ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ಅವರ ವಿರುದ್ಧ ಸ್ಟಾಂಡ್‌ಅಪ್ ಕಾಮೆಡಿಯನ್ ಕುನಾಲ್ ಕಾಮ್ರಾ ನೀಡಿದ ಹೇಳಿಕೆ ಸಂಬಂಧಿಸಿದಂತೆ ತನಿಖೆಯನ್ನು ಮುಂದುವರೆಸಲು ಪೊಲೀಸರಿಗೆ ಬಾಂಬೆ ಹೈಕೋರ್ಟ್ ತಿಳಿಸಿದೆ. ಆದರೆ ಕಾಮ್ರಾರ ಬಂಧನ ಮಾಡಬೇಡಿ ಎಂದು ಹೈಕೋರ್ಟ್ ಶುಕ್ರವಾರ ಹೇಳಿದೆ.
ಕಾರ್ಯಕ್ರಮವೊಂದರಲ್ಲಿ ಕುನಾಲ್ ಕಾಮ್ರಾ ಶಿಂದೆ ಅವರನ್ನು ‘ದ್ರೋಹಿ’ ಎಂದು ಕರೆದಿದ್ದರು. ತನ್ನ ಪಕ್ಷವನ್ನೇ ಇಬ್ಭಾಗ ಮಾಡಿದ ದ್ರೋಹಿ ಎಂದಿದ್ದರು. ಇವೆಲ್ಲವನ್ನು ಹಾಡಿನ ಮೂಲಕ ವಿವರಿಸಿದ್ದರು. ಎಲ್ಲಿಯೂ ಶಿಂದೆ ಹೆಸರನ್ನು ಬಳಸದ ಕಾಮ್ರಾ ‘ಥಾಣೆಯ ನಾಯಕ’ ಎಂದು ಹೇಳಿದ್ದರು.
ಇದನ್ನು ಓದಿದ್ದೀರಾ? ಶಿಂದೆ ಟೀಕೆ ಪ್ರಕರಣ | ಎಫ್‌ಐಆರ್ ರದ್ದು ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ಕುನಾಲ್ ಕಾಮ್ರಾ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಶಿಂದೆ ಬೆಂಬಲಿಗರು ಕಾಮ್ರಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಕಿಡಿಗೇಡಿಗಳು ಈ ವಿಡಿಯೋ ರೆಕಾರ್ಡ್ ಆದ ಸ್ಟುಡಿಯೋ ಇದ್ದ ಹೊಟೇಲ್ ಮೇಲೆ ದಾಳಿ ನಡೆಸಿ ಹಲವು ವಸ್ತುಗಳ ಧ್ವಂಸ ಮಾಡಿದ್ದರು. ಈ ಬಗ್ಗೆ ಪ್ರಕರಣವೂ ದಾಖಲಾಗಿದೆ.
ಇವೆಲ್ಲವುದರ ನಡುವೆ ಶಿವಸೇನೆ ನಾಯಕರು ಕಾಮ್ರಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಬೆದರಿಕೆಯನ್ನೂ ಹಾಕಿದ್ದರು. ಜೊತೆಗೆ ಕಾಮ್ರಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಈ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಕುನಾಲ್ ಕಾಮ್ರಾ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸಾರಂಗ್ ಕೊತ್ವಾಲ್ ಮತ್ತು ಎಸ್ ಎಂ ಮೋಡಕ್ ಅವರ ಪೀಠವು ಪುರಸ್ಕರಿಸಿದೆ.
ಅಂದರೆ ಕಾಮ್ರಾ ಅವರ ಅರ್ಜಿಯನ್ನು ದೀರ್ಘವಾಗಿ ವಿಚಾರಣೆಗೆ ಒಳಪಡಿಸಲಾಗುವುದು. ಈ ಅರ್ಜಿಯ ವಿಚಾರಣೆಯ ವೇಳೆ ಕುನಾಲ್ ಕಾಮ್ರಾ ಅವರು ಬಂಧಿಸಬಾರದು ಎಂದು ಪೀಠ ಹೇಳಿದೆ.
ಇದನ್ನು ಓದಿದ್ದೀರಾ? ‘ಯಾರು ಅವರು, 2 ನಿಮಿಷದ ಕಾಮೆಡಿಯನ್’: ಕುನಾಲ್ ಕಾಮ್ರಾ ಬಗ್ಗೆ ಕಂಗನಾ ರಣಾವತ್ ಕಿಡಿ
ಹಾಗೆಯೇ ಪೊಲೀಸರು ಕಾಮ್ರಾ ಅವರ ಹೇಳಿಕೆಯನ್ನು ದಾಖಲಿಸಲು ಬಯಸಿದರೆ ಕಾಮ್ರಾ ಪ್ರಸ್ತುತ ವಾಸವಿರುವ ಚೆನ್ನೈನಲ್ಲಿ ನಡೆಸಬೇಕು. ಮೊದಲೇ ಸೂಚನೆ ನೀಡಬೇಕು ಎಂದೂ ಕೋರ್ಟ್ ತಿಳಿಸಿದೆ.
ಇನ್ನು ಕುನಾಲ್ ಕಾಮ್ರಾ ಅರ್ಜಿಯಲ್ಲಿ ತಾನು ತಮಿಳುನಾಡು ನಿವಾಸಿಯಾಗಿ ಎಂದು ಹೇಳಿದ್ದಾರೆ. ಕಾರ್ಯಕ್ರಮದ ನಂತರ ಬರುತ್ತಿರುವ ಕೊಲೆ ಬೆದರಿಕೆಗಳಿಂದಾಗಿ ಮಹಾರಾಷ್ಟ್ರಕ್ಕೆ ಬರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
