ಬ್ಯಾಂಕ್‌ನ ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಂಡು ಹಿಂತಿರುಗಿತ್ತಿದ್ದ ಮಹಿಳೆಯೊಬ್ಬರ ಲಕ್ಷಾಂತರ ರೂ. ಹಣ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ನಗರದ ಲೋಹರವಾಡಿಯಲ್ಲಿರುವ ಎಸ್‌ಬಿಐ ಬ್ಯಾಂಕ್ ಬಳಿ ಎಟಿಎಂನಲ್ಲಿ ಹಣ ಡ್ರಾ ಮಾಡಲು ಬಂದಿದ್ದ ಮಹಿಳೆಯು ಒಂದು ಲಕ್ಷ ರೂಪಾಯಿ ಹಣ ಡ್ರಾ ಮಾಡಿಕೊಂಡು ಹೊರ ಬರುತ್ತಿರುವಾಗ ಆರೋಪಿಗಳು ಹೋಂಡಾ ಶೈನ್ ಬೈಕ್‌ನಲ್ಲಿ ಬಂದು ರಸ್ತೆಯಲ್ಲಿಯೇ ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಹಾಡುಹಗಲೇ ರಸ್ತೆಯಲ್ಲಿ ಹಣದೋಚಿ ಪರಾರಿಯಾಗುತ್ತಿರುವ ವಿಡಿಯೋ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ನಿಖಿಲ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಬ್ಯಾಂಕ್ ಸುತ್ತಮುತ್ತಲಿನಲ್ಲಿರುವ ಸಿಸಿ ಟಿವಿ ಕ್ಯಾಮೆರಾ ದೃಶ್ಯವನ್ನು ಪರಿಶೀಲನೆ ನಡೆಸಿದರು. ಈ ಕುರಿತು ಸದರ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಸರೆಗೆ ಪೊಲೀಸರು ಬಲೆ ಬೀಸಿದ್ದಾರೆ.
“ಬ್ಯಾಂಕ್, ಎಟಿಎಂ ಸುತ್ತಮುತ್ತಲೂ ದುಷ್ಟರು ಕಾದು ಕುಳಿತಿರುತ್ತಾರೆ. ಎಟಿಎಂ ಪಕ್ಕದಲ್ಲೇ ಬೈಕ್ ನಿಲ್ಲಿಸಿ ಜನಸಾಮಾನ್ಯರಂತೆ ಮೊಬೈಲ್‌ನಲ್ಲಿ ಮಾತನಾಡಿಕೊಂಡು ತಿರುಗಾಡುತ್ತಿರುತ್ತಾರೆ. ಹಣ ಡ್ರಾ ಮಾಡಲು ಬಂದವರು ಅವರ ಚಲನವಲನಗಳನ್ನು ಗಮನಿಸದೇ ಇರುವುದರಿಂದ ಇಂತಹ ಕಳ್ಳತನದ ಘಟನೆಗಳು ನಡೆಯುತ್ತಿವೆ” ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಬೈಕ್ – ಬಸ್ ನಡುವೆ ಅಪಘಾತ; ಮದುವೆಯಾದ ಎರಡೇ ದಿನಕ್ಕೆ ಯುವಕ ಸಾವು
ಯಾಮಾರಿದರೆ ಸಾಕು ಕೂಡಲೇ ದಾಳಿ ಮಾಡಿ ಹಣ ದೋಚಿ ಪರಾರಿಯಾಗುತ್ತಾರೆ. ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ನಡೆಯುತ್ತಿದ್ದು, ಗ್ರಾಮೀಣ ಭಾಗದ ಜನರ ಸುರಕ್ಷತೆ ಮತ್ತು ಅನಕ್ಷರತೆಯನ್ನೇ ಬಂಡವಾಳ ಮಾಡಿಕೊಂಡು ಗ್ರಾಹಕರಂತೆ ಬಂದು ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ಹಣ ದೋಚುತ್ತಿದ್ದಾರೆ ಎನ್ನಲಾಗಿದೆ.