ಶಿವಮೊಗ್ಗದ ಬಿಜೆಪಿ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿಯವರ ಪತಿ ರಾಬರ್ಟ್ ವಾದ್ರಾ ವಿರುದ್ಧ ಪ್ರಚೋದನಾಕಾರಿಯಾಗಿ ಮಾತನಾಡಿರುವ ಚನ್ನಬಸಪ್ಪ, “ರಾಬರ್ಟ್ ವಾದ್ರಾ ಅವರು ಭಯೋತ್ಪಾದಕರಿಗೆ ಶಕ್ತಿ ತುಂಬುವ ಹೇಳಿಕೆ ನೀಡಿದ್ದಾರೆ. ಅವರನ್ನು ಬಂಧಿಸಬೇಕು ಅಥವಾ ಗುಂಡಿಕ್ಕಿ ಕೊಲ್ಲಬೇಕು” ಎಂದು ಹೇಳಿದ್ದಾರೆ.
ಪಹಲ್ಗಾಮ್ ದಾಳಿ ಬಗ್ಗೆ ಪ್ರತಿಕ್ರಿಯಿಸಿದ್ದ ರಾಬರ್ಟ್ ವಾದ್ರಾ, ಹಿಂದುಗಳು ಎಲ್ಲ ಮುಸ್ಲಿಮರಿಗೆ ತೊಂದರೆ ಕೊಡುತ್ತಿದ್ದಾರೆ. ಮುಸ್ಲಿಮರು ದುರ್ಬಲರಾಗ್ತಿದ್ದಾರೆ ಅಂತ ಉಗ್ರರಿಗೆ ಅನ್ನಿಸಿದೆ. ಪಹಲ್ಗಾಮ್ ದಾಳಿಗೆ ಹಿಂದುತ್ವವೇ ಕಾರಣ ಎಂದಿದ್ದರು.
ವಾದ್ರಾ ಹೇಳಿಕೆ ವಿರುದ್ಧ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚನ್ನಬಸಪ್ಪ, “ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಮಡಿದವರಿಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಇಂತಹ ಸಮಯದಲ್ಲಿ ವಾದ್ರಾ ನೀಡಿರುವ ಹೇಳಿಕೆಯನ್ನು ಸಹಿಸಲಾಗದು. ಉಗ್ರವಾದಿಗಳಿಗೆ ಶಕ್ತಿ ತುಂಬುವ ರೀತಿಯಲ್ಲಿ ಮಾತನಾಡಿರುವ ವಾದ್ರಾ ಒಬ್ಬ ದೇಶದ್ರೋಹಿ. ಅವರು ಭೂಮಿ ಮೇಲಿರಲು ನಾಲಾಯಕ್ಕು” ಎಂದಿದ್ದಾರೆ.
“ಪಾಕಿಸ್ತಾನಕ್ಕೆ ಬಾಂಬ್ ಹಾಕಿ, ಭಾರತ ಮಾತೆಗೆ ಹೂವು ಹಾಕಿ ಎಂಬುದು ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಬಾರದು. ಇದು ಕಾರ್ಯಾಗತ ಆಗಬೇಕು. ಆದ್ದರಿಂದ ಮೊದಲಿಗೆ ವಾದ್ರಾ ಅವರನ್ನು ಗುಂಡಿಕ್ಕಿ ಕೊಲ್ಲಬೇಕೆಂದು ಹೇಳುತ್ತಿದ್ದೇನೆ” ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮೋಹನ್ ರೆಡ್ಡಿ, ಜ್ಞಾನೇಶ್ವರ್, ಕೆ.ಎನ್.ಜಗದೀಶ್, ಎನ್.ಜೆ.ನಾಗರಾಜ್, ಮಂಜುನಾಥ್ ಇದ್ದರು.