ಸುಮಾರು 24 ವರ್ಷ ಹಳೆಯ ಮಾನನಷ್ಟ ಪ್ರಕರಣದಲ್ಲಿ ಹೋರಾಟಗಾರ್ತಿ, ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರನ್ನು ಬಂಧಿಸಲಾಗಿದೆ. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣ ಇದಾಗಿದೆ.
2010ರಲ್ಲಿ ದಾಖಲಾದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಧಾ ಪಾಟ್ಕರ್ ವಿರುದ್ಧ ಬುಧವಾರ ದೆಹಲಿ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಅನ್ನು ಹೊರಡಿಸಿದೆ. ಶುಕ್ರವಾರ ದೆಹಲಿ ಪೊಲೀಸರು ಬಂಧಿಸಿದ್ದು, ಬಳಿಕ ಬಿಡುಗಡೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? 24 ವರ್ಷ ಹಳೆಯ ಮಾನನಷ್ಟ ಪ್ರಕರಣ: ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ದೋಷಿ
ಈ ಪ್ರಕರಣದಲ್ಲಿ ಮೇಧಾ ಅವರನ್ನು ದೋಷಿ ಎಂದು ದೆಹಲಿ ನ್ಯಾಯಾಲಯ ಕಳೆದ ವರ್ಷ ಮೇ ತಿಂಗಳಲ್ಲಿ ಹೇಳಿದೆ. ಅದಾದ ಬಳಿಕ ಶಿಕ್ಷೆ ಘೋಷಿಸಿದ ನ್ಯಾಯಾಲಯ, 5 ತಿಂಗಳ ಸರಳ ಜೈಲು ಶಿಕ್ಷೆ ವಿಧಿಸಿದೆ ಹಾಗೂ 10 ಲಕ್ಷ ರೂ ಮೊತ್ತವನ್ನು ಪಾವತಿಸುವಂತೆ ತಿಳಿಸಿದೆ.
ಬಳಿಕ ಮೇಧಾ ಅವರಿಗೆ ವಿಧಿಸಿದ್ದ ಶಿಕ್ಷೆ ಮಾರ್ಪಾಡುಗೊಳಿಸಿದ್ದು ಜೈಲು ಶಿಕ್ಷೆಯನ್ನು ತೆರವುಗೊಳಿಸಲಾಗಿದೆ. ಹಾಗೆಯೇ ದಂಡದ ಮೊತ್ತವನ್ನೂ ಕಡಿಮೆಗೊಳಿಸಲಾಗಿದೆ. ಈ ಆದೇಶವನ್ನು ಏಪ್ರಿಲ್ 8ರಂದು ನ್ಯಾಯಾಲಯ ಹೊರಡಿಸಿದೆ.
ಇದನ್ನು ಓದಿದ್ದೀರಾ? ಮಾನನಷ್ಟ ಮೊಕದ್ದಮೆ | ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ಗೆ 5 ತಿಂಗಳ ಜೈಲು ಶಿಕ್ಷೆ
ಆದರೆ ದಂಡದ ಮೊತ್ತವನ್ನು ಪಾವತಿಸದೆ ಮೇಧಾ ಅವರು ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸುತ್ತಿದ್ದಾರೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿಶಾಲ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದರು. ಮೇಧಾ ಪಾಟ್ಕರ್ ಮಾರ್ಪಾಡುಗೊಂಡ ತೀರ್ಪು ಪ್ರಕಾರ ಒಂದು ಲಕ್ಷ ರೂಪಾಯಿಯನ್ನು ದಂಡವಾಗಿ ಪಾವತಿಸಬೇಕಾಗುತ್ತದೆ.
