ಬೀದರ್ ನಗರದ ಓಲ್ಡ್ ಆದರ್ಶ ಕಾಲೊನಿಯ ಮನೆಯೊಂದಕ್ಕೆ ಶನಿವಾರ ನಸುಕಿನ ಜಾವ ನುಗ್ಗಿದ ನಾಲ್ವರು ಮುಸುಕುಧಾರಿ ಡಕಾಯಿತರು, ಮಾರಕಾಸ್ತ್ರಗಳಿಂದ ಮನೆಯಲ್ಲಿದ್ದವರನ್ನು ಹೆದರಿಸಿ ₹15.55 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಸುಲಿಗೆ ಮಾಡಿ ಪರಾರಿಯಾಗಿದ್ದಾರೆ.
ʼನಾಲ್ವರು ಡಕಾಯಿತರು ಮನೆ ಬಾಗಿಲು ಮುರಿದು ಒಳಗೆ ನುಗ್ಗಿ, ಚಾಕು ಹಾಗೂ ಇತರೆ ಮಾರಕಾಸ್ತ್ರಗಳನ್ನು ಕುತ್ತಿಗೆಗೆ ಹಿಡಿದು ಹೆದರಿಸಿದರು. ನಮ್ಮ ಮೈಮೇಲೆ ಹಾಗೂ ಅಲ್ಮೇರಾದಲ್ಲಿದ್ದ ಚಿನ್ನಾಭರಣ ಕಿತ್ತುಕೊಂಡು, ಬಳಿಕ ಬಾತ್‌ರೂಮ್‌ನಲ್ಲಿ ನಮ್ಮನ್ನು ಕೂಡಿ ಹಾಕಿ ಪರಾರಿಯಾಗಿದ್ದಾರೆʼ ಎಂದು ತಿಳಿದು ಬಂದಿದೆ.
ʼಡಕಾಯಿತರು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು. ಘಟನೆ ನಡೆದಾಗ ನಾನು, ನನ್ನ ತಾಯಿ ಹಾಗೂ ಮಗ ಮನೆಯಲ್ಲಿದ್ದೆವುʼ ಎಂದು ಜ್ಯೋತಿ ಲತಾ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಜ್ಯೋತಿ ಲತಾ ಅವರು ಮೂಲತಃ ಕಲಬುರಗಿ ಜಿಲ್ಲೆಯ ಅಂಕಲಗಾ ಗ್ರಾಮದವರು. 2016ರಲ್ಲಿ ಪತಿಯ ನಿಧನದ ನಂತರ ಅನುಕಂಪದ ಆಧಾರದ ಮೇಲೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಡಿಎಲ್‌ಆರ್‌ನಲ್ಲಿ ಸೂಪರಿಟೆಂಡೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅಂದಿನಿಂದ ಓಲ್ಡ್ ಆದರ್ಶ ಕಾಲೊನಿಯಲ್ಲಿರುವ ತಾಯಿ ಮನೆಯಲ್ಲಿ 14 ವರ್ಷದ ಮಗನೊಂದಿಗೆ ವಾಸವಾಗಿದ್ದಾರೆ.
ಈ ಕುರಿತು ನಗರದ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಬಸವ ಜಯಂತಿಯೊಂದಿಗೆ ಪಂಚಾಚಾರ್ಯರ ಯುಗಮಾನೋತ್ಸವಕ್ಕೆ ಖಂಡನೆ; ಹೋರಾಟದ ಎಚ್ಚರಿಕೆ
