- ಕೊಲೆ ಪ್ರಕರಣ ದಾಖಲಿಸಿಕೊಂಡ ದೊಡ್ಡಬೆಳವಂಗಲ ಪೊಲೀಸರು
- ಕುಡಿಯಲು ಹಣ ನೀಡಿದಿದ್ದರೆ ತಾಯಿಯನ್ನು ಥಳಿಸುತ್ತಿದ್ದ ಮಗ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗುರುವಾರ ರಾತ್ರಿ 58 ವರ್ಷದ ವ್ಯಕ್ತಿಯೊಬ್ಬ ತನ್ನ 29 ವರ್ಷದ ಮದ್ಯವ್ಯಸನಿ ಮಗನನ್ನು ಕೊಲೆ ಮಾಡಿ ಶವವನ್ನು ಸುಟ್ಟು ಹಾಕಿರುವ ದಾರುಣ ಘಟನೆ ನಡೆದಿದೆ.
ಕೊಲೆಯಾಗಿರುವ ವ್ಯಕ್ತಿಯನ್ನು ಆದರ್ಶ ಜೆ ಎಂದು ಗುರುತಿಸಲಾಗಿದೆ. ಆತ ವಾಣಿಗರಹಳ್ಳಿಯಲ್ಲಿ ವಾಸವಾಗಿದ್ದು, ಚಾಲಕನಾಗಿ ಕೆಲಸ ಮಾಡುತ್ತಿದ್ದ. ಅವರ ತಂದೆ ಜಯರಾಮಯ್ಯನವರೇ ಆರೋಪಿ.
ಪ್ರಕರಣದ ಹಿನ್ನೆಲೆ
ಜಯರಾಮಯ್ಯ ತನ್ನ ಹೆಂಡತಿ ಸುಮಾ ಹಾಗೂ ಮಗ ಆದರ್ಶ ಜತೆಗೆ ವಾಣಿಗರಹಳ್ಳಿಯಲ್ಲಿ ವಾಸವಾಗಿದ್ದರು. ಮಗ ಚಾಲಕ ವೃತ್ತಿ ಮಾಡಿಕೊಂಡಿದ್ದ. ತಂದೆ ರೈತನಾಗಿದ್ದು, ತಾಯಿ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದರು. ಮಗನಿಗೆ ವಿಪರೀತ ಕುಡಿತದ ಚಟ ಇತ್ತು. ನಿತ್ಯ ದುಡಿದ ಹಣವನ್ನೆಲ್ಲ ಆತ ಕುಡಿಯುವುದಕ್ಕೆ ಖರ್ಚು ಮಾಡುತ್ತಿದ್ದ.
ಎರಡು ವರ್ಷಗಳ ಹಿಂದೆ ಆದರ್ಶ್ ಅವರನ್ನು ಡಿ-ಅಡಿಕ್ಷನ್ ಸೆಂಟರ್‌ಗೆ ಸೇರಿಸಲಾಗಿತ್ತು. ಮನೆಗೆ ಹಿಂದಿರುಗಿದ ನಂತರ, ಆತ ಕುಡಿಯುವುದನ್ನು ಮತ್ತೆ ಮುಂದುವರೆಸಿದ್ದ. ಕುಡಿಯಲು ದುಡ್ಡು ಇಲ್ಲದ ವೇಳೆ, ತಾಯಿ ಬಳಿ ಬಂದು ದುಡ್ಡು ನೀಡುವಂತೆ ಹಿಂಸೆ ಮಾಡುತ್ತಿದ್ದ. ದುಡ್ಡು ನೀಡದಿದ್ದರೆ, ತಾಯಿ ಸುಮಾಗೆ ಮನಬಂದಂತೆ ಥಳಿಸುತ್ತಿದ್ದ. ಮಗ ನೀಡುವ ಹಿಂಸೆಯನ್ನೆಲ್ಲ ಪಾಲಕರು ಸಹಿಸಿಕೊಂಡಿದ್ದರು.
ಜೂನ್ 29 ರಂದು ಆದರ್ಶ ತನ್ನ ತಾಯಿ ಬಳಿ ಬಂದು ಮದ್ಯಪಾನ ಮಾಡಲು ಹಣ ಕೇಳಿದ್ದಾನೆ. ಅದಕ್ಕೆ ನಿರಾಕರಿಸಿದ ತಾಯಿಯನ್ನು ಮನೆಯಿಂದ ಹೊರಗೆಳೆದು ಕಲ್ಲಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಸುಮಾ ಅವರ ತಲೆಗೆ ಬಲವಾದ ಗಾಯವಾಗಿತ್ತು. ಈ ವೇಳೆ, ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದರು.
ಹಲ್ಲೆಯ ವಿಷಯ ತಿಳಿದ ಸುಮಾ ಅಳಿಯ ಮೂರ್ತಿ ಎಂಬುವವರು ಜಯರಾಮಯ್ಯನವರ ನಿವಾಸಕ್ಕೆ ಬಂದು ನೋಡಿದಾಗ ಸುಮಾ ಮನೆಯ ಹೊರಗೆ ಬಿದ್ದಿದ್ದರು. ಈ ವೇಳೆ, ಆದರ್ಶ ಆಕೆಯನ್ನು ಥಳಿಸುತ್ತಿದ್ದ. ತನ್ನ ಹಿರಿಯ ಸಹೋದರ ಮತ್ತು ಸೋದರ ಸಂಬಂಧಿ ಸಹಾಯದಿಂದ ಮೂರ್ತಿ ಮಧ್ಯಪ್ರವೇಶಿಸಿ ಹಲ್ಲೆಯನ್ನು ನಿಲ್ಲಿಸಿ, ತಕ್ಷಣವೇ ಸುಮಾ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ನಂತರ ಆಕೆಯನ್ನು ನಿಮ್ಹಾನ್ಸ್‌ಗೆ ವರ್ಗಾಯಿಸಲಾಗಿದ್ದು, ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದರು.
ಈ ಬಗ್ಗೆ ಹತಾಶರಾದ ತಂದೆ ಜಯರಾಮಯ್ಯ ಬಾರ್‌ಗೆ ಮಗನನ್ನು ಹುಡುಕಿಕೊಂಡು ಹೋಗಿ, ಅಲ್ಲಿಂದ ಆತನನ್ನು ಕರೆದುಕೊಂಡು ಮನೆಗೆ ಬಂದಿದ್ದಾರೆ. ಆರೋಪಿಗಳು ಆದರ್ಶ್‌ನ ಕೈ ಕಾಲು ಕಟ್ಟಿ ಥಳಿಸಿದ್ದಾರೆ. ನಂತರ ಮಗನನ್ನು ಸಮೀಪದ ಫಾರ್ಮ್‌ಹೌಸ್‌ಗೆ ಕರೆದುಕೊಂಡು ಹೋಗಿ, ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಜುಲೈ 15ರವರೆಗೆ ಹೆಬ್ಬಾಳ ಮೇಲ್ಸೇತುವೆ ಬಳಿ ಸಂಚಾರ ದಟ್ಟಣೆ ಬಿಸಿ
ಶುಕ್ರವಾರ ಬೆಳಗ್ಗೆ 6.15ರ ಸುಮಾರಿಗೆ ಜಯರಾಮಯ್ಯ ಅವರಿಗೆ ಸೇರಿದ ಜಮೀನಿನಲ್ಲಿ ಸುಟ್ಟು ಕರಕಲಾದ ಶವವನ್ನು ಗ್ರಾಮಸ್ಥರು ನೋಡಿದ ನಂತರ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತನ ಮುಖ ವಿರೂಪಗೊಂಡಿದ್ದು, ಕೈಗಳನ್ನು ಬೆನ್ನ ಹಿಂದೆ ಕಟ್ಟಿ, ಕುತ್ತಿಗೆಗೆ ಸುಟ್ಟ ಬಟ್ಟೆಯನ್ನು ಕಟ್ಟಿರುವುದು ಕಂಡುಬಂದಿದೆ. ಬಾರ್ ಬಳಿ ಆದರ್ಶ ಅವರ ಮೇಲೆ ಇನ್ನಿಬ್ಬರು ಹಲ್ಲೆ ನಡೆಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಬೆಂಗಳೂರು ಜಿಲ್ಲಾ ಪೊಲೀಸ್ ವ್ಯಾಪ್ತಿಯ ದೊಡ್ಡಬೆಳವಂಗಲ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.