ಬಾಳಂಬೀಡ ಏತ ನೀರಾವರಿ ಯೋಜನೆ ಸೇರಿದಂತೆ ಹಾವೇರಿ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮೇ.4ರಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಹಾನಗಲ್ ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.
ಹಾವೇರಿ ತಾಪಂ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ಹಲವು ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಅವರು ಮಾತನಾಡಿದರು.
ಜಿಲ್ಲೆಯ ಮಹತ್ವಾಕಾಂಕ್ಷೆಯ ಬಾಳಂಬೀಡ ಏತ ನೀರಾವರಿ ಯೋಜನೆ, ಹಾನಗಲ್ ನಗರದಲ್ಲಿ ನಿರ್ಮಾಣಗೊಂಡ ಸರ್ಕಾರಿ ಇಲಾಖೆಗಳ ಸಮುಚ್ಛಯ, ಇಂದಿರಾ ಕ್ಯಾಂಟೀನ್, ಅಕ್ಕಿ ಆಲೂರಿನ ಪ್ರವಾಸಿ ಮಂದಿರ, ಬಾಳಂಬೀಡದ 110 ಕೆವಿ ವಿದ್ಯುತ್ ಕೇಂದ್ರ, ಎಪಿಎಂಸಿ ಉಗ್ರಾಣ ಹಾಗೂ ವಾಣಿಜ್ಯ ಸಂಕೀರ್ಣ, 14 ಆಯುಷ್ಮಾನ್ ಆರೋಗ್ಯ ಉಪ ಕೇಂದ್ರಗಳ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಉದ್ಘಾಟಿಸಲಿದ್ದಾರೆ. ಇಂಧನ ಸಚಿವ ಕೆ ಜೆ ಜಾರ್ಜ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸೇರಿದಂತೆ ಹಲವು ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ” ಎಂದು ಮಾಹಿತಿ ನೀಡಿದರು.
“ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಮಾತನಾಡಿ, “ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ತಕ್ಷಣ ನೀಡಬೇಕು. ಯಾವುದೇ ಗೊಂದಲಗಳಿಗೆ ಅವಕಾಶ ನೀಡದಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿಕೊಳ್ಳಬೇಕು. ಸರ್ಕಾರ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಆದೇಶ ಪ್ರತಿ ವಿತರಿಸಲು ಸಹ ಸಿದ್ಧತೆ ಮಾಡಿಕೊಳ್ಳುವಂತೆ” ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ: ಹಾವೇರಿ | ಕಚವಿ ಪಿಡಿಓ ವಿರುದ್ಧ ಜಾತಿ ನಿಂದನೆ ಆರೋಪ; ವರ್ಗಾವಣೆಗೆ ಆಗ್ರಹ
ಈ ವೇಳೆ ಸವಣೂರು ಉಪ ವಿಭಾಗಾಧಿಕಾರಿ ಶುಭಂ ಶುಕ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಲ್ ವೈ ಶಿರಕೋಳ, ತಹಶೀಲ್ದಾರ್ ರೇಣುಕಾ ಎಸ್, ತಾಪಂ ಇಒ ಪರಶುರಾಮ ಪೂಜಾರ ಸೇರಿದಂತೆ ಹಲವು ಇಲಾಖೆಗಳ ಜಿಲ್ಲೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.