ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಇನ್ನಷ್ಟು ಉದ್ವಿಗ್ನತೆ ಹೆಚ್ಚಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಪಾಕಿಸ್ತಾನಕ್ಕೆ ಹರಿಯದಂತೆ ನೀರು ಸಂಗ್ರಹಿಸಲು ಭಾರತಕ್ಕೆ ಸಾಕಷ್ಟು ಅಣೆಕಟ್ಟುಗಳಿವೆಯೇ” ಎಂದು ಶನಿವಾರ ಪ್ರಶ್ನಿಸಿದ್ದಾರೆ.
ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಿಂದಾಗಿ ಒಟ್ಟು 28 ಮಂದಿ ಸಾವನ್ನಪ್ಪಿದ್ದಾರೆ. ಈ ದಾಳಿಯ ಹೊಣೆಯನ್ನು ಲಷ್ಕರ್-ಎ-ತೊಯ್ಬಾದ ಪ್ರಾಕ್ಸಿ ಸಂಘಟನೆಯಾದ ರೆಸಿಸ್ಟೆನ್ಸ್ ಫ್ರಂಟ್ ಹೊತ್ತುಕೊಂಡಿದೆ. ಇದಾದ ಬೆನ್ನಲ್ಲೇ ಉಭಯ ದೇಶಗಳ ನಡುವೆ ಉದ್ವಿಗ್ನತೆ ಇನ್ನಷ್ಟೂ ಹೆಚ್ಚಾಗಿದೆ.
ಇದನ್ನು ಓದಿದ್ದೀರಾ? ಸಿಂಧೂ ನದಿ ನೀರು ನಿಲ್ಲಿಸಲು 20 ವರ್ಷ ಬೇಕು; ಮೋದಿ ಸರ್ಕಾರ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದೆ: ಶಂಕರಾಚಾರ್ಯ ಸ್ವಾಮೀಜಿ
ಭಾರತ ಬುಧವಾರ 1960ರ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ನಡೆದ ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿದೆ. ಇದು ದೀರ್ಘಕಾಲದ ಒಪ್ಪಂದವಾಗಿತ್ತು.
ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಸರ್ಕಾರದ ನಿರ್ಧಾರದಿಂದ ನೀವು ತೃಪ್ತರಾಗಿದ್ದೀರಾ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖರ್ಗೆ ಅವರು, “ಇದು ನಾವು ತಪ್ಪು ಹುಡುಕುವ ಸಮಯವಲ್ಲ. ಸಂದರ್ಭ ಬಂದಾಗ ನಾವು ಅದನ್ನು ಹೇಳುತ್ತೇವೆ. ಆದರೆ ಈಗಲೇ ಎಲ್ಲವನ್ನೂ ಹೇಳುವುದು ಒಳ್ಳೆಯದಲ್ಲ. ತೆಗೆದುಕೊಂಡ ಕ್ರಮದ ಪರಿಣಾಮಗಳೇನು ಎಂಬುದು ಭವಿಷ್ಯದಲ್ಲಿ ಚರ್ಚೆಯಾಗುತ್ತದೆ” ಎಂದು ಹೇಳಿದರು.
“ನಮ್ಮಿಂದ ಹರಿಯುತ್ತಿರುವ ನೀರನ್ನು ನಾವು ಹೇಗೆ ತಡೆಹಿಡಿಯಬಹುದು? ಅದನ್ನು ಸಂಗ್ರಹಿಸಲು ನಮ್ಮಲ್ಲಿ ಸಾಕಷ್ಟು ಅಣೆಕಟ್ಟುಗಳಿವೆಯೇ? ಸರ್ಕಾರ ಈಗ ತೆಗೆದುಕೊಂಡ ನಿರ್ಧಾರ ಮತ್ತು ನಿರ್ಣಯವು ದೇಶಕ್ಕೆ ಒಳ್ಳೆಯದು. ಫಲಿತಾಂಶಗಳನ್ನು ನೋಡದೆ ನಾವು ಟೀಕಿಸುತ್ತಲೇ ಇದ್ದರೆ, ಅದು ಒಳ್ಳೆಯದಲ್ಲ” ಎಂದರು.
ಇದನ್ನು ಓದಿದ್ದೀರಾ? ಕಾಶ್ಮೀರ ಉಗ್ರರ ದಾಳಿಯನ್ನು ಖಂಡಿಸಿದ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸದಿದ್ದಕ್ಕಾಗಿ ಅವರು ಮೋದಿಯನ್ನು ಟೀಕಿಸಿದರು.
“ಸರ್ಕಾರದ ಪರವಾಗಿ, ಭದ್ರತಾ ಲೋಪ ಸೇರಿದಂತೆ ಕೆಲವು ಸಮಸ್ಯೆಗಳನ್ನು ಪರಿಹರಿಸಲು ಮೋದಿ ಅಲ್ಲಿರಬೇಕು. ಆದರೆ ಅವರು ಸಭೆಗೆ ಹಾಜರಾಗಿಲ್ಲ, ಅದು ಸರಿಯಲ್ಲ. ಭಯೋತ್ಪಾದನೆಯನ್ನು ನಿಗ್ರಹಿಸುವ ಸವಾಲನ್ನು ಸ್ವೀಕರಿಸಲು ನಾವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಹೇಳಿದ್ದೇವೆ. ಪಹಲ್ಗಾಮ್‌ನಂತಹ ಘಟನೆಗಳು ಮರುಕಳಿಸುವುದಿಲ್ಲ ಎಂದು ಅವರು ಭರವಸೆ ನೀಡಿದರು. ದೇಶದ ಹಿತದೃಷ್ಟಿಯಿಂದ ಸರ್ಕಾರ ತೆಗೆದುಕೊಂಡ ಯಾವುದೇ ನಿರ್ಧಾರವನ್ನು ಎಲ್ಲರೂ ಒಗ್ಗಟ್ಟಿನಿಂದ ನಿಂತು ಬೆಂಬಲಿಸುವಂತೆ ನಾವು ಹೇಳಿದ್ದೇವೆ” ಎಂದು ಅವರು ಹೇಳಿದರು.
