ದಾವಣಗೆರೆಯಲ್ಲಿ ಏಪ್ರಿಲ್ 26ರಂದು ಹೈಸ್ಕೂಲು ಆವರಣದ ಬಳಿಯ ಬೀರಲಿಂಗೇಶ್ವರ ಮೈದಾನದಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಂವಿಧಾನ ಸಂರಕ್ಷಣಾ ಪಡೆ ಕಟ್ಟುವ ಮಹಾಭಿಯಾನದ ಚಾಲನೆಗಾಗಿ ಸಂವಿಧಾನ ಸಂರಕ್ಷಕರ ಸಮಾವೇಶ ಆಯೋಜಿಸಿದ್ದು, ಸಂವಿಧಾನ ಬದಲಿಸುತ್ತೇವೆ, ಸಂವಿಧಾನ ತಿದ್ದುಪಡಿ ಮಾಡಿಬಿಡುತ್ತೇವೆ ಎನ್ನುವವರ ವಿರುದ್ಧವಾಗಿ ಸಂವಿಧಾನದ ಸಂರಕ್ಷಣೆ ಮಾಡುವ ಸಲುವಾಗಿ ಸಂವಿಧಾನ ಸಂರಕ್ಷಕರ ಪಡೆ ಕಟ್ಟಲಾಗುತ್ತದೆ” ಎಂದು ಸಂಚಾಲಕ ಕೆ ಎಲ್ ಅಶೋಕ್ ತಿಳಿಸಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಮಾವೇಶ ಸಮಿತಿಯ ಸಂಚಾಲಕ ಕೆ.ಎಲ್.ಅಶೋಕ್ “ಎಪ್ರಿಲ್ 26ರ ಬೆಳಿಗ್ಗೆ 11.30ಕ್ಕೆ ಸಂವಿಧಾನ ಪೆರೇಡ್ ನಡೆಯಲಿದ್ದು, ಉದ್ಘಾಟನೆಯನ್ನು ಗಣ್ಯರಾದ ಎನ್.ವೆಂಕಟೇಶ್, ತಾರಾ ರಾವ್, ಮೊಹಮ್ಮದ್ ಯೂಸುಫ್ ಕನ್ನಿ, ಫಾದರ್ ಜರಾಲ್ಡ್ ಡಿಸೋಜಾ ನೆರವೇರಿಸಲಿದ್ದಾರೆ. ಪೆರೇಡ್ ಬೀರಲಿಂಗೇಶ್ವರ ದೇವಸ್ಥಾನ ಅವರಣದಿಂದ ಹೊರಟು ಎವಿಕೆ ಕಾಲೇಜು ರಸ್ತೆ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಗಾಂಧಿ ವೃತ್ತದ ಮೂಲಕ ಬೀರಲಿಂಗೇಶ್ವರ ದೇವಸ್ಥಾನ ಆವರಣಕ್ಕೆ ಹಿಂತಿರುಗಲಿದೆ” ಎಂದರು.
“ಮಧ್ಯಾಹ್ನ 2ರಿಂದ ಬಹಿರಂಗ ಸಮಾವೇಶ ನಡೆಯಲಿದ್ದು, ಹೆಚ್.ಆರ್.ಬಸವರಾಜಪ್ಪ, ಬಿ.ಟಿ.ಲಲಿತ ನಾಯ್ಕ, ಬಡಗಲಪುರ ನಾಗೇಂದ್ರ, ಗುರುಪ್ರಸಾದ್ ಕೆರೆಗೋಡು ಅಧ್ಯಕ್ಷೀಯ ಮಂಡಳಿಯಲ್ಲಿ ಉಪಸ್ಥಿತರಿರಲಿದ್ದಾರೆ. ವಿಶೇಷ ಉಪಸ್ಥಿತಿಯಲ್ಲಿ ಎಸ್.ಆರ್.ಹಿರೇಮಠ, ಡಾ.ವಿಜಯ, ಅಲ್ಲಮಪ್ರಭು ಬೆಟ್ಟದೂರು, ಚಾಮರಸ ಮಾಲಿ ಪಾಟೀಲ್ ಇರಲಿದ್ದಾರೆ. ಕಾರ್ಯಕ್ರಮವನ್ನು ಅನೀಸ್ ಪಾಷಾ, ಡಾ.ಎ.ಬಿ.ರಾಮಚಂದ್ರಪ್ಪ ನಿರ್ವಹಿಸಲಿದ್ದಾರೆ” ಎಂದು ಮಾಹಿತಿ ನೀಡಿದರು.
“ಯುವ ಸಂಗಾತಿಗಳಿಂದ ರಾಷ್ಟ್ರಧ್ವಜವನ್ನು ಹಿಡಿದು ಸ್ಪೂರ್ತಿದಾಯಕ ಸಂವಿಧಾನದ ಪೀಠಿಕೆ ಮತ್ತು
ಸಂಕಲ್ಪವಿಧಿಯನ್ನು ಸಮಾವೇಶದ ಪ್ರತಿನಿಧಿಗಳಿಗೆ ಬೋಧಿಸುವ ಮೂಲಕ ಸಂವಿಧಾನ ಮಹಾಯಾನಕ್ಕೆ ಚಾಲನೆ ನೀಡಲಾಗುವುದು. ಹಿರಿಯ ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಉದ್ಘಾಟನಾ ನುಡಿಯನ್ನಾಡಲಿದ್ದು, ಮಹಾಯಾನದ ಪರಿಕಲ್ಪನೆ ಕುರಿತು ನೂರ್ ಶ್ರೀಧರ್ ಮಾತನಾಡಲಿದ್ದರೆ. ಮುಖ್ಯ ಅತಿಥಿಗಳಾಗಿ ಗಣ್ಯರಾದ ಪ್ರಕಾಶ್ ರೈ, ವಿ.ನಾಗರಾಜ್, ಜಿಗ್ನೇಶ್ ಮೇವಾನಿ, ಪರಕಾಲ ಪ್ರಭಾಕರ್, ದರ್ಶನ್ ಪಾಲ್, ಪ್ರೊ. ಜಾಫೆಟ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ನಂತರ ಸಮಾರೋಪ ಸಮಾರಂಭ ನಡೆಯಲಿದೆ” ಎಂದು ಕಾರ್ಯಕ್ರಮದ ವಿವರ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಕ್ರಮ ಗಣಿಗಾರಿಕೆ, ಲೋಕಾಯುಕ್ತದಿಂದ ಗಣಿ, ಭೂ ವಿಜ್ಞಾನ ಇಲಾಖೆ ಮೇಲೆ ಸ್ವಯಂಪ್ರೇರಿತ ದೂರು.
“ಸಂವಿಧಾನ ಸಂರಕ್ಷಕರ ಸಮಾವೇಶದಲ್ಲಿ ಸುಮಾರು 10 ಸಾವಿರ ಸಂರಕ್ಷಣಾ ಕಲಿಗಳು ಸೇರಲಿದ್ದು, ತಿಂಡಿ, ಊಟ ಹಾಗೂ ದೂರದ ಊರಿನಿಂದ ಬರುವ ಎಲ್ಲರಿಗೂ ವಿಶ್ರಾಂತಿಗಾಗಿ ಇಲ್ಲಿನ ಕೆಲ ಕಲ್ಯಾಣ ಮಂಟಪಗಳಲ್ಲಿ ವ್ಯವಸ್ಥೆ ಮಾಡಲಾಗಿದೆ” ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಾವೇಶ ಸಮಿತಿಯ ಅನೀಶ್ ಪಾಷ, ಕತ್ತಲಗೆರೆ ತಿಪ್ಪಣ್ಣ, ಹೊನ್ನೂರು ಮುನಿಯಪ್ಪ, ಇಸ್ಮಾಹಿಲ್, ಜಬೀನಾಖಾನಂ, ಪವಿತ್ರ, ಕರಿಬಸಪ್ಪ, ಗಜೇಂದ್ರ ಹಾಜರಿದ್ದರು.