- ಆರೋಪಿಯನ್ನು 7 ದಿನಗಳ ಕಾಲ ಲೋಕಾಯುಕ್ತ ಪೊಲೀಸರ ವಶಕ್ಕೆ ನೀಡಿದ ನ್ಯಾಯಾಲಯ
- ಆರೋಪಿಯು ತಹಶೀಲ್ದಾರ ಹುದ್ದೆಯಲ್ಲಿ ಮುಂದುವರೆದರೆ ತನಿಖೆಗೆ ಅಡ್ಡಿಯಾಗುವ ಸಾಧ್ಯತೆ
₹500 ಕೋಟಿ ಅಕ್ರಮ ಆಸ್ತಿ ಹೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಲೋಕಾಯುಕ್ತ ಪೊಲೀಸರ ವಶದಲ್ಲಿರುವ ಕೆ ಆರ್ ಪುರ ತಹಶೀಲ್ದಾರ ಅಜಿತ್ ಕುಮಾರ್ ರೈ ಅವರನ್ನು ಕಂದಾಯ ಇಲಾಖೆ ಅಮಾನತು ಮಾಡಿ ಆದೇಶ ಹೊರಡಿಸಿದೆ.
ಬೆಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ರೀತ್ಯಾ ದೂರು ದಾಖಲಿಸಿಕೊಂಡು ಘನ 23ನೇ ಹೆಚ್ಚುವರಿ ನ್ಯಾಯಾಲಯದಿಂದ ಅಗತ್ಯವಾದ ಶೋಧನಾ ವಾರೆಂಟ್ ಪಡೆದುಕೊಂಡು ತಹಸೀಲ್ದಾರ್ ಅಜಿತ್ ರೈ ನಿವಾಸಗಳಲ್ಲಿ ಶೋಧ ಕಾರ್ಯ ನಡೆಸಿದ್ದರು.
ಲೋಕಾಯುಕ್ತ ಪೊಲೀಸರು ಬುಧವಾರ ಬೆಳಗ್ಗೆ ಅಜಿತ್ ರೈ ಅವರ ಮನೆ ಹಾಗೂ ಇತರ ಹತ್ತು ಸ್ಥಳಗಳ ಮೇಲೆ ದಾಳಿ ಮಾಡಿ, ಶೋಧ ಕಾರ್ಯ ನಡೆಸಿದ್ದರು. ಈ ಶೋಧ ಕಾರ್ಯ ಗುರುವಾರ ತಡ ರಾತ್ರಿಯವರೆಗೂ ನಡೆದಿತ್ತು. ಈ ವೇಳೆ, ಆರೋಪಿ ಅಜಿತ್ ರೈ ₹500 ಕೋಟಿಗೂ ಹೆಚ್ಚು ಮೌಲ್ಯದ ಬೇನಾಮಿ ಆಸ್ತಿಯನ್ನು ಹೊಂದಿರುವುದು ಬೆಳಕಿಗೆ ಬಂದಿತ್ತು.
ಆದಾಯಕ್ಕಿಂತ ದುಪ್ಪಟ್ಟು ಆಸ್ತಿ ಹೊಂದಿರುವ ಹಿನ್ನೆಲೆ, ಅಜಿತ್ ರೈ ಅವರನ್ನು ಗುರುವಾರ ಲೋಕಾಯುಕ್ತ ತನಿಖಾ ತಂಡ ಬಂಧನ ಮಾಡಿತ್ತು. ಶುಕ್ರವಾರ ಆರೋಪಿಯನ್ನು ಸಿಟಿ ಸಿವಿಲ್ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಲೋಕಾಯುಕ್ತ ಪೊಲೀಸರು ನ್ಯಾಯಲಯದ ಮುಂದೆ ಹೆಚ್ಚಿನ ವಿಚಾರಣೆಗಾಗಿ ಏಳು ದಿನಗಳ ಕಾಲ ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು.
ಈ ಸುದ್ದಿ ಓದಿದ್ದೀರಾ? ರೈಲಿನಲ್ಲಿ ಕೊಳಾಯಿ ಕದಿಯುತ್ತಿದ್ದ ಕಳ್ಳರ ಬಂಧನ
ನಗರದ 78ನೇ ಸಿಸಿಎಚ್ ನ್ಯಾಯಾಲಯ ಆರೋಪಿಯನ್ನು 7 ದಿನಗಳ ಕಾಲ ಲೋಕಾಯುಕ್ತ ಪೊಲೀಸರ ವಶಕ್ಕೆ ನೀಡಿ ಶುಕ್ರವಾರ ಆದೇಶ ನೀಡಿದೆ. ಹಾಗೆಯೇ, ಆರೋಪಿಯು ತಹಶೀಲ್ದಾರ್ ಹುದ್ದೆಯಲ್ಲಿ ಮುಂದುವರೆದರೆ, ತನಿಖೆಗೆ ಅಡ್ಡಿಯಾಗುವ ಸಾಧ್ಯತೆ ಹಿನ್ನೆಲೆ, ತಹಶೀಲ್ದಾರನನ್ನು ಅಮಾನತ್ತಿನಲ್ಲಿಡಲು ನ್ಯಾಯಾಲಯ ಆದೇಶಿಸಿದೆ.