ಕಸಾಪದ ಕೆಲಸ ವರ್ಷಕ್ಕೊಂದು ಸಮ್ಮೇಳನ ಮಾಡುವುದು, ದತ್ತಿನಿಧಿ ಪ್ರಶಸ್ತಿ ಕೊಡುವುದು ಇಷ್ಟೇ ಆಗಿ ಹೋಗಿದೆ. ಇದು ಕಸಾಪ ಯಾವ ಘನ ಉದ್ದೇಶದಿಂದ ಸ್ಥಾಪನೆಯಾಯ್ತೋ, ಎಂತೆಂಥಾ ಮಹಾನ್ ಸಾಹಿತ್ಯ ಚೇತನಗಳು ಕಸಾಪ ಕಟ್ಟಲು ಶ್ರಮಿಸಿದರೋ ಅವರಿಗೆ ಮಾಡುತ್ತಿರುವ ಅವಮಾನ. ಕಸಾಪವನ್ನು ಇಂತಹ ದುಷ್ಟಕೂಟದಿಂದ ರಕ್ಷಿಸುವ ಕೆಲಸ ತುರ್ತಾಗಿ ಆಗಿಬೇಕಿದೆ.
ಕನ್ನಡದ ಏಕೈಕ ಪ್ರಾತಿನಿಧಿಕ ಸಂಸ್ಥೆ ಎಂದರೆ ಅದು ಕನ್ನಡ ಸಾಹಿತ್ಯ ಪರಿಷತ್ತು. ಮೈಸೂರು ಅರಸ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಫಲವಾಗಿ 1915ರಲ್ಲಿ ಸ್ಥಾಪನೆಗೊಂಡಿತ್ತು. ಕನ್ನಡ ಭಾಷೆ, ಸಾಹಿತ್ಯ, ಕಲೆ, ಜನಪದ, ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಮಹದಾಶಯ ಹೊತ್ತು ಸ್ಥಾಪನೆಯಾದ ಕನ್ನಡಿಗರ ಸಾಂಸ್ಕೃತಿಕ ಮೇರು ಸಂಸ್ಥೆ. ಕನ್ನಡದಲ್ಲಿ ನಾನಾ ಗ್ರಂಥ ರಚನೆಯನ್ನು ಪ್ರೋತ್ಸಾಹಿಸಲು, ಸ್ವಾಯತ್ತ ಅಧಿಕಾರವುಳ್ಳ ಪರಿಷತ್ತೊಂದು ಇರಬೇಕು ಮತ್ತು ರಾಜ್ಯ ಸರ್ಕಾರ ಈ ಪರಿಷತ್ತನ್ನು ಅಂಗೀಕರಿಸಿ ಅದಕ್ಕೆ ವಿಶೇಷ ಸಹಾಯ ಮಾಡುವುದು ಉಚಿತ ಎಂದು ಅಂದಿನ ಮೈಸೂರು ಸಂಸ್ಥಾನದ ‘ಸಂಪದಭ್ಯುದಯ ಸಮಾಜ’ ತನ್ನ 1914ರ ವಾರ್ಷಿಕ ಅಧಿವೇಶನದಲ್ಲಿ ಕೈಗೊಂಡ ಮಹತ್ವದ ನಿರ್ಧಾರ ಕನ್ನಡ ಸಾಹಿತ್ಯ ಪರಿಷತ್ತಿನ ಉಗಮಕ್ಕೆ ಕಾರಣವಾಯ್ತು.
ಇಂತಹ ಕನ್ನಡ ಸಾಹಿತ್ಯ ಪರಿಷತ್ತು ವಿವಾದದ ಕೇಂದ್ರವಾಗಿದೆ. ಅಧಿಕಾರದ ಹಪಾಹಪಿಯ ಹೊಂಡವಾಗಿ ಕದಡಿದೆ. ಯಾರನ್ನೂ ಗಣನೆಗೆ ತೆಗೆದುಕೊಳ್ಳದಿರುವ ಕಸಾಪ ಅಧ್ಯಕ್ಷ ಡಾ. ಮಹೇಶ್ ಜೋಶಿ ಅವರ ಉದ್ಧಟತನ ಕಸಾಪದ ಘನತೆಗೆ ತಕ್ಕುದಾಗಿಲ್ಲ ಎಂಬ ಆಪಾದನೆಗಳಿವೆ. ಆರು ಕೋಟಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯನ್ನು ತಮ್ಮ ಮೇಲಾಟದ ಆಡಂಬೊಲ ಆಗಿಸಿಕೊಂಡಿದ್ದಾರೆ. ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಜಿಲ್ಲಾ ಅಧ್ಯಕ್ಷರುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ, ಸಮ್ಮೇಳನದ ಸಮಿತಿಗಳಲ್ಲಿ ತಮ್ಮ ಬೆಂಬಲಿಗರಿಗೆ ಮಾತ್ರ ಅವಕಾಶ ನೀಡುತ್ತಾರೆ ಎಂಬ ಆರೋಪಗಳೂ ಬಂದಿದ್ದವು. ಈ ಯಾವುದೇ ಆತಂಕಗಳು ಆರೋಪಗಳಿಗೂ ಸೊಪ್ಪು ಹಾಕದೆ ತಾವು ತುಳಿದ ದಾರಿಯೇ ಹೆದ್ದಾರಿ ಎಂಬ ಜೋಶಿ ವರ್ತನೆ ಒಪ್ಪತ್ತಕ್ಕದ್ದಲ್ಲ.
2021ರಲ್ಲಿ ನಡೆದ ಕಸಾಪ ಚುನಾವಣೆ ಯಾವುದೇ ರಾಜಕೀಯ ಚುನಾವಣೆಗಿಂತ ಭಿನ್ನವಾಗಿರಲಿಲ್ಲ. ಕಸಾಪ ಚುನಾವಣೆಯಲ್ಲಿ ಗೆಲ್ಲಲು ಮತದಾರರಿಗೆ ಆಮಿಷ ಒಡ್ಡಲಾಗುತ್ತಿದೆ ಎಂಬ ಆರೋಪ ಬಂದಿತ್ತು. ಜೋಶಿ ಅವರ ಪ್ರಚಾರ ಶೈಲಿ, ಬಿಜೆಪಿ ಮುಖಂಡರು ಪ್ರಚಾರಕ್ಕಿಳಿದಿದ್ದು ಕಸಾಪ ಚುನಾವಣೆಗೆ ರಾಜಕೀಯದ ಕೆಸರು ಮೆತ್ತಿಕೊಳ್ಳಲು ಕಾರಣವಾಗಿತ್ತು. ಅಧ್ಯಕ್ಷ ಗಾದಿಗೇರಿದ ಜೋಶಿ ಕಸಾಪವನ್ನು ತಮ್ಮ ಹಿತಾಸಕ್ತಿಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಮೂರನೇ ಬಾರಿ ಕಸಾಪದ ಬೈಲಾ ತಿದ್ದುಪಡಿಗೆ ಕೈ ಹಾಕಿರುವುದೇ ಸಾಕ್ಷಿ ಎನ್ನುತ್ತಿದ್ದಾರೆ ಸಾಹಿತ್ಯ ಪರಿಷತ್ ಹಿತೈಷಿಗಳು. ಈ ಬಾರಿ ಅವರು ಎಲ್ಲ ಅಧಿಕಾರವನ್ನು ತಮ್ಮ ಮುಷ್ಟಿಯಲ್ಲಿಟ್ಟುಕೊಳ್ಳಲು ಹೊರಟಿದ್ದಾರೆ. ಪರಿಷತ್ತಿನ ಅಂಗರಚನೆಗೆ ತಿದ್ದುಪಡಿ ತಂದು ಜಿಲ್ಲಾಧ್ಯಕ್ಷರ ನೇಮಕ, ನಾಮನಿರ್ದೇಶನ, ಸಮ್ಮೇಳನಾಧ್ಯಕ್ಷರ ಆಯ್ಕೆ, ನಾನಾ ಸಮಿತಿಗಳ ರಚನೆಯ ಅಧಿಕಾರವನ್ನು ಕೇಂದ್ರೀಕರಿಸಿಕೊಳ್ಳುವ ತಿದ್ದುಪಡಿಗೆ ಕೈ ಹಾಕಿದ್ದಾರೆ. ಸರ್ಕಾರದ ಹಣದಲ್ಲಿ ನಡೆಯುವ ಸಮ್ಮೇಳನಕ್ಕೆ ಸಕಾಲದಲ್ಲಿ ಹಣ ಬಿಡುಗಡೆ ಮಾಡದಿದ್ದರೆ ಡಿ ಸಿ ವಿರುದ್ಧ ಕೋರ್ಟ್ ಕೇಸು ಹಾಕುವ ಅಧಿಕಾರ ಕಸಾಪ ಅಧ್ಯಕ್ಷರಿಗೆ ಇರುವಂತೆ ತಿದ್ದುಪಡಿ ಮಾಡಲು ಹೊರಟಿದ್ದಾರೆ. ಇದು ಕಸಾಪದ ಹಿತೈಶಿಗಳನ್ನು ಕೆರಳಿಸಿದೆ. ಅದರ ಭಾಗವಾಗಿ ನಿನ್ನೆ (ಏ.24) ಬೆಂಗಳೂರಿನಲ್ಲಿ ಸಮಾನಮನಸ್ಕರು ಸಭೆ ಸೇರಿ ಜೋಶಿ ಅವರನ್ನು ಅಧ್ಯಕ್ಷ ಗಾದಿಯಿಂದ ಕೆಳಗಿಳಿಸಿ ಆಡಳಿತಾಧಿಕಾರಿ ನೇಮಿಸುವಂತೆ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮನವಿ ಮಾಡುವ ನಿರ್ಣಯ ಕೈಗೊಂಡಿದ್ದಾರೆ.
ಮೊದಲ ಅಧ್ಯಕ್ಷರಾಗಿದ್ದವರು ಎಚ್ ವಿ ನಂಜುಂಡಯ್ಯ. ಕಂಠೀರವ ನರಸಿಂಹರಾಜ ಒಡೆಯರ್, ಜಯಚಾಮರಾಜ ಒಡೆಯರ್ ಅಧ್ಯಕ್ಷರಾದ ನಂತರ ಮೇರು ಸಾಹಿತ್ಯ ಸಾಧಕರಾದ ತಿರುಮಲೆ ತಾತಾಚಾರ್ಯ ಶರ್ಮ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಜಿ ನಾರಾಯಣ, ಹಂಪನಾ, ಗೊರುಚ, ಜಿ ಎಸ್ ಸಿದ್ದಲಿಂಗಯ್ಯ, ಸಾ ಶಿ ಮರುಳಯ್ಯ, ಎನ್ ಬಸವಾರಾಧ್ಯ ಮುಂತಾದವರು ಕಸಾಪದ ರಥವನ್ನು ಸಮರ್ಥವಾಗಿ ಮುಂದಕ್ಕೆ ಎಳೆದಿದ್ದಾರೆ. 2002ರಲ್ಲಿ ಹೋಟೆಲ್ ಉದ್ಯಮಿ ಮಂಗಳೂರಿನ ಹರಿಕೃಷ್ಣ ಪುನರೂರು ಅಧ್ಯಕ್ಷರಾಗಿ ಹಳಿ ತಪ್ಪಿದ್ದು ಕಸಾಪ ಮತ್ತೆ ಹಳಿಗೆ ಮರಳಲೇ ಇಲ್ಲ.
ನಂತರ ಚಂಪಾ, ಡಾ ನಲ್ಲೂರು ಪ್ರಸಾದ್ ಅವರಂತಹ ಗಣ್ಯ ಸಾಹಿತಿಗಳು ಒಂದೊಂದು ಅವಧಿಗೆ ಅಧ್ಯಕ್ಷರಾದರೂ ಆಗಲೇ ಕಸಾಪದ ಮೆಟ್ಟಿಲುಗಳ ಮೇಲೆ ರಾಜಕೀಯದ ಧೂಳು ಕಾಣಿಸಿಕೊಂಡಿತ್ತು. ಮತ್ತೆ ಕಸಾಪ ಹೋಗಿ ಬಿದ್ದಿದ್ದು ಸಹಕಾರಿ ದುರೀಣ ಪುಂಡಲೀಕ ಹಾಲಂಬಿ ತೆಕ್ಕೆಗೆ. ಅಲ್ಲಿಂದಾಚೆ ಕಸಾಪ ನಿವೃತ್ತ ಅಧಿಕಾರಿಗಳಾದ ಡಾ ಮನು ಬಳಿಗಾರ್ ನಂತರ, ಈಗ ಡಾ ಮಹೇಶ್ ಜೋಶಿ ಕೈ ಸೇರಿ ಕಸಾಪ ದುರವಸ್ಥೆ ಎದುರಿಸಿದೆ ಎಂಬುದು ಪರಿಷತ್ತಿನ ಹಿತೈಷಿಗಳ ವ್ಯಥೆ. ಮನು ಬಳಿಗಾರರು ಅಂಗರಚನೆಗೆ ತಿದ್ದುಪಡಿ ತಂದು ಮೂರು ವರ್ಷ ಇದ್ದ ಅಧ್ಯಕ್ಷರ ಅವಧಿಯನ್ನು ಐದು ವರ್ಷಕ್ಕೆ ಏರಿಸಿಕೊಂಡಿದ್ದರು. ಆ ನಂತರ ಬಂದ ಜೋಶಿಯವರು ಕಸಾಪವನ್ನು ವಿವಾದದ ಕೇಂದ್ರವಾಗಿಸಿದ್ದಾರೆ. ಕಸಾಪದ ಅಜೀವ ಸದಸ್ಯರ ಸಂಖ್ಯೆ ಐದು ಲಕ್ಷಕ್ಕೂ ಹೆಚ್ಚು. ಅವರೆಲ್ಲ ಒಟ್ಟಾಗಿ ಪರಿಷತ್ ಹಿತಕ್ಕೆ ಮಾರಕವೆನಿಸಿರುವ ತಿದ್ದುಪಡಿಗಳನ್ನು ವಿರೋಧಿಸಬೇಕಿದೆ. ವರ್ಷಕ್ಕೊಂದು ಸಮ್ಮೇಳನ ಮಾಡಿ ಕೋಟಿಗಟ್ಟಲೆ ತೆರಿಗೆ ಹಣ ಪೋಲು ಮಾಡುವ ಬದಲು ಕನ್ನಡ ಶಾಲೆಗಳನ್ನು ಉದ್ದಾರ ಮಾಡುವ ಕಡೆಗೆ ಸಂಘಟಿತ ಪ್ರಯತ್ನ ಮಾಡಬೇಕಿದೆ.
ಕಳೆದ ಡಿಸೆಂಬರ್‌ನಲ್ಲಿ ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಮುಗಿದು ಇನ್ನೂ ನಾಲ್ಕು ತಿಂಗಳು ತುಂಬಿಲ್ಲ, ಆಗಲೇ ಅಧ್ಯಕ್ಷ ಜೋಶಿ ಅವರು ಬಳ್ಳಾರಿಯ ಸಂಡೂರಿನಲ್ಲಿ ಮುಂದಿನ ಡಿಸೆಂಬರ್ ನಲ್ಲಿ ನಡೆಯಲಿರುವ ಮುಂದಿನ ಸಾಹಿತ್ಯ ಸಮ್ಮೇಳನದ ತಯಾರಿಗೆ ಹೊರಟಿದ್ದಾರೆ. 2023ರಲ್ಲಿ ಹಾವೇರಿಯಲ್ಲಿ ನಡೆದ ಸಮ್ಮೇಳನಕ್ಕೆ 25ಕೋಟಿ ರೂ. ಮಂಡ್ಯದ ಸಮ್ಮೇಳನಕ್ಕೆ 30ಕೋಟಿ ರೂ. ಅನುದಾನ ನೀಡಲಾಗಿತ್ತು. ಈ ಬಾರಿ 40ಕೋಟಿ ರೂಪಾಯಿ ಅನುದಾನ ನೀಡಬೇಕು ಎಂದು ಈಗಲೇ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದಾರೆ.. ದುಂದುವೆಚ್ಚ ಮಾಡದೇ, ಜನರ ತೆರಿಗೆ ಹಣ ಪೋಲು ಮಾಡದೇ ಕನ್ನಡ, ಸಾಹಿತ್ಯ, ಭಾಷೆಯ ಬೆಳವಣಿಗೆಗೆ ಏನು ಮಾಡಬೇಕು ಎಂಬ ಬಗ್ಗೆ ರಚನಾತ್ಮಕ ಚರ್ಚೆ ನಡೆಸುವ ಉದ್ದೇಶ ಇರುವವರು ಕೋಟಿ ಕೋಟಿ ಹಣಕ್ಕೆ ಬೇಡಿಕೆ ಇಡಲಾರರು. ಕಸಾಪದ ಕೆಲಸ ವರ್ಷಕ್ಕೊಂದು ಸಮ್ಮೇಳನ ಮಾಡುವುದು, ದತ್ತಿನಿಧಿ ಪ್ರಶಸ್ತಿಗಳನ್ನು ಕೊಡುವುದು ಇಷ್ಟಕ್ಕೇ ಸೀಮಿತವಾಗಿ ಹೋಗಿದೆ. ಇದು ಕಸಾಪ ಯಾವ ಘನ ಉದ್ದೇಶದಿಂದ ಸ್ಥಾಪನೆಯಾಯ್ತೋ, ಎಂತೆಂಥಾ ಮಹಾನ್ ಸಾಹಿತ್ಯ ಚೇತನಗಳು ಕಸಾಪ ಕಟ್ಟಲು ಶ್ರಮಿಸಿದರೋ ಅವರಿಗೆ ಮಾಡುತ್ತಿರುವ ಅವಮಾನ.
ಕಸಾಪವನ್ನು ಅನಾಹುತದಿಂದ ರಕ್ಷಿಸುವ ಹೋರಾಟ ನಡೆದಿದೆ. ಸಾಹಿತಿಗಳು, ಸಮಾನ ಮನಸ್ಕರು ‘ಕಸಾಪ ಉಳಿಸಿ’ ಹೋರಾಟಕ್ಕೆ ಮುಂದಾಗಿರುವುದು ಸರಿಯಾದ ನಡೆ. ಕನ್ನಡಪ್ರೇಮಿಗಳೆಲ್ಲರೂ ಕೈಜೋಡಿಸಬೇಕು. ಕಸಾಪವನ್ನು ನಿಜವಾಗಿಯೂ ಕನ್ನಡಿಗರ ಹೆಮ್ಮೆಯ ಸಂಸ್ಥೆಯನ್ನಾಗಿ ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ.