- ಏಕರೂಪ ನಾಗರಿಕ ಸಂಹಿತೆ ಮಸೂದೆ ಕುರಿತು ಜುಲೈ 3ಕ್ಕೆ ಚರ್ಚಿಸಲಿರುವ ಸ್ಥಾಯಿ ಸಮಿತಿ
- ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರದಿಂದ ಯುಸಿಸಿ ಮಸೂದೆ ಮಂಡನೆ ಸಾಧ್ಯತೆ
ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತಮ್ಮ ಪಕ್ಷದ ವಿರೋಧವಿಲ್ಲ, ಆದರೆ, ಅದನ್ನು ಜಾರಿಗೆ ತರುತ್ತಿರುವ ವಿಧಾನವನ್ನು ತಾವು ಬೆಂಬಲಿಸುವುದಿಲ್ಲ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಭಾನುವಾರ (ಜುಲೈ 2) ಹೇಳಿದ್ದಾರೆ.
“ನಮ್ಮ ಪಕ್ಷ ಯುಸಿಸಿ ಅನುಷ್ಠಾನಕ್ಕೆ ವಿರುದ್ಧವಾಗಿಲ್ಲ. ಆದರೆ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಬಿಜೆಪಿ ಪ್ರಯತ್ನಿಸುತ್ತಿರುವ ವಿಧಾನವನ್ನು ನಾವು ಬೆಂಬಲಿಸುವುದಿಲ್ಲ. ವಿಷಯವನ್ನು ರಾಜಕೀಯಗೊಳಿಸುವುದು ಮತ್ತು ದೇಶದಲ್ಲಿ ಯುಸಿಸಿಯನ್ನು ಬಲವಂತವಾಗಿ ಜಾರಿಗೊಳಿಸುವುದು ಸರಿಯಲ್ಲ” ಎಂದು ಮಾಯಾವತಿ ಸುದ್ದಿಗಾರರಿಗೆ ತಿಳಿಸಿದರು.
“ಏಕರೂಪ ನಾಗರಿಕ ಸಂಹಿತೆ ಬಗ್ಗೆ ಈಗಾಗಲೇ ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ. ಬಲವಂತವಾಗಿ ಈ ನೀತಿ ಜಾರಿಗೊಳಿಸುವುದನ್ನು ಸಂವಿಧಾನ ಬೆಂಬಲಿಸುವುದಿಲ್ಲ. ಈ ನಿಟ್ಟಿನಲ್ಲಿ ಬಿಜೆಪಿಯು ಎಲ್ಲ ದಿಕ್ಕುಗಳಿಂದ ಯುಸಿಸಿಯನ್ನು ಅವಲೋಕಿಸಬೇಕಿದೆ” ಎಂದು ಮಾಯಾವತಿ ಹೇಳಿದರು.
“ಯುಸಿಸಿಗೆ ಸಂಬಂಧಿಸಿದ ಎಲ್ಲ ಆಯಾಮಗಳನ್ನು ಬಿಜೆಪಿ ಪರಿಗಣಿಸಬೇಕು. ಪ್ರತಿಯೊಂದು ಸಂದರ್ಭದಲ್ಲೂ ಒಂದೇ ಕಾನೂನು ಎಲ್ಲ ಧರ್ಮದ ಜನರಿಗೆ ಅನ್ವಯಿಸಿದರೆ, ಅದು ದೇಶವನ್ನು ಬಲಪಡಿಸುತ್ತದೆ” ಎಂದು ಮಾಯಾವತಿ ಉಲ್ಲೇಖಿಸಿದರು.
ಏಕರೂಪ ನಾಗರಿಕ ಸಂಹಿತೆಯ ಕುರಿತು ಸಂಸದೀಯ ಸ್ಥಾಯಿ ಸಮಿತಿ ಜುಲೈ 3 ರಂದು ಚರ್ಚೆ ನಡೆಸುವ ಮುನ್ನವೇ ಮಾಯಾವತಿ ಯುಸಿಸಿ ಕುರಿತು ಹೇಳಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಧ್ಯಪ್ರದೇಶ | ಸಮ್ಮತಿಯ ಸೆಕ್ಸ್‌ನಲ್ಲಿ ಮಹಿಳೆಯರ ವಯೋಮಿತಿ 16ಕ್ಕೆ ಇಳಿಸಲು ಹೈಕೋರ್ಟ್ ಕೇಂದ್ರಕ್ಕೆ ಮನವಿ
ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಮಸೂದೆಯನ್ನು ಕೇಂದ್ರ ಸರ್ಕಾರ ಮಂಡಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.