ವಿಜಯಪುರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದ ಅವಧಿಯೊಳಗೆ ನಡೆದ 225 ಕಳ್ಳತನ ಪ್ರಕರಣಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಒಟ್ಟಾರೆ 345 ಆರೋಪಿಗಳನ್ನು ಬಂಧಿಸಿ ಅವರಿಂದ ಏಳು ಕೋಟಿ ರೂಗಳಿಗೂ ಅಧಿಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಪ್ತಿ ಮಾಡಿದ ವಸ್ತುಗಳನ್ನು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ವಾರಸುದಾರರಿಗೆ ಹಸ್ತಾಂತರಿಸಿದರು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಬೆಳಿಗ್ಗೆ ಬೃಹತ್ ಪ್ರಾಪರ್ಟಿ ರಿಟರ್ನ್ ಪರೇಡ್ ನಡೆಸಿದ ಎಸ್‌ಪಿ ನಿಂಬರಗಿ, “ಬಂಗಾರ-ಬೆಳ್ಳಿ ಆಭರಣಗಳು, ಬೈಕ್‌ಗಳು, ಐಷಾರಾಮಿ ಕಾರುಗಳು ಟ್ಯಾಕ್ಟರ್‌ಗಳು, ಟಿಪ್ಟರ್‌ಗಳು ಸೇರಿ ಒಟ್ಟು ₹7.02 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಈ ಪೈಕಿ ₹3.46 ಕೋಟಿ ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿದೆ. ಬಾಕಿ ಉಳಿದ ₹3.56 ಕೋಟಿ ಮೌಲ್ಯದ ವಸ್ತುಗಳನ್ನು ನ್ಯಾಯಾಲಯದ ಅನುಮತಿ ಪಡೆದು ವಾರಸುದಾರರಿಗೆ ನೀಡುವ ಪ್ರಕ್ರಿಯೆ ಮುಂದುವರಿದಿದೆ” ಎಂದು ತಿಳಿಸಿದರು.

“ನಗದು ಹಣ ದೋಚಿದ 19 ಪ್ರಕರಣಗಳಲ್ಲಿನ 31 ಆರೋಪಿಗಳನ್ನು ಬಂಧಿಸಲಾಗಿದೆ. ₹1.91 ಕೋಟಿ ಮೌಲ್ಯದ ನಗದು ವಶಪಡಿಸಿಕೊಳ್ಳಲಾಗಿದೆ. 21 ಇತರೆ ಕಳ್ಳತನ ಪ್ರಕರಣಗಳಲ್ಲಿ 36 ಜನರನ್ನು ಬಂಧಿಸಿ ₹12.42 ಲಕ್ಷ ಮೌಲ್ಯದ ವಿವಿಧ ರೀತಿಯ 143 ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಎಲ್ಲ ಕೃತ್ಯಗಳಲ್ಲಿ ಭಾಗವಹಿಸಿದ್ದ ವಿಜಯಪುರ ಜಿಲ್ಲೆ ಮಾತ್ರವಲ್ಲದೇ, ಬೆಳಗಾವಿ, ವಿಜಯನಗರ, ಬಾಗಲಕೋಟೆ ಹಾಗೂ ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ದೆಹಲಿ ಮೂಲದ ಆರೋಪಿಗಳನ್ನೂ ಪತ್ತೆ ಹಚ್ಚಲಾಗಿದೆ” ಎಂದು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕೆಎಸ್‌ಆರ್‌ಟಿಸಿ ನೌಕರರಿಗಾಗಿ ಸಾರಿಗೆ ಸುರಕ್ಷಾ ಯೋಜನೆ ಜಾರಿ: ಸಚಿವ ರಾಮಲಿಂಗರೆಡ್ಡಿ
ಪ್ರಾಪರ್ಟಿ ರಿಟರ್ನ್ ಪರೇಡ್‌ನಲ್ಲಿ ಹೆಚ್ಚುವರಿ ಎಸ್‌ಪಿಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟ ಡಿವೈಎಸ್‌ಪಿ ಬಸವರಾಜ ಯಲಿಗಾರ, ಸುನೀಲ ಕಾಂಬಳೆ, ಟಿ ಎಸ್ ಸುಲಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಇದ್ದರು.