ಕಾಮುಕರ ಗುಂಪೊಂದು ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸುತ್ತಿದ್ದಾಗ, ಯುವತಿಯ ರಕ್ಷಣೆಗೆ ಬಂದ ಯುವಕನನ್ನು ಕಾಮುಕರ ಗುಂಪು ಹೊಡೆದು ಕೊಂದಿರುವ ಹೃದಯವಿದ್ರಾವಕ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ.
ಕೋಲ್ಕತ್ತಾದ ನ್ಯೂ ಟೌನ್‌ನ ನಿರ್ಜನ ಪ್ರದೇಶದಲ್ಲಿ ಮೂವರು ಕಾಮುಕರು ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಈ ವೇಳೆ, ಸ್ಥಳಕ್ಕೆ ಬಂದ ಯುವಕ ಕಾಮುಕರನ್ನು ತಡೆದಿದ್ದಾನೆ. ಕಾಮುಕರು ಮತ್ತು ಯುವಕನ ನಡುವೆ ಗಲಾಟೆಯಾಗಿದ್ದು, ಯುವಕನನ್ನು ಕಾಮುಕರು ಅಮಾನುಷವಾಗಿ ಹೊಡೆದು ಕೊಂದಿದ್ದಾರೆ ಎಂದು ವರದಿಯಾಗಿದೆ.
ಘಟನೆಯಲ್ಲಿ ಸಂಕೇತ್ ಚಟರ್ಜಿ ಎಂಬ ಯುವಕ ಸಾವನ್ನಪ್ಪಿದ್ದಾನೆ. ಆತನ ತಲೆಗೆ ಕಟ್ಟಿಗೆಯಿಂದ ಕಾಮುಕರು ಹಲವು ಬಾರಿ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವವಾಗಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಯವಕನನ್ನುಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಈ ವರದಿ ಓದಿದ್ದೀರಾ?: ‘ಸಂಸತ್ತು ಸರ್ವೋಚ್ಚ’ ಎಂದಿದ್ದಾರೆ ಧನಕರ್; ನಿಜಕ್ಕೂ ಯಾವುದು ಶ್ರೇಷ್ಠ ಮತ್ತು ಸರ್ವೋಚ್ಚ?
ಸಂತ್ರಸ್ತ ಯುವತಿ ಮತ್ತು ಮೃತ ಯುವಕ ಸ್ನೇಹಿತರಾಗಿದ್ದು, ಇಬ್ಬರ ನಡುವೆ ಸಣ್ಣ ಜಗಳ ನಡೆದಿತ್ತು. ಜಗಳದಿಂದ ಬೇಸರಗೊಂಡ ಯುವತಿ ಮನೆಯಿಂದ ರಾತ್ರಿ ವೇಳೆ ಹೊರಬಂದಿದ್ದಾರೆ. ರಸ್ತೆಯಲ್ಲಿ ವಾಕ್ ಮಾಡುವಾಗ ಮೂವರು ಕಾಮುಕರು ಆಕೆಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾರೆ. ಯುವತಿಯನ್ನು ಹುಡುಕಿಕೊಂಡು ಬಂದ ಸಂಕೇತ್, ಯುವತಿಯನ್ನು ರಕ್ಷಿಸಿದ್ದಾರೆ. ಈ ವೇಳೆ, ಆತನ ಮೇಲೆ ಕಾಮುಕರು ಭೀಕರವಾಗಿ ಹಲ್ಲೆ ನಡೆಸಿದ್ದಾರೆ.
ಘಟನೆ ಬಳಿಕ ಮೂವರು ಆರೋಪಿಗಳು ಪರಾರಿಯಾಗಿದ್ದರು. ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಸಾಗರ್ ದಾಸ್, ರಾಜು ಘೋಷ್ ಹಾಗೂ ಶಂಭು ಮಂಡಲ್ ಎಂದು ಗುರುತಿಸಲಾಗಿದೆ.