- ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯಿಂದ ಸಿಎಂಗೆ ಪತ್ರ
- ಡಿಪ್ಲೊಮಾ ಕೋರ್ಸ್ ರದ್ದು ಮಾಡಿರುವುದು ರೈತ ವಿರೋಧಿ ನಡೆ ಎಂದು ಟೀಕೆ
ಕೃಷಿ ವಿಜ್ಞಾನ ವಿಶ್ವವಿದ್ಯಾಲಯಗಳಲ್ಲಿ ಡಿಪ್ಲೊಮಾ ಕೋರ್ಸ್‌ಗಳನ್ನು ರದ್ದು ಪಡಿಸಿರುವ ನಿರ್ಧಾರವನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದೆ.
ಈ ಕುರಿತು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, “ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿರುವ ಕೃಷಿ ಡಿಪ್ಲೊಮಾ ಕೋರ್ಸ್‌ಗಳನ್ನು ರದ್ದುಗೊಳಿಸಿರುವ ರಾಜ್ಯ ಸರ್ಕಾರದ ಕ್ರಮ ರೈತ ವಿರೋಧಿಯಾಗಿದೆ” ಎಂದು ಟೀಕಿಸಿದ್ದಾರೆ.
“ಧಾರವಾಡ ಮತ್ತು ಬೆಂಗಳೂರಿನಲ್ಲಿರುವ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳು, ಕೃಷಿ ಅರಣ್ಯಕರಣ ಮತ್ತು ರೇಷ್ಮೆ ಸಾಕಾಣಿಕೆಗಳಲ್ಲಿ ಎರಡು ವರ್ಷಗಳ ಕನ್ನಡ ಮಾಧ್ಯಮ ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಕೃಷಿ ವಿಶ್ವವಿದ್ಯಾಲಯಗಳು ಅಧಿಸೂಚನೆಯನ್ನು ಹಿಂಪಡೆದಿವೆ. ಇದರಿಂದಾಗಿ ಬಡ ವರ್ಗದ ರೈತಾಪಿ ಮಕ್ಕಳು ಕಡಿಮೆ ವೆಚ್ಚದಲ್ಲಿ ಕೃಷಿ ತರಬೇತಿ ಪಡೆಯುವಲ್ಲಿ ವಂಚಿತರಾಗಲಿದ್ದಾರೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈದಿನ ವಿಶೇಷ | ಕೃಷಿ ವಿವಿಗಳಲ್ಲಿ ಡಿಪ್ಲೊಮಾ ಕೋರ್ಸ್ ಸ್ಥಗಿತ, ಕೃಷಿಕರ ಮಕ್ಕಳ ಭವಿಷ್ಯದ ಮೇಲೆ ಬರೆ ಎಳೆದ ಸರ್ಕಾರ!
“ಸರ್ಕಾರವು ಸಾಕಷ್ಟು ಹಣಕಾಸು ಬೆಂಬಲ ನೀಡದೇ ಇರುವದು ಸಹ ಕೋರ್ಸ್ ಸ್ಥಗಿತಕ್ಕೆ ಕಾರಣ ಎನ್ನಲಾಗುತ್ತಿದೆ. ಕೇವಲ 5 ಸಾವಿರ ರೂ.ಗಳ ಶುಲ್ಕದಲ್ಲಿ ರಾಜ್ಯದ ಬಡ ರೈತರ ಮಕ್ಕಳು ಈ ಕೋರ್ಸ್‌ಗೆ ಪ್ರವೇಶ ಪಡೆಯಬಹುದಿತ್ತು. ಅಲ್ಲದೇ ಇಂತಹ ಡಿಪ್ಲೊಮಾ ಕೋರ್ಸ್‌ಗಳನ್ನು ಪಾಸು ಮಾಡಿದ ಯುವಕರಿಗೆ ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ದೊರೆಯುತ್ತಿದ್ದವು” ಎಂದು ಮನವರಿಕೆ ಮಾಡಿದ್ದಾರೆ.
“ರಾಜ್ಯ ಸರ್ಕಾರ ಕೂಡಲೇ ಕೃಷಿ ವಿಶ್ವವಿದ್ಯಾಲಯಗಳಿಗೆ ಸೂಕ್ತ ಆದೇಶ ನೀಡುವ ಮೂಲಕ ಕೃಷಿ ವಿಜ್ಞಾನ ಡಿಪ್ಲೊಮಾ ಕೋರ್ಸ್‌ಗಳನ್ನು ಮತ್ತೆ ಆರಂಭಿಸಲು ಸೂಚಿಸಬೇಕು” ಎಂದು ಪತ್ರ ಮೂಲಕ 11 ಸದಸ್ಯರು ಸಹಿಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಕೋರಿದ್ದಾರೆ.
ಬಿಜೆಪಿ ಆದೇಶವನ್ನೇ ಮುಂದುವರಿಸಿದ ಕಾಂಗ್ರೆಸ್ ಸರ್ಕಾರ
ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ 2023-24ನೇ ಸಾಲಿನ ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರದ ಆದೇಶಕ್ಕೆ ತಲೆಬಾಗಿ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ವಿವಿಗಳು ಹಿಂಪಡೆದಿವೆ. ಈ ಕುರಿತು ಈ ದಿನ.ಕಾಮ್ ವಿಶೇಷ ವರದಿ ಪ್ರಕಟಿಸಿತ್ತು.
ಕೃಷಿ ವಿಶ್ವವಿದ್ಯಾಲಯಗಳಲ್ಲಿ ದಶಕದ ಹಿಂದೆ ರಾಜ್ಯ ಸರ್ಕಾರ ಆರಂಭಿಸಿದ್ದ ಎರಡು ವರ್ಷದ ಡಿಪ್ಲೊಮಾ ಕೋರ್ಸ್‌ಗಳನ್ನು ಬಿಜೆಪಿ ಸರ್ಕಾರ ತನ್ನ ಅವಧಿಯಲ್ಲಿ ಸ್ಥಗಿತಗೊಳಿಸಿದೆ. ಪರಿಣಾಮ ಕೃಷಿಕರ ಮಕ್ಕಳ ಭವಿಷ್ಯದ ಮೇಲೆ ಬರೆ ಎಳೆದಂತಾಗಿದೆ. ಕಾಂಗ್ರೆಸ್ ಸರ್ಕಾರ ಕೂಡ ಈ ಬಗ್ಗೆ ಪರಿಶೀಲಿಸದೆ ಬಿಜೆಪಿ ಸರ್ಕಾರದ ಆದೇಶವನ್ನೇ ಮುಂದುವರಿಸಿದೆ.