ಸಂವಿಧಾನದ ಮೂಲ ಆಶಯಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಇದೇ ಏ.26ರಂದು ಸಂವಿಧಾನ ಸಂರಕ್ಷಕರ ಸಮಾವೇಶ ನಡೆಯುತ್ತಿದೆ ಎಂದು ಎದ್ದೇಳು ಕರ್ನಾಟಕದ ರಾಜ್ಯ ಮುಖಂಡರಾದ ಮಲ್ಲಿಗೆ ಸಿರಿಮನೆ ಹೇಳಿದರು.
ವಿಜಯಪುರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಭಾರತ ದೇಶ ಪ್ರತಿಯೊಬ್ಬ ಪ್ರಜೆಯುನ್ನು ಸಮಾನವಾಗಿ ಕಾಣುತ್ತದೆ. ಈ ದೇಶ ಬಹುತ್ವವನ್ನು ಪ್ರತಿಪಾದಿಸುವಂಥ ದೇಶ. ಇದರ ಮಹತ್ವವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಸಮಾವೇಶ ನಡೆಯುತ್ತಿದೆ. ಸಂವಿಧಾನದ ಆಶಯಗಳನ್ನು ದೇಶದ ಯುವ ಜನರಿಗೆ, ವಿದ್ಯಾರ್ಥಿಗಳಿಗೆ ತಿಳಿಸುವ ನಿಟ್ಟಿನಲ್ಲಿ ಕರ್ನಾಟಕದಾದ್ಯಂತ ಹಳ್ಳಿ ಪಟ್ಟಣಗಳಲ್ಲಿ ಪ್ರಚಾರ ಮಾಡಿ ಈ ಸಮಾವೇಶವನ್ನು ಯಶಸ್ವಿಗೊಳಿಸಬೇಕು” ಎಂದರು.
ಸಾಹಿತಿ ಪ್ರೊ.ಬರಗೂರ ರಾಮಚಂದ್ರಪ್ಪ ಸಮಾವೇಶದ ಉದ್ಘಾಟನೆ ಮಾಡಲಿದ್ದಾರೆ. ಸಮಾವೇಶದಲ್ಲಿ ಯುವಜನರ ಪ್ರತಿನಿಧಿ ಗುಜರಾತಿನ ಶಾಸಕ ಜಿಗ್ನೇಶ್ ಮೇವಾನಿ, ಸಾಮಾಜಿಕ ಚಿಂತಕ ಪರಕಾಲ ಪ್ರಭಾಕರ, ಸಾಮಾಜಿಕ ಚಳವಳಿಯ ನೇತಾರರಾದ ಮೇಧಾ ಪಾಟ್ಕರ್, ಬಹುಭಾಷಾ ನಟ ಪ್ರಕಾಶ್ ರೈ, ಸಾಹಿತಿಗಳಾದ ಪ್ರೊ. ಪುರುಷೋತ್ತಮ ಬಿಳಿಮಲೆ ಹಾಗೂ ರಾಜ್ಯದ ವಿವಿಧ ಸಮುದಾಯಿಕ ಸಂಘಟನೆಗಳು, ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯ ಮುಂಚೂಣಿ ನಾಯಕರು ಭಾಗವಹಿಸಲಿದ್ದಾರೆ” ಎಂದು ತಿಳಿಸಿದರು.
ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಫಾ. ಟಿಯೋಲ್ ಮಾಚಾದೊ ಮಾತನಾಡಿ, “ಸಂವಿಧಾನವನ್ನು ದುರ್ಬಲಗೊಳಿಸುವ ಶಕ್ತಿಗಳ ಮುಷ್ಟಿಯಿಂದ ಸಂವಿಧಾನವನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಈ ಸಮಾವೇಶ ಜರುಗಲಿದೆ ಎಂದರು. ಪ್ರತಿಯೊಬ್ಬ ಜಾಗೃತ ನಾಗರಿಕ ಕೂಡ ಈ ಸಮಾವೇಶದಲ್ಲಿ ಭಾಗವಹಿಸಬೇಕು” ಎಂದು ಮನವಿ ಮಾಡಿದರು.
ಇದನ್ನೂ ಓದಿ: ವಿಜಯಪುರ | ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ: ವಿಜಯ್ ಕುಮಾರ್
ಈ ವೇಳೆ ಎದ್ದೇಳು ಕರ್ನಾಟಕದ ಜಿಲ್ಲಾ ಮುಖಂಡ ಅಬ್ದುಲ್ ಖಧೀರ್, ಜಮಾತ್ ಇಸ್ಲಾಮಿಕ್ ಮುಖಂಡ ಎಂ ಡಿ ಬಳಗಾನೂರ, ಶ್ರೀನಾಥ ಪೂಜಾರಿ, ಅಕ್ರಮ್ ಮಾಶಳಕರ ಇದ್ದರು.