ಜೂನಿಯರ್ ಡಾಗರ್ ಸಹೋದರರ ‘ಶಿವ ಸ್ತುತಿ’ ಹಾಡಿನ ಶಾಸ್ತ್ರೀಯ ರಾಗದ ಕೃತಿಚೌರ್ಯ ಆರೋಪದಲ್ಲಿ ದೆಹಲಿ ಹೈಕೋರ್ಟ್ ಖ್ಯಾತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಮತ್ತು ‘ಪೊನ್ನಿಯಿನ್ ಸೆಲ್ವನ್ 2’ ಚಿತ್ರದ ನಿರ್ಮಾಪಕರಿಗೆ ನ್ಯಾಯಾಲಯದಲ್ಲಿ 2 ಕೋಟಿ ರೂ.ಗಳ ಭದ್ರತೆ ಇಡುವಂತೆ ನಿರ್ದೇಶಿಸಿದೆ.
ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಏಪ್ರಿಲ್ 25ರಂದು ಮಧ್ಯಂತರ ಆದೇಶ ಹೊರಡಿಸಿದ್ದಾರೆ. ಶಿವ ಸ್ತುತಿ ಶಾಸ್ತ್ರೀಯ ಗೀತೆಯ ರಾಗವನ್ನು ಸಿನಿಮಾದ ‘ವೀರ ರಾಜಾ ವೀರ’ ಹಾಡಿನ ಪ್ರತಿಯೊಂದು ಲಯ, ಭಾವದಲ್ಲೂ ಬಳಸಲಾಗಿದೆ. ಇದು ಶಿವನಿಗೆ ಅರ್ಪಿಸಿದ ಗೀತೆಯ ಮೂಲ ಸಂಯೋಜಕರ ಹಕ್ಕು ಸ್ವಾಮ್ಯದ ಉಲ್ಲಂಘನೆ ಎಂದು ಆರೋಪಿಸಲಾಗಿದೆ. ಈ ವಾದವನ್ನು ಕೋರ್ಟ್ ಮಧ್ಯಂತರ ಆದೇಶದಲ್ಲಿ ಪುರಸ್ಕರಿಸಿದೆ.
ಇದನ್ನು ಓದಿದ್ದೀರಾ? ನೂರರ ನೆನಪು | ದೇವಾನಂದ್ ಎಂಬ ಸಾಹಸಿಗ, ಚಿರಯೌವನಿಗ
ಹಾಗೆಯೇ, “ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿರುವ ಸಿನಿಮಾದ ‘ವೀರ ರಾಜಾ ವೀರ’ ಹಾಡು ಪ್ರಸಾರದ ವೇಳೆ ಜೂನಿಯರ್ ಡಾಗರ್ ಸಹೋದರಾದ ದಿ. ಉಸ್ತಾದ್ ಎನ್ ಫಯಾಜುದ್ದೀನ್ ಡಾಗರ್ ಮತ್ತು ದಿ. ಉಸ್ತಾದ್ ಜಹೀರುದ್ದೀನ್ ಡಾಗರ್ ಅವರ ಹೆಸರುಗಳನ್ನು ಪ್ರಸಾರ ಮಾಡಬೇಕು. ಜೊತೆಗೆ ಕಲಾವಿದರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ನೀಡಬೇಕು” ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
“ಅಂತಿಮ ವಿಶ್ಲೇಷಣೆಯಲ್ಲಿ ನ್ಯಾಯಾಲಯವು ಆಕ್ಷೇಪಾರ್ಹ ಹಾಡು ಕೇವಲ ಶಿವ ಸ್ತುತಿಯನ್ನು ಆಧರಿಸಿಲ್ಲ ಅಥವಾ ಅದರಿಂದ ಪ್ರೇರಿತವಾಗಿಲ್ಲ. ಬದಲಾಗಿ ಸಾಹಿತ್ಯದಲ್ಲಿ ಕೇವಲ ಬದಲಾವಣೆಯೊಂದಿಗೆ ಉಳಿದೆಲ್ಲಾ ಸಂಯೋಜನೆಗೆ ಹೋಲುತ್ತದೆ. ಹಾಡನ್ನು ಆಧುನಿಕ ಸಂಯೋಜನೆಯಂತೆ ಮಾಡಿರಬಹುದು. ಆದರೆ ಮೂಲ ಸಂಗೀತ ಒಂದೇ ಆಗಿದೆ” ಎಂದು ಕೋರ್ಟ್ ಅಭಿಪ್ರಾಯಿಸಿದೆ.
ಆದ್ದರಿಂದ ಇದು ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿದೆ. ಪ್ರತಿವಾದಿಗಳಾದ ರೆಹಮಾನ್, ಮದ್ರಾಸ್ ಟಾಕೀಸ್ ಮತ್ತು ಲೈಕಾ ಪ್ರೊಡಕ್ಷನ್ಸ್ – ನ್ಯಾಯಾಲಯದಲ್ಲಿ 2 ಕೋಟಿ ರೂ.ಗಳನ್ನು ಠೇವಣಿ ಇಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಆದರೆ, “ಶಿವ ಸ್ತುತಿಯು ಮೂಲತಃ ಶಾಸ್ತ್ರೀಯ ದೃಪದ್ ರಾಗದಲ್ಲಿದೆ. ಹಾಗಾಗಿ ಗೀತೆಯನ್ನು ಹಾಡುವುದು, ಸಂಯೋಜನೆ ಮಾಡಿರುವುದು ಮೂಲ ಗೀತೆಯ ಹೋಲಿಕೆಯಾಗುವುದಿಲ್ಲ. ಇದು ಕೃತಿಚೌರ್ಯವಲ್ಲ” ಎಂಬುದು ರೆಹಮಾನ್ ಪರ ವಕೀಲರ ವಾದವಾಗಿದೆ.
