ಸುಸಜ್ಜಿತ ಮೀನು ಮಾರುಕಟ್ಟೆ ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಕರೆ ನೀಡಿದರು.
ಯಾದಗಿರಿ ನಗರದ ಹೈಟೆಕ್ ಮೀನು ಮಾರುಕಟ್ಟೆಯ ಮಾರಾಟ ಮಳಿಗೆಗಳಲ್ಲಿ ಮೀನು ಮಾರಾಟಕ್ಕೆ ಚಾಲನೆ ನೀಡಿ ಅವರು ಮಾತನಾಡಿ, “ನಾನು ಮೀನುಗಾರರ ಬಡಾವಣೆಯಲ್ಲಿಯೇ ಇದ್ದು ಹತ್ತಿರದಿಂದ ಎಲ್ಲರ ಸಮಸ್ಯೆಗಳನ್ನು ಕಂಡಿದ್ದೇನೆ. ಹಾಗಾಗಿ ನಿಮ್ಮ ಸಮಸ್ಯೆಗಳ ಬಗ್ಗೆ ನನಗೆ ಗೊತ್ತಿದೆ. ಯಾವುದೇ ಸಮಸ್ಯೆ ಇದ್ದರೂ ನನ್ನ ಗಮನಕ್ಕೆ ತಂದಲ್ಲಿ ನಾನು ಪರಿಹರಿಸಲು ಮುತುವರ್ಜಿ ವಹಿಸುವೆ” ಎಂದು ತಿಳಿಸಿದರು.
“ಮೀನುಗಾರಿಕೆ ಇಲಾಖೆಯಿಂದ ಬರುವ ಸೌಲಭ್ಯಗಳನ್ನು ನೀವು ಪಡೆದುಕೊಂಡು ಬೆಳವಣಿಗೆ ಹೊಂದಬೇಕು. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ ಮುಖ್ಯ ವಾಹಿನಿಗೆ ತರಬೇಕು” ಎಂದು ಹೇಳಿದರು.
“ಮೀನು ಮಾರುಕಟ್ಟೆಗೆ ಕಾಂಕ್ರಿಟ್ ರಸ್ತೆ, ಚರಂಡಿ ವಿದ್ಯುತ್ ಕಂಬಗಳ ಅಳವಡಿಸುವ ಕಾರ್ಯ ವಿಳಂಬವಾಗಿರುವುದು ನನ್ನ ಗಮನಕ್ಕೆ ಬಂದಿದೆ. ಚುನಾವಣೆಯ ಕಾರಣದಿಂದ ಕಾಮಗಾರಿ ವಿಳಂಬವಾಗಿದೆ. ನಗರಸಭೆ ಅಧಿಕಾರಿಗಳು ಶೀಘ್ರದಲ್ಲಿ ಈ ಕೆಲಸಗಳನ್ನು ಪೂರ್ಣಗೊಳಿಸಬೇಕು” ಎಂದು ತಿಳಿಸಿದರು.
ಸಾಮಾಜಿಕ ಹೋರಾಟಗಾರ ಉಮೇಶ ಕೆ ಮುದ್ನಾಳ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, “ಬಹುತೇಕ ವರ್ಷಗಳಿಂದ ಜಿಲ್ಲೆಯಲ್ಲಿ ಮೀನುಗಾರರಿಗೆ ಮಾರಾಟ ಮಳಿಗೆ ಇರದೇ ಇದ್ದುದರಿಂದ ರಸ್ತೆ ಬದಿಯಲ್ಲಿ ಮೀನು ಮಾರಿ ಬದುಕುವ ಪರಿಸ್ಥಿತಿ ಇತ್ತು. ಇದನ್ನು ಮನಗಂಡು ನಿರಂತರ ನಡೆಸಿದ ಹೋರಾಟಕ್ಕೆ ಪ್ರತಿಯಾಗಿ ಇದೀಗ ಹೈಟೆಕ್ ಮೀನು ಮಾರಾಟ ಮಳಿಗೆ ನಿರ್ಮಾಣಗೊಂಡಿದೆ” ಎಂದು ಸಂತಸ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕೃಷಿ ವಿವಿಗಳಲ್ಲಿ ಡಿಪ್ಲೊಮಾ ಕೋರ್ಸ್ ಪುನರಾರಂಭಿಸಲು ಸಿಎಂ ಸಿದ್ದರಾಮಯ್ಯಗೆ ಆಗ್ರಹ
ಕಾರ್ಯಕ್ರಮದಲ್ಲಿ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ರಾಜಣ್ಣ, ತಾಲೂಕು ಅಧಿಕಾರಿ ವೆಂಕಟೇಶ, ನಗರಸಭೆ ಎಇಇ ರಜನಿಕಾಂತ್, ಜೆ ಇ ರಾಕೇಶ್, ಸಹಾಯಕ ನಿಬಂಧಕ ತಕಿಯುದ್ದಿನ್, ಮೇಘನಾಥ ಬೆಳ್ಳಿ, ನಾಗರಾಜ್, ರವಿ ದಾಸನ್, ಮಾನಪ್ಪ ಆರ್ ಒ, ಮಲ್ಲಿಕಾರ್ಜುನ ಗೋಸಿ, ಮರೆಪ್ಪ ಬಿಳ್ಹಾರ, ತಾಯಪ್ಪ, ಕೃಷ್ಣಪ್ಪ, ಮಲ್ಲಪ್ಪ ಹಿರೇಬೋವಿ, ಭೀಮಣ್ಣ ಪೂಜಾರಿ, ದೇವಿಂದ್ರಪ್ಪ, ಯಂಕಪ್ಪ, ಮಲ್ಲಪ್ಪ, ಬಂಡಿ, ಅಂಬರೇಷ, ಯಲ್ಲಪ್ಪ ಗಂಟಿ ಸೇರಿದಂತೆ ಅನೇಕರು ಇದ್ದರು.