ಜಿಲ್ಲೆಯಲ್ಲಿ ಬೇಸಿಗೆ ಕಾಲ ಆರಂಭವಾಗಿದ್ದು, ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರೀಕ್ಷಿಸುವ ತಿಂಗಳುಗಳಾಗಿದ್ದು, ಮೇ ತಿಂಗಳಿನಲ್ಲಿ ಜಿಲ್ಲೆಯ ಎಂಟು ತಾಲೂಕುಗಳಲ್ಲಿ 1 ಲಕ್ಷ ದುಡಿಯುವ ಕೈಗಳಿಗೆ ಮನರೇಗಾ ಅಡಿಯಲ್ಲಿ ಕೆಲಸ ನೀಡಲಾಗುವುದು ಎಂದು ಬೀದರ ಜಿಲ್ಲಾ ಪಂಚಾಯತಿ ಸಿಇಒ ಡಾ.ಗಿರೀಶ ಬದೋಲೆ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ಎಲ್ಲ ತಾಲೂಕಾ ಪಂಚಾಯತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಟಿಸಿ, ಟಿಐಎಂಎಸ್, ಟಿಐಇಸಿಗಳ ಜೊತೆ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿ ಮಾತನಾಡಿದರು.
ʼರೈತಾಪಿ ವರ್ಗದ ಅತಿಸಣ್ಣ ರೈತರು, ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಬೇಸಿಗೆಯಲ್ಲಿ ಬೇರೆ ಕೆಲಸ ಸಿಗುವುದಿಲ್ಲ. ಕಾರ್ಮಿಕರು ಕೆಲಸ ಇಲ್ಲದೆ ಮನೆಯಲ್ಲಿ ಖಾಲಿ ಕುಳಿತುಕೊಳ್ಳುವಂತೆ ಆಗಬಾರದು. ತಾಲೂಕಾ ಐಇಸಿ ತಂಡ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಿ ಕೂಲಿಕಾರರನ್ನು ಕೆಲಸಕ್ಕೆ ಆಹ್ವಾನಿಸಬೇಕುʼ ಎಂದು ಸೂಚಿಸಿದರು.
ʼಪ್ರತಿ ಗುರುವಾರ ಗ್ರಾಮ ಪಂಚಾಯತಿಗಳಲ್ಲಿ ‘ರೋಜಗಾರ ದಿನಾಚರಣೆ’ ಆಚರಿಸುವ ಮೂಲಕ ಕೂಲಿಕಾರರಿಗೆ ಅವರವರ ಗ್ರಾಮಗಳಲ್ಲಿಯೇ ಕೆಲಸ ನೀಡುವ ಬಗ್ಗೆ ಮಾಹಿತಿ ನೀಡಬೇಕು. ಹೊಸ ಉದ್ಯೋಗ ಚೀಟಿ ನೀಡಬೇಕು. ಕೂಲಿ ಕೆಲಸಕ್ಕೆ ಅರ್ಹರಿರುವ ಎಲ್ಲ ಗ್ರಾಮೀಣ ಕೂಲಿಕಾರರಿಗೆ ಕೆಲಸ ನೀಡಬೇಕು. ಮೇ ತಿಂಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ 1,000 ಜನ ಕಾರ್ಮಿಕರಿಗೆ ಕೆಲಸ ನೀಡಬೇಕು’ ಎಂದರು.
ಏಪ್ರಿಲ್ ತಿಂಗಳಲ್ಲಿ ಜಿಲ್ಲೆಯಲ್ಲಿ 50,000 ಜನರಿಗೆ ಕೂಲಿಕೊಡಲು ಈ ಹಿಂದಿನ ಸಭೆಯಲ್ಲಿ ಸೂಚಿಸಿದ್ದರು. ಅದರಂತೆ ಏಪ್ರಿಲ್ 25ಕ್ಕೆ ಜಿಲ್ಲೆಯಲ್ಲಿ 37,000 ಜನ ಕೂಲಿಕಾರರಿಗೆ ಕೆಲಸ ನೀಡಲಾಗಿದ್ದು, ಏಪ್ರಿಲ್ ತಿಂಗಳ ಅಂತ್ಯದ ವೇಳೆ ನೀಡಿದ ಗುರಿಯಂತೆ 50,000 ಜನ ಕೂಲಿಕಾರರಿಗೆ ಕೆಲಸ ನೀಡಬೇಕು ಎಂದು ಎಲ್ಲ ತಾಲೂಕಾ ಪಂಚಾಯತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕಲ್ಲಂಗಡಿ ಕೃಷಿಯಲ್ಲಿ ಸಿರಿ ಕಂಡ ಯುವಕ : ವರ್ಷಪೂರ್ತಿ ಬೆಳೆ; ಲಕ್ಷ ಲಕ್ಷ ಆದಾಯದ ಹೊಳೆ!
ಜಿಪಂ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಸಹಾಯಕ ಕಾರ್ಯದರ್ಶಿ ಬೀರೇಂದ್ರಸಿಂಗ್, ಸಹಾಯಕ ನಿರ್ದೇಶಕ ಜಯಪ್ರಕಾಶ ಚೌಹಾಣ, ಗ್ರಾಮೀಣ ಕುಡಿಯುವ ನೀರು ಮತ್ತು ಪಂಚಾಯತ್ ರಾಜ್ ಇಂಜನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರಾದ ರಾಮಲಿಂಗ ಬಿರಾದರ, ಶಿವಾಜಿ ಡೋಣಿ, ಎಡಿಪಿಸಿ ದೀಪಕ್, ಹಣುಮಂತ ಚಿದ್ರಿ, ಡಿಐಎಂಎಸ್ ಕೋಮಲಾ, ಡಿಐಇಸಿ ರಜನಿಕಾಂತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.