ಬಡವರ ಹಸಿವು ನೀಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದ ಮಹತ್ವದ ಯೋಜನೆ ಇಂದಿರಾ ಕ್ಯಾಂಟೀನ್. ಆದರೆ, ಗದಗ ಜಿಲ್ಲೆ ರೋಣ ಪಟ್ಟಣದ ಇಂದಿರಾ ಕ್ಯಾಂಟೀನ್ ಉದ್ಘಾಟನೆಯಾಗಿ ಏಳು ತಿಂಗಳು ಕಳೆದರೂ ಬಾಗಿಲು ಮಾತ್ರ ತೆರೆದಿಲ್ಲ. ಇಲ್ಲಿಯ ಅಧಿಕಾರಿಗಳ, ಜನಪ್ರತಿನಿಧಿಗಳ ವಿಳಂಬ ನೀತಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಟ್ಟಣದ ಪಿಡಬ್ಲ್ಯೂಡಿ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ ಹಸಿದವರ ಪಾಲಿಗೆ ಅನ್ನವಾಗಬೇಕಿತ್ತು. ಕಳೆದ ನವೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಟ್ಟಣಕ್ಕೆ ಬಂದು ಉದ್ಘಾಟಿಸಿದ್ದ ಕ್ಯಾಂಟೀನ್, ಏಳು ತಿಂಗಳು ಕಳೆದರೂ ಸೇವೆ ಆರಂಭಿಸದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಹತ್ತಿರದಲ್ಲೇ ಬಸ್ ನಿಲ್ದಾಣ, ಅಂಚೆ ಕಚೇರಿ, ಆಟೋ ನಿಲ್ದಾಣಗಳಿವೆ. ದಿನ ನಿತ್ಯ ಹಳ್ಳಿಗಳಿಂದ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ರೈತರು, ಆಟೋ ಚಾಲಕರು ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ಜನರು ರೋಣ ಪಟ್ಟಣಕ್ಕೆ ಬರುತ್ತಾರೆ. ಹಸಿವು ಹೊತ್ತು ಬಂದವರು ಇಂದಿರಾ ಕ್ಯಾಂಟೀನ್ ಕಡೆಗೆ ಕಣ್ಣು ಹಾಯಿಸಿದರೆ ಕೇವಲ ‘ಇಂದಿರಾ ಕ್ಯಾಂಟೀನ್’ ನಾಮಫಲಕ ಕಾಣುತ್ತದಿಯೇ ಹೊರತು ಊಟ ಮಾತ್ರ ದಕ್ಕುತ್ತಿಲ್ಲ.

ಈ ಹಿಂದೆ ಈದಿನ.ಕಾಮ್ ಇದೇ ಇಂದಿರಾ ಕ್ಯಾಂಟೀನ್ ಕುರಿತು 2024 ಸೆಪ್ಟೆಂಬರ್‌ನಲ್ಲಿ “ಗದಗ | ಅನೈತಿಕ ಚಟುವಟಿಕೆ ತಾಣವಾದ ‘ಇಂದಿರಾ ಕ್ಯಾಂಟೀನ್’; ಜನಪ್ರತಿನಿಧಿ, ಅಧಿಕಾರಿಗಳ ನಿರ್ಲಕ್ಷ್ಯ” ಶೀರ್ಷಿಕೆಯಡಿಯಲ್ಲಿ ವಿಸ್ತೃತವಾದ ವರದಿ ಪ್ರಕಟಿಸಿತ್ತು. ಸಿಎಂ ಕಚೇರಿಯಲ್ಲಿರುವ ವಿಶೇಷ ಕರ್ತವ್ಯಾಧಿಕಾರಿ ಡಾ. ಕೆ ವೈಷ್ಣವಿ ಅವರ ಗಮನಕ್ಕೂ ತಂದಿತ್ತು. ಈ ದಿನ.ಕಾಮ್ ವರದಿಯ ಬೆನ್ನಲ್ಲೇ ಎಚ್ಚೆತ್ತ ರೋಣ ಪುರಸಭೆ ಅಧಿಕಾರಿಗಳು, ಪಟ್ಟಣದ ಇಂದಿರಾ ಕ್ಯಾಂಟೀನ್ ಕಟ್ಟಡ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿ, ಉಳಿದ ಕಾಮಗಾರಿ ಪ್ರಗತಿ ಆರಂಭಿಸಿ ಪೂರ್ಣಗೊಳಿಸಿದರು.
ಕಾಮಗಾರಿ ಪೂರ್ಣಗೊಂಡ ಬಳಿಕ ನವೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ್ದರು. ಅಂದು ಕಾರ್ಯಕ್ರಮವಾದ ಬಳಿಕ ಯಾವೊಬ್ಬ ಜನಪ್ರತಿನಿಧಿಯೂ, ಸಂಬಂಧಪಟ್ಟ ಅಧಿಕಾರಿಯೂ ಇತ್ತ ಕಡೆ ಬಂದಿಲ್ಲ. ಹೆಸರಿಗೆ ಮಾತ್ರ ಕ್ಯಾಂಟೀನ್ ಇದೆ. ಆದರೆ ಸೇವೆ ಆರಂಭವಾಗಲು ಇನ್ನು ಎಷ್ಟು ತಿಂಗಳು ಕಾಯಬೇಕು ಎನ್ನುತ್ತಾರೆ ಸ್ಥಳೀಯರು.
ಇಲ್ಲಿಯ ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ, ವಿಳಂಬ ನೀತಿಯಿಂದ ಇಂದಿರಾ ಕ್ಯಾಂಟೀನ್ ಮತ್ತೆ ಕುಡುಕರ ಅಡ್ಡೆಯಾಗಿ ಮಾರ್ಪಡುತ್ತಿದೆ. ಕ್ಯಾಂಟೀನ್ ಸುತ್ತಮುತ್ತ ಎತ್ತ ಕಣ್ಣು ಹಾಯಿಸಿದರೂ ಸಾರಾಯಿ ಬಾಟಲಿಗಳೇ ಕಾಣಸಿಗುತ್ತಿವೆ. ಕ್ಯಾಂಟೀನ್ ಹೋಗಿ ನಾಯಿಗಳ ವಾಸಸ್ಥಾನವಾಗಿ ಬದಲಾಗಿಬಿಟ್ಟಿದೆ. ಕಟ್ಟಡದ ಕಿಟಕಿ ಗ್ಲಾಸ್‌ಗಳು ಅಲ್ಲಲ್ಲಿ ಒಡೆದಿರುವುದನ್ನೂ ಕಾಣಬಹುದು. ಕ್ಯಾಂಟೀನ್ ಹೆಸರಿನಲ್ಲಿ ಅನುದಾನವನ್ನೆಲ್ಲಾ ಹೀಗೆ ದುಂದುವೆಚ್ಚ ಮಾಡುವ ಬದಲು ಬೇರೆ ಕಾಮಗಾರಿಗಳಿಗಾದರೂ ಬಳಸಿಕೊಳ್ಳಬಹುದಿತ್ತಲ್ಲವೇ ಎನ್ನುವುದು ಅಲ್ಲಿನ ಪ್ರಜ್ಞಾವಂತ ನಾಗರಿಕರ ಪ್ರಶ್ನೆ.

ಈ ಕುರಿತು ಈದಿನ.ಕಾಮ್ ಜೊತೆ ಸ್ಥಳೀಯ ನಿವಾಸಿ ಮಹಮ್ಮದ್ ಅಲಿ ಮಾತನಾಡಿ, “ಜನ ಇಲ್ಲಿ ಬಂದರೆ ಕಡಿಮೆ ಹಣದಲ್ಲಿ ಹೊಟ್ಟೆ ತುಂಬ ಊಟ ಮಾಡುತ್ತಾರೆ. ಏಳು ತಿಂಗಳ ಆತು ಇಂದಿರಾ ಕ್ಯಾಂಟೀನ್ ಉದ್ಘಾಟನೆಯಾಗಿ ಇನ್ನೂ ಆರಂಭ ಆಗಿಲ್ಲ. ಕೂಡಲೇ ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ ಇಂದಿರಾ ಕ್ಯಾಂಟೀನ್ ಪ್ರಾರಂಭ ಮಾಡಬೇಕು” ಎಂದು ಮನವಿ ಮಾಡಿದರು.
ಪಂಚಾಕ್ಷರಿ ಮೇಲಿನಮಠ ಮಾತನಾಡಿ, “ಇಂದಿರಾ ಕ್ಯಾಂಟೀನ್ ಆರಂಭ ಆದ್ರ ರೈತರಿಗೆ, ವಿದ್ಯಾರ್ಥಿಗಳಿಗೆ, ಕೂಲಿ ಕಾರ್ಮಿಕರಿಗೆ ಅನುಕೂಲ ಆಗುತ್ತ. ಹೊರಗಡೆ ಒಂದು ನಾಷ್ಟಾ ಮಾಡಿದರೆ 30-40 ರೂಪಾಯಿ ತಗೋಂತಾರೆ, ಊಟ ಮಾಡಿದ್ರೆ 80-100 ರೂ ತಗೋಂತಾರೆ, ಇಂದಿರಾ ಕ್ಯಾಂಟೀನಲ್ಲಿ ಮಾಡಿದ್ರ ಹತ್ತು ರೂಪಾಯಿದಾಗ ಸಾಕಷ್ಟು ಜನರು ಊಟ ಮಾಡ್ತಾರ. ಅದಕ್ಕ ಇಂದಿರಾ ಕ್ಯಾಂಟೀನ್ ಬೇಗ ಆರಂಭ ಮಾಡಬೇಕೆಂದು” ಎಂದರು.
ಈಗಾಗಲೇ ಇಂದಿರಾ ಕ್ಯಾಂಟೀನ್ ಯೋಜನೆ ಬಡಜನರ ಹಸಿವಿನ ಶಮನಕ್ಕೆ ಒಂದು ಆಶಾಕಿರಣವಾಗಿ ರೂಪುಗೊಂಡಿದ್ದರೂ, ರೋಣ ಪಟ್ಟಣದಲ್ಲಿ ಯೋಜನೆಯ ಜಾರಿ ವಿಳಂಬದಿಂದ ಈ ಆಸೆ ಇನ್ನು ಕಾರ್ಯಗತಗೊಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ, ಜನಪ್ರತಿನಿಧಿಗಳ ವಿಳಂಬ ನೀತಿ ಸ್ಥಳೀಯ ಜನರಿಗೆ ತೀವ್ರ ನಿರಾಸೆ ತಂದಿದೆ. ಇನ್ನುಮೇಲಾದರೂ ಸಂಬಂಧಿತ ಅಧಿಕಾರಿಗಳು ಚುರುಕಾಗಿ ಕ್ರಮ ಕೈಗೊಂಡು ಇಂದಿರಾ ಕ್ಯಾಂಟೀನ್ ಕಾರ್ಯಾರಂಭಕ್ಕೆ ಮುಂದಾಗಬೇಕಾಗಿದೆ.


ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.