ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯಾನಕ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಬೀದರ ಜಿಲ್ಲಾ ಕಾಂಗ್ರೆಸ್ ಹಾಗೂ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೀದರನಲ್ಲಿ ಶನಿವಾರ ಸಂಜೆ ಕ್ಯಾಂಡಲ್ ಮಾರ್ಚ್ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಪೌರಾಡಳಿತ ರಹೀಂ ಖಾನ್, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ನಗರಸಭೆ ಅಧ್ಯಕ್ಷ ಮುಹಮ್ಮದ್ ಗೌಸ್ ನೇತೃತ್ವದಲ್ಲಿ ‘ಕ್ಯಾಂಡಲ್ ಮಾರ್ಚ್’ ಮಾಡಲಾಯಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಕಾಂಗ್ರೆಸ್ ಕಾರ್ಯಕರ್ತರು ಮೇಣದ ಬತ್ತಿ ಬೆಳಗಿಸಿ, ಎರಡು ನಿಮಿಷ ಮೌನ ಆಚರಿಸಿ, ಉಗ್ರರ ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ಮೇಣದ ಬತ್ತಿಯೊಂದಿಗೆ ಹೆಜ್ಜೆ ಹಾಕಿದರು.
ಸಚಿವ ಈಶ್ವರ ಖಂಡ್ರೆ ಮಾತನಾಡಿ, ʼಭಯೋತ್ಪಾದನೆ ಎಂಬುದು ಮಾನವೀಯತೆಗೆ ವಿರುದ್ಧವಾದ ಅತ್ಯಂತ ಹೀನ ಮತ್ತು ಅಸ್ವೀಕೃತ ಕೃತ್ಯವಾಗಿದೆ. ಈ ದೇಶದ ಏಕತೆ, ಅಖಂಡತೆ ಮತ್ತು ಶಾಂತಿಯನ್ನು ಭಂಗಪಡಿಸುವ ದುಷ್ಕೃತ್ಯಗಳನ್ನು ತೀವ್ರವಾಗಿ ಖಂಡಿಸುತ್ತೇನೆ. ಇಂತಹ ದುರ್ಘಟನೆಗಳು ಮರುಕಳಿಸದಂತೆ ತಡೆಯುವುದು ಸರ್ಕಾರದ ಮುಖ್ಯ ಜವಾಬ್ದಾರಿಯಾಗಿದೆ. ಜನರಿಗೆ ಭದ್ರತೆ ಒದಗಿಸುವಲ್ಲಿ ವೈಫಲ್ಯ ಕಂಡಾಗ, ಕಾರ್ಯತ್ಮಕ ಕ್ರಮ ಕೈಗೊಳ್ಳಬೇಕು. ಸರ್ಕಾರ ಜನರ ಭದ್ರತೆಗೆ ಬದ್ಧವಾಗಿದೆ ಎಂಬ ವಿಶ್ವಾಸವನ್ನು ಜನತೆಗೆ ನೀಡಬೇಕಾದ ಅಗತ್ಯವಿದೆʼ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಬಸವ ಜಯಂತಿಯೊಂದಿಗೆ ಪಂಚಾಚಾರ್ಯರ ಯುಗಮಾನೋತ್ಸವಕ್ಕೆ ಖಂಡನೆ; ಹೋರಾಟದ ಎಚ್ಚರಿಕೆ
ಕರ್ನಾಟಕ ಪಶು ವೈದ್ಯಕೀಯ, ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಬಸವರಾಜ ಭತಮುರ್ಗೆ, ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಸಂಜಯ್ ಜಾಹಗೀರದಾರ್, ಕಾಂಗ್ರೆಸ್ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಪೂಜಾ ಜಾರ್ಜ್ ಮತ್ತಿತರರು ಪಾಲ್ಗೊಂಡಿದ್ದರು.