ಮೈಸೂರು ನಗರದ ಹೂಟಗಳ್ಳಿ ಎಸ್‌ಆರ್‌ಎಸ್ ಕಾಲೋನಿಯಲ್ಲಿರುವ ಒಡನಾಡಿ ಸೇವಾ ಸಂಸ್ಥೆ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ‘ ಪ್ರಸ್ತುತ ವಿದ್ಯಮಾನದಲ್ಲಿ ತೇಜಸ್ವಿ ಚಿಂತನೆ ‘ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದಾರ್ಥನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕಿ ಡಾ.ತ್ರಿವೇಣಿ ‘ ಬರಹದಲ್ಲಿ ವಾಸ್ತವ ತೆರೆದಿಟ್ಟವರು ಪೂರ್ಣಚಂದ್ರ ತೇಜಸ್ವಿ ‘ ಎಂದು ಅಭಿಮತ ವ್ಯಕ್ತಪಡಿಸಿದರು.
” ನವ್ಯ ಕಾಲದ ಉದಯದಲ್ಲಿ ನಗರದಿಂದ ಹಳ್ಳಿಯ ಕಡೆ ಮುಖ ಮಾಡಿ ಹಳ್ಳಿ ಬದುಕು, ನಾಗರಿಕತೆ ಜನರ ಮೇಲೆ ಉಂಟು ಮಾಡಿದ ಪ್ರಭಾವದ ಕುರಿತು ಸಾಹಿತ್ಯದಲ್ಲಿ ಕಟ್ಟಿಕೊಡುವ ಕೆಲಸವನ್ನು ತೇಜಸ್ವಿ ಮಾಡಿದ್ದಾರೆ. ಅವರ ಒಟ್ಟು ಸಾಹಿತ್ಯ ಹೇಳುವುದು ಸಾಹಿತ್ಯ, ಪರಿಸರ ಮತ್ತು ಮನುಷ್ಯನ ಸಂಘರ್ಷಗಳು, ಆ ಮೂಲಕ ಜಗತ್ತಿನ ಗ್ರಹಿಕೆ ಅದರ ಪರಿಣಾಮಗಳು, ಅದನ್ನು ಎದುರಿಸುವ ಬಗ್ಗೆ ಹಾಗೂ ಅದರ ತಾಕಲಾಟಗಳ ಬಗ್ಗೆ ಬರವಣಿಗೆಯ ಉದ್ದಕ್ಕೂ ಕಟ್ಟಿಕೊಡುವ ಕೆಲಸ ಮಾಡಿದ್ದಾರೆ “.
” ಮನುಷ್ಯನನ್ನು ವೈಚಾರಿಕವಾಗಿ ಎಚ್ಚರಿಸುವುದೇ ತೇಜಸ್ವಿಯವರ ಬರಹದ ಮೂಲ ಆಶಯವಾಗಿದೆ. ವಿಶ್ವ ಸಾಹಿತ್ಯದಲ್ಲಿ ಬೇರೆ ಯಾವ ಭಾಷೆಗಳಿಗೂ ದಕ್ಕದ ಸ್ಥಾನಮಾನ ಕನ್ನಡಕ್ಕೆ ದೊರಕಿದೆ. ಈ ನಿಟ್ಟಿನಲ್ಲಿ ಪೂರ್ಣ ಚಂದ್ರ ತೇಜಸ್ವಿ ಅವರ ಕೊಡುಗೆಯೂ ಅಪಾರವಾಗಿದೆ. ತೇಜಸ್ವಿಯವರು ಪರಿಪೂರ್ಣರಾಗಿ, ತೇಜಸ್ಸಿನ ಹಾಗೂ ತನ್ನದೇ ಆದ ವಿಶಿಷ್ಟ ಜೀವನ ಕಟ್ಟಿಕೊಂಡ ಮಹಾನ್ ಚೇತನ. ಇವತ್ತಿನ ಪೀಳಿಗೆಗೆ ಸಾಹಿತ್ಯದ ಆಸಕ್ತಿಯಿದ್ದರೆ, ಅದರ ಒಲವು ಹೆಚ್ಚಿನವರಿಗೆ ತೇಜಸ್ವಿಯವರ ಬರಹದಿಂದ ಮೂಡಿದೆ. ಅದು ಐಟಿ ಕ್ಷೇತ್ರಗಳಲ್ಲಿ ಹೆಚ್ಚಾಗಿ ಪ್ರಭಾವಿಸಿದೆ. ಅವರು ಒಂದು ವಿಸ್ಮಯ ಲೋಕವಿದ್ದಂತೆ, ಓದಿದಷ್ಟು ತೆರೆದುಕೊಳ್ಳುತ್ತಾ ಹೋಗುತ್ತಾರೆ ” ಎಂದರು.
” ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ಮಿತಿ ಮೀರಿದೆ. ಭ್ರಷ್ಟಾಚಾರ, ಧರ್ಮ, ಜಾತಿ ತಿಕ್ಕಾಟ, ರಾಜಕೀಯ ಕುತಂತ್ರ ಬುದ್ಧಿ ಇಂತಹ ಅನೇಕ ಸಮಾಜಘಾತುಕ ಸಂಕಟಗಳಿಗೆ ಸಿಲುಕಿರುವ ಜನಸಾಮಾನ್ಯರನ್ನು ತೇಜಸ್ವಿಯವರ ಬರಹ ಹಾಗೂ ಬದುಕು ಎಚ್ಚರಿಸುತ್ತದೆ. ರಾಮಮನೋಹರ ಲೋಹಿಯಾ ಅವರ ತತ್ವಚಿಂತನೆ, ಕುವೆಂಪು ಅವರ ಕಲಾಸೃಷ್ಟಿ ಹಾಗೂ ಶಿವರಾಮ ಕಾರಂತರ ಜೀವನ ದೃಷ್ಟಿ ಮತ್ತು ಬದುಕಿನ ಪ್ರಯೋಗಶೀಲತೆ ಅವರ ಬದುಕಿನ ಮೇಲೆ ಪ್ರಭಾವ ಬೀರಿ ಅವರನು ವಿಭಿನ್ನವಾಗಿಸಿದವು. ತೇಜಸ್ವಿ ಬದುಕಿನ ಸುತ್ತಲಿನ ನೈಜತೆಯನ್ನೇ ಪಾತ್ರಗಳಾಗಿ ಸೃಷ್ಟಿಸಿ, ಸಾಹಿತ್ಯವನ್ನು ಜೀವನ ಮಟ್ಟಕ್ಕೆ ತಂದು ಅಸಲಿತನವನ್ನು ಸೃಷ್ಟಿಸಿದರು ” ಎಂದರು.
ಒಡನಾಡಿ ಸಂಸ್ಥೆಯ ನಿರ್ದೇಶಕ ಸ್ವಾಸ್ಥ್ಯ ಮಾತನಾಡಿ ತೇಜಸ್ವಿಯವರು ಕುವೆಂಪು ಕಂಡ ವಿಶ್ವಮಾನವರಂತವರು. ಬರಹಗಾರರಾಗಿ, ವಿಚಾರವಂತರಾಗಿ, ಸಂಘಟಕರಾಗಿ ಹೊಸ ತಲೆಮಾರಿನ ಅನುಕೂಲಕ್ಕಾಗಿ ವರ್ತಮಾನವನ್ನು, ಜೀವಪರವಾದ ವಾಸ್ತವವನ್ನು ದಾಖಲಿಸಿದ ದೂರದೃಷ್ಟಿಯನ್ನು ತೇಜಸ್ವಿ ಹೊಂದಿದ್ದರು. ಕಾಡಿನ ಪ್ರಶಾಂತತೆ, ಅದರೊಳಗಿನ ಕ್ರೌರ್ಯಗಳನ್ನು ಹೇಳುತ್ತಲೇ, ಮನುಷ್ಯ ಸದಾ ಜೀವಪರವಾದ ಮಿಡಿತವನ್ನು ಹೊಂದಿರುವಂತವರು. ಅವರನ್ನು ಮತ್ತಷ್ಟು ಮೃದುಗೊಳಿಸುವಲ್ಲಿ ಪ್ರಕೃತಿ, ವಿಜ್ಞಾನಗಳೊಟ್ಟಿಗೆ ಮೇಲೈಸುತ್ತಾ ನಿರಂತರವಾದ ಹುಡುಕಾಟವನ್ನು ಸೃಷ್ಟಿಸಬೇಕೆನ್ನುವ ವಿಸ್ಮಯ ಲೋಕದ ವಿಶ್ವಕೋಶದಂತಿದ್ದವರು ” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಹೆಮ್ಮಿಗೆ ಹಾಡಿಗಿಲ್ಲ ‘ ಗೃಹಜ್ಯೋತಿ ‘
ಪುಸ್ತಕ ಪ್ರಕಾಶನ ಮುಖ್ಯಸ್ಥ ಶ್ರೀರಾಮ್, ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕರಾದ ಸ್ವಾನ್ಲಿ, ಪರಶು ಕಾರ್ಯಕ್ರಮದಲ್ಲಿ ಇದ್ದರು.