂಡಿಸಿವೆ. ಭಯೋತ್ಪಾದಕ ಘಟನೆ ಮತ್ತು ಅಮಾಯಕ ಜನರ ಸಾವಿನ ಬಗ್ಗೆ ಅಮೆರಿಕ, ಚೀನಾ ಮತ್ತು ಬ್ರಿಟನ್ ಸೇರಿದಂತೆ ಹಲವಾರು ದೇಶಗಳು ದುಃಖ ವ್ಯಕ್ತಪಡಿಸಿವೆ. ಅದೇ ಸಮಯದಲ್ಲಿ, ಈಗ ಅಫ್ಘಾನಿಸ್ತಾನದಲ್ಲಿ ಅಧಿಕಾರದಲ್ಲಿರುವ ತಾಲಿಬಾನ್ ಸರ್ಕಾರ ಕೂಡ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ಘಟನೆಯನ್ನು ಖಂಡಿಸಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ಘಟನೆಗೆ ಸಂಬಂಧಿಸಿದಂತೆ ಅಫ್ಘಾನಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ದುಲ್ ಕಹಾರ್ ಬಾಲ್ಖಿ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. “ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿಯನ್ನು ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್‌ನ ವಿದೇಶಾಂಗ ಸಚಿವಾಲಯ ಬಲವಾಗಿ ಖಂಡಿಸುತ್ತದೆ ಮತ್ತು ಮೃತ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸುತ್ತದೆ. ಇಂತಹ ಘಟನೆಗಳು ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನಗಳನ್ನು ನಾಶಗೊಳಿಸುತ್ತದೆ” ಎಂದು ಅವರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉಗ್ರನ ರೈಫಲ್ ಕಸಿದುಕೊಳ್ಳಲು ಹೋಗಿ ಗುಂಡೇಟಿಗೆ ಸಾವಿಗೀಡಾದ ಕುದುರೆ ರೈಡರ್ ಸೈಯದ್ ಹುಸೇನ್
ಪಹಲ್ಗಾಮ್‌ನಲ್ಲಿ ಪಾಕಿಸ್ತಾನಿ ಭಯೋತ್ಪಾದಕರ ದಾಳಿಯ ನಂತರ ಕೇಂದ್ರ ಸರ್ಕಾರ ಪಾಕ್ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಸಿಂಧೂ ನದಿ ನೀರು ಒಪ್ಪಂದವನ್ನು ತಡೆಹಿಡಿಯಲಾಗಿದೆ. ಅಟಾರಿ ಗಡಿಯಲ್ಲಿರುವ ಸಮಗ್ರ ಚೆಕ್ ಪೋಸ್ಟ್ ಮುಚ್ಚುವಿಗೆ ಮತ್ತು ರಾಯಭಾರ ಕಚೇರಿಗಳ ಒಟ್ಟಾರೆ ಸಿಬ್ಬಂದಿ ಸಂಖ್ಯೆಯನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ.
ಇದರೊಂದಿಗೆ, ಪಾಕಿಸ್ತಾನಿ ನಾಗರಿಕರು 48 ಗಂಟೆಗಳ ಒಳಗೆ ಭಾರತವನ್ನು ತೊರೆಯುವಂತೆ ಆದೇಶಿಸಲಾಗಿದೆ. ಹಾಗೆಯೇ ಪಾಕಿಸ್ತಾನಿ ನಾಗರಿಕರ ವೀಸಾಗಳನ್ನು ನಿಲ್ಲಿಸಲಾಗಿದೆ. ಇದಲ್ಲದೆ, ರಾಯಭಾರಿ ಕಚೇರಿಯಲ್ಲಿರುವ ಉದ್ಯೋಗಿಗಳ ಸಂಖ್ಯೆಯನ್ನು 55 ರಿಂದ 30 ಕ್ಕೆ ಇಳಿಸಲಾಗಿದ್ದು, ಈ ನಿರ್ಧಾರವು ಮೇ 1 ರಿಂದ ಜಾರಿಗೆ ಬರಲಿದೆ.