- ಬಿಷ್ಣುಪುರದ ಖೋಯ್ದುಮಂತಬಿ ಗ್ರಾಮದಲ್ಲಿ ಹಿಂಸಾಚಾರ
- ಮೇ 3 ರಿಂದ ಮೇತೀ ಮತ್ತು ಕುಕಿ ಸಮುದಾಯಗಳ ಘರ್ಷಣೆ
ಮಣಿಪುರ ಹಿಂಸಾಚಾರ ಮತ್ತೆ ಭುಗಿಲೆದ್ದಿದ್ದು, ಗಡಿ ಜಿಲ್ಲೆಗಳ ಗ್ರಾಮಸ್ಥರು ಭಯಭೀತರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ರಾಜ್ಯದ ಬಿಷ್ಣುಪುರ ಮತ್ತು ಚುರಚಂದ್‌ಪುರ ಜಿಲ್ಲೆಗಳ ಗಡಿ ಭಾಗದಲ್ಲಿ ಹೊಸ ಹಿಂಸಾಚಾರ ಪ್ರಕರಣಗಳು ಶನಿವಾರ (ಜುಲೈ 1) ರಾತ್ರಿ ವರದಿಯಾಗಿವೆ. ಬಂಡುಕೋರರು ಮತ್ತು ಗ್ರಾಮಗಳ ಸ್ವಯಂ ಸೇವಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಬಿಷ್ಣುಪುರದ ಖೋಯ್ದುಮಂತಬಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಇಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇಲ್ಲಿ ಭಾನುವಾರ (ಜುಲೈ 2) ಬೆಳಿಗ್ಗೆ ಜಿಲ್ಲಾಡಳಿತ ಮಣಿಪುರ ಹಿಂಸಾಚಾರ ತಡೆಗೆ ನಿಷೇಧಾಜ್ಞೆಯ ಸಡಿಲಿಕೆ ಸಮಯವನ್ನು ಕಡಿತಗೊಳಿಸಿದೆ. ಇನ್ನು ಮುಂದೆ ಜಿಲ್ಲೆಯಲ್ಲಿ ಬೆಳಿಗ್ಗೆ 5 ಗಂಟೆಯಿಂದ 10 ಗಂಟೆವರೆಗೆ ಮಾತ್ರ ನಿರ್ಬಂಧಗಳನ್ನು ತೆರವುಗೊಳಿಸಲಾಗುತ್ತದೆ.
ಹತ್ಯೆಯಾದ ಗ್ರಾಮದ ಸ್ವಯಂ ಸೇವಕರು ಮೇತೀ ಸಮುದಾಯಕ್ಕೆ ಸೇರಿದವರು ಎಂದು ಹೇಳಲಾಗಿದೆ. ಇವರು ಗ್ರಾಮದ ತಾತ್ಕಾಲಿಕ ಬಂಕರ್‌ನಲ್ಲಿ ಕಾವಲು ಕಾಯುತ್ತಿದ್ದರು. ಸಶಸ್ತ್ರಧಾರಿಗಳಾದ ಬಂಡುಕೋರರು ನಡೆಸಿದ ದಾಳಿಯಲ್ಲಿ ಗ್ರಾಮಸ್ಥರು ಮೃತಪಟ್ಟರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಹಿಂಸಾಚಾರದ ವೇಳೆ ಮೃತಪಟ್ಟ ಗ್ರಾಮಸ್ಥರನ್ನು ನವೋರೆಮ್ ರಾಜ್‌ಕುಮಾರ್ (25), ಹಾಬಾಮ್ ಇಬೊಮ್ಚಾ (37) ಮತ್ತು ನಿಂಗೋಂಬಮ್ ಇಬುಂಗ್ಚಾ (32) ಎಂದು ಗುರುತಿಸಲಾಗಿದೆ.
ಗ್ರಾಮದ ಸ್ವಯಂ ಸೇವಕರು ತಮ್ಮ ಮನೆಗಳ ಮೇಲೆ ದಾಳಿಯಾಗದಂತೆ ಕಾವಲು ಕಾಯುತ್ತಿದ್ದರು. ಹೊಂಚು ಹಾಕಿ ಅವರ ಮೇಲೆ ಗುಂಡು ಹಾರಿಸಲಾಗಿದೆ ಎಂದು ಬಿಷ್ಣುಪುರದ ಉಪ ಪೊಲೀಸ್ ಆಯುಕ್ತ ಲೌರೆಂಬಮ್ ಬಿಕ್ರಮ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ದಾಳಿಯ ಹಿಂದೆ ಕುಕಿ ಸಮುದಾಯದ ಕೈವಾಡವಿದೆ ಎಂದು ಮೀತೀ ಸಮುದಾಯದ ನಾಯಕರು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಜ್ಯಪಾಲರು ಜನರಿಂದ ಆಯ್ಕೆಯಾದ ಸರ್ಕಾರಕ್ಕಿಂತ ದೊಡ್ಡವರೇ?
ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನ ಸಂಬಂಧ ಮೇತೀ ಮತ್ತು ಕುಕಿ ಸಮುದಾಯಗಳ ನಡುವೆ ಹಿಂಸಾಚಾರ ನಡೆಯುತ್ತಿದೆ. ಈ ಮಣಿಪುರ ಹಿಂಸಾಚಾರ ಸಂಬಂಧ 100 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಮಣಿಪುರದಲ್ಲಿ ಮೇ 3 ರಿಂದ ಆರಂಭವಾಗಿರುವ ಈ ಹಿಂಸಾಚಾರದಲ್ಲಿ ಸುಮಾರು 60 ಸಾವಿರ ಜನ ತಮ್ಮ ನಿವಾಸ ತೊರೆದು ಪಲಾಯನ ಮಾಡಿದ್ದಾರೆ ಎಂದು ವರದಿಯಾಗಿದೆ.