ನಾಲ್ಕು ವರ್ಷಗಳಿಂದ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ರೈತರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಬಲವಂತ ಹಾಗೂ ಅನ್ಯಾಯದ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಕಿವಿಗೊಡದೇ ರೈತರ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ.
ಕಳೆದ 1118 ದಿನಗಳಿಂದ ನಾಡ ಕಚೇರಿ ಮುಂದೆ ರೈತರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಶೇ.80 ರಷ್ಟು ರೈತರು ಲಿಖಿತವಾಗಿ ಭೂಸ್ವಾಧೀನಕ್ಕೆ ತಮ್ಮ ಅಸಮ್ಮತಿ ಹಾಗೂ ವಿರೋಧವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ. ಆದರೆ, ರೈತರ ಪ್ರಬಲ ವಿರೋಧ ಧಿಕ್ಕರಿಸಿ ರಾಜ್ಯ ಸರ್ಕಾರ ಅಂತಿಮ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದೆ. ಸರ್ಕಾರದ ಕ್ರಮವನ್ನು ಕಟುವಾಗಿ ಖಂಡಿಸಿರುವ ಕರ್ನಾಟಕ ಪ್ರಾಂತ ರೈತ ಸಂಘ (KPRS), ಇದು ರಾಜ್ಯ ಸರ್ಕಾರದ ಹೇಡಿತನದ ಕೃತ್ಯ ಎಂದು ಕಟುವಾಗಿ ಟೀಕಿಸಿದೆ.
ಭೂಸ್ವಾಧೀನ ತಡೆ ಕೋರಿ ರೈತರು ವಿವಿಧೆಡೆ ನಡೆಸಿದ ಪ್ರತಿಭಟನಾ ಧರಣಿ ಸ್ಥಳಗಳಿಗೆ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದ ವೇಳೆ ಭೇಟಿ ಕೊಟ್ಟು ತಾವು ಅಧಿಕಾರಕ್ಕೆ ಬಂದರೆ ಅನ್ಯಾಯ ಹಾಗೂ ಬಲವಂತದ ಭೂಸ್ವಾಧೀನ ವನ್ನು ರದ್ದುಪಡಿಸುವುದಾಗಿ ಸಾರ್ವಜನಿಕ ಘೋಷಣೆ ಮಾಡಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಸ್ಪರ್ಧಿಸಿದ್ದ ಈಗ ಉಸ್ತುವಾರಿ ಸಚಿವರಾಗಿರುವ ಕೆ ಹೆಚ್ ಮುನಿಯಪ್ಪ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಬಲವಂತವಾಗಿ ಭೂಸ್ವಾಧೀನ ಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿ ರೈತರ ಮತ ಕೇಳಿದ್ದರು. ಆದರೆ ಈ ಇಬ್ಬರೂ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾದರೂ ತಮ್ಮ ವಚನಕ್ಕೆ ವಿರುದ್ದವಾಗಿ ವರ್ತಿಸಿ, ವಚನಭ್ರಷ್ಟರು ಎಂದು ಸಾಬೀತು ಮಾಡಿಕೊಂಡಿದ್ದಾರೆ. ಇದು ಸಾರ್ವಜನಿಕ ಹುದ್ದೆಗೆ ಮತ್ತು ನಡವಳಿಕೆಗೆ ಯೋಗ್ಯವಲ್ಲದ್ದು ಎಂದು ಕರ್ನಾಟಕ ಪ್ರಾಂತ ರೈತ ಸಂಘ ತೀವ್ರ ವಾಗ್ದಾಳಿ ನಡೆಸಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ರೈತರ ಪ್ರತಿಭಟನಾ ಒತ್ತಡ ಹೆಚ್ಚಿದ ಸಂದರ್ಭದಲ್ಲೆಲ್ಲಾ ಮುಖ್ಯಮಂತ್ರಿ ನೇತೃತ್ವದಲ್ಲಿ ನಾಲ್ಕಾರು ಸಭೆಗಳು, ಉಸ್ತುವಾರಿ ಮಂತ್ರಿ ನೇತೃತ್ವದಲ್ಲಿ ಹತ್ತಾರು ಸಭೆಗಳು ಅಲ್ಲದೇ ಸ್ವತಃ ಉಸ್ತುವಾರಿ ಮಂತ್ರಿ ಹತ್ತಾರು ಬಾರಿ ಧರಣಿ ಸ್ಥಳಕ್ಕೆ ಭೇಟಿ ಕೊಟ್ಟು ರೈತರ ಪರವಾಗಿ ತೀರ್ಮಾನ ಮಾಡುವುದಾಗಿ ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ರೈತರ ಒಪ್ಪಿಗೆ ಇಲ್ಲದೇ ಭೂಸ್ವಾಧೀನ ಮುಂದುವರೆಸುವುದಿಲ್ಲ ಎಂದು ಸಾರ್ವಜನಿಕವಾಗಿ ಹಲವಾರು ಬಾರಿ ಸ್ಪಷ್ಟಪಡಿಸಿದ್ದಾರೆ. ಈ ರೀತಿ ಭರವಸೆ ನೀಡಿ ಒಳಗೊಳಗೆ ಭೂಸ್ವಾಧೀನದ ಪ್ರಕ್ರಿಯೆ ಮುಂದುವರೆಸಿ ಅಂತಿಮ ಅಧಿಸೂಚನೆ ಹೊರಡಿಸಿರುವುದು ರೈತರಲ್ಲಿ ಹತಾಶೆ -ನಿರಾಶೆ ಉಂಟು ಮಾಡಿ ಒಡಕು ಉಂಟು ಮಾಡುವ ಹೀನ ಕುತಂತ್ರವಲ್ಲದೇ ಬೇರೇನೂ ಅಲ್ಲ” ಎಂದು ಕರ್ನಾಟಕ ಪ್ರಾಂತ ರೈತ ಸಂಘ ಹೇಳಿದೆ.
“ಸಾರ್ವಜನಿಕವಾಗಿ ಒಂದು ಮುಖ ತೋರಿ, ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಇನ್ನೊಂದು ರೀತಿಯಲ್ಲಿ ಆದೇಶ ನೀಡಿ ರೈತ ಸಮುದಾಯವನ್ನು ಹಾಗೂ ರೈತ ಹೋರಾಟವನ್ನು ಸಿದ್ದರಾಮಯ್ಯ ರವರ ನೇತೃತ್ವದ ರಾಜ್ಯ ಸರ್ಕಾರ ಅಪಮಾನಿಸಿದೆ. ಚನ್ನರಾಯಪಟ್ಟಣ ಹೋಬಳಿ ರೈತರ ಧರಣಿ ಸ್ಥಳಕ್ಕೆ ಈ ನಾಲ್ಕು ವರ್ಷಗಳಲ್ಲಿ ಅಖಿಲ ಭಾರತ ಕಿಸಾನ್ ಸಭಾ ಅಧ್ಯಕ್ಷರು ,ಸಿಪಿಐಎಂ ಪಾಲಿಟ್ ಬ್ಯೂರೋ ಸದಸ್ಯರು, ಸಂಯುಕ್ತ ಕಿಸಾನ್ ಮೋರ್ಚಾ ನಾಯಕರೂ ಆಗಿರುವ ಡಾ.ಅಶೋಕ್ ಧವಳೆ, ಅಖಿಲ ಭಾರತ ಕಿಸಾನ್ ಸಭಾದ ಅಖಿಲ ಭಾರತ ಹಣಕಾಸು ಕಾರ್ಯದರ್ಶಿ ಮಾಜಿ ಶಾಸಕ ಕೃಷ್ಣಪ್ರಸಾದ್, ಭಾರತೀಯ ಕಿಸಾನ್ ಯೂನಿಯನ್ ನ ರಾಕೇಶ್ ಟಿಕಾಯತ್ ಸೇರಿದಂತೆ ರಾಷ್ಟ್ರೀಯ ರೈತ ನೇತಾರರು ಭೇಟಿ ಕೊಟ್ಟು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇಡೀ ರಾಜ್ಯದ ಎಲ್ಲಾ ರೈತ ಚಳವಳಿಗಳ ಹಾಗೂ ಬುದ್ಧಿಜೀವಿ, ಸಾಹಿತಿಗಳ ಬೆಂಬಲ ಮತ್ತು ಅನುಕಂಪ ಈ ಭೂಸ್ವಾಧೀನ ವಿರೋಧಿ ರೈತರ ಮೇಲೆ ಇದೆ. ಮೇಲಾಗಿ ತಮ್ಮ ತೀವ್ರ ಅನಾರೋಗ್ಯದ ನಡುವೆಯೂ ಈ ರೈತರ ಹೋರಾಟಕ್ಕೆ ನೇತೃತ್ವ ನೀಡುತ್ತಿದ್ದ ಜಿಸಿ ಬಯ್ಯಾರೆಡ್ಡಿರವರು ಈ ಹೋರಾಟದ ಬೇಡಿಕೆಯನ್ನು ಪುನರುಚ್ಚರಿಸುತ್ತಾ ಮರಣವನ್ನಪ್ಪಿದ್ದಾರೆ. ಇಷ್ಟೆಲ್ಲಾ ಇದ್ದರೂ ಬಹುರಾಷ್ಟ್ರೀಯ ಸಂಸ್ಥೆಗಳು, ರಿಯಲ್ ಎಸ್ಟೇಟ್ ಮಾಫಿಯಾಗಳ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ಬಲವಂತದ ಹಾಗೂ ಅನ್ಯಾಯದ ಭೂ ಸ್ವಾಧೀನ ಮಾಡೇ ತೀರುವ ಹಠ ಸರ್ವಾಧಿಕಾರಿ ಮನೋಭಾವದ್ದು ಮತ್ತು ಇಂತಹ ಭೂ ಸ್ವಾಧೀನ ವಿರೋಧಿ ಹೋರಾಟವನ್ನು ರಾಜ್ಯಾದ್ಯಂತ ಸಂಪೂರ್ಣ ಮಟ್ಟ ಹಾಕುವ ಫ್ಯಾಸಿಸ್ಟ್ ದುರುದ್ದೇಶದ್ದು” ಎಂದು ರೈತ ಸಂಘ ಹರಿಹಾಯ್ದಿದೆ.
“ಸರ್ಕಾರದ ದುರುದ್ದೇಶ ಈಡೇರುವುದಕ್ಕೆ ರಾಜ್ಯದ ರೈತ ಸಮುದಾಯ ಅವಕಾಶ ನೀಡುವುದಿಲ್ಲ ಮತ್ತು ಚನ್ನರಾಯಪಟ್ಟಣ ರೈತರ ಹೋರಾಟಕ್ಕೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯು ಸೇರಿದಂತೆ ರಾಜ್ಯದ ಎಲ್ಲಾ ಭೂಸ್ವಾಧೀನದ ಭೀತಿ ಎದುರಿಸುತ್ತಿರುವ ಎಲ್ಲಾ ರೈತರನ್ನು ಒಗ್ಗೂಡಿಸಿ ಚನ್ನರಾಯಪಟ್ಟಣ ಭೂ ಸ್ವಾಧೀನಕ್ಕೆ ಪ್ರಬಲ ವಿರೋಧವನ್ನು ಇನ್ನೂ ಹೆಚ್ಚಿನ ಹೋರಾಟದ ಶಕ್ತಿಯೊಂದಿಗೆ ಮುಂದುವರೆಸುತ್ತೇವೆ” ಎಂದು ಕರ್ನಾಟಕ ಪ್ರಾಂತ ರೈತ ಸಂಘ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.